ಶಿಕ್ಷಕರ ವರ್ಗಾವಣೆಗೆ ಕೊನೆಗೂ ಮುಹೂರ್ತ

7
10 ವರ್ಷಕ್ಕೂ ಹೆಚ್ಚು ಅವಧಿ ನಗರದಲ್ಲಿದ್ದವರಿಗೆ ಗ್ರಾಮೀಣ ಶಾಲೆ ಕಡ್ಡಾಯ

ಶಿಕ್ಷಕರ ವರ್ಗಾವಣೆಗೆ ಕೊನೆಗೂ ಮುಹೂರ್ತ

Published:
Updated:

ಬೆಂಗಳೂರು: ಮೂರು ವರ್ಷಗಳಿಂದ ಮುಂದೂಡುತ್ತಲೇ ಇದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಇದೇ 31ರಿಂದ ಗಣಕೀಕೃತ ಕೌನ್ಸೆಲಿಂಗ್‌ ಪಾರಂಭಗೊಳ್ಳಲಿವೆ.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 10 ವರ್ಷಗಳಿಗೂ ಮೇಲ್ಪಟ್ಟು ಕೆಲಸ ಮಾಡಿದ ಶಿಕ್ಷಕರು ಗ್ರಾಮೀಣ ಪ್ರದೇಶಕ್ಕೆ ತೆರಳುವುದು ಕಡ್ಡಾಯವಾಗಲಿದೆ.

ವರ್ಗಾವಣೆ ಪ್ರಕ್ರಿಯೆಗೆ ಮಾರ್ಗಸೂಚಿ ಸಹಿತ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ. ಸಂಕಷ್ಟಗಳನ್ನೆಲ್ಲ ನುಂಗಿಕೊಂಡು ಮೂರು ವರ್ಷಗಳಿಂದ ವರ್ಗಾವಣೆಗಾಗಿ ಪರಿತಪಿಸುತ್ತಿದ್ದ ಶಿಕ್ಷಕರು ಕೊನೆಗೂ ನಿಟ್ಟುಸಿರುವ ಬಿಡುವಂತಾಗಿದೆ. 

ಆಗಸ್ಟ್‌ 31ರಿಂದ ಸೆ.7ರವರೆಗೆ ಘಟಕದೊಳಗಿನ (ಘಟಕ ಎಂದರೆ ತಾಲ್ಲೂಕು ಅಥವಾ ಜಿಲ್ಲೆ) ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಕೋರಿಕೆ ವರ್ಗಾವಣೆ, ಸೆ.10ರಿಂದ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ಪ್ರಾರಂಭವಾಗುತ್ತದೆ. ಸೆ.14ರಿಂದ ಸೆ.22ವರೆಗೆ ಪರಸ್ಪರ ಹಾಗೂ ಕೋರಿಕೆ ವರ್ಗಾವಣೆ ನಡೆಯುತ್ತದೆ.

‘ಚುನಾವಣೆ ನೀತಿ ಸಂಹಿತೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದರಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು. 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಇದೆ. ಚುನಾವಣೆ ಇರುವ ದಿನಾಂಕಗಳನ್ನು ಪರಿಶೀಲಿಸಿ ಈ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್‌ ತಿಳಿಸಿದರು.

‘ಪ್ರಸ್ತುತ ಜಾರಿಗೊಳಿಸಲಾಗಿರುವ ವರ್ಗಾವಣೆ ಕಾಯ್ದೆ ಹಾಗೂ ನಿಯಮಗಳು ಶಿಕ್ಷಕ ಸ್ನೇಹಿಯಾಗಿವೆ. ಘಟಕದ ಒಳಗೆ ಮತ್ತು ಹೊರಗಿನ ಒಟ್ಟು ವರ್ಗಾವಣಾ ಮಿತಿಯನ್ನು ಶೇ 8ರಿಂದ 15ಕ್ಕೆ ಹೆಚ್ಚಿಸಲಾಗಿದೆ. ಶಿಕ್ಷಕರ ಕೊರತೆಯಿರುವ ಅನೇಕ ಶಾಲೆಗಳಿಗೆ ಶಿಕ್ಷಕರನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಇರುವ ಶಿಕ್ಷಕರಿಗೆ ನಗರ ಪ್ರದೇಶಕ್ಕೆ ವರ್ಗಾವಣೆ ಕೋರುವ ಅವಕಾಶವಿದೆ. ತಂತ್ರಾಂಶದ ಸಹಾಯದಿಂದ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಶಿಕ್ಷಕರ ದತ್ತಾಂಶದ (ಟಿಡಿಎಸ್‌) ಮೂಲಕ ರಾಜ್ಯದ 7,062 ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 10,686 ಹೆಚ್ಚುವರಿ ಶಿಕ್ಷಕರನ್ನು ಹಾಗೂ 4,680 ಪ್ರೌಢಶಾಲೆಗಳಲ್ಲಿ 1,941 ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗಿದೆ. ಈ ಸಂಖ್ಯೆಗಳಲ್ಲಿ ಯಾವುದಾದರೂ ಬದಲಾವಣೆ ಇದ್ದಲ್ಲಿ ಅದನ್ನು ಉಪನಿರ್ದೇಶಕರು ಮತ್ತೊಮ್ಮೆ ಪರಿಶೀಲಿಸಲು ಇಲಾಖೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !