ಚಂದಾದಾರರಿಂದ ‘ಸಂಕ್ರಮಣ’ಕ್ಕೆ ಗ್ರಹಣ

7

ಚಂದಾದಾರರಿಂದ ‘ಸಂಕ್ರಮಣ’ಕ್ಕೆ ಗ್ರಹಣ

Published:
Updated:

ಬೆಂಗಳೂರು: ಆಸಕ್ತರಿಗೆ 53 ವರ್ಷಗಳಿಂದ ಸಾಹಿತ್ಯದ ಸವಿಯೂಟ ಉಣಬಡಿಸಿದ ‘ಸಂಕ್ರಮಣ’ ಮಾಸ ಪತ್ರಿಕೆ ಆರ್ಥಿಕ ಸಂಕಷ್ಟದಿಂದಾಗಿ ಈಗ ಸ್ಥಗಿತವಾಗುತ್ತಿದೆ.

ಈ ದ್ವೈಮಾಸಿಕದ ಸಾರಥಿ ಚಂದ್ರಶೇಖರ ಪಾಟೀಲ (ಚಂಪಾ) ಪ್ರಕಟಣೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಇದರ ಕಡೆಯ ಸಂಚಿಕೆ ನವೆಂಬರ್‌–ಡಿಸೆಂಬರ್‌ 2018ರಲ್ಲಿ ಪ್ರಕಟಗೊಂಡಿದೆ.

‘ಪತ್ರಿಕೆಗೆ ಲೇಖನಗಳು, ಲೇಖಕರು ಮತ್ತು ಓದುಗರ ಕೊರತೆ ಇಲ್ಲ. ಇರುವ 3,000 ಚಂದಾದಾರರಲ್ಲಿ 1,500 ಜನರಿಂದ ₹ 5 ಲಕ್ಷ ಬಾಕಿ ಉಳಿದಿದೆ. ಚಂದಾ ಕೊಟ್ಟರಾಯಿತು, ಬಿಟ್ಟರಾಯಿತು ಎಂದು ಆಲಸ್ಯ ಮಾಡುತ್ತಿದ್ದಾರೆ. ದುಡ್ಡಿನ ಸಮಸ್ಯೆ ಜಾಸ್ತಿಯಾಗಿದೆ. ಎಲ್ಲ ಹೊಡೆತ ತಡೆಯಬಹುದು, ಆದರೆ, ದುಡ್ಡಿನ ಹೊಡೆತ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಹಾಗಾಗಿ ಪತ್ರಿಕೆ ನಿಲ್ಲಿಸುವುದು ಅನಿವಾರ್ಯವಾಗಿದೆ’ ಎಂದರು ಚಂಪಾ.

ಮಿತ್ರತ್ರಯರಾದ ಚಂಪಾ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಈ ಸಂಕ್ರಮಣಕ್ಕೆ ಚಾಲನೆ ನೀಡಿದ್ದರು. ‘ಮೈಸೂರಿನಲ್ಲಿ ತೇಜಸ್ವಿ, ವಿ.ಎನ್‌. ಶ್ರೀರಾಮ್ ಕೂಡಿ ಲಹರಿ ಪತ್ರಿಕೆ ಮಾಡಿದ್ದರು. ಅದನ್ನು ನೋಡಿ ನಾವು ಮೂರು ಜನ 1964ರಲ್ಲಿ ತಲಾ ₹ 10 ಬಂಡವಾಳ ಹಾಕಿ ಧಾರವಾಡದಲ್ಲಿ ಪತ್ರಿಕೆ ಶುರು ಮಾಡಿದೆವು. ಪರಿಚಿತ ಲೇಖಕರಿಗೆ ಐದು ಪೈಸಾದ ಪೋಸ್ಟ್‌ಕಾರ್ಡ್‌ ಬರೆದು ಪತ್ರಿಕೆಯನ್ನು ಪರಿಚಯಿಸಿದ್ದೆವು. ಆಗ ಬಹಳ ಚಂದ ಸ್ಪಂದನೆ ಸಿಕ್ಕಿತು. ಈಗ ಚಂದಾವೇ ಬರುತ್ತಿಲ್ಲ’ ಎಂದು ಅವರು ಸ್ಮರಿಸಿದರು.

ಸಂಕ್ರಮಣ ಪ್ರಕಾಶನ ಮುಂದುವರಿಯಲಿದೆ. ಸಂಕ್ರಮಣ ಸುವರ್ಣ ಸಂಪುಟಗಳೂ ಹೊರಬರಲಿವೆ ಎಂದು ಅವರು ತಿಳಿಸಿದರು.

*
ಈ ವರ್ಷ ಪೂರ್ತಿ ಬಾಕಿ ವಸೂಲು ಮಾಡಬೇಕೆಂದಿದ್ದೇನೆ. ಒಂದು ವೇಳೆ ಅದು ವಾಪಸ್ಸು ಬಂತು ಅಂದ್ರ, ಮತ್ತ ಸಂಕ್ರಮಣಕ್ಕ ಹೊಸರೂಪ ಕೊಡೊ ಪ್ರಯತ್ನ ಮಾಡ್ತೀನಿ.
-ಚಂದ್ರಶೇಖರ ಪಾಟೀಲ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !