ಮಂಗಳವಾರ, ಫೆಬ್ರವರಿ 18, 2020
28 °C
ಮಲೆನಾಡಿನ ಕಾಫಿ ತೋಟ ಜಾಲಾಡುತ್ತಿರುವ ಜಿಲ್ಲಾ ಪೊಲೀಸರು

ಕೊಡಗಿನಲ್ಲಿ ವಲಸಿಗರ ಪತ್ತೆ ಕಾರ್ಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗಿನ ಕಾಫಿ ತೋಟ ಹಾಗೂ ರೆಸಾರ್ಟ್‌ಗಳಲ್ಲಿ ಬಾಂಗ್ಲಾದೇಶದ ವಲಸಿಗರು ಕೆಲಸಕ್ಕಿದ್ದಾರೆಂಬ ಶಂಕೆಯ ಮೇರೆಗೆ, ಜಿಲ್ಲೆಯಲ್ಲಿ ಅವರ ಪತ್ತೆ ಕಾರ್ಯ ಆರಂಭವಾಗಿದೆ.

‘ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ತರಬೇತಿ ಶಿಬಿರ ನಡೆಸಲು ಉಗ್ರರು ಯೋಜನೆ ರೂಪಿಸಿದ್ದರು’ ಎನ್ನುವ ಮಾಹಿತಿ ಬೆಳಕಿಗೆ ಬಂದ ಬೆನ್ನಲ್ಲೇ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ.

ಇಲ್ಲಿನ ಕ್ರಿಸ್ಟಲ್‌ ಹಾಲ್‌ ಸೇರಿದಂತೆ ಜಿಲ್ಲೆಯ ಮೂರು ಸ್ಥಳಗಳಲ್ಲಿ ಗುರುವಾರ ಕಾರ್ಮಿಕರ ದಾಖಲಾತಿ ಪರಿಶೀಲನೆ ನಡೆಯಿತು. ಮಾಲೀಕರೇ, ತಮ್ಮ ತೋಟದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ವಾಹನಗಳಲ್ಲಿ ಕರೆತಂದು ದಾಖಲಾತಿ ತೋರಿಸಿ ವಾಪಸ್‌ ಕರೆದೊಯ್ದರು. ಆಧಾರ್‌ ಕಾರ್ಡ್‌, ವೋಟರ್‌ ಐ.ಡಿ, ಬ್ಯಾಂಕ್‌ ಪಾಸ್‌ಬುಕ್‌, ಪ್ಯಾನ್‌ ಕಾರ್ಡ್‌ ಹಾಗೂ ಎಲ್‌.ಐ.ಸಿ ಬಾಂಡ್‌ ಅನ್ನು ಪೊಲೀಸರು ಪರಿಶೀಲಿಸಿದರು. ದಾಖಲಾತಿಗಳ ಜೆರಾಕ್ಸ್‌ ಪ್ರತಿ ಪಡೆದ ಮೇಲೆ, ಕಾರ್ಮಿಕರನ್ನು ಅವರು ಕೆಲಸ ಮಾಡುತ್ತಿದ್ದ ತೋಟಕ್ಕೆ ಕಳುಹಿಸಲಾಯಿತು.

ಕ್ರಿಸ್ಟಲ್‌ ಹಾಲ್‌ ಬಳಿಗೆ ದಾಖಲಾತಿ ಹಿಡಿದು ಬಂದಿದ್ದ ಬಹುತೇಕ ಕಾರ್ಮಿಕರಲ್ಲಿ ಆತಂಕ ಮನೆಮಾಡಿತ್ತು. ‘ನಾವು ಇದೇ ದೇಶದವರು; ಭಾರತೀಯರು. ಹೊಟ್ಟೆಪಾಡಿಗಾಗಿ ಕೊಡಗಿಗೆ ಬಂದಿದ್ದೇವೆ. ಇಲ್ಲಿಯೂ ಸಂಶಯದಿಂದ ನೋಡಲಾಗುತ್ತಿದೆ’ ಎಂದು ಕಾರ್ಮಿಕ ಸೋಮ್‌ ನೋವು ತೋಡಿಕೊಂಡರು.‌

ಸಿ.ಎ.ಎಗೆ ಸಂಬಂಧ ಇಲ್ಲ: ಎಸ್‌ಪಿ ಸ್ಪಷ್ಟನೆ

‘ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಬಂದವರು ಕಾಫಿ ತೋಟ, ರೆಸಾರ್ಟ್ ಹಾಗೂ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂಬ ಮಾಹಿತಿ ಇತ್ತು. ದೇಶದಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿದ್ದು ಜಿಲ್ಲೆಯ ಶಾಂತಿ, ಸುರಕ್ಷತೆ ಹಾಗೂ ಇಲಾಖೆ ಬಳಿ ಕಾರ್ಮಿಕರ ಮಾಹಿತಿ ಇರಬೇಕೆಂಬ ಕಾರಣಕ್ಕಾಗಿ ದಾಖಲಾತಿ ಪರಿಶೀಲನೆ ನಡೆಸಿದ್ದೇವೆ. ಸಿಎಎ ಹಾಗೂ ಎನ್‌ಆರ್‌ಸಿಗೆ ಸಂಬಂಧ ಇಲ್ಲ. ಸರ್ಕಾರದಿಂದ ಯಾವ ನಿರ್ದೇಶನವೂ ಬಂದಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಸ್ಪಷ್ಟಪಡಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಂದತಿ ಹಬ್ಬಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದರು.

‘ಕಾಫಿ ಕೊಯ್ಲು ಮುಗಿದ ಬಳಿಕ ಕಾರ್ಮಿಕರು ಸ್ವಸ್ಥಾನಕ್ಕೆ ಮರಳುತ್ತಾರೆ. ಹೀಗಾಗಿ, ಈಗ ಪರಿಶೀಲನೆ ಆರಂಭಿಸಬೇಕಾಯಿತು. ಮೊದಲ ದಿನ ಅಂದಾಜು 5 ಸಾವಿರ ಕಾರ್ಮಿಕರ ದಾಖಲಾತಿ ಪರಿಶೀಲನೆ ನಡೆದಿದ್ದು, ಅವರಲ್ಲಿ 500 ಜನರು ಸಮರ್ಪಕ ದಾಖಲಾತಿ ಸಲ್ಲಿಸಿಲ್ಲ. ಆನ್‌ಲೈನ್‌ ಪರಿಶೀಲನೆ ವೇಳೆ ಕೆಲವರ ಹೆಸರು ಹೊಂದಾಣಿಕೆ ಆಗಿಲ್ಲ. ಅವರಿಗೆ ಸಮಯ ನೀಡಲಾಗಿದೆ’ಎಂದರು.

‘ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದ ನುಸುಳುಕೋರರು ಕೆಲಸ ಮಾಡುತ್ತಿದ್ದಾರೆ. ಕಡಿಮೆ ಸಂಬಳಕ್ಕೆ ಇವರು ದುಡಿಯುತ್ತಾರೆ ಎನ್ನುವ ಕಾರಣಕ್ಕೆ ತೋಟದ ಮಾಲೀಕರೇ ಅವರಿಗೆ ಆಶ್ರಯ ಕಲ್ಪಿಸುತ್ತಿದ್ದಾರೆ’ ಎಂದು ಹಿಂದೂ ಜಾಗರಣಾ ವೇದಿಕೆ ಹಾಗೂ ಬಜರಂಗದಳದ ಮುಖಂಡರು ಈ ಹಿಂದೆ ಆರೋಪಿಸಿದ್ದರು. ವಲಸಿಗರನ್ನು ಹೊರ ಹಾಕುವಂತೆಯೂ ಮನವಿ ಸಲ್ಲಿಸಿದ್ದರು.

*
ಶೀಘ್ರವೇ 2ನೇ ಸುತ್ತಿನ ಗುರುತಿನ ಚೀಟಿ ಪರಿಶೀಲನಾ ಕಾರ್ಯ ಆರಂಭಿಸುತ್ತೇವೆ. ಜಿಲ್ಲೆಯ ಸುರಕ್ಷತೆ ದೃಷ್ಟಿಯಿಂದ ಪರಿಶೀಲನೆ ನಡೆಸಿದ್ದೇವೆ.
-ಡಾ.ಸುಮನ್‌ ಡಿ. ಪನ್ನೇಕರ್‌, ಎಸ್‌ಪಿ, ಕೊಡಗು

*
ಪೊಲೀಸರು ಕೇಳಿದ ಎಲ್ಲ ದಾಖಲೆಗಳನ್ನೂ ಸಲ್ಲಿಸಿದ್ದೇವೆ. ನಮ್ಮ ಎಸ್ಟೇಟ್‌ನಲ್ಲಿ ಹೊರ ರಾಜ್ಯದ 11 ಮಂದಿ ಕಾರ್ಮಿಕರಿದ್ದಾರೆ. ಬಾಂಗ್ಲಾದಿಂದ ಬಂದವರು ಇಲ್ಲ.
-ಗೌತಮ್‌, ಮೇಸ್ತ್ರಿ, ಅಭ್ಯತ್‌ಮಂಗಲ ಎಸ್ಟೇಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು