ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕು ಉಳಿಸಿ ಮರೆಯಾದ ‘ಸೂರ್ಯ’

ಸಿದ್ಧಗಂಗಾ ಕ್ಷೇತ್ರದ ತುಂಬಾ ‘ಶತಮಾನದ ಸಂತ’ನ ನೆನಪುಗಳದ್ದೇ ಮೆರವಣಿಗೆ
Last Updated 22 ಜನವರಿ 2019, 18:45 IST
ಅಕ್ಷರ ಗಾತ್ರ

ತುಮಕೂರು: ಅದು ಪಶ್ಚಿಮದ ದಿಗಂತದಲ್ಲಿ ಸೂರ್ಯ ಕೆಂಪಾಗಿ ಕರಗುವ ಹೊತ್ತು. ಸಿದ್ಧಗಂಗಾ ಕ್ಷೇತ್ರದ ಧಾರ್ಮಿಕ ‘ಸೂರ್ಯ’ ಕೂಡ ಅದೇ ಕ್ಷಣದಲ್ಲಿ ಕ್ರಿಯಾ ಸಮಾಧಿಗೆ ಜಾರಿಬಿಟ್ಟರು.

‘ಸೂರ್ಯ’ನೇನೋ ಮರೆಯಾದ. ಆದರೆ, ಆತ ಉಳಿಸಿದ ಬೆಳಕು ಮಾತ್ರ ಮಠದ ಆವರಣದಲ್ಲಿ ನೆರೆದಿದ್ದ ಮಕ್ಕಳ ಕಂಗಳಲ್ಲಿ ಅಸಾಧಾರಣ ಹೊಳಪು ತುಂಬಿ ಅನಂತತ್ವವನ್ನೇ ಪಡೆದಿತ್ತು. ಅದೇ ಗಳಿಗೆಯಲ್ಲಿ ನಾಡಿನ ಲಕ್ಷಾಂತರ ಕುಟುಂಬಗಳ ಮನೆಗಳಲ್ಲಿಯೂ ಬದುಕು ಉದ್ಧರಿಸಿದ ಈ ‘ನಡೆದಾಡುವ ದೇವರ’ ಹೆಸರಿನಲ್ಲಿ ಹಣತೆಗಳು ಹೊತ್ತಿಕೊಂಡು ಅಲೌಕಿಕ ಬೆಳಕನ್ನು ಹರಡಿದವು.

ಸರಿಸುಮಾರು ಒಂಬತ್ತು ದಶಕಗಳ ಕಾಲ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಸಿದ್ಧಗಂಗಾ ಕ್ಷೇತ್ರದಲ್ಲೇ ಶಿವಕುಮಾರ ಸ್ವಾಮೀಜಿ, ತಾವು ಬದುಕಿನುದ್ದಕ್ಕೂ ಪೂಜಿಸುತ್ತಾ ಬಂದಿದ್ದ ಇಷ್ಟಲಿಂಗದ ಜತೆಯಲ್ಲಿ ಮಂಗಳವಾರ ಸಂಜೆ ಮಹಾಸಮಾಧಿ ಹೊಂದಿದರು. ಸುಮಾರು ಏಳು ಸಾವಿರ ವಿಭೂತಿ ಗಟ್ಟಿಗಳು ಹಾಗೂ ಬಿಲ್ವಪತ್ರೆಗಳನ್ನು ಈ ವಿಧಿಯಲ್ಲಿ ಬಳಕೆ ಮಾಡಲಾಯಿತು.

ಮಠದ ವಿದ್ಯಾಸಂಸ್ಥೆಗಳ ಮಕ್ಕಳು ಬೆಳ್ಳಂಬೆಳಿಗ್ಗೆ ಮಿಂದು, ನೊಸಲಿಗೆ ವಿಭೂತಿ ಬಳಿದುಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ‘ಬುದ್ಧಿ’ಯವರಿಗೆ ಅಂತಿಮ ವಿದಾಯ ಹೇಳಿದರು. ಸಿದ್ಧಗಂಗೆಗೆ ಸರಸ್ವತಿಯನ್ನು ಕರೆತಂದ ಭಗೀರಥನ ಮಹಾನ್‌ ಸಾಧನೆಯ ಪ್ರತೀಕವಾಗಿ ಈ ಮಕ್ಕಳ ಸಮೂಹ ಗೋಚರಿಸುತ್ತಿತ್ತು. ತೇರಿನ ಬೀದಿಯಲ್ಲಿ ಕೊನೆಯ ಯಾತ್ರೆ ಸಾಗುವಾಗ, ಕ್ರಿಯಾ ಸಮಾಧಿಯ ವಿಧಿ ವಿಧಾನಗಳು ನಡೆಯುವಾಗ ಅಲ್ಲೆಲ್ಲ ‘ಶತಮಾನದ ಸಂತ’ನ ನೆನಪುಗಳದ್ದೇ ಮೆರವಣಿಗೆ. ಎದುರಿಗೆ ನಿಂತ ಬಂಡೆಪಾಳ್ಯದ ಬೆಟ್ಟ, ಸಮಾಧಿ ಬಳಿ ತಂಪೆರೆಯುತ್ತ ನಿಂತಿದ್ದ ಮರ–ಗಿಡ, ಕಷಾಯಕ್ಕಾಗಿ ನಿತ್ಯ ತನ್ನ ತೊಗಟೆಯನ್ನು ಕೊಡುತ್ತಿದ್ದ ಬೇವಿನ ಮರ, ಪ್ರತಿದಿನ ಓಡಾಡುತ್ತಿದ್ದ ದಾರಿ, ವಾಸ್ತವ್ಯದ ತಾಣವಾಗಿದ್ದ ಹಳೇ ಮಠ, ಭಕ್ತರಿಗೆ ದರ್ಶನ ನೀಡಲು ಬಳಸುತ್ತಿದ್ದ ಪ್ರಸಾದ ನಿಲಯದ ಪೀಠ ಎಲ್ಲವೂ ಆ ಕ್ಷಣದಲ್ಲಿ ಮೌನವಾಗಿ ರೋದಿಸುತ್ತಿರುವಂತೆ ಭಾಸವಾಗುತ್ತಿತ್ತು.

ನಿತ್ಯ ಇಷ್ಟಲಿಂಗದ ಪೂಜೆ ಮಾಡುತ್ತಾ, ತ್ರಿವಿಧ ದಾಸೋಹದ ಕೈಂಕರ್ಯ ನೆರವೇರಿಸುತ್ತಾ, ಬಂದವರಿಗೆಲ್ಲ ತಾಯಿ ಮಮತೆಯನ್ನು ತೋರುತ್ತಾ ಬಂದಿದ್ದ ಈ ಸಂತ, ಕೊನೆಗೆ ತಾವೇ ದೇವರ ಸ್ವರೂಪವನ್ನು ತಾಳಿಬಿಟ್ಟಿದ್ದಕ್ಕೆ ಅಲ್ಲಿ ನೆರೆದಿದ್ದ ಭಕ್ತಸಾಗರವೇ ಸಾಕ್ಷ್ಯ ನುಡಿಯುತ್ತಿತ್ತು. ಸಾವಿರಾರು ಬಸ್ಸುಗಳಲ್ಲಿ, ವಿಶೇಷ ರೈಲುಗಳಲ್ಲಿ ಬೆಳಗಿನಿಂದ ಬೈಗಿನವರೆಗೂ ಭಕ್ತರ ದಂಡು ಏಕಪ್ರಕಾರವಾಗಿ ಕ್ಷೇತ್ರದತ್ತ ಹರಿದುಬರುತ್ತಿತ್ತು. ಮಠದ ಮುಂಭಾಗ (ರಾಷ್ಟ್ರೀಯ ಹೆದ್ದಾರಿ ಕಡೆಯ ಮುಖ್ಯದ್ವಾರ) ಹಾಗೂ ಹಿಂಭಾಗ (ಬಂಡೆಪಾಳ್ಯದ ಬದಿಯ ದ್ವಾರ) ಎರಡೂ ಕಡೆಗಳಿಂದ ತಲಾ ಎರಡು ಸಾಲುಗಳಂತೆ ಜನರನ್ನು ದರ್ಶನಕ್ಕೆ ಬಿಡಲಾಗುತ್ತಿತ್ತು.

ಹೊತ್ತು ಏರಿದಂತೆ ಸರದಿಗಳು ಕಿಲೋ ಮೀಟರ್‌ಗಟ್ಟಲೇ ಲಂಬಿಸುತ್ತಲೇ ಇದ್ದವು. ಮುಖ್ಯದ್ವಾರದ ಕಡೆಗಿನ ಸರದಿಗಳು ಕ್ಯಾತ್ಸಂದ್ರದ ರೈಲು ನಿಲ್ದಾಣವನ್ನೂ ಸುತ್ತಿ ಬಳಸಿಕೊಂಡು ಮುಂದೆ ಹೋಗಿದ್ದವು. ಭಕ್ತರ ಎಲ್ಲ ಸಾಲುಗಳು ತೊರೆಗಳ ಸ್ವರೂಪದಲ್ಲಿ ಗೋಸಲ ಸಿದ್ಧೇಶ್ವರ ವೇದಿಕೆ ಮುಂಭಾಗದಲ್ಲಿ ಬಂದು ಸಂಗಮವಾಗುತ್ತಿದ್ದವು. ಜನಪ್ರವಾಹವೇ ವೇದಿಕೆಯತ್ತ ನುಗ್ಗಿ ಬರುತ್ತಿರುವಂತೆ ಅಲ್ಲಿನ ನೋಟ ಭಾಸವಾಗುತ್ತಿತ್ತು. ದುಃಖವನ್ನು ಹಗುರ ಮಾಡಿಕೊಂಡು ಸ್ವಾಮೀಜಿಯ ಅಂತಿಮ ದರ್ಶನದ ಭಾಗ್ಯವನ್ನು ಪಡೆದ ಸಮಾಧಾನದಲ್ಲಿ ಜನಸಾಗರದ ಅಲೆಗಳು ಮುಂದೆ ಸಾಗುತ್ತಿದ್ದವು.

ಮಠದ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿರುವವರಲ್ಲಿ ಉತ್ತರ ಕರ್ನಾಟಕದ ಮಕ್ಕಳೇ ಹೆಚ್ಚು. ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ದೂರದ ಬೀದರ್‌, ವಿಜಯಪುರ, ಬೆಳಗಾವಿ, ರಾಯಚೂರು, ಕೊಪ್ಪಳ ಮತ್ತಿತರ ಭಾಗಗಳಿಂದ ಭಕ್ತರು ಮಂಗಳವಾರ ಬೆಳಗಿನ ಹೊತ್ತಿಗೆ ಕ್ಷೇತ್ರದತ್ತ ಧಾವಿಸಿ ಬಂದಿದ್ದರು. ತಮ್ಮ ಮಕ್ಕಳ ಬದುಕನ್ನು ಬೆಳಗಿಸಿದ ಮಹಾತ್ಮನಿಗೆ ಅಂತಿಮ ನಮನ ಸಲ್ಲಿಸಿ ಧನ್ಯತಾಭಾವ ಅನುಭವಿಸಿದರು.

ಐದು ತಲೆಮಾರಿನ ಶಿಷ್ಯವರ್ಗ: 1917ರಲ್ಲಿ ಶುರುವಾದ ಮಠದ ವಿದ್ಯಾಸಂಸ್ಥೆಯಲ್ಲಿ ಇದುವರೆಗೆ ಐದು ತಲೆಮಾರುಗಳ ಜನ ಶಿಕ್ಷಣ ಪಡೆದಿದ್ದಾರೆ. ತೊಂಬತ್ತು ವರ್ಷಗಳ ಹಣ್ಣು ಜೀವಗಳಿಂದ ಹಿಡಿದು ಪುಟಾಣಿಗಳವರೆಗೆ ಎಲ್ಲರಿಗೂ ತಮಗೆ ಸಿಕ್ಕಿದ್ದ ಗುರು ಕಾರುಣ್ಯಕ್ಕಾಗಿ ಕೃತಜ್ಞತೆ ಸಲ್ಲಿಸುವ ತವಕ. ಗುಂಪಿನಲ್ಲಿದ್ದ ನೂರಾರು ಅಂಧರಿಗೆ ಸ್ವಾಮೀಜಿಯ ಮುಂದೆ ಒಮ್ಮೆ ಶಿರ ಬಾಗಿಸುವ ಆಸೆ. ಇವರೆಲ್ಲರ ಉತ್ಸಾಹದ ಮುಂದೆ ಚುರುಗುಡುತ್ತಿದ್ದ ಬಿಸಿಲಿನ ಆಟವೇನೂ ನಡೆಯಲಿಲ್ಲ.

ಸರದಿಯಲ್ಲಿ ನಿಂತು ಬಳಲಿದ್ದ ಭಕ್ತರಿಗೆ ಮಠದ ವಿದ್ಯಾಸಂಸ್ಥೆಯ ಮಕ್ಕಳು ನೀರು ಕೊಟ್ಟು ದಾಹ ತಣಿಸುತ್ತಿದ್ದರು. ಲಕ್ಷಾಂತರ ಭಕ್ತರು ಒಂದೆಡೆ ಸೇರಿದ್ದರೂ ಗೊಂದಲಕ್ಕೆ ಅವಕಾಶ ಇಲ್ಲದಂತೆ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ದರ್ಶನಾರ್ಥಿಗಳ ಕಣ್ಣಾಲಿಗಳೆಲ್ಲ ತುಂಬಿದ್ದರೂ ಅರ್ಥಪೂರ್ಣವಾದ ಮೌನವೇ ಅಲ್ಲೆಲ್ಲ ತುಂಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT