ಬೀಗರ ಗೆಲುವಿಗೆ ‘ಸಾಹುಕಾರ್‌’ ಶ್ರಮ

ಮಂಗಳವಾರ, ಜೂನ್ 25, 2019
26 °C

ಬೀಗರ ಗೆಲುವಿಗೆ ‘ಸಾಹುಕಾರ್‌’ ಶ್ರಮ

Published:
Updated:

ಹೊಸಪೇಟೆ: ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಗೆಲುವಿನಲ್ಲಿ ಅವರ ಬೀಗರು, ಗೋಕಾಕಿನ ‘ಸಾಹುಕಾರ್‌’ ರಮೇಶ ಜಾರಕಿಹೊಳಿ ಅವರ ಶ್ರಮವೂ ಅಡಗಿದೆ.

ಬಿಜೆಪಿ ಟಿಕೆಟ್‌ ದೇವೇಂದ್ರಪ್ಪನವರಿಗೆ ಸಿಗುವಂತೆ ನೋಡಿಕೊಂಡಿರುವುದು, ಪ್ರಚಾರದ ರಣತಂತ್ರ ರೂಪಿಸಿರುವುದು ಹಾಗೂ ಚುನಾವಣೆಯಲ್ಲಿ ಜಯಶಾಲಿ ಆಗುವಂತೆ ನೋಡಿಕೊಳ್ಳುವಲ್ಲಿ ರಮೇಶ ಜಾರಕಿಹೊಳಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಕಾಂಗ್ರೆಸ್‌ ವರಿಷ್ಠರ ವಿರುದ್ಧ ಅಸಮಾಧಾನಗೊಂಡು ಆ ಪಕ್ಷದ ವಿರುದ್ಧ ಬಹಿರಂಗವಾಗಿಯೇ ತೊಡೆ ತಟ್ಟಿದ್ದ ಜಾರಕಿಹೊಳಿ ಅವರು ನಂತರದ ದಿನಗಳಲ್ಲಿ ಬಿಜೆಪಿಗೆ ಹತ್ತಿರವಾದರು. ಒಂದು ಹಂತದಲ್ಲಿ ‘ಆಪರೇಷನ್‌ ಕಮಲ'ಕ್ಕೂ ಮುಂದಾಗಿದ್ದರು. ಆದರೆ, ಅದು ಕೈಗೂಡಿರಲಿಲ್ಲ.

ಬಳಿಕ ಅವರು, ತಾವು ಹೇಳಿದ ವ್ಯಕ್ತಿಗೆ ಬಳ್ಳಾರಿಯಿಂದ ಕಣಕ್ಕಿಳಿಸಿದರೆ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ತರುವುದಾಗಿ ಭರವಸೆ ನೀಡಿದ್ದರು. ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಜಯಶಾಲಿಯಾಗಿದ್ದ ವಿ.ಎಸ್‌.ಉಗ್ರಪ್ಪನವರನ್ನು ಮಣಿಸಲು ಸೂಕ್ತ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿತ್ತು. ಉಗ್ರಪ್ಪನವರನ್ನು ಮಣಿಸಬೇಕಾದರೆ ಜಾರಕಿಹೊಳಿ ಅವರು ಹೇಳಿದ ವ್ಯಕ್ತಿಗೆ ಟಿಕೆಟ್‌ ಕೊಡುವುದು ಸೂಕ್ತ ಎಂದು ಭಾವಿಸಿ, ಅಂತಿಮವಾಗಿ ದೇವೇಂದ್ರಪ್ಪನವರಿಗೆ ಬಿಜೆಪಿ ಟಿಕೆಟ್‌ ನೀಡಿತು. ರಮೇಶ ಜಾರಕಿಹೊಳಿ ಅವರು ಮಾತು ಕೊಟ್ಟಂತೆ ದೇವೇಂದ್ರಪ್ಪನವರು ಗೆಲ್ಲುವಂತೆ ನೋಡಿಕೊಂಡರು.

ದೇವೇಂದ್ರಪ್ಪನವರಿಗೆ ಟಿಕೆಟ್‌ ಘೋಷಣೆಯಾದ ಬಳಿಕ ರಮೇಶ ಜಾರಕಿಹೊಳಿ ಅವರು ಜಿಲ್ಲೆಗೆ ಹಲವು ಸಲ ಭೇಟಿ ನೀಡಿದರು. ನಾಯಕ ಸಮಾಜದ ಮುಖಂಡರೊಂದಿಗೆ ಸಭೆಗಳನ್ನು ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡರು. ಚುನಾವಣೆ ಹೊಸ್ತಿಲಿನಲ್ಲಿ ಆ ಸಮಾಜದ ಅನೇಕ ಮುಖಂಡರು ಬಿಜೆಪಿ ಸೇರಿದರು. ಇದರಿಂದ ಸಹಜವಾಗಿಯೇ ಬಿಜೆಪಿ ಶಕ್ತಿ ಇಮ್ಮಡಿಯಾಯಿತು. ಮತದಾನದ ಕೊನೆಯ ದಿನದ ವರೆಗೆ ಕ್ಷೇತ್ರದಲ್ಲಿನ ಪ್ರತಿಯೊಂದು ಚಟುವಟಿಕೆಗಳ ಕುರಿತು ಜಾರಕಿಹೊಳಿ ಮಾಹಿತಿ ಪಡೆದುಕೊಂಡು, ಅದಕ್ಕೆ ಪೂರಕವಾಗಿ ಕಾರ್ಯತಂತ್ರ ರೂಪಿಸುತ್ತಿದ್ದರು.

ಅಗತ್ಯ ಸಂಪನ್ಮೂಲ ಕೂಡ ಪೂರೈಸಿದ ರಮೇಶ ಜಾರಕಿಹೊಳಿ ಅವರು, ಗೋಕಾಕಿನಿಂದ ಕಾರ್ಯಕರ್ತರ ಪಡೆಯನ್ನು ಜಿಲ್ಲೆಗೆ ಕಳುಹಿಸಿಕೊಟ್ಟಿದ್ದರು. ಜಿಲ್ಲೆಯ ಪೂರ್ವ ತಾಲ್ಲೂಕುಗಳಲ್ಲಿ ಪ್ರಚಾರದ ಜವಾಬ್ದಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿ ಕಾರ್ಯಕರ್ತರು ವಹಿಸಿಕೊಂಡರು.

ಜಿಲ್ಲೆಯ ಪಶ್ಚಿಮದ ತಾಲ್ಲೂಕುಗಳಾದ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಹೂವಿನಹಡಗಲಿಯಲ್ಲಿ ಜಾರಕಿಹೊಳಿ ಅವರ ಬೆಂಬಲಿಗರು, ದೇವೇಂದ್ರಪ್ಪನವರ ಪರ ಸುಡುವ ಬಿಸಿಲನ್ನೂ ಲೆಕ್ಕಿಸದೆ ಪ್ರಚಾರ ನಡೆಸಿದರು. ಅದರ ಫಲವಾಗಿ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಮತ ಪಡೆಯಲು ಸಾಧ್ಯವಾಗಿದೆ. ಅದರಲ್ಲೂ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಪ್ರತಿನಿಧಿಸುವ ಹೂವಿನಹಡಗಲಿ ಕ್ಷೇತ್ರದಲ್ಲಿ ಬಿಜೆಪಿಗೆ ಭಾರಿ ಲೀಡ್‌ ಸಿಕ್ಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !