ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನದ ಪೂರ್ಣಕುಂಭ ಮೆರವಣಿಗೆಯಲ್ಲಿ ಪುರುಷರಿಗೂ ಅವಕಾಶ: ಮನು ಬಳಿಗಾರ

ಪುರುಷರು, ತೃತೀಯ ಲಿಂಗಿಗಳಿಗೂ ಅವಕಾಶ
Last Updated 3 ಜನವರಿ 2019, 10:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಡೆಯುವ ಪೂರ್ಣ ಕುಂಭ ಮೆರವಣಿಗೆಯಲ್ಲಿ 92 ವಿಧವೆಯರೂ ಪಾಲ್ಗೊಳ್ಳಲಿದ್ದಾರೆ. ಆಸಕ್ತ ಪುರುಷರು ಹಾಗೂ ತೃತೀಯ ಲಿಂಗಿಗಳೂ ಭಾಗವಹಿಸಬಹುದುಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ ಹೇಳಿದರು.

ನಗರದ ಜಗದ್ಗುರು ಮೂರುಸಾವಿರ ಮಠ ಮಹಿಳಾ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ ನಾಡಗೀತೆ ತಾಲೀಮು ವೀಕ್ಷಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪೂರ್ಣ ಕುಂಭಮೆರವಣಿಗೆಯಲ್ಲಿ ಭಾಗವಹಿಸುವಂತೆ ಯಾರಿಗೂ ಒತ್ತಾಯ ಮಾಡಬಾರದು, 1001 ಮಂದಿ ಇರಲೇ ಬೇಕು ಎಂಬ ಹಠವೂ ಬೇಡ ಎಂದು ಈಗಾಗಲೇ ಮೆರವಣಿಗೆ ಸಮಿತಿಗೆ ಸೂಚನೆ ನೀಡಿದ್ದೇನೆ. ಈ ಹಿಂದೆ ನಡೆದ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ಪೂರ್ಣಕುಂಭ ಮೆರವಣಿಗೆ ನಡೆದಿದೆ. ಈ ವಿಷಯದಲ್ಲಿ ಸುಮಂಗಲೆ, ಅಮಂಗಲೆ ಹಾಗೂ ಧರ್ಮದ ಪ್ರಶ್ನೆ ಬರುವುದಿಲ್ಲ. ಯಾರು ಬೇಕಾದರೂ ಬಂದು ಭಾಗವಹಿಸಬಹುದು. ಮೊಹರಂ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಹಿಂದೂಗಳೇ ಆಚರಣೆ ಮಾಡುವುದಿಲ್ಲವೇ’ ಎಂದರು.

ಶೇ80ರಷ್ಟು ತಯಾರಿ ಪೂರ್ಣ: ‘ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆದಿದ್ದು, ಈಗಾಗಲೇ ಶೇ 80ರಷ್ಟು ಕೆಲಸಗಳು ಮುಗಿದಿವೆ. ಪ್ರತಿ ದಿನ 1ರಿಂದ 1.25 ಲಕ್ಷ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನಕ್ಕೆ 10.60 ಕೋಟಿ ಖರ್ಚಾಗಲಿದ್ದು, ಸರ್ಕಾರ ಈಗಾಗಲೇ ₹8 ಕೋಟಿ ಬಿಡುಗಡೆ ಮಾಡಿದೆ. ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಅವರು ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಹಲವು ವಿಶೇಷತೆಗಳು: ‘ಈ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಗರಿಷ್ಠ 20 ಗೋಷ್ಠಿಗಳು ಮಾತ್ರ ನಡೆದಿದ್ದವು. ಆದರೆ ಈ ಬಾರಿ ನಾವು 24 ಗೋಷ್ಠಿ ಆಯೋಜಿಸಿದ್ದೇವೆ. ಉತ್ತರ ಕರ್ನಾಟಕ ಅಭಿವೃದ್ಧಿ ಸವಾಲು ಬಗ್ಗೆಯೇ ವಿಶೇಷ ಗೋಷ್ಠಿ ನಡೆಯಲಿದೆ. ಮಹದಾಯಿ, ಕಾವೇರಿ, ಕೃಷ್ಣ ನದಿ ನೀರಿನ ಬಗ್ಗೆಯೂ ಒಂದು ಗೋಷ್ಠಿ ಇದೆ. ಗಡಿ ಸಮಸ್ಯೆ ಬಗ್ಗೆಯೂ ತಜ್ಞರು ಚರ್ಚೆ ನಡೆಸುವರು. ಎಲ್ಲ ಉಪನ್ಯಾಸ– ಭಾಷಣಗಳನ್ನು ಪುಸ್ತಕವಾಗಿ ಪ್ರಕಟಿಸಲಾಗುವುದು’ ಎಂದರು.

ಸಿಎಂ ಭೇಟಿ: ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿಯೇ ನೀಡುವುದು ಸೂಕ್ತ ಎಂಬುದು ಸಾಹಿತಿಗಳು, ತಜ್ಞರ ಅಭಿಪ್ರಾಯವಾಗಿದೆ. ಈ ವಿಷಯವನ್ನು ಮನದಟ್ಟು ಮಾಡಿಕೊಡಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು. ಈಗಾಗಲೇ ಅವರ ಸಮಯ ಕೇಳಿದ್ದೇವೆ’ ಎಂದರು.

‘ಸಮ್ಮೇಳನದಲ್ಲಿ ಕೈಗೊಂಡ ಎಲ್ಲ ನಿರ್ಣಯಗಳು ಅನುಷ್ಠಾನ ಆಗುವುದಿಲ್ಲ ನಿಜ. ಆದರೆ, ಹಲವಾರು ನಿರ್ಣಯಗಳು ಅನುಷ್ಠಾನ ಆಗಿವೆ. ಕಲಿಕಾ ಮಾಧ್ಯಮ ಭಾಷೆಯ ವಿಷಯದ ಬಗ್ಗೆ ಹೆಚ್ಚು ನಿರ್ಣಯಗಳಾಗಿವೆ. ಆದರೆ ಕೆಲವು ವಿಷಯಗಳು ನ್ಯಾಯಾಲಯದ ಪರಿಮಿತಿಯಲ್ಲಿ ಬರುತ್ತವೆ’ ಎಂದರು.

ಮೂರುಸಾವಿರ ಮಠ ಕಾಲೇಜಿನ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಹಾಡಿದ ನಾಡಗೀತೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, 2.30 ನಿಮಿಷದಲ್ಲಿ ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು. ಹುಬ್ಬಳ್ಳಿ ನಗರವನ್ನು ಸಹ ಸಿಂಗರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT