ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷಿತ ಚೇತರಿಕೆ ಕಾಣದ ಶಿವಕುಮಾರ ಶ್ರೀ

Last Updated 21 ಜನವರಿ 2019, 4:50 IST
ಅಕ್ಷರ ಗಾತ್ರ

ತುಮಕೂರು: ‘ಶಿವಕುಮಾರ ಸ್ವಾಮೀಜಿ ಸ್ವಲ್ಪ ಸಮಯ ಮಾತ್ರ ಸಹಜವಾಗಿ ಉಸಿರಾಡುತ್ತಿದ್ದಾರೆ. ಉಳಿದಂತೆ ಕೃತಕ ಉಸಿರಾಟ ಅನಿವಾರ್ಯವಾಗಿದ್ದು ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಾಣಿಸುತ್ತಿಲ್ಲ’ ಎಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ.ರವೀಂದ್ರ ಹಾಗೂ ಡಾ.ವೆಂಕಟರಮಣ ಮಾಹಿತಿ ನೀಡಿದರು.

ಭಾನುವಾರ ಸ್ವಾಮೀಜಿ ಅವರ ಆರೋಗ್ಯ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಲ್ಬುಮಿನ್ ಪೋಷಕಾಂಶವನ್ನು ಬಾಹ್ಯವಾಗಿ ನೀಡುತ್ತಿದ್ದರೂ ದೇಹದಲ್ಲಿ ಪೋಷಕಾಂಶದ ಪ್ರಮಾಣ ಹೆಚ್ಚುತ್ತಿಲ್ಲ. ಕೆಲವು ಪರೀಕ್ಷೆಗಳ ನಂತರ ಔಷಧಿ ಬದಲಾವಣೆ ಮಾಡಲಾಗಿದೆ. ಈಗ ಕೆಲವು ಜೀವಸತ್ವ ನೀಡುತ್ತಿದ್ದೇವೆ’ ಎಂದರು.

‘ಸ್ವಾಮೀಜಿ ಅವರ ನಾಡಿಮಿಡಿತ ಪರೀಕ್ಷಿಸಿದ್ದೇವೆ. ಹೆಚ್ಚಿನ ಸ್ಪಂದನೆ ಕಾಣಿಸುತ್ತಿಲ್ಲ. ಕೈ, ಕಾಲನ್ನು ಕೆಲವು ವೇಳೆ ಅಲುಗಾಡಿಸುತ್ತಾರೆ. ಉಳಿದ ಸಮಯ ಯಥಾಸ್ಥಿತಿಯಲ್ಲಿಯೇ ಇರುತ್ತಾರೆ’ ಎಂದು ತಿಳಿಸಿದರು.

ಸ್ವಾಮೀಜಿ ಅವರ ಆಪ್ತ ವೈದ್ಯ ಡಾ.ಪರಮೇಶ್, ‘ಎಲ್ಲ ರೀತಿಯ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಶನಿವಾರ ಇದ್ದ ಸ್ಥಿತಿಯಲ್ಲಿಯೇ ಸ್ವಾಮೀಜಿ ಅವರ ಆರೋಗ್ಯ ಮುಂದುವರಿದಿದೆ’ ಎಂದರು.

ಭಾನುವಾರ ರಜಾ ದಿನವಾದ ಕಾರಣ ನಾಡಿನ ವಿವಿಧ ಕಡೆಯಿಂದ ಹೆಚ್ಚಿನ ಭಕ್ತರು ದರ್ಶನಕ್ಕೆ ಬಂದಿದ್ದರು. ಮಠದ ಸಿಬ್ಬಂದಿ ಮತ್ತು ಪೊಲೀಸರು ಕಿಟಕಿ ಮೂಲಕ ಸ್ವಾಮೀಜಿ ಅವರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಸ್ವಾಮೀಜಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಭಕ್ತರು ಅವರತ್ತ ಕೈ ಮುಗಿಯುತ್ತಿದ್ದರು.

ಗಣ್ಯರ ಭೇಟಿ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು, ಕಾಂಗ್ರೆಸ್ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ ಮಠಕ್ಕೆ ಭೇಟಿ ನೀಡಿದ್ದರು.

ಶ್ರೀಗಳಿಗೆ ಭಾರತರತ್ನ: ಆಗ್ರಹ

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ.

ನಗರದಲ್ಲಿ ನಡೆದ ಮಹಾಸಭಾದ ಪ್ರತಿನಿಧಿಗಳ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು
ಒತ್ತಾಯಿಸಲಾಯಿತು.

ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT