ಮಕ್ಕಳಲ್ಲಿ ಶರಣರ ಕಂಡ ಧನ್ಯಜೀವ

7

ಮಕ್ಕಳಲ್ಲಿ ಶರಣರ ಕಂಡ ಧನ್ಯಜೀವ

Published:
Updated:
Prajavani

ತುಮಕೂರು: ಬಸವ ತತ್ವದ ಕಾಯಕ ಮತ್ತು ತ್ರಿವಿಧ ದಾಸೋಹವನ್ನು ಬದುಕಿನ ಅಡಿಗಡಿಗೂ ಪಾಲಿಸಿದವರು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ. ಇದಿಷ್ಟೇ ಆಗಿದ್ದರೆ ಸ್ವಾಮೀಜಿಯ ಕಾಣ್ಕೆ ಸಿದ್ಧಗಂಗೆಯ ಆವರಣ ಮೀರುತ್ತಿರಲಿಲ್ಲವೇನೋ. ಆದರೆ ಇವುಗಳ ಒಟ್ಟಿಗೆ ‘ಜ್ಞಾನ ದಾಸೋಹದ ಸಿಹಿ ಉಣಬಡಿಸುವೆ ಬನ್ನಿ’ ಎಂದು ಮಕ್ಕಳನ್ನು ಕರೆದು ತಮ್ಮ ತುಂಬು ತೋಳುಗಳಲ್ಲಿ ಅಪ್ಪಿದವರು ಶ್ರೀಗಳು.

ವೀರಶೈವ-ಲಿಂಗಾಯತರ ಮಠವಾದರೂ ಎಲ್ಲ ವರ್ಗದ ಮಕ್ಕಳಿಗೆ ಅಕ್ಷರವನ್ನು ಉಣಬಡಿಸಿದ ಪ್ರೀತಿಯ ಸಿದ್ಧಗಂಗೆಯ ಅಜ್ಜ. ಶಿಕ್ಷಣ, ದಾಸೋಹ ಹಾಗೂ ಸೇವಾ ಕಾರ್ಯಗಳ ಮೂಲಕ ಮಠವನ್ನು ಏಳಿಗೆಯತ್ತ ಕೊಂಡೊಯ್ಯುತ್ತಲೇ ಅವರ ಸಾಧನೆಯೂ ವಿಸ್ತಾರವಾಯಿತು. ಹಲವು ದಶಕಗಳಿಂದ ನಾಡಿನ ವಿವಿಧ ಭಾಗಗಳ ಮಕ್ಕಳಿಗೆ ಸಿದ್ಧಗಂಗೆ ಜ್ಞಾನಾರ್ಜನೆಯ ಆಶ್ರಯತಾಣವಾಗಿದೆ. ಇಲ್ಲಿ ಶಿಕ್ಷಣ ಪಡೆದ ಸಾವಿರಾರು ಮಂದಿ ಇಂದು ಉತ್ತಮ ಸ್ಥಾನಮಾನ ಹೊಂದಿದ್ದಾರೆ. ಈಗಲೂ 8 ಸಾವಿರಕ್ಕಿಂತ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

‘ನಿಮ್ಮ ಶರಣರ ಸಂಗವೆನಗೆ ಪರಮಸುಖವಯ್ಯ, ನಿಮ್ಮ ಶರಣರ ಅಗಲಿಕೆ ಎನ್ನ ಪ್ರಾಣವಿಯೋಗವಯ್ಯಾ, ನಿಮ್ಮ ಶರಣರ ಮುನಿಸು ಎನಗೆ ಬಿಡಿಸಲಾರದ ತೊಡಕು’ ಎನ್ನುವಂತೆ ಸ್ವಾಮೀಜಿ ತಮ್ಮ ಬದುಕಿನುದ್ದಕ್ಕೂ ಶರಣರನ್ನು ಮಕ್ಕಳಲ್ಲಿ ಕಾಣುತ್ತಿದ್ದಾರೆ. ಅವರ ಮನ ಮಿಡಿದದ್ದು, ತುಡಿತದ್ದು ಮಕ್ಕಳಿಗಾಗಿ. ಅವರ ಶಿಕ್ಷಣಕ್ಕಾಗಿ. ಆ ತುಡಿತ-ಮಿಡಿತದ ಫಲವಾಗಿ ಸಿದ್ಧಗಂಗೆಯ ನೆಲ ಲಕ್ಷಾಂತರ ಮಕ್ಕಳ ಬದುಕನ್ನು ಅಕ್ಷರ ದೀಪದಿಂದ ಬೆಳಗಿದೆ.

‘ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ ಲಕ್ಷ ಜನಗಳ ಪೊರೆದಿದೆ, ತೀರ್ಥವಾಗಿದೆ ಭಕ್ತರಿಗೆ, ಚಿರಸ್ಫೂರ್ತಿಯಾಗಿದೆ ಬುದ್ಧಿಗೆ ಬಂದ ಹಣತೆಗೆ, ಎಣ್ಣೆ ಬತ್ತಿಯ ದೀಪ್ತಿ ದಾನವ ಮಾಡಿದೆ ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊ ರೆಕ್ಕೆಯ ಹಾದಿಗೆ...’ ಎಂದು ಸಿದ್ಧಗಂಗೆ ಮತ್ತು ಶಿವಕುಮಾರ ಶ್ರೀಗಳ ಬಗ್ಗೆ ಮನದುಂಬಿ ಹೇಳಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಹ ಇಲ್ಲಿ ಕಲಿತ ವಿದ್ಯಾರ್ಥಿ. ‘ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ’ ಎನ್ನುವ ಜಿಎಸ್‌ಎಸ್ ಮಾತು ಶ್ರೀಗಳ ಬದುಕಿನ ಕನ್ನಡಿಯಂತಿದೆ. ಸಮಾನತೆಯ ಸಾಕಾರ ರೂಪ ಸ್ವಾಮೀಜಿ ಎಂದರೆ ಅತಿಶಯವಲ್ಲ. ಎಲ್ಲ ವರ್ಗದ ಜನರಿಂದಲೂ ಪೂಜಿತವಾಗುತ್ತಿರುವ ಸ್ವಾಮೀಜಿ ದಾಸೋಹದ ಮನೆ, ವಿದ್ಯಾರ್ಥಿಗಳ ವಸತಿ ನಿಲಯ ಹೀಗೆ ಎಲ್ಲೆಡೆಯೂ ಸಮಾನತೆಯನ್ನು ಸಾಕಾರಗೊಳಿಸಿದವರು.

ಅಂದಹಾಗೆ ಸ್ವಾಮೀಜಿ 1930ರಲ್ಲಿ ಮಠಕ್ಕೆ ಉತ್ತರಾಧಿಕಾರಿಯಾದಾಗ ಅವರ ಸನ್ಯಾಸತ್ವದ ಹಾದಿ ಸುಲಭದ್ದೇನೂ ಆಗಿರಲಿಲ್ಲ. ಉದ್ಧಾನ ಶಿವಯೋಗಿಗಳು ದಾಸೋಹ, ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿ ನಿಲಯದ ಜವಾಬ್ದಾರಿ ವಹಿಸಿದರು. ಕೈಗೆ ಹೆಚ್ಚು ಹಣ ನೀಡುತ್ತಿರಲಿಲ್ಲ. ಬೆಂಗಳೂರಿನಲ್ಲಿರುವ ಕೆಲವು ಮನೆಗಳ ಅಲ್ಪಸ್ವಲ್ಪ ಬಾಡಿಗೆ, ಭಕ್ತರ ಕಾಣಿಕೆ ಹಾಗೂ ಸರ್ಕಾರದ ಅನುದಾನ ಇಷ್ಟರಲ್ಲಿ ಸ್ವಾಮೀಜಿ ಈ ಮೂರು ವ್ಯವಸ್ಥೆಗಳನ್ನು ನಿರ್ವಹಿಸಬೇಕಿತ್ತು. ಆಗ ಮಠಕ್ಕೆ ಇದದ್ದು ಕೇವಲ 16 ಎಕರೆ ಜಮೀನು. ದಾಸೋಹದ ಖರ್ಚು–ವೆಚ್ಚಗಳು ಕೈ ಮೀರತೊಡಗಿದವು. ಭಕ್ತರಿಗೂ ಊಟ, ವಸತಿ ಕಲ್ಪಿಸುವುದು ಸ್ವಾಮೀಜಿ ಅವರಿಗೆ ಕಷ್ಟವಾಗುತ್ತಿತ್ತು. ಕೈಗೆ ದುಡ್ಡು ಬಂದರೂ ಹಣ ಕೆಲವೇ ಸಮಯದಲ್ಲಿ ವೆಚ್ಚವಾಗುತ್ತಿತ್ತು. ‘ನೀವೇ ದುಡಿದು ಖರ್ಚು ಮಾಡಿಕೊಳ್ಳಿ’ ಎಂದು ಶಿವಯೋಗಿಗಳು ಕಠಿಣವಾಗಿ ಹೇಳಿದ್ದರು.

ಈ ಬಗ್ಗೆ ಶ್ರೀಗಳೇ ಹೀಗೆ ಹೇಳಿಕೊಂಡಿದ್ದಾರೆ. ‘ನನಗೆ ಎಷ್ಟೋ ವೇಳೆ ಉಪ್ಪು, ಬೇಳೆ ಹೊಂದಿಸುವುದಕ್ಕೂ ಕೈಯಲ್ಲಿ ದುಡ್ಡು ಇರುತ್ತಿರಲಿಲ್ಲ. ಉದ್ಧಾನ ಶಿವಯೋಗಿಗಳು ದುಡ್ಡು ಇಲ್ಲ ಎಂದು ಹೇಳಿ ಕಳುಹಿಸುತ್ತಿದ್ದರು. ಒಮ್ಮೆ ಬೇಳೆ ಅವಶ್ಯವಾಗಿ ಬೇಕಾಗಿತ್ತು. ದುಡ್ಡು ಇರಲಿಲ್ಲ. ಆ ಕ್ಷಣದಲ್ಲಿ ದುಡ್ಡು ಎ‌ಲ್ಲಿಯೂ ದೊರೆಯಲಿಲ್ಲ. ಆಗ ವಿದ್ಯಾರ್ಥಿಗಳು ತಮ್ಮ ಖರ್ಚಿಗೆ ಇಟ್ಟುಕೊಂಡ ಹಣವನ್ನೇ ಅವರಿಂದ ಪಡೆದು ಅಂದಿನ ದಂದುಗವನ್ನು ಮುಗಿಸಿ ಆ ಮೇಲೆ ವಿದ್ಯಾರ್ಥಿಗಳಿಗೆ ಅವರವರ ಹಣ ಕೊಟ್ಟಿದ್ದಾಯಿತು.

ಹೀಗೆ ಹಲವು ಅಡ್ಡಿ–ಕಷ್ಟಗಳ ನಡುವೆಯೇ ಮಠದ ಸೇವಾ ಕೆಲಸವನ್ನು ವಿಶಾಲಗೊಳಿಸಿದರು. ‘ಮಠದಿಂದ ಘಟ ಅಲ್ಲ, ಘಟದಿಂದ ಮಠ’ ಎನ್ನುವ ಮಾತಿಗೆ ಅನ್ವರ್ಥವಾಗಿ ಶ್ರೀಗಳು ಸಿದ್ಧಗಂಗೆಯ ಪ್ರಭಾವಳಿಯನ್ನು ನಾಡಿನಲ್ಲಿ ಹೆಚ್ಚಿಸಿದರು. ಹಳ್ಳಿಗಳಿಗೆ ಭಿಕ್ಷೆಗೆ (ಶ್ರೀಗಳು ಒಂದು ಸಮಯದಲ್ಲಿ ಮಠದ ದಾಸೋಹಕ್ಕೆ ‌ದವಸ ಧಾನ್ಯ ಸಂಗ್ರಹಿಸಲು ಭಕ್ತರ ಮನೆಗೆಳಿಗೆ ಭಿಕ್ಷೆಗೆ ಹೋಗುತ್ತಿದ್ದರು) ಹೋದಾಗ ಕಡು ಬಡತನದ ಕುಟುಂಬಗಳ ಮಕ್ಕಳನ್ನು ‘ಮಠಕ್ಕೆ ಕಳುಹಿಸಿ’ ಎಂದು ಪೋಷಕರಿಗೆ ಹೇಳುತ್ತಿದ್ದರು. ಆ ಮಕ್ಕಳಿಗೆ ಮಠದಲ್ಲಿ ತಂದೆ-ತಾಯಿಯ ಪ್ರೀತಿ ಧಾರೆ ಎರೆದವರು ಸ್ವಾಮೀಜಿ.

‘ಬೆಳಿಗ್ಗೆಯೇ ಎದ್ದು ಪ್ರತಿ ಕೊಠಡಿಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ನಿದ್ದೆಯಿಂದ ಎಚ್ಚರಿಸಿ ಓದಲು ಕೂರಿಸುತ್ತಿದ್ದರು. ಚೆನ್ನಾಗಿ ಓದಬೇಕು, ಬರೆಯಬೇಕು ಎಂದು ಹಿತವಾಗಿ ನುಡಿಯುತ್ತಿದ್ದರು. ಕೆಲವು ವೇಳೆ ಸಂಜೆ ಪ್ರಾರ್ಥನೆಗೆ ಬಾರದ ಮತ್ತು ಅನಿವಾರ್ಯ ಸಂದರ್ಭದಲ್ಲಿ ಮಠದ ಕೆಲಸಗಳಿಗೆ ತಪ್ಪಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕರು ಇಲ್ಲವೆ ಮೇಲುಸ್ತುವಾರಿ ನೋಡಿಕೊಳ್ಳುವವರು ಶಿಕ್ಷೆ ಎನ್ನುವಂತೆ ಊಟ ನೀಡುತ್ತಿರಲಿಲ್ಲ. ಇದು ಶಿವಕುಮಾರ ಶ್ರೀಗಳ ಗಮನಕ್ಕೆ ಬಂದರೆ ‘ಮಕ್ಕಳಿಗೆ ಮೊದಲು ಊಟ ಕೊಡಿ. ಅವರು ಮೊದಲು ಶಿಕ್ಷಣ ಕಲಿಯಬೇಕು. ಉಳಿದದ್ದು ಆಮೇಲೆ’ ಎಂದ ಕಠಿಣವಾಗಿ ಹೇಳುತ್ತಿದ್ದರು. ಸ್ವಾಮೀಜಿ ಮಕ್ಕಳ ವಿಚಾರವಾಗಿ ಎಂದೂ ಕಠಿಣವಾಗಿ ನಡೆದುಕೊಂಡಿಲ್ಲ’ ಎನ್ನುವ ಮಾತುಗಳನ್ನು ಹಳೇ ವಿದ್ಯಾರ್ಥಿಗಳು ನೆನಪಿಸಿಕೊಳ್ಳುವರು.

ಸ್ವಾಮೀಜಿ ಮಕ್ಕಳ ವಿಷಯದಲ್ಲಿ ಮಕ್ಕಳಂತೆಯೇ ವರ್ತಿಸುತ್ತಿದ್ದರು. 1981ರಲ್ಲಿ ಪ್ರಕಟವಾದ ‘ಸಿದ್ಧಗಂಗಾ ಶ್ರೀ’ ಪುಸ್ತಕದಲ್ಲಿ ಈ ಬಗ್ಗೆ ಪ್ರಸಂಗವನ್ನು ದಾಖಲಿಸಿದ್ದಾರೆ ಕರ್ನಾಟಕ ಕೊಳಚೆ ನಿರ್ಮೂಲಕ ಮಂಡಳಿಯ ಕಾರ್ಯನಿರ್ವಹಕ ಎಂಜಿನಿಯರ್ ಎಂ.ಮರಿಯಪ್ಪ. ‘ನಾನು ತುಮಕೂರಿನ ಕಾಲೇಜಿನಲ್ಲಿ ಇಂಟರ್ ಓದುತ್ತಿದ್ದೆ. ನನಗೆ ಸಿದ್ದಗಂಗಾ ಮಠದಲ್ಲಿ ಶಿವಕುಮಾರಸ್ವಾಮೀಜಿ ದಯೆಯಿಂದ ನನಗೆ ಅಲ್ಲಿ ಊಟ ಮತ್ತು ವಸತಿಗೆ ಅನುಕೂಲವಿತ್ತು. ಸ್ವಾಮಿ ಅವರು ಬಹಳ ಶಿಸ್ತಿನಿಂದ ಹುಡುಗರನ್ನು ನೋಡಿಕೊಳ್ಳುತ್ತಿದ್ದರು.

ಬೆಳಿಗ್ಗೆ ಏಳು ಗಂಟೆಗೆ ಏಳಬೇಕು ಮತ್ತು ರಾತ್ರಿ ಒಂಬತ್ತೂವರೆ ಗಂಟೆಯ ನಂತರ ಮಲಗಬೇಕು. ಇದು ಕಡ್ಡಾಯ ಉಲ್ಲಂಘಿಸಬಾರದು ಎನ್ನುವ ನಿಯಮ ಇತ್ತು. ನಮ್ಮ ರೂಮಿನಲ್ಲಿ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಲಿಂಗಯ್ಯ ಎಂಬ ಹುಡುಗ ಇದ್ದ. ಇವನಲ್ಲದೆ ಇನ್ನೂ ಮೂರು ವಿದ್ಯಾರ್ಥಿಗಳು ಆ ರೂಮಿನಲ್ಲಿ ಇದ್ದೆವು. ಲಿಂಗಯ್ಯನಿಗೆ ರಾತ್ರಿ ಏಳೂವರೆಗೆ ಊಟ ಮಾಡಿ ಬಂದರೆ ತೂಕಡಿಕೆ ಪ್ರಾರಂಭವಾಗುತ್ತಿತ್ತು. ಅವನನ್ನು ದಿನವೂ ‘ಏ ಏಳೋ ಲಿಂಗಯ್ಯ, ಸ್ವಾಮಿಗಳು ಬಂದರು ಏಳೋ’ ಎಂದು ತಿವಿದು ತಿವಿದು ಎಚ್ಚರಿಸುತ್ತಿದ್ದೆವು. ಎಚ್ಚರಿಸಯವುದೇನೋ ಪೀಡಿಸುತ್ತಿದ್ದೆವು ಅಂತಲೇ ಹೇಳಬೇಕು. ಅವನು ಸ್ವಲ್ಪ ದಿನ ಗಾಬರಿಯಿಂದ ಏಳುತ್ತಿದ್ದ ಕೊನೆ ಕೊನೆಗೆ ನಾವು ಸುಮ್ಮನೆ ಹೇಳುತ್ತಿದ್ದೇವೆ ಎಂದು ಎಷ್ಟು ತಿವಿದರೂ ಹೇಳುತ್ತಲೇ ಇರಲಿಲ್ಲ.

ಒಂದು ದಿನ ಹೀಗೆ ನಾವು ಓದುತ್ತ ಕುಳಿತಿದ್ದೆವು. ರಾತ್ರಿ ಒಂಬತ್ತು ಗಂಟೆಗೆ ಸ್ವಾಮಿ ಅವರು ಬಂದರು. ಲಿಂಗಯ್ಯ ಗೊರಕೆ ಹೊಡೆಯುತ್ತಿದ್ದ. ಸ್ವಾಮಿಗಳು ಬಾಗಿಲಲ್ಲಿ ಬಂದು ನಿಂತರು. ನಾವು ಗಾಬರಿಯಿಂದ, ‘ಲೇ ಲಿಂಗಯ್ಯ ಹೇಳೋ ಸ್ವಾಮಿಗಳು ಬಂದಿದ್ದಾರೆ. ಏಳೋ’ ಎಂದು ಪಿಸುಗುಟ್ಟಿ ಎಬ್ಬಿಸಲು ಪ್ರಯತ್ನಿಸಿದೆವು. ಲಿಂಗಯ್ಯ ಜಪ್ಪಯ್ಯ ಎಂದರೂ ಕದಲಲಿಲ್ಲ. ಜೋರಾಗಿ ಅಲುಗಾಡಿಸಿದಾಗ ಎಚ್ಚರವಾಯಿತು.

‘ಏ, ಏನ್ರೊ ಅದು ಸತ್ತಾಯಿಸುತ್ತೀರಾ’ ಎಂದು ಕೋಪದಿಂದಲೇ ಕೂಗಿದ. ‘ಸ್ವಾಮಿಗಳು ಬಂದಿದ್ದಾರೆ ಏಳೋ’ ಎಂದು ನಾವು ಪಿಸುಗುಟ್ಟಿದೆವು. ಅವನು ಜೋರಾಗಿಯೇ ‘ಬೋ...ಮಕ್ಕಳ, ನನ್ನನಿದ್ದೆ ಕೆಡಿಸ್ತಾರೆ. ಸ್ವಾಮಿ ಅಂತೆ ಸ್ವಾಮಿ ಯಾವ ಸ್ವಾಮಿಗಳೋ? ಅವರಿಗೇನು ಬೇರೆ ಕೆಲಸವೇ ಇಲ್ವಾ’ ಎಂದು ಸಿಡುಗುಟ್ಟಿ ಮುಖಕ್ಕೆ ಹೊದಿದ್ದ ಮುಸುಕು ತೆಗೆದ. ಸ್ವಾಮಿಗಳು ಇವನ ಮಾತು ಕೇಳುತ್ತಲೇ, ಶಾಂತವಾಗಿ, ‘ಲಿಂಗಯ್ಯ, ಏಳಪ್ಪ ಏಳೋ...’ ಎಂದು ಎತ್ತರದ ಧ್ವನಿಯಲ್ಲಿ ಕೂಗಿದರು.

ಸ್ವಾಮಿಗಳ ಮಾತನ್ನು ಕೇಳಿದ ಲಿಂಗಯ್ಯನಿಗೆ ಗಾಬರಿ. ಕಂಬಳಿಯನ್ನು ಪಕ್ಕಕ್ಕೆ ಎಸದವನೇ, ‘ಅಯ್ಯಯ್ಯಪ್ಪೋ, ಅಯ್ಯಯ್ಯಪ್ಪೋ ಇನ್ನು ಬಿಡ್ತಾರೇನಪ್ಪೋ’ ಎಂದವನೇ ಒಂದೇ ಉಸಿರಿನಲ್ಲಿ ರೂಮಿನಿಂದ ಆಚೆಗೆ ನೆಗೆದು ಓಡಿ ಕತ್ತಲೆಯಲ್ಲಿ ಮರೆಯಾದ. ಸ್ವಾಮಿಗಳು ‘ಬಾರೋ ಲಿಂಗಯ್ಯ ಬಾರೋ’ ಎಂದು ಕೂಗುತ್ತಿದ್ದರು. ನಾವು ಕತ್ತಲೆಯಲ್ಲಿ ಅವನನ್ನು ಹುಡುಕಿದರೂ ಸಿಗಲಿಲ್ಲ. ಸ್ವಾಮಿ ಅವರು ಏನು ಮಾಡುವರೋ ಎನ್ನುವ ಭಯದಲ್ಲಿ ಅವನು ಊರಿಗೆ ಹೋಗಿಬಿಟ್ಟಿದ್ದ. ಎಂಟು ದಿನಗಳ ನಂತರ ತಂದೆ ತಾಯಿಯ ಜತೆ ಮಠಕ್ಕೆ ಬಂದ. ಭಯದಿಂದ ಅವನು ನಡುಗುತ್ತಿದ್ದ. ಸ್ವಾಮಿ ಅವರು ಏನು ಶಿಕ್ಷೆ ಕೊಡುವರೋ ಎಂದು ನಾವು ಕಾತರದಿಂದ ನೋಡುತ್ತಿದ್ದೆವು.

ಲಿಂಗಯ್ಯ ಸ್ವಾಮಿಗಳ ಪಾದಗಳಿಗೆ ತಲೆಯನ್ನು ಇಟ್ಟು ಬಿಕ್ಕಳಿಸುತ್ತಿದ್ದ. ಸ್ವಾಮಿ ಅವರು ಮುಗುಳ್ನಗುತ್ತ ‘ಲಿಂಗಯ್ಯ ಓದೋ ಹುಡುಗರು ಹಾಗೆ ನಿದ್ದೆ ಮಾಡುತ್ತಾರೇನೋ. ಹಾಗೆ ಮಾಡಬಾರದು. ಹೋಗು ಚೆನ್ನಾಗಿ ಓದಿ ಬುದ್ಧಿವಂತನಾಗು’ ಎಂದರು.

ಸಮಾನತೆಗೆ ಬಸವ ಜಯಂತಿ: ರಾಜ್ಯದಲ್ಲಿ ಮೊದಲ ಬಾರಿಗೆ ಬಸವ ಜಯಂತಿಯನ್ನು ಹಳ್ಳಿ ಹಳ್ಳಿಗಳಿಗಳಿಗೆ ಕೊಂಡೊಯ್ದ ಕೀರ್ತಿ ಶಿವಕುಮಾರ ಶ್ರೀಗಳದ್ದು. ಆ ಮೂಲಕ ಜಾತಿಯ ಜಾಡ್ಯದಿಂದ ನಲುಗಿದ್ದ ಹಳ್ಳಿಗಳಲ್ಲಿ ಸಮತೆಯ ದೀಪವನ್ನು ಬೆಳಗಿಸಿದರು. 1979ರಲ್ಲಿ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರೀಗಳು ಸಂಘಟಿಸಿದರು. ಕಾರ್ಯಕ್ರಮದಲ್ಲಿ ಭಾಷಣ ಅಷ್ಟೇ ಅಲ್ಲ ಕಾವ್ಯವಾಚನವೂ ಇರಬೇಕು ಎಂದು ತೀರ್ಮಾನಿಸಿದರು.

ರಾತ್ರಿ ಬಸವೇಶ್ವರರ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರು. ಇದರಿಂದ ತತ್ವಬೋಧನೆಯ ಜತೆ ಜತೆಯಲ್ಲಿಯೇ ಜನರಲ್ಲಿ ಸಾಮಾಜಿಕ ಪ್ರಜ್ಞೆಯೂ ಬೆಳೆಯಿತು. ಶ್ರೀಗಳ ಬದುಕಿನ ಪ್ರಮುಖ ಸಾಧನೆಯು ಘಟ್ಟವಾಗಿಯೂ ಈ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಕಾಣಬಹುದು. ಅಂದು ಶ್ರೀಗಳು ಹಾಕಿದ ಬುನಾದಿ ಇಂದಿಗೂ ಮುಂದುವರಿದಿದೆ.

ಎಂಟು ದಶಕಗಳಿಂದ ನಿಷ್ಕಾಮವಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಅವರ ಸೇವಾ ಕಾರ್ಯ ಅನನ್ಯವಾದುದು. ‘ಸೇವೆ’ ಎನ್ನುವುದು ವ್ಯವಹಾರವಾಗುತ್ತಿರುವ ಈ ಹೊತ್ತಿನಲ್ಲಿ ಸಿದ್ಧಗಂಗೆಯ ಪೂಜ್ಯರು ಇದಕ್ಕೆ ಅಪವಾದವಾಗಿ ಕಾಣುವರು. ‘ನಡೆದಾಡುವ ದೇವರು’, ‘ಅಭಿನವ ಬಸವಣ್ಣ’ ಎಂದು ಭಕ್ತರು ಕರೆಯಲು ಸ್ವಾಮೀಜಿ ಅವರು ಮಾಡಿದ ಕೆಲಸಗಳೇ ಕಾರಣ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !