ಮಾನವೀಯ ಕವಿ ಬಿ.ಎ. ಸನದಿ ಇನ್ನಿಲ್ಲ

ಮಂಗಳವಾರ, ಏಪ್ರಿಲ್ 23, 2019
32 °C

ಮಾನವೀಯ ಕವಿ ಬಿ.ಎ. ಸನದಿ ಇನ್ನಿಲ್ಲ

Published:
Updated:
Prajavani

ಕುಮಟಾ/ ಬೆಳಗಾವಿ: ಮಾನವೀಯ ಕವಿ ಎಂದು ಕರೆಯಿಸಿಕೊಂಡಿದ್ದ, ಪಂಪ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎ. ಸನದಿ (86) ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ಕುಮಟಾ ತಾಲ್ಲೂಕಿನ ಹೆರವಟ್ಟಾದ ತಮ್ಮ ನಿವಾಸದಲ್ಲಿ ನಿಧನರಾದರು.

ಅವರಿಗೆ ಪತ್ನಿ ನಾಜಿರಾ ಸನದಿ, ಒಬ್ಬ ಮಗ ಹಾಗೂ ಮಗಳು ಇದ್ದಾರೆ.

ಬೆಳಗಾವಿ ತಾಲ್ಲೂಕಿನ ಶಿಂದೊಳ್ಳಿಯವರಾದ ಬಾಬಾಸಾಹೇಬ ಅಹಮದ್‌ಸಾಹೇಬ ಸನದಿ, ಹೆಚ್ಚು ಕಾಲ ಮುಂಬೈ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡಿದ್ದರು. ನಿವೃತ್ತಿಯ ನಂತರ, ಆರೋಗ್ಯದ ಕಾರಣದಿಂದ ತಮ್ಮ ಪತ್ನಿಯ ಊರಾದ ಹೆರವಟ್ಟಾದಲ್ಲಿ ನೆಲೆಸಿದ್ದರು. ಅವರ ಇಬ್ಬರೂ ಮಕ್ಕಳು ವಿದೇಶದಲ್ಲಿದ್ದಾರೆ.

ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ್ದ ಸನದಿ, 10ಕ್ಕೂ ಹೆಚ್ಚು ಕವನ ಸಂಕಲನಗಳು, 10 ಅನುವಾದಿತ ಕೃತಿಗಳು, ಶಿಶು ಸಾಹಿತ್ಯದಲ್ಲಿ ಐದು ಹಾಗೂ ಆರು ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.  ಎಂಟು ಕೃತಿಗಳನ್ನು ಸಂಪಾದಿಸಿದ್ದು, ಮೂರು ವ್ಯಕ್ತಿಚಿತ್ರಗಳನ್ನು ರಚಿಸಿದ್ದಾರೆ. ಕೊಂಕಣಿ, ತುಳು, ಉರ್ದು, ಗುಜರಾತಿ, ಮಲಯಾಳಂನ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.

ಅವರ ಸಾಹಿತ್ಯ ಕೃಷಿಯ ಬಗ್ಗೆ ನಾಡಿನ ಹೆಸರಾಂತ ಸಾಹಿತಿಗಳು ‘ಸನದಿ ಸಾಹಿತ್ಯ ಸಮೀಕ್ಷೆ’ ಎಂಬ ಸರಣಿಯಲ್ಲಿ ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

1992ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ‘ನಿರಂಜನ’ ಪ್ರಶಸ್ತಿ, ‘ ಶ್ರೇಷ್ಠ ಹೊರನಾಡು ಕನ್ನಡಿಗ’ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು, 2015ರಲ್ಲಿ ‘ಪಂಪ’ ಪ್ರಶಸ್ತಿಗೆ ಭಾಜನರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಸಾಹಿತಿಗಳು, ಸಾರ್ವಜನಿಕರು ದರ್ಶನ ಪಡೆದ ‍ಬಳಿಕ, ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ಹುಟ್ಟೂರಾದ ಶಿಂದೊಳ್ಳಿಗೆ ಕೊಂಡೊಯ್ಯಲಾಯಿತು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಯೂ ಕವಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಅಂತ್ಯಕ್ರಿಯೆ ನೆರವೇರಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !