ಈ ‘ಸ್ತ್ರೀ ಸಮಾಜ’ಕ್ಕೆ 105 ವರ್ಷ!

7

ಈ ‘ಸ್ತ್ರೀ ಸಮಾಜ’ಕ್ಕೆ 105 ವರ್ಷ!

Published:
Updated:
Deccan Herald

ಶತಮಾನಕ್ಕೂ ಹಿಂದೆ ಬೆಂಗಳೂರಿನಲ್ಲೊಂದು ಸಾಮಾಜಿಕ ಪರಿವರ್ತನೆಯ ಕಲ್ಪನೆಯೊಂದು ಜೀವ ಪಡೆಯುತ್ತದೆ. ಮನೆಯಲ್ಲಿಯೇ ಬಂಧಿಯಾಗಿರುವ ವಿಧವೆಯರನ್ನು ಮನೆಯಿಂದ ಹೊರ ತಂದು ಅವರಿಗೊಂದು ಸ್ವಂತ ಜೀವನ ನಡೆಸುವ ಶಕ್ತಿ ತುಂಬ ಬೇಕು ಎಂಬ ಉದಾತ್ತ ಉದ್ದೇಶದಿಂದ 1913ರಲ್ಲಿ ಚಾಮರಾಜಪೇಟೆಯಲ್ಲಿ ‘ಶಾರದಾ ಸ್ತ್ರೀ ಸಮಾಜ’ ಎಂಬ ಸಂಸ್ಥೆ ಸ್ಥಾಪನೆಯಾಗುತ್ತದೆ. ಇದರ ಸ್ಥಾಪಕಿ ಸರ್‌ ಕೆ.ಪಿ ಪುಟ್ಟಣ್ಣ ಚೆಟ್ಟಿ ಅವರ ಪತ್ನಿ ಪಾರ್ವತಮ್ಮ. ಆರಂಭವಾದಾಗಿನಿಂದ ಅವರು ನಿಧನರಾಗುವವರೆಗೂ ಸುಮಾರು 45 ವರ್ಷ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ.

ಆರಂಭದಲ್ಲಿ ಮಹಿಳೆಯರಿಗಾಗಿ ಟೈಲರಿಂಗ್‌, ಬೆತ್ತದ ಬುಟ್ಟಿ ಹೆಣೆಯುವ ತರಗತಿಗಳನ್ನು ನಡೆಸುತ್ತಾರೆ. ಗ್ರಂಥಾಲಯ ಸ್ಥಾಪಿಸುತ್ತಾರೆ. ಆಗ ಸುಮಾರು 25 ಮಹಿಳೆಯರು ಸ್ತ್ರೀ ಸಮಾಜವನ್ನು ಸೇರಿಕೊಳ್ಳುತ್ತಾರೆ. ತರಗತಿ ನಡೆಸುವುದಕ್ಕೆ ಮತ್ತು ಶಿಕ್ಷಕರಿಗೆ ವೇತನ ನೀಡುವುದಕ್ಕಾಗಿ ಮೈಸೂರಿನ ಮಹಾರಾಜರಾಗಿದ್ದ ಶ್ರೀಕೃಷ್ಣರಾಜ ಒಡೆಯರ್‌ ಅವರು ತಿಂಗಳಿಗೆ ₹75ರಂತೆ ಅನುದಾನ ನೀಡುತ್ತಾರೆ. ಈ ಅನುದಾನ ಸ್ವಾತಂತ್ರ್ಯ ಸಿಗುವವರೆಗೂ ಮುಂದುವರಿಸುತ್ತಾರೆ. ನಂತರ ಸರ್ಕಾರದಿಂದ ಅನುದಾನದ ವ್ಯವಸ್ಥೆಯಾಗುತ್ತದೆ. ಈಗ ಇದೇ ಸಂಸ್ಥೆಗೆ 105 ವರ್ಷ.

ಶಾರದಾ ಸ್ತ್ರೀ ಸಮಾಜ ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ನಡೆಸುತ್ತಿದೆ. ಇಲ್ಲಿ ನರ್ಸರಿಯಿಂದ ಹತ್ತನೇ ತರಗತಿಯವರೆಗೆ ಸುಮಾರು 1 ಸಾವಿರ ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ –ಇಂಗ್ಲಿಷ್‌ ಎರಡೂ ಮಾಧ್ಯಮದಲ್ಲಿ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮಲ್ಲಿಗೆ ನರ್ಸಿಂಗ್‌ ಹೋಂನ ಡಾ. ಶ್ರೀರಾಮ್‌, ನಟ ಉಪೇಂದ್ರ ಇವರೆಲ್ಲ ಇದೇ ಸಂಸ್ಥೆಯ ಹಳೆವಿದ್ಯಾರ್ಥಿಗಳು. 


ಪಾರ್ವತಮ್ಮ ಪುಟ್ಟಣ್ಣಚೆಟ್ಟಿ

ಮಹಿಳೆಯರದೇ ಆಡಳಿತ: ಹೆಸರಿಗೆ ತಕ್ಕಂತೆ ಇದು ಸ್ತ್ರೀ ಸಮಾಜವೇ ಆಗಿದೆ. ಶಾರದಾ ಸ್ತ್ರೀ ಸಮಾಜ ಆರಂಭವಾದಾಗಿನಿಂದಲೂ ಮಹಿಳೆಯರೇ ಸಂಸ್ಥೆಯ ಆಡಳಿತ ಮಂಡಳಿಯಲ್ಲಿದ್ದಾರೆ. ಆರಂಭದಲ್ಲಿ ಪುಟ್ಟಣ್ಣ ಚೆಟ್ಟಿ ಮತ್ತು ಸರ್‌ ಮಿರ್ಜಾ ಇಸ್ಮಾಯಿಲ್‌ ಸಲಹಾ ಮಂಡಳಿಯಲ್ಲಿದ್ದರು ಅಷ್ಟೇ. ಸದ್ಯ ಶಾರದಾ ಉಮೇಶ್‌ ರುದ್ರ ಅವರು ಅಧ್ಯಕ್ಷರಾಗಿದ್ದಾರೆ. ಪುಟ್ಟಣ್ಣ ಚೆಟ್ಟಿಯವರ ಸಾಕು ಮಗಳು ಲೀಲಾ ದಯಕುಮಾರ್‌, ಮೊಮ್ಮಗ ವಿಶ್ವನಾಥ್‌ ಸಂಸ್ಥೆಯ ಸದಸ್ಯರಾಗಿದ್ದಾರೆ.

 ‘2013ರಲ್ಲಿ ನಮ್ಮ ಸಂಸ್ಥೆಗೆ ನೂರು ವರ್ಷ ತುಂಬಿದೆ. ಆ ನೆನಪಿಗೆ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡವನ್ನು ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಕಳೆದ ಏಪ್ರಿಲ್‌ನಲ್ಲಿ ಲೋಕಾರ್ಪಣೆ ಮಾಡಿದ್ದಾರೆ. 105 ವರ್ಷ ಪೂರೈಸಿದ ನೆನಪಿಗೆ ನ.9ರಿಂದ 11ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕನಿಷ್ಠ ₹50 ಟಿಕೆಟ್‌ ದರ. ಸಂಗ್ರಹವಾದ ಹಣ ಬಡ ಮಕ್ಕಳ ಯೋಜನೆಗಳಿಗೆ ವಿನಿಯೋಗವಾಗಲಿದೆ’ ಎಂದು ಸಮಾಜದ ಅಧ್ಯಕ್ಷೆ ಶಾರದಾ ಉಮೇಶ್‌ ರುದ್ರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !