ಗುರುವಾರ , ನವೆಂಬರ್ 14, 2019
19 °C
ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಭಿನ್ನ ಪ್ರಯತ್ನ

ಸೀಮಾತೀತ ಸಾಹಿತ್ಯ ಪರ್ಬ

Published:
Updated:
Prajavani

ಬೆಂಗಳೂರು: ನಾಡಿನ ಸಾಹಿತಿಗಳು, ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು ವಿಭಿನ್ನ ಸಾಹಿತ್ಯ ಸಮ್ಮೇಳನ ನಡೆಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂದಾಗಿದೆ.

ಈ ನಿಟ್ಟಿನಲ್ಲಿ, ಆಗಸ್ಟ್‌ 1ರಿಂದ 3ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸೀಮಾತೀತ ಸಾಹಿತ್ಯ ಪರ್ಬ’ ಜರುಗಲಿದೆ. ಇದೇ ಮೊದಲ ಬಾರಿಗೆ, ಸಂಶೋಧನಾ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪರ್ಯಾಯ–ಪ್ರಧಾನ ಗೋಷ್ಠಿ: ಸಮಾವೇಶದ ಮೊದಲ ಎರಡು ದಿನ ಪರ್ಯಾಯ ಮತ್ತು ಪ್ರಧಾನ ಗೋಷ್ಠಿಗಳು ನಡೆಯಲಿವೆ. ಪ್ರಧಾನ ಗೋಷ್ಠಿಯಲ್ಲಿ ನಾಡಿನ 100ಕ್ಕೂ ಪ್ರಮುಖ ಸಾಹಿತಿಗಳು ಪಾಲ್ಗೊಳ್ಳುತ್ತಾರೆ. ಪರ್ಯಾಯ ಗೋಷ್ಠಿಗಳಲ್ಲಿ 100ಕ್ಕೂ ಹೆಚ್ಚು ಅಧ್ಯಾಪಕರು ಹಾಗೂ 150ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಈ ಪ್ರಬಂಧಗಳನ್ನು ತಜ್ಞರ ಸಮಿತಿ ಪರಿಶೀಲಿಸಲಿದೆ. ಅರ್ಹ ಪ್ರಬಂಧಗಳನ್ನು ಅಕಾಡೆಮಿಯೇ ಪ್ರಕಟಿಸಲಿದೆ. 

ಪಿಎಚ್‌.ಡಿ ಮಂಡಿಸುವುದಕ್ಕೆ ಮುನ್ನ, ಸಂಶೋಧನಾ ವಿದ್ಯಾರ್ಥಿಗಳು ಎರಡು ಪ್ರಬಂಧಗಳನ್ನು ಬರೆದು, ಪ್ರಕಟಿಸಬೇಕು ಎಂಬ ನಿಯಮವಿದೆ. ಈ ಪ್ರಬಂಧ ಮಂಡಿಸಲು, ಪ್ರಕಟಿಸಲು ವಿದ್ಯಾರ್ಥಿಗಳು ತುಂಬಾ ಕಷ್ಟಪಡುತ್ತಾರೆ. ಈಗ, ಅಕಾಡೆಮಿಯೇ ಪ್ರಬಂಧಗಳನ್ನು ಪ್ರಕಟಿಸುವುದರಿಂದ ಅದಕ್ಕೊಂದು ಗೌರವ ಬರಲಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನೂ ವಿತರಿಸಲಾಗುತ್ತದೆ.

‘ಮುಂದೆ ಲೇಖಕರು, ವಿಮರ್ಶಕರು, ಸಂಶೋಧಕರು ಆಗುವವರು ಇದೇ ವಿದ್ಯಾರ್ಥಿಗಳು. ಹಾಗಾಗಿ, ಇವರಿಗೆ ವೇದಿಕೆ ಒದಗಿಸಲಾಗುತ್ತಿದೆ’ ಎಂದರು. 

ಪ್ರಬಂಧ ಮಂಡಿಸುವವರಿಗೆ ₹1,000 ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ. ಸಮ್ಮೇಳನ ಮುಗಿದ ನಂತರ ಇವರಿಗೆ ₹500 ಗೌರವ ಧನ ನೀಡಲಾಗುವುದು. ಇನ್ನು, ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುವವರಿಂದ ₹100 ಬದ್ಧತೆಯ ಹಣ ಎಂದು ತೆಗೆದುಕೊಳ್ಳಲಾಗುತ್ತಿದೆ. ಗುರುತಿನ ಚೀಟಿ ಇದ್ದವರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಊಟ, ಉಪಾಹಾರ ಹಾಗೂ ವಸತಿ ವ್ಯವಸ್ಥೆ ಇರಲಿದೆ. ವಿವೇಕ ರೈ ಉದ್ಘಾಟಿಸಲಿದ್ದು, ಬರಗೂರು ರಾಮಚಂದ್ರಪ್ಪ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ವಿಭಿನ್ನ ಮಾದರಿ: ‘ಮೇಲ್ನೋಟಕ್ಕೆ ಈ ಸಮಾವೇಶ ಜೈಪುರ ಸಾಹಿತ್ಯೋತ್ಸವ ಹೋಲುತ್ತದೆ ಎಂದೆನಿಸಬಹುದು. ಆದರೆ, ಅದಕ್ಕಿಂತ ಭಿನ್ನ ರೀತಿಯಲ್ಲಿ ಈ ‘ಪರ್ಬ’ ನಡೆಯಲಿದೆ. ಹೊರ ರಾಜ್ಯಗಳಿಂದಲೂ ಅನೇಕ ವಿದ್ವಾಂಸರು, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ನಿರ್ಣಯ ಸಲ್ಲಿಕೆ ಇಲ್ಲ: ‘ಸಮ್ಮೇಳನ ಮಾಡಿ, ನಿರ್ಣಯ ರೂಪಿಸಿ, ಅದನ್ನು ಮತ್ತೊಬ್ಬರು ಅನುಷ್ಠಾನಕ್ಕೆ ತರಬೇಕು ಎಂದು ಏಕೆ ಕಾಯಬೇಕು. ಈ ಸಮ್ಮೇಳನದಲ್ಲಿ ನಮಗೆ ನಾವೇ ನಿರ್ಣಯ ಹಾಕಿಕೊಳ್ಳುತ್ತೇವೆ. ಮುಂದಿನ ಸಮ್ಮೇಳನದೊಳಗೆ ಅದನ್ನು ಈಡೇರಿಸುವ ಗುರಿ ಹೊಂದಲಾಗುವುದು’ ಎಂದು ಮಾಲಗತ್ತಿ ತಿಳಿಸಿದರು. 

‘ಪರ್ಬ’ ಪ್ರಚಲಿತಕ್ಕೆ ಬರಬೇಕು...
‘ಪರ್ಬ’ ಎಂಬ ಬಗ್ಗೆ ಹಲವರು ಪ್ರಶ್ನಿಸುತ್ತಿದ್ದಾರೆ. ತುಳುವಿನಲ್ಲಿ ಪರ್ಬ ಎಂದರೆ ಹಬ್ಬ ಎಂಬರ್ಥ ಬರುತ್ತದೆ. ಇಂಗ್ಲಿಷ್‌ನಿಂದ, ಸಂಸ್ಕೃತ, ಹಿಂದಿ ಪದಗಳನ್ನು ಧಾರಾಕಾರವಾಗಿ ಕನ್ನಡಕ್ಕೆ ಸ್ವೀಕರಿಸುತ್ತೇವೆ. ನಮ್ಮದೇ ಪ್ರಾದೇಶಿಕ ಭಾಷೆಗಳಿಂದ ಏಕೆ ಸ್ವೀಕರಿಸಬಾರದು ಎಂಬ ಕಾರಣಕ್ಕೆ ಈ ಪದವನ್ನು ಬಳಸಿಕೊಂಡಿದ್ದೇವೆ’ ಎಂದು ಮಾಲಗತ್ತಿ ಹೇಳಿದರು. 

‘ಪ್ರಾದೇಶಿಕ ಭಾಷೆಗಳೇ ದೇಸಿ ಭಾಷೆಗಳನ್ನು ಗಟ್ಟಿಗೊಳಿಸುತ್ತವೆ. ಆ ಭಾಷೆಗಳಲ್ಲಿರುವ ಶಬ್ದ ಸಂಪತ್ತನ್ನು ತನ್ನದಾಗಿಸಿಕೊಂಡು ದೇಸಿ ಭಾಷೆ ಪುಟಿದೇಳುವ ಅಗತ್ಯವಿದೆ’ ಎಂದರು.

**

ಸಮ್ಮೇಳನಕ್ಕೆ ₹25 ಲಕ್ಷದಿಂದ ₹28 ಲಕ್ಷದವರೆಗೆ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. ಸರ್ಕಾರ ಈ ಅನುದಾನ ನೀಡುವುದಾಗಿ ಭರವಸೆ ನೀಡಿದೆ.
-ಡಾ. ಅರವಿಂದ ಮಾಲಗತ್ತಿ,  ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)