ಐದು ವರ್ಷದ ಮಗುವಿಗೆ ಚಿಕಿತ್ಸೆ: ತೋರು ಬೆರಳೇ ಹೆಬ್ಬೆರಳಾಯ್ತು...!

ಬುಧವಾರ, ಮಾರ್ಚ್ 20, 2019
25 °C

ಐದು ವರ್ಷದ ಮಗುವಿಗೆ ಚಿಕಿತ್ಸೆ: ತೋರು ಬೆರಳೇ ಹೆಬ್ಬೆರಳಾಯ್ತು...!

Published:
Updated:
Prajavani

ಬೆಂಗಳೂರು: ಬಲಗೈಗೆ ಹೆಬ್ಬೆರಳು ಹಾಗೂ ಕಿರುಬೆರಳಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದ ಐದು ವರ್ಷದ ಮಗುವಿಗೆ ಸಂಜಯ್‌ ಗಾಂಧಿ ಅಪಘಾತ ಮತ್ತು ಮೂಳೆಚಿಕಿತ್ಸಾ ಸಂಸ್ಥೆಯ ವೈದ್ಯರು ‘ಪೋಲಿಸೈಜೇಷನ್‌ (ಹೆಬ್ಬೆಟ್ಟಿಲ್ಲದವರಿಗೆ ಬೆರಳು ಜೋಡಿಸುವ) ಶಸ್ತ್ರಚಿಕಿತ್ಸೆ’ ಮೂಲಕ ಬಲಗೈನ ತೋರು ಬೆರಳನ್ನೇ ಹೆಬ್ಬೆರಳನ್ನಾಗಿ ಮಾರ್ಪಡಿಸಿದ್ದಾರೆ.

ಹಾಸನ ಜಿಲ್ಲೆಯ ಬಿಜೆಮಾರನಹಳ್ಳಿ ಗ್ರಾಮದ ಪ್ರೇಮಕುಮಾರಿ ದಂಪತಿಯ ಎರಡನೇ ಮಗು ಚಿತ್ರಶ್ರೀ ಹುಟ್ಟಿದಾಗ, ಬಲಗೈಯಲ್ಲಿ ತೋರುಬೆರಳ ತುದಿಯ ಪಕ್ಕದಲ್ಲಿ ಹೆಬ್ಬೆರಳು ಒಂಚೂರು ಬೆಳೆದಿತ್ತು. ಆದರೆ, ಮೂಳೆ ರಕ್ತನಾಳಗಳು ಸಂಪೂರ್ಣ ಪ್ರಮಾಣದಲ್ಲಿ ಬೆಳೆದಿರಲಿಲ್ಲ ಹಾಗೂ ಕಿರುಬೆರಳೂ ಇರಲಿಲ್ಲ. ಈ ಮಗುವಿಗೆ ಬಲಭಾಗದಲ್ಲಿ ಮಾತ್ರ ಮೂತ್ರಪಿಂಡವಿದ್ದು, ಬಲಗಾಲಿನಲ್ಲಿ ಏಳು ಬೆರಳುಗಳಿವೆ. ‌

ಆಸ್ಪತ್ರೆಯ ಶಸ್ತ್ರತಜ್ಞರ (ವಂಶಿ ಕೃಷ್ಣ, ಜೈನಾಥ್‌ ಹಾಗೂ ರಾಜೇಂದ್ರ) ತಂಡ ಕಳೆದ ಡಿಸೆಂಬರ್‌ 27ರಂದು ಮೂರು ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ಈ ಲೋಪ ಸರಿಪಡಿಸುವಲ್ಲಿ ಯಶಸ್ವಿಯಾಗಿದೆ.

‘ಮಗುವಿನ ಬಲಗೈಯಲ್ಲಿ ಹೆಬ್ಬೆರಳಿನ ಮೂಳೆ, ರಕ್ತನಾಳಗಳಿಲ್ಲ. ಹಾಗಾಗಿ, ಬೇರೆ ಬೆರಳುಗಳ ಜೋಡಣೆ ಅಸಾಧ್ಯವಾಗಿದ್ದರಿಂದ ತೋರು ಬೆರಳನ್ನೇ ಹೆಬ್ಬೆರಳಾಗಿ ಬಳಸುವ ಹಾಗೇ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ತೋರು ಬೆರಳಿನ ಎಲುಬು, ನರಗಳು ಹಾಗೂ ರಕ್ತನಾಳಗಳನ್ನು ಹೆಬ್ಬೆರಳಿನ ಭಾಗಕ್ಕೆ ಸ್ಥಳಾಂತರಿಸುವ ಕೆಲಸ ಚೂರು ಏರುಪೇರಾದರೂ ಬೆರಳೇ ನಿರ್ಜೀವಗೊಳ್ಳುವ ಸಂಭವವಿರುತ್ತದೆ. ಹಾಗಾಗಿ, ಬಹಳ ಎಚ್ಚರ ವಹಿಸಿ ಚಿಕಿತ್ಸೆ ನೀಡಿದ್ದೇವೆ’ ಎಂದು ಶಸ್ತ್ರಚಿಕಿತ್ಸಾ ತಜ್ಞ ವಂಶಿ ಕೃಷ್ಣ ಮಾಹಿತಿ
ನೀಡಿದರು.

ಮಗುವಿನ ಚಿಕಿತ್ಸೆಗೆ ಸಿ.ಎಂ ಸ್ಪಂದನೆ
‘ಕಳೆದ ವರ್ಷ ಹಾಸನದ ಹರದನಹಳ್ಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿದ್ದ ವೇಳೆ ಮಗುವಿನ ಶಸ್ತ್ರಚಿಕಿತ್ಸೆಗೆ ನೆರವು ನೀಡಬೇಕಾಗಿ ಮನವಿ ಮಾಡಿಕೊಂಡಿದ್ದೆ. ಬೆಂಗಳೂರಿಗೆ ಬಂದು ಭೇಟಿಯಾಗುವಂತೆ ತಿಳಿಸಿದ್ದರು. ಮುಖ್ಯಮಂತ್ರಿಗಳ ಅನುದಾನದಡಿ ಆರ್ಥಿಕ ನೆರವು ಸಿಕ್ಕಿದ್ದರಿಂದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಯಿತು’ ಎಂದು ಪ್ರೇಮಕುಮಾರಿ ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ಸುಮಾರು ₹3 ಲಕ್ಷ ವೆಚ್ಚವಾಗುತ್ತದೆ. ಮುಖ್ಯಮಂತ್ರಿಗಳ ಅನುದಾನದಡಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಮಗು ಸಂಪೂರ್ಣವಾಗಿ ಗುಣಮುಖವಾಗಲು ಆರೇಳು ತಿಂಗಳು ಬೇಕು’ ಎಂದು ವೈದ್ಯರು ತಿಳಿಸಿದರು. 

‘ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ಚಿಕಿತ್ಸೆಗೆ ತಕ್ಕನಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ’ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಚಂದ್ರಶೇಖರ್‌ ಅವರು ಹೇಳಿದರು.‌

‘ಅಂಗವಿಕಲ ಮಗು ಬೇಡ ಎಂದಿದ್ದೆ’
‘ನಮ್ಮದು ಕೃಷಿ ಕುಟುಂಬ. ಚಿಕಿತ್ಸೆಗಾಗಿ ದುಬಾರಿ ವೆಚ್ಚ ಮಾಡುವ ಶಕ್ತಿಯೂ ಇಲ್ಲ. ಭವಿಷ್ಯದಲ್ಲೂ ಮಗು ಇತರರನ್ನು ಅವಲಂಬಿಸಬೇಕಲ್ಲ ಎಂಬ ಕಾರಣಕ್ಕೆ ಅಂಗವೈಕಲ್ಯವಿರುವ ಮಗು ಬೇಡ ಎಂದು ಕಣ್ಣೀರಿಟ್ಟಿದ್ದೆ’ ಎಂದು ಪ್ರೇಮಕುಮಾರಿ ಹೇಳಿಕೊಂಡರು.

‘ಆದರೆ, ಚಿತ್ರಶ್ರೀ ಬೆಳೆಯುತ್ತಿದ್ದಂತೆ ಬಟ್ಟೆ ಹಾಕಿಕೊಳ್ಳುವುದು, ಊಟ ಮಾಡುವುದು... ಹೀಗೆ ಪುಟ್ಟ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಇದನ್ನು ಗಮನಿಸಿದ ಬಳಿಕ, ಅವಳಿಗೆ ಹೇಗಾದರೂ ಮಾಡಿ ಉತ್ತಮ ಚಿಕಿತ್ಸೆಯನ್ನು ಕೊಡಿಸಬೇಕು ಎಂದು ನಿರ್ಧರಿಸಿದೆ. ಇನ್ನು ಆಕೆ ಸ್ವತಂತ್ರವಾಗಿ ಬದುಕುತ್ತಾಳೆ’ ಎಂದು ಆನಂದಭಾಷ್ಪ ಸುರಿಸಿದರು.

‘ಮಗುವಿಗೆ ಬಲ ಮೊಣಕೈ ಹಾಗೂ ಮುಂಗಟ್ಟಿನಲ್ಲಿ ಎಲುಬುಗಳ ಜೋಡಣೆ ಸರಿಯಾಗಿಲ್ಲ. ಹಾಗಾಗಿ, ಕೈಯನ್ನು ಪೂರ್ತಿಯಾಗಿ ಮಡಚಲು ಬರುವುದಿಲ್ಲ. ಸದ್ಯದ ಚಿಕಿತ್ಸೆ ಪೂರ್ಣಗೊಂಡ ನಂತರ ಈ ಬಗ್ಗೆ ಆಲೋಚಿಸುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !