ಭಾನುವಾರ, ಜುಲೈ 3, 2022
23 °C
‘ಪ್ರಸಂಗಗಳು’ ಗೋಷ್ಠಿಯಲ್ಲಿ ಸಾಹಿತಿಗಳ ರಸನಿಮಿಷಗಳ ಅನಾವರಣ

ಬೇಂದ್ರೆ ಮೀಸೆಗೆ ಅಂಟಿದ ಶ್ಯಾವಿಗೆ...

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಧಾರವಾಡ: ಬೇಂದ್ರೆ ಶ್ಯಾವಿಗೆ ಕೀರು ಹೀರುವ ಭಂಗಿ, ನಾ. ಕಸ್ತೂರಿ ಹಲ್ಲು ಸೆಟ್‌ ತೆಗೆದು ಸವಾಲು ಹಾಕಿದ್ದು, ಮಾಸ್ತಿ ಅವರಿಗೆ ಮಾವ ಕೊಟ್ಟ ಸೋಪಿನ ಬಾಕ್ಸ್, ಬಿ.ವಿ. ಕಾರಂತರ ಅಂತಃಕರಣದ ಅನಾವರಣ, ಶಿವರಾಮ ಕಾರಂತರ ಅಗಲ ಹಣೆಯ ಮೇಲೆ ದೇವತೆಗಳ ನರ್ತನ, ಅನರ್ಥಕ್ಕೆ ಕಾರಣವಾದ ಹಾ.ಮಾ. ನಾಯಕರ ಬೈತಲೆ..

ಈ ಕೆಲವು ಪ್ರಸಂಗಗಳು ನಗೆ ಎಬ್ಬಿಸಿದವು. ಇದರಲ್ಲಿ ಹಲವು ಹೃದಯ ತಟ್ಟಿದವು. ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಭಾನುವಾರ ನಡೆದ ‘ಪ್ರಸಂಗಗಳು’ ಗೋಷ್ಠಿಯಲ್ಲಿ ಸಾಹಿತಿಗಳು, ಒಡನಾಡಿಗಳು ತಾವು ಕಂಡು, ಅನುಭವಿಸಿದ ಘಟನೆಗಳನ್ನು ರಸವತ್ತಾಗಿ ಬಣ್ಣಿಸಿದರು.

ಮಾಸ್ತಿ ಅವರಿಗೆ ಮಾವ ಕೊಟ್ಟ ಸೋಪಿನ ಬಾಕ್ಸ್: ‌ ‘1979ರಲ್ಲಿ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿತ್ತು. ಅಲ್ಲಿಗೆ ಮಾಸ್ತಿ ಅತಿಥಿಯಾಗಿದ್ದರು. ಮಾರ್ಗ ಮಧ್ಯೆ ಧಾರವಾಡದ ಅತಿಥಿಗೃಹದಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಮುಗಿಸಿ ಬೆಳಗಾವಿಗೆ ಹೋದ ಮೇಲೆ ಮತ್ತೆ ಧಾರವಾಡಕ್ಕೆ ಈಗಲೇ ಹೋಗಲೇಬೇಕು; ಸೋಪಿನ ಬಾಕ್ಸ್ ಬಿಟ್ಟು ಬಂದಿದ್ದೇನೆ ಎಂದು ಹಠ ಹಿಡಿದರು. ಬೇರೆ ಬಾಕ್ಸ್ ತೆಗೆದುಕೊಳ್ಳಬಹುದು ಎಂದರೂ ಕೇಳಲಿಲ್ಲ. ಅದು 60 ವರ್ಷಗಳ ಹಿಂದೆ ನನ್ನ ಮಾವ ಕೊಟ್ಟಿದ್ದು; ಕಳೆದುಕೊಳ್ಳಬಾರದು ಎಂದು ಗುಟ್ಟು ಬಿಟ್ಟರು. ಆಮೇಲೆ ಸೋಪಿನ ಬಾಕ್ಸ್ ತರಲು ಕಾರನ್ನು ಧಾರವಾಡಕ್ಕೆ ತಿರುಗಿಸಬೇಕಾಯಿತು’ ಎಂದು ಹಂಪನಾ ಪ್ರಸಂಗವನ್ನು ಬಿಚ್ಚಿಟ್ಟರು.

‘ನಾ. ಕಸ್ತೂರಿ ಮತ್ತು ಯುವಕರೊಬ್ಬರ ನಡುವೆ ಚರ್ಚೆ ಆಗುತ್ತಿತ್ತು. ನಾವು ಹಿರಿಯರು ಮಾಡಿದ್ದನ್ನು ನೀವು ಮಾಡಲು ಸಾಧ್ಯವಿಲ್ಲ ಎಂದು ಕಸ್ತೂರಿ ಅವರು ಹೇಳಿದರು. ಅದಕ್ಕೆ ಆ ಯುವಕ ಆ ಸವಾಲು ಈಗಲೇ ಸ್ವೀಕರಿಸಲು ಸಿದ್ಧ ಎಂದ. ತಕ್ಷಣವೇ ಕಸ್ತೂರಿ ತಮ್ಮ ಹಲ್ಲು ಸೆಟ್‌ ತೆಗೆದು ಟೇಬಲ್ ಮೇಲೆ ಇಟ್ಟರು. ಯುವಕ ಪೆಚ್ಚಾದ’ ಎಂದು ಹಂಪನಾ ಹೇಳುತ್ತಿದ್ದಂತೆ ಸಭೆ ನಗು ಹರಿಸಿತು.

‘ನಮ್ಮ ಮನೆಗೆ ಅಮ್ಮನ ಹಾಡು ಕೇಳಲು ಬೇಂದ್ರೆ ಬರುತ್ತಿದ್ದರು. ಅದು ಮುಗಿದ ಮೇಲೆ ಅವರ ಇಷ್ಟದ ಶ್ಯಾವಿಗೆ ಕೀರನ್ನು ಅಮ್ಮ ಮಾಡಿ ಕೊಡುತ್ತಿದ್ದರು. ಬೇಂದ್ರೆ ಅವರು ಅದನ್ನು ಕುಡಿಯುವಾಗ ಮೀಸೆಗೆ ಅಂಟಿಸಿಕೊಳ್ಳು
ತ್ತಿದ್ದರು. ಅದನ್ನು ನೋಡಿ ಮಕ್ಕಳಾದ ನಮಗೆ ನಗು ಬರುತ್ತಿತ್ತು. ಅದಕ್ಕೆ ಅವರೂ ‘ಕೆಟ್ಟ ಹುಡುಗರು’ ಎಂದು ನಮ್ಮನ್ನು ಬೈದು ಹುಸಿಕೋಪ ತೋರಿಸುತ್ತಿದ್ದರು’ ಎಂದು ನೆನಪಿಸಿಕೊಂಡರು ಧಾರವಾಡದ ರಂಜನಾ ನಾಯಕ.‌

‘ರಂಗಾಯಣದಲ್ಲಿ ವನರಂಗ ರೂಪಿಸುವಾಗ ಒಂದು ಮರ ಅಡ್ಡಿ ಆಗುತ್ತಿತ್ತು. ತೆರವಿಗೆ ಜಿಲ್ಲಾಧಿಕಾರಿ ಅನುಮತಿ ಬೇಕಿತ್ತು. ಬಿ.ವಿ. ಕಾರಂತರ ಅಭಿಮಾನಿಯಾಗಿದ್ದ ಜಿಲ್ಲಾಧಿಕಾರಿ ಹತ್ತಿರ ಹೋದಾಗ, ‘ಅನುಮತಿ ಕೇಳಿದರೆ ಕಷ್ಟ ಆಗುತ್ತೆ’ ಎಂದು ಮಾರ್ಮಿಕವಾಗಿ ಹೇಳಿದರು. ನಡುರಾತ್ರಿ ಮರ ಉರುಳಿಸಿದೆವು. ಕಾರಂತರು ಮುಂಜಾನೆಯೇ ನನ್ನ ಮನೆ ಬಾಗಿಲು ಬಡಿದು, ಅಳಲು ಆರಂಭಿಸಿದರು. ರಂಗಭೂಮಿ ಕಟ್ಟಲು ಒಂದು ಮರದ ಜೀವ ತೆಗೆದ ಕೊಲೆಗಡುಕನಾದೆ ಎಂದು ಮಗುವಿನಂತೆ ದುಃಖಿಸಿದರು’ ಎಂದರು ಚಂದ್ರಶೇಖರ ವಸ್ತ್ರದ.

ಕಲಬುರ್ಗಿ ಅವರು ದಾವಣಗೆರೆಯಲ್ಲಿ ತೋರಿದ ಧೈರ್ಯ, ಶಿವಮೊಗ್ಗದ ಕನ್ನಡ ಪ್ರಾಧ್ಯಾಪಕರ ಹಳೆಗನ್ನಡ ಸಂಭಾಷಣೆಯ ಪ್ರಸಂಗಗಳನ್ನು ಡಾ.ಎಂ.ಜಿ. ಈಶ್ವರಪ್ಪ ಹೇಳಿದರು. ಗೋಷ್ಠಿಯನ್ನು ಶಶಿಧರ ನರೇಂದ್ರ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು