ಸರ್ಕಾರ ಉಳಿಯುತ್ತಾ ಉರುಳುತ್ತಾ?: ವಿಧಾನಸಭೆ ಮೊಗಸಾಲೆಯಲ್ಲಿ ಚರ್ಚೆ

7
‘ಖಾತೆ’ ಹಂಚಿಕೆಯಲ್ಲಿ ನಿರತ ಬಿಜೆಪಿ ಶಾಸಕರು

ಸರ್ಕಾರ ಉಳಿಯುತ್ತಾ ಉರುಳುತ್ತಾ?: ವಿಧಾನಸಭೆ ಮೊಗಸಾಲೆಯಲ್ಲಿ ಚರ್ಚೆ

Published:
Updated:

ಬೆಂಗಳೂರು: ‘ಸರ್ಕಾರ ಉರುಳುತ್ತಾ, ಉಳಿಯುತ್ತಾ?. .  ‘ಆಪರೇಷನ್ ಕಮಲ’ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬೆಲ್ಲ ಸ್ವಾರಸ್ಯಕರ ಚರ್ಚೆಗೆ ವಿಧಾನಸಭೆ ಮೊಗಸಾಲೆ ಬುಧವಾರ ವೇದಿಕೆಯಾಗಿತ್ತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೆಣೆದಿರುವ ತಂತ್ರ ಯಶಸ್ವಿಯಾಗಿಯೇ ತೀರುತ್ತದೆ ಎಂಬ ವಿಶ್ವಾಸದಲ್ಲಿದ್ದ ಆ ಪಕ್ಷದ ಕೆಲವು ಶಾಸಕರು, ಯಾರಿಗೆ ಯಾವ ಖಾತೆ ಹಂಚಿಕೆಯಾಗಲಿದೆ, ಯಾರು ಹೇಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದೆಲ್ಲ ತಮಾಷೆ ಮಾಡಿಕೊಂಡು ಕಾಲೆಳೆಯುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.

‘ನಮ್ಮ ಜತೆ ಕಾಂಗ್ರೆಸ್–ಜೆಡಿಎಸ್‌ನ 13ಕ್ಕೂ ಹೆಚ್ಚು ಶಾಸಕರಿದ್ದಾರೆ. ಸರ್ಕಾರ ಪತನದ ದಿನ ಸನಿಹದಲ್ಲಿದೆ. ಅದು 10, 15 ಅಥವಾ 23 ಯಾವ ದಿನಾಂಕವಾದರೂ ಆಗಬಹುದು. ಆಗಿ ತೀರುವುದು ಖಚಿತ’ ಎಂದು ಶಾಸಕರೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

‘12 ಶಾಸಕರು ಇರುವುದು ಖರೆ. ಪಕ್ಷ ಬಿಟ್ಟು ಬರಲು ಅವರು ಧೈರ್ಯ ಮಾಡುತ್ತಿಲ್ಲ. ಅದು ದೊಡ್ಡ ಸಮಸ್ಯೆ’ ಎಂದು ಮತ್ತೊಬ್ಬರು ಧ್ವನಿ ಸೇರಿಸಿದರು. 

‘ಮುಂಬೈನಲ್ಲಿರುವ ಶಾಸಕರು ನಮ್ಮ ಜತೆಗಿದ್ದಾರೆ. ಇಲ್ಲಿ ಸದನಕ್ಕೆ ಬಂದಂತೆ ತೋರಿಸಿಕೊಂಡ ಕೆಲವರೂ ಮುಂದಿನ ದಿನಗಳಲ್ಲಿ ಬರಲಿದ್ದಾರೆ. ಪಕ್ಷದ ನಮ್ಮ ಪಕ್ಷದ ವರಿಷ್ಠರು ಸೂಚನೆ ಕೊಡುವುದನ್ನು ಕಾಯುತ್ತಿದ್ದಾರೆ’ ಎಂದು ಹಿರಿಯ ಬಿಜೆಪಿ ಶಾಸಕರೊಬ್ಬರು ಪ್ರತಿಪಾದಿಸಿದರು.

‘ಆಪರೇಷನ್‌ಗೆ ಎಲ್ಲವೂ ಸಿದ್ಧವಾಗಿದೆ. ಯಾವ ಶಾಸಕರು ಯಾವಾಗ ಬರುತ್ತಾರೆ ಎಂಬುದು ಖಚಿತವಿಲ್ಲ. ಎಲ್ಲ ತಂತ್ರವೂ ಯಡಿಯೂರಪ್ಪನವರಿಗೆ ಮಾತ್ರ ಗೊತ್ತಿದೆ. ಅಧಿವೇಶನ ಮುಗಿಯುವ ಮೊದಲು ಅಥವಾ ಮುಗಿದ ಮೇಲೆ ಸರ್ಕಾರದ ಆಯಸ್ಸೂ ಮುಗಿಯಲಿದೆ. ಅಲ್ಲಿಯವರೆಗೆ ಕಾದು ನೋಡಿ’ ಎಂದು ವಿಧಾನಪರಿಷತ್ತಿನ ಸದಸ್ಯರೊಬ್ಬರು ಹೇಳಿದರು.

ಖಾತೆ ಹಂಚಿಕೆ: ಅಗಲಿದ ಗಣ್ಯರಿಗೆ ಸದನದೊಳಗೆ ಸಂತಾಪ ಸೂಚಿಸುವ ಕಲಾಪ ನಡೆಯುತ್ತಿದ್ದ ವೇಳೆಯಲ್ಲಿ ಮೊಗಸಾಲೆಯಲ್ಲಿ ಕುಳಿತಿದ್ದ ಬಿಜೆಪಿ ಶಾಸಕರು, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಬರುವುದು ಖಚಿತ. ಯಾರಿಗೆ ಯಾವ ಖಾತೆ ಎಂದು ಹಂಚಿಕೆ ಮಾಡುತ್ತಿದ್ದರು.

‌ಲೋಕಾಭಿರಾಮವಾಗಿ ಕುಳಿತು ಹರಟುತ್ತಿದ್ದ ಶಾಸಕರು ಎದುರಿಗೆ ತಮ್ಮ ಪಕ್ಷದವರು ಬಂದ ಕೂಡಲೇ ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯಗೆ ಕಂದಾಯ, ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬಸವರಾಜ ಬೊಮ್ಮಾಯಿಗೆ ಜಲಸಂಪನ್ಮೂಲ ಎಂದು ಹೇಳುತ್ತಾ ಪರಸ್ಪರರ ಕಾಲೆಳೆಯುತ್ತಿದ್ದರು. ಸಭಾಧ್ಯಕ್ಷರು ಯಾರು ಎಂಬ ಚರ್ಚೆಯೂ ನಡೆಯಿತು.

ಸರ್ಕಾರ ಭದ್ರ: ಅತ್ತ ಆಡಳಿತ ಪಕ್ಷದ ಮೊಗಸಾಲೆಯಲ್ಲಿದ್ದ ಕಾಂಗ್ರೆಸ್–ಜೆಡಿಎಸ್ ಶಾಸಕರ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು. ಹೋದರೆ ನಾಲ್ವರು ಶಾಸಕರು ಹೋಗಬಹುದು. ಬಿಜೆಪಿ ನಂಬಿಕೊಂಡು ಯಾರೊಬ್ಬರೂ ಹೋಗುವುದಿಲ್ಲ. ಅವೆಲ್ಲ ಮಾಧ್ಯಮಗಳಲ್ಲಿ ಬರುತ್ತಿರುವ ಊಹಾಪೋಹ ಎಂಬ ವಿಶ್ವಾಸದ ಮಾತುಗಳು ಕೇಳಿಬಂದವು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !