ಭಾನುವಾರ, ಸೆಪ್ಟೆಂಬರ್ 19, 2021
26 °C
ಲಕ್ಷಾಂತರ ಮಕ್ಕಳಿಗೆ ಅನ್ನ, ಅರಿವು ನೀಡಿ ತಾಯಿಯಂತೆ ಪೊರೆದ ಸ್ವಾಮೀಜಿ

ಅನಂತದೆಡೆಗೆ ನಡೆದ ’ದೇವರು’

ಎನ್‌.ಸಿದ್ದೇಗೌಡ Updated:

ಅಕ್ಷರ ಗಾತ್ರ : | |

ತುಮಕೂರು: ನೀವು ನನ್ನನ್ನು ಲೋಕಕ್ಕೆ ತಂದಿದ್ದೀರಿ. ಲೋಕದ ಸೇವೆಗೆ ನನ್ನನ್ನು ಬಿಡಿ. ನನ್ನ ಜೀವನವನ್ನು ಸಮಾಜಸೇವೆಗೋಸ್ಕರ ಸವೆಸುತ್ತೇನೆ–

88 ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಪಡೆದ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರು ತಮ್ಮ ತಂದೆಗೆ ಹೇಳಿದ್ದ ಮಾತಿದು. ಈ ಮಾತಿನಂತೆಯೇ ತಮ್ಮ ಇಡೀ ಜೀವನವನ್ನು ಸೇವಾ ಕಾರ್ಯಗಳಿಗೆ ಸಮರ್ಪಿಸಿಕೊಂಡ ಶಿವಕುಮಾರ ಸ್ವಾಮೀಜಿ ಅವರು ಕನ್ನಡ ನಾಡು ಕಂಡ ಮಹಾನ್‌ ಸಂತ. ನೂರಾ ಹನ್ನೊಂದು ವರ್ಷಗಳ ಸಾರ್ಥಕ ಬದುಕು ಅವರದು.

ಎಂಟು ದಶಕಗಳ ಮಠದ ಅಧಿಕಾರಾವಧಿಯಲ್ಲಿ ಶಿಕ್ಷಣ ಮತ್ತು ಅನ್ನದಾಸೋಹ ಸೇವೆಗಾಗಿ ಅಹರ್ನಿಶಿ ದುಡಿದು ಕಾಯಕಯೋಗಿ ಎನಿಸಿಕೊಂಡರು. ದಿನದ ಮೂರು ಹೊತ್ತು ಇಷ್ಟಲಿಂಗ ಪೂಜೆ, ಜಪ–ತಪಗಳಿಂದ ಗಳಿಸಿದ ಶಕ್ತಿಯನ್ನೆಲ್ಲ ಲೋಕಸೇವೆಗಾಗಿಯೇ ಧಾರೆ ಎರೆದು ಭಕ್ತರ ಪಾಲಿಗೆ ‘ನಡೆದಾಡುವ ದೇವರು’ ಆದರು.

ಶ್ರೀಗಳ ಲೋಕಸೇವೆಯ ಫಲವಾಗಿ ಎಂಟು ದಶಕಗಳಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆದಿದ್ದಾರೆ, ಈಗಲೂ ಪ್ರತಿ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಶಾಲಾ ಮಕ್ಕಳು ಸೇರಿದಂತೆ ನಿತ್ಯ ಸಾವಿರಾರು ಮಂದಿ ಅನ್ನ ದಾಸೋಹದ ಪ್ರಸಾದ ಸ್ವೀಕರಿಸುತ್ತಿದ್ದಾರೆ.

ಚಿಕ್ಕವರಿದ್ದಾಗಲೇ ಶಿವಪೂಜೆ, ಶರಣ ಲೀಲಾಮೃತ ವಚನಪಠಣದಲ್ಲಿ ಅತೀವ ಆಸಕ್ತಿ ಹೊಂದಿದ್ದ ಶ್ರೀಗಳು ಮಠದ ಉತ್ತರಾಧಿಕಾರಿಯಾದುದು ಆಕಸ್ಮಿಕ ಸಂದರ್ಭದಲ್ಲಿ. ದೀಕ್ಷೆ ನೀಡಿದ ಗುರು ಉದ್ಧಾನ ಶಿವಯೋಗಿಗಳು ‘ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡುವುದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ’ ಎಂದು ಉಪದೇಶಿಸಿದ್ದರು. ಗುರುವಿನ ಈ ಆಶಯವನ್ನು ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸಿದ ಶಿವಕುಮಾರ ಶ್ರೀಗಳು ಸಿದ್ಧಗಂಗಾ ಮಠವನ್ನು ಅನ್ನದಾಸೋಹಕ್ಕೆ ಅನ್ವರ್ಥನಾಮವಾಗಿಸಿದರು. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆ ರೂಪಿಸಲು ಸರ್ಕಾರಕ್ಕೂ ಸ್ಫೂರ್ತಿಯಾದರು.

ಉದ್ಧಾನ ಶ್ರೀಗಳ ಗುರುಗಳಾದ ಅಟವಿ ಸ್ವಾಮೀಜಿಯವರ ಕಾಲದಲ್ಲಿ ಮಠದಲ್ಲಿ ಅನ್ನದಾಸೋಹ ಆರಂಭವಾಯಿತು. ಉದ್ಧಾನ ಶ್ರೀಗಳ ಕಾಲದಲ್ಲಿ ಸಂಸ್ಕೃತ ಪಾಠ ಶಾಲೆ (1917) ಪ್ರಾರಂಭವಾಯಿತು. ಈ ಶಾಲೆಯಲ್ಲಿ ಬ್ರಾಹ್ಮಣ, ಲಿಂಗಾಯತರಲ್ಲದೇ ಎಲ್ಲ ಜಾತಿಗಳ ಮಕ್ಕಳಿಗೂ ಮುಕ್ತ ಪ್ರವೇಶಾವಕಾಶ ಇತ್ತು. ಶತ ಶತಮಾನಗಳಿಂದ ಸಂಸ್ಕೃತ ಭಾಷಾ ಕಲಿಕೆಯಿಂದ ವಂಚಿತರಾಗಿದ್ದ ಶೂದ್ರ ಮತ್ತು ದಲಿತ ಜಾತಿಗಳ ಮಕ್ಕಳಿಗೆ ಇಂತಹ ಅವಕಾಶವನ್ನು ಕಲ್ಪಿಸುವ ಮೂಲಕ ಉದ್ಧಾನ ಶ್ರೀಗಳು ಆಗಿನ ಕಾಲದಲ್ಲೇ ಮಠದ ಜಾತ್ಯತೀತ ಪರಂಪರೆಗೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಗುರುಗಳಿಬ್ಬರ ಅನ್ನ ಮತ್ತು ಅಕ್ಷರ ದಾಸೋಹಗಳನ್ನು ಶ್ರೀಗಳು ಬೆಳೆಸುತ್ತಲೇ ಹೋದರು.

ಸ್ವಾತಂತ್ರ್ಯಪೂರ್ವದಲ್ಲೇ ಇಂಗ್ಲಿಷ್‌ ಶಿಕ್ಷಣ ಪಡೆದಿದ್ದ ಶಿವಕುಮಾರ ಸ್ವಾಮೀಜಿ ಮಠದ ಪರಂಪರೆಯನ್ನು ಉಳಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಉದ್ಧಾನ ಶ್ರೀಗಳು ಆತಂಕಗೊಂಡಿದ್ದರಂತೆ. ತಮ್ಮ ಅನುಮಾನ ನಿವಾರಣೆಗಾಗಿ ತಾವೇ ಆಯ್ಕೆ ಮಾಡಿದ ಶಿಷ್ಯನಿಗೆ ಹೆಜ್ಜೆ ಹೆಜ್ಜೆಗೂ ಕಠಿಣ ಪರೀಕ್ಷೆಗಳನ್ನು ಒಡ್ಡಿದರು. ಎಷ್ಟೇ ಕಷ್ಟಗಳು ಎದುರಾದರೂ ಎದೆಗುಂದದ ಶಿವಕುಮಾರ ಶ್ರೀಗಳು ಮಠದ ಕೀರ್ತಿಯನ್ನು ಎತ್ತರೆತ್ತರಕ್ಕೆ ಕೊಂಡೊಯ್ದರು.

ಶ್ರೀಗಳು ಮಠದ ಅಧಿಕಾರ ವಹಿಸಿಕೊಂಡಾಗ ಇದ್ದದ್ದು ಒಂದು ಸಂಸ್ಕೃತ ಶಾಲೆ ಮಾತ್ರ. ಈಗ 20 ಸಂಸ್ಕೃತ ಶಾಲೆಗಳು, 58 ಪ್ರೌಢಶಾಲೆಗಳು, 8 ಪದವಿ ಪೂರ್ವ ಕಾಲೇಜುಗಳು, 1 ಎಂಜಿನಿಯರಿಂಗ್‌, 2 ಅಂಧ ಮಕ್ಕಳ ಶಾಲೆಗಳು, 1 ಅಂಗವಿಕಲ ಸಮನ್ವಯ ಶಿಕ್ಷಣ ಕೇಂದ್ರ ಸೇರಿ 126 ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಶ್ರೀಗಳು ಮಠ ಬೆಳೆಸಿದ ಪರಿಯನ್ನು ವಿವರಿಸಲು ಈ ಅಂಕಿ ಸಂಖ್ಯೆಗಳೇ ಸಾಕು.

ಸ್ವಾಮೀಜಿಯವರು ಕಾಯಕತತ್ವದ ಪರಿಪಾಲಕರಾಗಿದ್ದರು. ಅವರೆಂದಿಗೂ ದಂತಗೋಪುರದಲ್ಲಿ ಕುಳಿತು ಇತರರಿಂದ ಕೆಲಸ ಮಾಡಿಸಿದವರಲ್ಲ; ಜತೆಯಲ್ಲಿ ನಿಂತು ದುಡಿದವರು. ಅಡುಗೆಮನೆಯಲ್ಲಿ ಮುದ್ದೆ ತಿರುವಿದ್ದರು, ಅನ್ನ ಬಸಿದಿದ್ದರು, ಹೊಲಗದ್ದೆಗಳಲ್ಲಿ ಕೆಲಸ ಮಾಡಿದ್ದರು, ಕಟ್ಟಡ ನಿರ್ಮಾಣಕ್ಕೆ ಕಲ್ಲುಗಳನ್ನು ಹೊತ್ತಿದ್ದರು, ಕಸವನ್ನು ಗುಡಿಸಿದ್ದರು, ಮಕ್ಕಳ ಆರೈಕೆ ಮಾಡಿದ್ದರು, ಬುದ್ಧಿ ಹೇಳಿದ್ದರು, ಸಂಸ್ಕೃತ ಮತ್ತು ಇಂಗ್ಲಿಷ್‌ ಪಾಠ ಹೇಳಿಕೊಟ್ಟಿದ್ದರು. ಜತೆ ಜತೆಗೆ ಬೆಳೆಯುತ್ತಲೇ ಬಂದ ಮಠದ ಆಡಳಿತವನ್ನೂ ಸಮರ್ಥವಾಗಿ ನಿಭಾಯಿಸಿದ್ದರು. ‘ಗುರುವಾದರೂ ಕಾಯಕದಿಂದವೇ ಜೀವನ್ಮುಕ್ತಿ...’ ಎಂಬ ಶರಣರ ವಚನದ ಸಾಲನ್ನು ತಮ್ಮ ಬದುಕಿನ ಮೂಲಕ ನಿರೂಪಿಸಿದರು.

ವಿಜ್ಞಾನ ಪದವೀಧರರಾಗಿದ್ದ ಸ್ವಾಮೀಜಿಯವರು ಸದಾ ವೈಚಾರಿಕ ನಿಲುವುಗಳನ್ನೇ ಹೊಂದಿದ್ದರು. ಆದಾಗ್ಯೂ ಕಣ್ಣಿಗೆ ಕಾಣದ ಅಗಣಿತ ಸತ್ಯಗಳೂ ಇವೆ ಎಂಬುದನ್ನು ನಂಬಿದ್ದರು. ದೈಹಿಕ, ಮಾನಸಿಕ ಅಸ್ವಾಸ್ಥ್ಯದಿಂದ ಬಳಲಿ ಬಂದವರಿಗೆ ತಾಯತಗಳನ್ನು (ಯಂತ್ರ) ಬರೆದುಕೊಡುತ್ತಿದ್ದರು. ವೈಚಾರಿಕತೆ ಹೆಸರಿನಲ್ಲಿ ಮುಗ್ಧ ಜನರನ್ನು ದಿಗ್ಭ್ರಾಂತಿಗೆ ಒಳಪಡಿಸಬಾರದು ಎಂದು ಸ್ವಾಮೀಜಿಯವರು ಹೇಳುತ್ತಿದ್ದರು. ಅಷ್ಟಕ್ಕೂ ಯಂತ್ರಧಾರಣೆ ಎಂಬುದು ಅದನ್ನು ನಂಬುವ ಜನರಲ್ಲಿ ನೆಮ್ಮದಿ, ಭರವಸೆ ಮೂಡಿಸುವ ಒಂದು ಕ್ರಮ ಎನ್ನುತ್ತಿದ್ದರು.

ಇಷ್ಟೆಲ್ಲ ಕೆಲಸಗಳ ನಡುವೆ ಸ್ವಾಮೀಜಿಯವರು ಮಠದಲ್ಲಿ ನ್ಯಾಯ ಪಂಚಾಯಿತಿಯನ್ನೂ ನಡೆಸುತ್ತಿದ್ದರು. ಅತ್ಯಂತ ಸೂಕ್ಷ್ಮವೂ ಕ್ಲಿಷ್ಟವೂ ಆದ ಹಲವಾರು ವ್ಯಾಜ್ಯಗಳನ್ನು ಸುಲಭವಾಗಿ ಇತ್ಯರ್ಥ ಮಾಡಿಕೊಡುತ್ತಿದ್ದರು. ಕೋರ್ಟುಗಳಲ್ಲಿ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಟಿಲ ಪ್ರಕರಣಗಳನ್ನೂ ಸುಲಭವಾಗಿ ಬಗೆಹರಿಸಿಕೊಡುತ್ತಿದ್ದರು. ವಿಚಾರಣೆ ವೇಳೆ ಹಟ ಹಿಡಿಯುತ್ತಿದ್ದವರಿಗೆ ನೀತಿಕಥೆಗಳು, ಸುಭಾಷಿತಗಳನ್ನು ಹೇಳಿ ಮನಸ್ಸನ್ನು ಪರಿವರ್ತಿಸಿದ ನೂರಾರು ನಿದರ್ಶನಗಳೂ ಇವೆ. ಎಲ್ಲ ಕೋಮಿನವರೂ ಈ ನ್ಯಾಯದಾನದ ಫಲಾನುಭವಿಗಳಾಗಿದ್ದರು. ವ್ಯಾಜ್ಯ ಪರಿಹರಿಸುವ ಸ್ವಾಮೀಜಿಯವರ ಚಾಣಾಕ್ಷತೆಯನ್ನು ಕಾಣಲು ವಕೀಲರು, ನ್ಯಾಯಾಧೀಶರು ಬರುತ್ತಿದ್ದರು.

ಮಠದ ಆವರಣದಲ್ಲಿ ವರ್ಷಕ್ಕೊಮ್ಮೆ ನಡೆಯುವ ಹತ್ತು ದಿನಗಳ ಜಾತ್ರೆ, ದನಗಳ ಪರಿಷೆ ಸಂದರ್ಭದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ಶ್ರೀಗಳು, ಸಾಂಪ್ರದಾಯಿಕ ಆಚರಣೆಗೆ ಆಧುನಿಕ ಸ್ವರೂಪ ಮತ್ತು ವ್ಯಾವಹಾರಿಕವಾದ ಹೊಸ ಆಯಾಮವನ್ನು ಒದಗಿಸಿಕೊಟ್ಟರು. ಹಳ್ಳಿಯ ಜನರ ಜೀವನದಲ್ಲಿ ಸುಧಾರಣೆ ಮತ್ತು ಉತ್ಸಾಹ ಮೂಡಿಸಲು ‘ಗ್ರಾಮಾಂತರ ಬಸವ ಜಯಂತಿ’ಯನ್ನು ಆರಂಭಿಸಿದರು. ಬಸವ ಜಯಂತಿ ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗದೆ, ಜನರ ಮನಸ್ಸಿನಲ್ಲಿರುವ ಸಂಕುಚಿತ ಭಾವನೆಗಳು ಮತ್ತು ಅಂಧಶ್ರದ್ಧೆಗಳನ್ನು ಹೋಗಲಾಡಿಸುವ, ಅಂತರಂಗವನ್ನು ಅರಳಿಸುವ ಮೌಲ್ಯಾಧಾರಿತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ‘ಜಗಜ್ಯೋತಿ ಬಸವೇಶ್ವರ’ ನಾಟಕ ಪ್ರದರ್ಶನ. ಈ ನಾಟಕದ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಶ್ರೀಗಳು ವೀಕ್ಷಿಸಿದ್ದರು.

ಶ್ರೀಗಳು ಅಧ್ಯಯನಶೀಲರಾಗಿದ್ದರು, ಗ್ರಂಥಗಳೆಂದರೆ ಪಂಚಪ್ರಾಣ; ‘ಗ್ರಂಥಾವಲೋಕನ ಒಂದು ತಪಸ್ಸು’ ಎಂದು ಹೇಳುತ್ತಿದ್ದರು. ಆದಿಕವಿ ಪಂಪ, ಶರಣರ ವಚನಸಾಹಿತ್ಯದ ಜತೆಗೆ ಇಂಗ್ಲಿಷ್ ಸಾಹಿತ್ಯವನ್ನೂ ಅಭ್ಯಸಿಸಿದ್ದರು. ಇದರ ಪರಿಣಾಮವಾಗಿ ಶ್ರೀಗಳು ಸಹಜವಾಗಿಯೇ ಉತ್ತಮ ವಾಗ್ಮಿಯೂ ಆಗಿದ್ದರು. ಅವರ ಅಸ್ಖಲಿತ ಮಾತುಗಾರಿಕೆ ಪಂಡಿತ– ಪಾಮರರಿಬ್ಬರೂ ತಲೆದೂಗುವಂತಿರುತ್ತಿತ್ತು.

‘ನಾನು ದೇವರನ್ನು ನಿತ್ಯ ಕಂಡಿದ್ದೇನೆ. ನಿತ್ಯವೂ ಕಾಣುತ್ತಿದ್ದೇನೆ, ಆತನೊಂದಿಗೆ ಮಾತನಾಡುತ್ತಿದ್ದೇನೆ’ ಎಂದು ಹೇಳುತ್ತಿದ್ದ ಸ್ವಾಮೀಜಿಯವರು ಅದೇ ಉಸಿರಿನಲ್ಲಿ ‘ಮಕ್ಕಳಿಗಿಂತ ದೇವರು ಇನ್ನಾರಿರಲು ಸಾಧ್ಯ?’ ಎಂದು ಕೇಳುತ್ತಿದ್ದರು.

ಡಾ.ಶಿವಕುಮಾರ ಸ್ವಾಮೀಜಿ ಅಮರ

01–04–1908 21–01–2019

ತುಮಕೂರು: ‘ಕರ್ನಾಟಕ ರತ್ನ’ ಗೌರವ ಪುರಸ್ಕೃತ ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ (111) ಅವರು ಸೋಮವಾರ ಬೆಳಿಗ್ಗೆ 11.44ಕ್ಕೆ ಮಠದಲ್ಲಿ ಶಿವೈಕ್ಯರಾದರು.

’ನಡೆದಾಡುವ ದೇವರು’, ’ಜಗದ ಸಂತ’, ’ತ್ರಿವಿಧ ದಾಸೋಹಿ’ ಎಂದೆಲ್ಲ ಭಕ್ತರಿಂದ ಬಣ್ಣನೆಗೆ ಒಳಗಾಗಿದ್ದ ಸ್ವಾಮೀಜಿಯವರ ಅಗಲಿಕೆಯಿಂದ ಕೋಟ್ಯಂತರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಪಿತ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮೀಜಿಯವರಿಗೆ ಚೆನ್ನೈ ಆಸ್ಪತ್ರೆಯಲ್ಲಿ ಆರು ವಾರಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ತುಮಕೂರಿನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಕಾಣಿಸಿಕೊಂಡ ಶ್ವಾಸಕೋಶಕ್ಕೆ ನೀರು ತುಂಬಿಕೊಳ್ಳುವ ಸಮಸ್ಯೆಯಿಂದ ಶ್ರೀಗಳು ಚೇತರಿಕೆ ಕಾಣಲಿಲ್ಲ.

ಶ್ರೀಗಳು ಸನ್ಯಾಸ ಸ್ವೀಕರಿಸಿ 88 ವರ್ಷಗಳಾಗಿವೆ. ಮಠಾಧ್ಯಕ್ಷರಾಗಿ 77 ವರ್ಷಗಳು ಕಾರ್ಯನಿರ್ವಹಿಸಿದ್ದರು. ಈ ಎಲ್ಲವೂ ದಾಖಲೆಯೇ ಸರಿ.

ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದ ಗಂಗಮ್ಮ ಮತ್ತು ಪಟೇಲ್‌ ಹೊನ್ನೇಗೌಡ ದಂಪತಿಯ 13 ಮಕ್ಕಳಲ್ಲಿ ಕೊನೆಯವರು ಶಿವಣ್ಣ (ಶ್ರೀಗಳ ಪೂರ್ವಾಶ್ರಮದ ಹೆಸರು)

ಶಿವಣ್ಣ ಅವರು ಹುಟ್ಟಿದೂರಿಗೆ ಸಮೀಪದ ಪಾಲನಹಳ್ಳಿ, ತುಮಕೂರು ತಾಲ್ಲೂಕಿನ ನಾಗವಲ್ಲಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ತುಮಕೂರಿನಲ್ಲಿ ಪದವಿ ಪೂರ್ವ ಶಿಕ್ಷಣ (ಆಗ ಎಂಟ್ರನ್ಸ್‌) ಹಾಗೂ ಬೆಂಗಳೂರಿನಲ್ಲಿ ಪದವಿ ಶಿಕ್ಷಣ (ಬಿಎ ಆನರ್ಸ್‌) ಪಡೆದರು.

ಶಿವಣ್ಣ ಅವರಿಗೆ 1930ರಲ್ಲಿ ಸಿದ್ಧಗಂಗಾ ಮಠದ ಉದ್ಧಾನ ಶಿವಯೋಗಿಗಳು ಸನ್ಯಾಸ ದೀಕ್ಷೆ ನೀಡಿ ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ ಮಾಡಿದ್ದರು. ತಮ್ಮ ಉತ್ತರಾಧಿಕಾರಿ ಎಂದೂ ಘೋಷಿಸಿದ್ದರು. ಉದ್ಧಾನ ಶಿವಯೋಗಿಗಳು ಶಿವೈಕ್ಯರಾದ ಬಳಿಕ 1941ರಲ್ಲಿ ಪೀಠಾರೋಹಣ ಮಾಡಿದರು.

ಕರ್ನಾಟಕ ಸರ್ಕಾರ, ಸ್ವಾಮೀಜಿ ಅವರಿಗೆ 2007ರಲ್ಲಿ ‘ಕರ್ನಾಟಕ ರತ್ನ’ ಮತ್ತು 2010ರಲ್ಲಿ ಬಸವ ಪುರಸ್ಕಾರ ನೀಡಿ ಗೌರವಿಸಿತ್ತು.

ಇಂದು ರಜೆ, ಮೂರು ದಿನ ಶೋಕಾಚರಣೆ 

ಬೆಂಗಳೂರು: ಶಿವಕುಮಾರ ಸ್ವಾಮೀಜಿ ಗೌರವಾರ್ಥ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಮಂಗಳವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಅಲ್ಲದೆ, 23ರವರೆಗೆ ಮೂರು ದಿನ ರಾಜ್ಯದಾದ್ಯಂತ ಶೋಕಾಚರಣೆ ನಡೆಸಲಾಗುತ್ತದೆ.

ಈ ಅವಧಿಯಲ್ಲಿ ಯಾವುದೇ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಸರ್ಕಾರದ ಎಲ್ಲ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು. ಸ್ವಾಮೀಜಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಶಿಷ್ಟಾಚಾರ) ತಿಳಿಸಿದೆ.

ಪರೀಕ್ಷೆ ಮುಂದೂಡಿಕೆ: ಬೆಂಗಳೂರು ವಿಶ್ವವಿದ್ಯಾಲಯದಿಂದ ಜ.22ರಂದು ನಡೆಯಬೇಕಿದ್ದ ಎಂ.ಇಡಿ, ಬಿ.ಎ.ಎಲ್‌.ಎಲ್‌.ಬಿ. ಪರೀಕ್ಷೆಗಳನ್ನು ಜ.23ಕ್ಕೆ, ಎಂ.ಎಸ್‌.ಡಬ್ಲ್ಯೂ, ಎಂ.ಸಿ.ಎ. ಪರೀಕ್ಷೆಗಳನ್ನು ಜ.24ಕ್ಕೆ ಹಾಗೂ ಎಂ.ಎಸ್ಸಿ ಪರೀಕ್ಷೆಗಳನ್ನು ಜ.29ಕ್ಕೆ ಮುಂದೂಡಲಾಗಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಜ.28ಕ್ಕೆ ಮುಂದೂಡಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು ಜ.22ರಂದು ನಡೆಸಬೇಕಾಗಿದ್ದ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಫೆ.1ಕ್ಕೆ ಮುಂದೂಡಿದೆ. ಹಾಗೆಯೇ ನಿಲಯ ಪಾಲಕರ ನೇಮಕಾತಿ ಪರೀಕ್ಷೆ ಜ.30ಕ್ಕೆ, ಚಿತ್ರಕಲಾ ಶಿಕ್ಷಕರ ಪರೀಕ್ಷೆಯನ್ನು ಜ.28ಕ್ಕೆ (ಮೂಲ ದಾಖಲೆಗಳ ಪರಿಶೀಲನೆ) ಹಾಗೂ ಮೋಟಾರು ವಾಹನ ನಿರೀಕ್ಷಕರ ದೈಹಿಕ ದಾರ್ಢ್ಯತೆ ಪರೀಕ್ಷೆಯನ್ನು ಫೆ.5ಕ್ಕೆ ಮುಂದೂಡಲಾಗಿದೆ.

****

* ಡಾ. ಶಿವಕುಮಾರ ಸ್ವಾಮೀಜಿ ಅಗಲಿಕೆ ತೀವ್ರ ನೋವು ತಂದಿದೆ. ಸಮಾಜಕ್ಕೆ ಅದರಲ್ಲೂ ಆರೋಗ್ಯ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅಗಲಿದ ಆ ಮಹಾ ಚೇತನಕ್ಕೆ ನನ್ನ ನಮನ

– ರಾಮನಾಥ ಕೋವಿಂದ್‌, ರಾಷ್ಟ್ರಪತಿ

* ಶಿವಕುಮಾರ ಸ್ವಾಮಿಗಳು ಬಡವರು, ದುರ್ಬಲರಿಗಾಗಿ ಬದುಕಿದವರು. ಬಡತನ, ಹಸಿವು ಮತ್ತು ಸಾಮಾಜಿಕ ಅಸಮತೆಯನ್ನು ಹೋಗಲಾಡಿ ಸಲು ತಮ್ಮನ್ನು ಮೀಸಲಿಟ್ಟರು

– ನರೇಂದ್ರ ಮೋದಿ, ಪ್ರಧಾನಿ

* ಸ್ವಾಮೀಜಿ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರ ನಿಧನದಿಂದ ಅಧ್ಯಾತ್ಮಿಕ ಲೋಕದಲ್ಲಿ ಬಹುದೊಡ್ಡ ಶೂನ್ಯ ಸೃಷ್ಟಿಯಾಗಿದೆ

– ರಾಹುಲ್‌ ಗಾಂಧಿ,  ಕಾಂಗ್ರೆಸ್‌ ಅಧ್ಯಕ್ಷ

* ಶ್ರೀಗಳು ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಬಾಳು ಬೆಳಗಿದರು. ಅವರಿಗೆ ಮರಣೋತ್ತರವಾಗಿಯಾದರೂ ‘ಭಾರತರತ್ನ’ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆಮನವಿ ಮಾಡುತ್ತೇವೆ

–ಎಚ್.ಡಿ. ಕುಮಾರಸ್ವಾಮಿ,ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು