ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿಸಿಕೊಳ್ಳಿ ‘ಕಾವೇರಿ ಕೂಗು’: ಸದ್ಗುರು

Last Updated 26 ಆಗಸ್ಟ್ 2019, 19:48 IST
ಅಕ್ಷರ ಗಾತ್ರ

ಈಶ ಫೌಂಡೇಷನ್‌ನ ಸದ್ಗುರು ಅವರು ‘ಕಾವೇರಿ ಕೂಗು’ ಆಂದೋಲನದ ರೂಪರೇಷೆ ಕುರಿತು ‘ಪ್ರಜಾವಾಣಿ’ ಜತೆಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

* ‘ಕಾವೇರಿ ಕೂಗು’ ಆಂದೋಲನವೆಂಬ ಆಶಯ ಸಾಕಾರ ಹೇಗೆ?

ಸದ್ಗುರು: ಅದು ಮೂರು ನೆಲೆಯಲ್ಲಿದೆ. ಕಾವೇರಿ ಜಲಾನಯನ ಹಾಗೂ ನದಿ ಪಾತ್ರದ ಜನರೆಲ್ಲರೂ ಇದರಲ್ಲಿ ಮನಃಪೂರ್ವಕವಾಗಿ ತೊಡಗಿಕೊಳ್ಳುವಂತೆ ಜಾಗೃತಿ ಮೂಡಿಸಿ, ಅವರನ್ನು ಪ್ರೇರೇಪಿಸುವುದು. ಎರಡನೆಯದು ಈ ಆಶಯದ ಸಾಕಾರದಲ್ಲಿ ಭಾಗಿಯಾಗುವ ರೈತ ಸಂಕುಲಕ್ಕೆ ಸರ್ಕಾರದ ನೆರವು ಕೊಡಿಸುವುದು ಹಾಗೂ ಮೂರನೆಯದು ಅರಣ್ಯ ಕೃಷಿ (ಆಗ್ರೋ ಫಾರೆಸ್ಟ್ರಿ) ಪರಿಕಲ್ಪನೆಯಡಿ 242 ಕೋಟಿ ಮರ ಬೆಳೆಸುವುದು.

* ಶ್ರೀಸಾಮಾನ್ಯರಿಗೆ ಇದನ್ನು ಹೇಗೆ ಮನವರಿಕೆ ಮಾಡಿಕೊಡುತ್ತೀರಿ?

ನಮ್ಮ ರೈತರಿಗೆ ಅರಣ್ಯ ಕೃಷಿ ಎಂಬ ಕಲ್ಪನೆಯೇ ಇಲ್ಲ. ಈ ಕಾರಣದಿಂದ ಈಶ ಫೌಂಡೇಷನ್‌ ತಮಿಳುನಾಡಿನ ಆರು ಸಾವಿರ ಗ್ರಾಮದಲ್ಲಿ ಅರಣ್ಯ ಕೃಷಿ ಜಾರಿಗೊಳಿಸಿದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸುವ 45 ವಾಹನಗಳು ಎಲ್ಲ ಕಡೆ ಓಡಾಡುತ್ತಿವೆ. ಇದರ ಫಲವಾಗಿ 2.7 ಲಕ್ಷ ರೈತರು ಅರಣ್ಯ ಕೃಷಿಯಲ್ಲಿ ತೊಡಗುವುದಾಗಿ ಬರೆದುಕೊಟ್ಟಿದ್ದಾರೆ. ಆದರೆ, 3–4 ವರ್ಷ ಸರ್ಕಾರದ ಸಹಾಯಧನ ಇಲ್ಲದೇ ಕೃಷಿ ಭೂಮಿಯನ್ನು ಅರಣ್ಯ ಕೃಷಿಯಾಗಿ ಪರಿವರ್ತಿಸುವುದು ಕಷ್ಟ. ಇದಕ್ಕಾಗಿ ರೈತರಿಗೆ ಸಹಾಯಧನ ಕೊಡಿಸುವತ್ತ ಕಾರ್ಯಪ್ರವೃತ್ತರಾಗಿದ್ದೇವೆ. ತಮಿಳುನಾಡಿನ ಮುಖ್ಯಮಂತ್ರಿ ಇದಕ್ಕೆ ಒಪ್ಪಿಗೆ ನೀಡಿದ್ದು, ಎಲ್ಲ ರಾಜ್ಯಗಳಲ್ಲೂ ಇದು ಜಾರಿಯಾದರೆ ಹೆಚ್ಚು ಹೆಚ್ಚು ಕೃಷಿಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಈ ಕಾರಣದಿಂದ ಕರ್ನಾಟಕದ ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡುತ್ತೇವೆ.

* 242 ಕೋಟಿ ಮರ ಬೆಳೆಸುವ ಕನಸಿನ ಯೋಜನೆ ಅನುಷ್ಠಾನ ಹೇಗೆ?

ಇಷ್ಟು ಬೃಹತ್‌ ಸಂಖ್ಯೆಯಲ್ಲಿ ಗಿಡ ಬೆಳೆಸಿ ಕೊಡುವ ಮೂಲಸೌಕರ್ಯ ಯಾರ ಬಳಿಯೂ ಇಲ್ಲ. ನಮ್ಮ ಫೌಂಡೇಷನ್‌ನಿಂದ ತಮಿಳುನಾಡಿನಲ್ಲಿ 33 ನರ್ಸರಿಗಳನ್ನು ನಡೆಸುತ್ತಿದ್ದೇವೆ. ಆದರೆ, ಅಲ್ಲಿ ಬೆಳೆಸಲಾಗುವ ಗಿಡಗಳು ಕಾವೇರಿ ನದಿಪಾತ್ರದಲ್ಲಿ ಮರ ಬೆಳೆಸಲು ಸಾಕಾಗುವುದಿಲ್ಲ. ಕೊಡಗಿನಲ್ಲಿ ನರ್ಸರಿ ಬೆಳೆಸಲು ಉತ್ತಮ ವಾತಾವರಣ ಇದೆ. 1,000 ಎಕರೆ ಜಾಗವನ್ನು ಈ ಉದ್ದೇಶಕ್ಕೆ ನೀಡುವಂತೆ ಅಲ್ಲಿನ ಕಾಫಿ ತೋಟದ ಮಾಲೀಕರನ್ನು ಕೇಳಿದ್ದೇವೆ. ಬೆಂಗಳೂರಿನಲ್ಲಿ 150 ಎಕರೆ ನೀಡಲು ಒಬ್ಬರು ಮುಂದೆ ಬಂದಿದ್ದಾರೆ.

ಒಂದು ಗಿಡ ಬೆಳೆಸಲು ₹42 ಬೇಕು. ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದ್ದೇವೆ. 50 ಸಾವಿರದಿಂದ 60 ಸಾವಿರ ಗಿಡ ಬೆಳೆಸಲು ನೆರವು ನೀಡುವುದಾಗಿ ಪ್ರತಿನಿತ್ಯ ಜನರು ಮುಂದೆ ಬರುತ್ತಿದ್ದಾರೆ. ಆದರೆ, ಇದೇ ವೇಗದಲ್ಲಿ ಹೋದರೆ, ನಮ್ಮ ಗುರಿ ತಲುಪಲು 80 ರಿಂದ 100 ವರ್ಷ ಬೇಕಾಗುತ್ತದೆ. 12 ವರ್ಷದಲ್ಲಿ ಈ ಯೋಜನೆ ಸಾಕಾರಗೊಳಿಸುವ ಸಂಕಲ್ಪ ನಮ್ಮದು. ಆ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಿದ್ದೇವೆ.

* ರೈತರಿಗೆ ಆದಾಯ ಸಿಗುವುದು ಹೇಗೆ?

ರೈತರು ತಮ್ಮ ಕೃಷಿ ಭೂಮಿಯ ಮೂರನೇ ಒಂದರಷ್ಟು ಭಾಗವನ್ನು ಅರಣ್ಯ ಕೃಷಿಗೆ ಪರಿವರ್ತನೆ ಮಾಡಿದರೆ ಸಾಕು. ಉಳಿದ ಭಾಗದಲ್ಲಿ ಆತ ತನಗೆ ಬೇಕಾದ ಬೆಳೆಯನ್ನು ಬೆಳೆದುಕೊಳ್ಳಬಹುದು. ಒಂದು ಹೆಕ್ಟೇರ್‌ನಲ್ಲಿ 1,500 ಗಿಡ ನೆಟ್ಟರೆ ನಾಲ್ಕೈದು ವರ್ಷದಲ್ಲಿ 700 ಮರ ಕಡಿದು ಮಾರಬಹುದು. ಹೀಗೆ ತನಗೆ ಹೆಚ್ಚಿನ ಹಣದ ಅವಶ್ಯಕತೆ ಇದ್ದಾಗಲೆಲ್ಲ ಮರ ಕಡಿದು ಮಾರುವ ಜತೆಗೆ, ಕಡಿದ ಜಾಗದಲ್ಲಿ ಮತ್ತೆ ಗಿಡ ನೆಟ್ಟರೆ ನಾಲ್ಕೈದು ವರ್ಷಕ್ಕೆ ಮತ್ತೆ ಆದಾಯ ಕಟ್ಟಿಟ್ಟ ಬುತ್ತಿ. ನಮ್ಮ ಅಗತ್ಯಕ್ಕೆ ಬೇಕಾದಮರಗಳಿಗೆ ಕಾಡನ್ನು ಆಶ್ರಯಿಸಲೇಬಾರದು. ಅಂತಹ ಮರಗಳನ್ನು ನಾವೇ ಬೆಳೆದುಕೊಳ್ಳುವ ಪದ್ಧತಿ ಬೆಳೆಯಬೇಕು. ಆಗ ‘ಅರಣ್ಯ ಕೃಷಿ’ಯಿಂದ ಆದಾಯವೂ ಹೆಚ್ಚುತ್ತದೆ. ಕಾಡೂ ಉಳಿಯುತ್ತದೆ.

* ನಗರ ಪ್ರದೇಶದವರ ಸ್ಪಂದನೆ ಹೇಗಿದೆ?

ಸದ್ಗುರು: ನಗರದಲ್ಲಿರುವ ಭಿಕ್ಷುಕ ಕೂಡ ಒಂದು ಮರ ನೆಟ್ಟರೂ ಸಾಕು. ಹೃದಯ ಎನ್ನುವುದು ಇದ್ದರೆ ನಗರ ಪ್ರದೇಶದವರು ಎಷ್ಟು ಗಿಡ ನೆಡಬೇಕು ಎಂದು ಅವರೇ ತೀರ್ಮಾನಿಸಬೇಕು. ಕೈಗಾರಿಕೆ ನಿರ್ಮಿಸಬಹುದು, ಚಂದ್ರಲೋಕಕ್ಕೆ ಹೋಗಬಹುದು. ಆದರೆ ಜೀವ ಸತ್ವ ಇರುವ ನೀರು, ಮಣ್ಣು ಇಲ್ಲದಿದ್ದರೆ ಏನೂ ಮಾಡಲು ಆಗುವುದಿಲ್ಲ. ಚಂದ್ರಲೋಕಕ್ಕೆ ಹೋಗಿ ಬದುಕುವುದಾದರೆ ಅಲ್ಲಿಯೇ ಹೋಗಲಿ. ಆದರೆ, ವಾಪಸ್ ಇಲ್ಲಿ ಬರಬೇಕಾದರೆ ಜೀವಸತ್ವ ಇರುವ ನೆಲ ಬೇಕಲ್ಲ!

*ಕಾವೇರಿ ಕೊಳ್ಳವನ್ನೇ ಆಯ್ದುಕೊಂಡಿದ್ದು ಏಕೆ?

ಸದ್ಗುರು: 800 ಕಿ.ಮೀ ಉದ್ದಕ್ಕೆ ಕಾವೇರಿ ನದಿ ಹರಿಯತ್ತದೆ. ಇಲ್ಲಿರುವ ವೈವಿಧ್ಯಮಯ ಅರಣ್ಯ, ಭೂಮಿಯ ಮೇಲ್ಮೈ ರಚನೆಯೇ ವಿಶಿಷ್ಟವಾದುದು. ಅದಕ್ಕಾಗಿ ಇದನ್ನು ಆಯ್ದುಕೊಂಡಿದ್ದೇವೆ. ಎಂಜಿನಿಯರಿಂಗ್ ತಂತ್ರಜ್ಞಾನದಿಂದ ನದಿಗಳನ್ನು ಉಳಿಸಲು ಸಾಧ್ಯವಿಲ್ಲ. ಅದಕ್ಕೆ ಮರ ಬೆಳೆಸುವ ಕೆಲಸವೊಂದೇ ದೊಡ್ಡ ಪರಿಹಾರ ಕೊಡಬಲ್ಲುದು. ನನ್ನ ಜೀವಮಾನದ ಮುಂದಿನ 12 ವರ್ಷದಲ್ಲಿ ಈ ಭೂ ಮೇಲ್ಮೈ ರಚನೆಯನ್ನು ಜಾಗತಿಕ ಬೃಹತ್ ಅನುಕರಣೀಯ ಮಾದರಿಯಾಗಿ ಮಾಡುತ್ತೇವೆ.

* ಕಾವೇರಿ ನದಿ ನೀರನ್ನು ಬೆಂಗಳೂರಿಗರು ನೆಚ್ಚಿಕೊಂಡಿದ್ದಾರೆ. ಅವರಿಗೆ ನಿಮ್ಮ ಸಲಹೆ?

ಸದ್ಗುರು: ಅವರು ಕಾವೇರಿಯನ್ನು ನೆಚ್ಚಿಕೊಂಡಿಲ್ಲ; ಕುಡಿದು ನುಂಗುತ್ತಿದ್ದಾರೆ. ನಾವು ಕತ್ತೆ, ಎಮ್ಮೆ ಅಲ್ಲ. ನಾವು ಮನುಷ್ಯರು. ಕತ್ತೆ ರೀತಿ ಬಾಳಬಾರದು. ಚೆನ್ನೈನಲ್ಲಿ ನೀರಿನ ಬಿಕ್ಕಟ್ಟು ಆಯ್ತು. ಅದು ಬೆಂಗಳೂರಿನಲ್ಲಿ ಆಗುತ್ತದೆ ಎಂದು ಕೆಲವರು ಭವಿಷ್ಯ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಅದು ಆಗಲು ಬಿಡುವುದಿಲ್ಲ ಎಂಬ ಇಲ್ಲಿನವರು ನಿರ್ಣಯ ಕೈಗೊಂಡರೆ ಕಾವೇರಿ ಉಳಿಸುವ ಪವಾಡ ನಡೆದು ಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT