ಶಿರಾಡಿ: ಜು.15ರಿಂದ ಸಂಚಾರ ಆರಂಭ ಸಾಧ್ಯತೆ

7
ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೆಂಥಿಲ್‌

ಶಿರಾಡಿ: ಜು.15ರಿಂದ ಸಂಚಾರ ಆರಂಭ ಸಾಧ್ಯತೆ

Published:
Updated:
ಮಂಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್‌. ರವಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇದ್ದರು. ಪ್ರಜಾವಾಣಿ ಚಿತ್ರ

ಮಂಗಳೂರು: ಶಿರಾಡಿ ಘಾಟಿ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನೂ ಸ್ವಲ್ಪ ಕಾಮಗಾರಿ ಇರುವುದರಿಂದ ಜುಲೈ 15 ರಿಂದ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಶಿರಾಡಿ ಘಾಟಿಯಲ್ಲಿ ಜುಲೈ 5 ಕ್ಕೆ ಸಂಚಾರ ಆರಂಭಿಸುವುದಾಗಿ ತಿಳಿಸಲಾಗಿತ್ತು. ಸದ್ಯಕ್ಕೆ 12.30 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. 380 ಮೀಟರ್‌ ಕಾಂಕ್ರೀಟಿಕರಣ ನಡೆಯುತ್ತಿದೆ. ರಸ್ತೆಯ ವಾಹನ ಸಂಚಾರ ಸುರಕ್ಷತಾ ಕಾಮಗಾರಿಗಳಾದ ಎರಡೂ ಬದಿಗೆ ಶೋಲ್ಡರ್‌ ನಿರ್ಮಾಣ, ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮತ್ತಷ್ಟು ಕಾಲಾವಕಾಶ ಬೇಕಾಗಿದೆ ಎಂದು ವಿವರಿಸಿದರು.

ಮುಲಾರಪಟ್ಣ ಸೇತುವೆ ಕುಸಿತದ ಹಿನ್ನೆಲೆಯಲ್ಲಿ ಗುರುಪುರ ಸೇತುವೆಯ ಸಾಮರ್ಥ್ಯವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ತಜ್ಞರು ಪರಿಶೀಲನೆ ಮಾಡಿದ್ದು, ಎರಡು ದಿನದಲ್ಲಿ ವರದಿ ಬರಲಿದೆ. ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಿಷನ್‌ ಅಂತ್ಯೋದಯ: ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಿಷನ್‌ ಅಂತ್ಯೋದಯ ಯೋಜನೆಗೆ ಜಿಲ್ಲೆಯ 97 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಅಕ್ಟೋಬರ್‌ 2 ರಂದು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಟಿ.ಎಸ್‌. ಲೋಕೇಶ್‌ ತಿಳಿಸಿದರು.

ಮಂಗಳೂರು ತಾಲ್ಲೂಕಿನಲ್ಲಿ 38, ಬಂಟ್ವಾಳ 16, ಬೆಳ್ತಂಗಡಿ 4, ಪುತ್ತೂರು 34 ಹಾಗೂ ಸುಳ್ಯ ತಾಲ್ಲೂಕಿನಲ್ಲಿ 7 ಗ್ರಾಮ ಪಂಚಾಯಿತಿಗಳು ಯೋಜನೆಗೆ ಆಯ್ಕೆಯಾಗಿವೆ. ಬ್ಯಾಂಕ್‌ ಶಾಖೆ, ಎಟಿಎಂ, ಸಂಪರ್ಕ ರಸ್ತೆಗಳಿಲ್ಲದ ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಎರಡು ವರ್ಷಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ವಿವರಿಸಿದರು.

ಸಾವಿರ ಅಕ್ಷರ ತೋಟ: ಜಿಲ್ಲೆಯ ಜಿಲ್ಲಾ ಪಂಚಾಯಿತಿ ಶಾಲೆಗಳಲ್ಲಿ ಒಂದು ಸಾವಿರ ಅಕ್ಷರ ಕೈತೋಟಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದರು. ಎಸ್‌ಡಿಎಂಸಿ ಸಹಯೋಗದಲ್ಲಿ ಕಳೆದ ವರ್ಷ 407 ಶಾಲೆಗಳಲ್ಲಿ ಅಕ್ಷರ ಕೈತೋಟಗಳನ್ನು ನಿರ್ಮಿಸಲಾಗಿದ್ದು, ಈ ಬಾರಿ ಉದ್ಯೋಗ ಖಾತರಿ ಯೋಜನೆಯಡಿ ಕೈತೋಟಗಳನ್ನು ನಿರ್ಮಿಸಲಾಗುವುದು. ಈ ಯೋಜನೆಯನ್ನು ಮುಂದೆ ಅಂಗನವಾಡಿಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್‌ಕುಮಾರ್ ಕಟೀಲ್‌ ಮಾತನಾಡಿ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚನೆ ನೀಡಿದರು.

ಉದ್ಯೋಗ ಖಾತರಿ ಯೋಜನೆಯಡಿ ದಿನಕ್ಕೆ ನೀಡಲಾಗುತ್ತಿದ್ದ ವೇತನವನ್ನು ₹236 ರಿಂದ ₹249 ಕ್ಕೆ ಏರಿಕೆ ಮಾಡಲಾಗಿದೆ. ಐದು ವರ್ಷ ಕೆಳಗಿನ ಮಕ್ಕಳನ್ನು ಹೊಂದಿರುವ ಮಹಿಳೆಯರು ಕೆಲಸದ ಅವಧಿ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ಕಾರ್ಮಿಕರನ್ನು ನೇಮಕ ಮಾಡಿದಲ್ಲಿ ಅವರಿಗೂ ಕೂಲಿ ಕೊಡಲು ಅವಕಾಶವಿದೆ. ಜಿಲ್ಲೆಯಲ್ಲಿ ಒಟ್ಟು 1,11,456 ಮಂದಿಗೆ ಜಾಬ್‌ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಅವರಲ್ಲಿ 31,734 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ ಎಂದು ಡಾ.ಎಂ.ಆರ್. ರವಿ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಂಜೀವ್ ಮಠಂದೂರು, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ಡಿ. ವೇದವ್ಯಾಸ್‌ ಕಾಮತ್‌, ಅಧಿಕಾರಿಗಳು ಇದ್ದರು.

ಮಳೆ: 958 ಆಸ್ತಿಗಳಿಗೆ ಹಾನಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದಾಗಿ 958 ಆಸ್ತಿಗಳಿಗೆ ಹಾನಿಯಾಗಿದ್ದು, ₹17 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ವ್ಯಾಪ್ತಿ 268 ರಸ್ತೆಗಳು, 101 ಚರಂಡಿಗಳು, 120 ತಡೆಗೋಡೆಗಳು ಹಾನಿಗೀಡಾಗಿವೆ. ಇವುಗಳ ದುರಸ್ತಿ ಹಾಗೂ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

‘ನಾಟ್‌ ರಿಚೇಬಲ್‌ ಮಾಡಬೇಕಾದೀತು’

ಮಳೆ ಹಾನಿಯಂತಹ ತುರ್ತು ಸಂದರ್ಭದಲ್ಲಿ ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ದೂರವಾಣಿ, ಮೊಬೈಲ್ ಸಂಪರ್ಕಕ್ಕೆ ಸಿಗದೇ ನಾಟ್‌ ರಿಚೇಬಲ್‌ ಆಗಿರುವ ಅಧಿಕಾರಿಗಳನ್ನೇ ನೀರಿಲ್ಲದ ಕಡೆಗೆ ನಾಟ್‌ ರಿಚೇಬಲ್‌ ಮಾಡಬೇಕಾದೀತು ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಎಚ್ಚರಿಕೆ ನೀಡಿದರು.

ಮೆಸ್ಕಾಂ ಅಧಿಕಾರಿಗಳು ಮೊಬೈಲ್‌ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ ಎಂದು ನಳಿನ್‌ಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿಗಳು, ಮಳೆಹಾನಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿವೆ. ಕರೆಗಳು ಜಾಸ್ತಿ ಬರುವುದರಿಂದ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಳಿನ್‌ಕುಮಾರ್ ಕಟೀಲ್‌್, ‘ಸರ್ಕಾರಿ ಅಧಿಕಾರಿಗಳಿಗೆ ರಜೆಗಳಾದರೂ ಇರುತ್ತವೆ. ಜನಪ್ರತಿನಿಧಿಗಳಿಗೆ ರಜೆಯೇ ಇಲ್ಲ. ಒಂಬತ್ತ ವರ್ಷದಿಂದ ನಾನು ರಜೆ ತೆಗೆದುಕೊಂಡಿಲ್ಲ. ತುರ್ತು ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಇದರಲ್ಲಿ ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ’ ಎಂದು ತಾಕೀತು ಮಾಡಿದರು.

ಸೋಮವಾರ ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ, ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚಾರ ಆರಂಭಿಸುವ ದಿನಾಂಕ ನಿಗದಿಪಡಿಸಲಾಗುವುದು 
- ನಳಿನ್‌ಕುಮಾರ್ ಕಟೀಲ್‌, ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !