ಭಾನುವಾರ, ಆಗಸ್ಟ್ 18, 2019
24 °C
‘ರಾಷ್ಟ್ರೀಯ ವಿಪ್ಪತ್ತು’ ಘೋಷಣೆಗೆ ಒತ್ತಾಯ

₹5 ಸಾವಿರ ಕೋಟಿ ನೆರವಿಗೆ ಸಿದ್ದರಾಮಯ್ಯ ಆಗ್ರಹ

Published:
Updated:

ಬೆಂಗಳೂರು: ‘ಪ್ರವಾಹಕ್ಕೆ ತುತ್ತಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರ ₹5 ಸಾವಿರ ಕೋಟಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಬೇಕು’ ಎಂದು ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಆಗ್ರಹಿಸಿದರು.

ರಾಜ್ಯದ ಶೇ 60ರಷ್ಟು ಪ್ರದೇಶ ಜಲಾವೃತವಾಗಿದ್ದು, ತಮ್ಮ ಜೀವಮಾನದಲ್ಲೇ ಇಷ್ಟು ದೊಡ್ಡ ಪ್ರಮಾಣದ ಪ್ರವಾಹ ನೋಡಿರಲಿಲ್ಲ. ಹಾಗಾಗಿ ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ, ಕೇಂದ್ರ ನೆರವಿಗೆ ಬರಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ₹6 ಸಾವಿರ ಕೋಟಿಯಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ. ಆಗಿರುವ ಹಾನಿಯನ್ನು ಗಮನಿಸಿದರೆ ನಷ್ಟದ ಪ್ರಮಾಣ ದೊಡ್ಡದಿದೆ.  ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದಂತೆ ಕಾಣುತ್ತಿದೆ. 10 ಲಕ್ಷ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಸಾವಿರಾರು ಕಿ.ಮೀ ರಸ್ತೆ, ನೂರಾರು ಸೇತುವೆಗಳು, ರೈಲ್ವೆ ಹಳಿಗಳು ಕೊಂಚಿಕೊಂಡು ಹೋಗಿವೆ. ಸಾವಿರಾರು ಮನೆಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇಷ್ಟು ದೊಡ್ಡ ಮಟ್ಟದಲ್ಲಿ ಅನಾಹುತ ಸಂಭವಿಸಿದ್ದರೂ ಪ್ರಧಾನಿ ಭೇಟಿ ನೀಡಿಲ್ಲ, ಪರಿಹಾರ ಕಾರ್ಯ ಕೈಗೊಳ್ಳಲು ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಯಡಿಯೂರಪ್ಪ ಅವರು ಕೇಂದ್ರದ ನೆರವಿಗೆ ಒತ್ತಾಯಿಸುವ ಬದಲು ಎನ್‌ಡಿಆರ್‌ಎಫ್, ಉದ್ಯೋಗ ಖಾತ್ರಿಯಲ್ಲಿ ಬರಬೇಕಿದ್ದ ಬಾಕಿ ಹಣ ಬಂದಿದೆ ಎಂದು ಹೇಳುತ್ತಿದ್ದಾರೆ. ಈಗ ಬಂದಿರುವುದು ರಾಜ್ಯದ ಪಾಲಿನ ಹಣ. ಮಳೆ ಹಾನಿಗೆ ತುತ್ತಾದವರಿಗೆ ನೆರವು ನೀಡಲು ಕೇಂದ್ರದಿಂದ ಹಣ ಕೇಳಿ, ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತರ ಕೇಂದ್ರಗಳಲ್ಲಿ ಇರುವ ಜನರಿಗೆ ಕನಿಷ್ಠ ಸೌಲಭ್ಯಗಳನ್ನೂ ಕೊಟ್ಟಿಲ್ಲ. ಉಡುಪು, ಹೊದಿಕೆ, ಆಹಾರ, ನೀರು, ವೈದ್ಯಕೀಯ ಸೌಲಭ್ಯ ಇಲ್ಲದೆ ನರಳುತ್ತಿದ್ದಾರೆ. ನೆರೆಯಿಂದ ಸಿಲುಕಿದವರ ರಕ್ಷಣೆಗೆ ಹೆಚ್ಚಿನ ಹೆಲಿಕಾಪ್ಟರ್ ನೀಡುತ್ತಿಲ್ಲ. ಲಕ್ಷಾಂತರ ಜನರು ಸರ್ವಸ್ವವನ್ನೂ ಕಳೆದುಕೊಂಡಿದ್ದು, ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಲಾಠಿ ಪ್ರಹಾರ ಮಾಡಿಸುವುದರಲ್ಲಿ ನಿಸ್ಸೀಮರು’

ಗದಗ ಜಿಲ್ಲೆಯ ಪರಿಹಾರ ಕೇಂದ್ರದಲ್ಲಿ ನೆರವು ಕೇಳಿದ ಜನರ ಮೇಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎದುರೇ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಅಮಾನವೀಯ ಘಟನೆ. ಲಾಠಿ ಪ್ರಹಾರ ಮಾಡಿಸುವುದರಲ್ಲಿ ಅವರು ನಿಸ್ಸೀಮರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿ ಜಿಲ್ಲೆಯಲ್ಲಿ ಗೊಬ್ಬರ, ಬೀಜ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದರು. ಹಸಿರು ಶಾಲು ಹೊದ್ದು, ರೈತ ಹೋರಾಟಗಾರನೆಂದು ಹೇಳಿಕೊಂಡು ಪ್ರಮಾಣ ವಚನ ಸ್ವೀಕರಿಸಿ, ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಏಕಪಾತ್ರಾಭಿನಯ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಬ್ಬರೇ ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವಾರ ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ. ಸರ್ಕಾರ ಉರುಳಿಸಲು ತೋರಿದ ಆಸಕ್ತಿಯನ್ನು ಜನರ ಕಷ್ಟಕ್ಕೆ ಸ್ಪಂದಿಸಲು ತೋರುತ್ತಿಲ್ಲ. ಸರ್ಕಾರ ಜೀವಂತವಾಗಿ ಇಲ್ಲವಾಗಿದ್ದು, ಪರಿಹಾರ ಕಾರ್ಯವೂ ಸಮರ್ಕವಾಗಿ ನಡೆಯುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

* ಮಹಾರಾಷ್ಟ್ರ, ಕೇರಳಕ್ಕೆ ಹಣ ಬಿಡುಗಡೆ ಮಾಡಿದ್ದು, ರಾಜ್ಯಕ್ಕೆ ನೀಡದೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕೇಂದ್ರ– ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದ್ದರೂ ನೆರವಿಗೆ ಬರುತ್ತಿಲ್ಲ

- ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

Post Comments (+)