ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯ ಅಕಾಡೆಮಿ ಪ್ರಾಧಿಕಾರವಾಗಲಿ’–ಅರವಿಂದ ಮಾಲಗತ್ತಿ

ಮಾರ್ಚ್‌ ಅಂತ್ಯದಲ್ಲಿ ಮೂರು ದಿನಗಳ ಸಾಹಿತ್ಯ ಸಮಾವೇಶಕ್ಕೆ ಚಿಂತನೆ: ಅರವಿಂದ ಮಾಲಗತ್ತಿ
Last Updated 9 ಮಾರ್ಚ್ 2019, 17:44 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಸಾಹಿತ್ಯ ಅಕಾಡೆಮಿಗೆಪ್ರಾಧಿಕಾರದ ಸ್ಥಾನ ನೀಡಿ, ಅನುದಾನದ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಒತ್ತಾಯಿಸಿದರು.

ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಶನಿವಾರ ನಡೆದ 2018ನೇ ಸಾಲಿನ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಮಾಧ್ಯಮ ಸಾಹಿತ್ಯ ಪುರಸ್ಕಾರ, ಪುಸ್ತಕ ಬಹುಮಾನ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಕಾಡೆಮಿ ಎಂಬ ಪದವೇ ಇಂಗ್ಲಿಷ್‌ ಪಳೆಯುಳಿಕೆ. ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಹೆಸರಿನ ಬಳುವಳಿ ಆಗಿರಬಹುದು. ಆದ್ದರಿಂದ ಅದರ ಹೆಸರನ್ನು ಸಂಪೂರ್ಣ ಕನ್ನಡಕ್ಕೆ ಬದಲಾಯಿಸಿ ಪ್ರಾಧಿಕಾರದ ಸ್ಥಾನಮಾನ ಕೊಡಬೇಕು. ಹಾಗೆಂದ ಮಾತ್ರಕ್ಕೆ ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ಸಚಿವರ ಸ್ಥಾನಮಾನವೇನೂ ಬೇಡ’ ಎಂದು ಪ್ರತಿಪಾದಿಸಿದರು.

‘ಅಕಾಡೆಮಿಯ ಚಟುವಟಿಕೆಗಳನ್ನು ವಿಸ್ತರಿಸುವ ದೃಷ್ಟಿಯಿಂದ ಮಾರ್ಚ್‌ ಅಂತ್ಯದಲ್ಲಿ ಮೂರು ದಿನಗಳ ಸಾಹಿತ್ಯ ಸಮಾವೇಶ ನಡೆಸಲು ಉದ್ದೇಶಿಸಿದ್ದೇವೆ’ ಎಂದರು.

‘ಈ ಬಾರಿ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಿಗೆ ಪ್ರಶಸ್ತಿ ಆರಂಭಿಸಿದ್ದೇವೆ. ಇದುವರೆಗೆ ಗುರುತಿಸಿಕೊಳ್ಳದ ಹೊಸಬರನ್ನು ಹುಡುಕಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಈ ಆಯ್ಕೆಯ ಸಂದರ್ಭ ಸಾಕಷ್ಟು ಚರ್ಚೆಗಳಾಗಿದ್ದವು. ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಬೇಕು, ಅವರಿಗೇಕೆ ಪ್ರಶಸ್ತಿ ಎಂಬ ಪ್ರಶ್ನೆಗಳೂ ಎದ್ದಿದ್ದವು. ಈ ರೀತಿ ಚರ್ಚೆ, ವಿಮರ್ಶೆಗಳಾದ ಬಳಿಕವೇ ಆಯ್ಕೆ ನಡೆಯಿತು. ಈ ವಿಚಾರದಲ್ಲಿ ಅಕಾಡೆಮಿ ಗೆದ್ದಿದೆ’ ಎಂದರು.

‘ಅನುದಾನದ ಕೊರತೆಯಿಂದ ಅಕಾಡೆಮಿಯು ಕನ್ನಡದ ಮುದಿತಾಯಿಯಂತಾಗಿದೆ. ಅದನ್ನು ಮೇಲೆತ್ತುವವರಿಲ್ಲವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸಿಕ್ಕಿದ ಅನುದಾನವನ್ನು ಚಾರಿತ್ರಿಕ ಯೋಜನೆಗಳಿಗೆ ಬಳಸುತ್ತಿದ್ದೇವೆ’ ಎಂದರು.

ವಿಮರ್ಶಕ ಸಿ.ಎನ್‌.ರಾಮಚಂದ್ರನ್‌ ಮಾತನಾಡಿ, ‘ಸಂದಿಗ್ಧ ಕಾಲಘಟ್ಟದಲ್ಲಿ ಎಲ್ಲವನ್ನೂ ಮೀರಿ ಕನ್ನಡ ಕಟ್ಟುವ ಪ್ರಾಮಾಣಿಕ ಕಾರ್ಯದಲ್ಲಿ ಇಲ್ಲಿನ ಪ್ರಶಸ್ತಿ ಪುರಸ್ಕೃತರು ತೊಡಗಿದ್ದಾರೆ. ಭ್ರಮೆಗಳು ವಾಸ್ತವದ ಸ್ಥಾನ ಪಡೆಯುತ್ತಿರುವ ಈ ಹೊತ್ತಿನಲ್ಲಿ ಇವರು ದಾರಿದೀಪಗಳಂತೆ ಸಂಸ್ಕೃತಿ ಕಟ್ಟುವ ಕೆಲಸವನ್ನು ಮುಂದುವರಿಸಲಿ’ ಎಂದು ಆಶಿಸಿದರು.

‘ಯಾವುದೇ ಒತ್ತಡಗಳಿಗೆ ಮಣಿಯದ, ಕೂಗಾಟ, ಕಿರುಚಾಟಗಳಿಲ್ಲದ ‘ಪ್ರಜಾವಾಣಿ’ಯು ತನ್ನದೇ ಆದ ಘನತೆಯಿಂದ ವೈಚಾರಿಕತೆ ಮತ್ತು ರಂಜನೆಯನ್ನು ಸಮಾನವಾಗಿ ಬಿತ್ತರಿಸುತ್ತಿದೆ’ ಎಂದು ಅವರು ಬಣ್ಣಿಸಿದರು.

ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎ.ವಿವೇಕ ರೈ, ‘ಸಾಹಿತ್ಯ ಚಟುವಟಿಕೆಗಳಿಗೆ ಕರ್ನಾಟಕದಲ್ಲಿ ಕೊಡುವಷ್ಟು ಅನುದಾನ ಬೇರೆಲ್ಲೂ ಇಲ್ಲ. ಅಕಾಡೆಮಿಯ ಚಟುವಟಿಕೆಗಳ ಬಗ್ಗೆ ಶೈಕ್ಷಣಿಕ ಆಡಿಟ್‌ ಆಗಬೇಕು. ಆಗ ಅದಕ್ಕೊಂದು ಶೈಕ್ಷಣಿಕ ಮಾನದಂಡಗಳನ್ನು ರೂಪಿಸಬಹುದು’ ಎಂದು ಹೇಳಿದರು.

‘ರಾಜ್ಯದ ಹೊರಗೆ ಹಿಂದಿ ಅಥವಾ ತಮಿಳಿಗೆ ಸಿಕ್ಕಷ್ಟು ಮಾನ್ಯತೆ ಕನ್ನಡಕ್ಕೆ ಸಿಕ್ಕಿಲ್ಲ. ಕನ್ನಡ ಸಾಹಿತ್ಯ ಬೇರೆ ಭಾಷೆಗಳಿಗೆ ಅಷ್ಟೊಂದು ಪ್ರಮಾಣದಲ್ಲಿ ಅನುವಾದವಾಗದಿರುವುದೇ ಇದಕ್ಕೆ ಕಾರಣ’ ಎಂದು ವಿಶ್ಲೇಷಿಸಿದರು.

ಕವಯತ್ರಿ ವಿನಯಾ ಒಕ್ಕುಂದ ಮಾತನಾಡಿ, ‘ಬರಹಗಾರರು, ಕಲಾವಿದರ ಸೂಕ್ಷ್ಮ ಸಂವೇದನೆಯ ಮೇಲೆ ಹಲ್ಲೆಗಳಾಗುತ್ತಿವೆ. ಬರಹ ಮಾರುಕಟ್ಟೆ ಸರಕಾಗುತ್ತಿದೆ. ಧರ್ಮ ಮತ್ತು ರಾಜಕಾರಣ ಸತ್ವ ಕಳೆದುಕೊಂಡಾಗ ಸಾಹಿತ್ಯ ಆ ಜಾಗವನ್ನು ತುಂಬಬೇಕು. ಆದರೆ ಇಂದು ಸಾಹಿತ್ಯ ಆತಂಕಕಾರಿ ಸ್ಥಿತಿ ಎದುರಿಸುತ್ತಿದೆ’ ಎಂದು ಕಳವಳ
ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಗೆ ಪ್ರಶಸ್ತಿ

ಅಕಾಡೆಮಿಯು ಈ ವರ್ಷದಿಂದ ಆರಂಭಿಸಿರುವ ‘ಮುದ್ರಣ ಮಾಧ್ಯಮ ಸಾಹಿತ್ಯ ಪುರಸ್ಕಾರ’ಕ್ಕೆ ‘ಪ್ರಜಾವಾಣಿ’ ಪಾತ್ರವಾಗಿದ್ದು, ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರುಪ್ರಶಸ್ತಿಯನ್ನು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT