ಶುಕ್ರವಾರ, ನವೆಂಬರ್ 15, 2019
22 °C

ಭಾರತ ರತ್ನ-ರಾಜ್ಯೋತ್ಸವ ಪ್ರಶಸ್ತಿ | ಸಿದ್ದರಾಮಯ್ಯ VS ಸಿ.ಟಿ.ರವಿ ಟ್ವೀಟ್‌ ವಾರ್‌

Published:
Updated:

ಬೆಂಗಳೂರು: ಸಾವರ್ಕರ್‌ಗೆ ಭಾರತ ರತ್ನ ಕೊಡುವ ಬಗ್ಗೆ ಬಿಜೆಪಿಯ ಮಹಾರಾಷ್ಟ್ರ ಘಟಕ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಿದೆ. ಬಳಿಕ, ಆ ಬಗ್ಗೆ ಪರ–ವಿರೋಧ ಚರ್ಚೆ ತಾರಕಕ್ಕೇರಿದೆ. ಈ ನಿಲುವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದರು. ಸಚಿವ ಸಿ.ಟಿ. ರವಿ ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಇಬ್ಬರೂ ನಾಯಕರು ಹೋದಲ್ಲಿ ಬಂದಲ್ಲಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳಲ್ಲಿ ಹಾಗೂ ಭಾಷಣಗಳಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಈಬ್ಬರೂ ಇದೇ ವಿಷಯವಾಗಿ ಪರ–ವಿರೋಧ ಟ್ವೀಟ್ ವಾರ್‌ಅನ್ನೂ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ವಿರೋಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿ.ಟಿ.ರವಿ, ‘ಮಹಾತ್ಮ ಗಾಂಧಿ ಹತ್ಯೆಯ ಸಂಚುಕೋರ ಎನ್ನುವ ಮೂಲಕ ರಾಷ್ಟ್ರೀಯವಾದಿ ವೀರ ಸಾವರ್ಕರ್ ಅವರನ್ನು ನೀವು ಅವಮಾನಿಸಿದ್ದೀರಿ. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ಬಳಿಕ ನೀವು ಮಾನಸಿಕವಾಗಿ ವೈಕಲ್ಯಕ್ಕೆ ತುತ್ತಾಗಿದ್ದೀರಾ? ಇತಿಹಾಸದ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೇ? ಯಾಕೆ ನೀವು ಸೆಲ್ಯುಲರ್ ಜೈಲಿಗೆ ಭೇಟಿ ನೀಡಬಾರದು! ನಿಮ್ಮ ಪ್ರವಾಸಕ್ಕೆ ನಾನು ವ್ಯವಸ್ಥೆ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.

‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ!. ನಮ್ಮಂತಹವರು ಇತಿಹಾಸ ಓದಿ, ಸತ್ಯ ತಿಳಿದು ಮಾತನಾಡುತ್ತೇವೆ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮನ್ನು ಟೀಕಿಸಿದ ಸಚಿವ ಸಿ.ಟಿ. ರವಿ ಅವರಿಗೆ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದರು. 

ಮುಂದುವರಿದ ಟ್ವೀಟ್‌ ವಾರ್‌ನಲ್ಲಿ, ‘ಹಿಂದೂ ವಿರೋಧಿ ಹಾಗೂ ಮಹಾ ಕ್ರೂರಿಯಾಗಿದ್ದ ಟಿಪ್ಪು ಜಯಂತಿ ಆಚರಿಸಿ ಅಮಾಯಕರನ್ನು ಕೊಂದವರಿಗೆ ಒಬ್ಬ ದೇಶಭಕ್ತ ಮಹಾತ್ಮ ಗಾಂಧಿಯ ಅವರ ಹತ್ಯೆಯ ಆರೋಪಿಯಾಗಿ ಕಾಣುವುದು ಸಹಜ. ತಮ್ಮ ಅಧಿಕಾರ ಅವಧಿಯಲ್ಲಿ ಹಲವು ಅಧಿಕಾರಿಗಳು ಮತ್ತು ಮುಗ್ದರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾಗ ರಾಜ್ಯವನ್ನಾಳುತ್ತಿದ್ದವರು ಏನು ಕುಡಿಯುತ್ತಿದ್ದರೋ?’ ಎಂದು ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರ ಟ್ವೀಟ್ಅನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.  

‘ಕುಡಿದು ವಾಹನ ಚಲಾಯಿಸಿದವರು ನಿಮ್ಮ ಆಪ್ತ ಬಳಗವೇ ಇರಬೇಕು’ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ ರವಿ, ‘ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅಂತಹ ಮಹಾ ಕ್ರೂರಿಗಳ ಇತಿಹಾಸ ಓದುವ ನಡುವೆ ವಿದೇಶದಲ್ಲಿ ಕುಡಿದು ಸತ್ತವರ ಕುರಿತ ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ನಂಬಿದ್ದೇನೆ’ ಎಂದೂ ಮತ್ತೊಂದು ಟ್ವೀಟ್‌ ಮಾಡಿದ್ದಾರೆ. 

'ಗಾಂಧೀಜಿ ಅವರು ಸಾವರ್ಕರ್‌ ಅವರನ್ನು ಭಾರತದ ನಿಷ್ಠಾವಂತ ಪುತ್ತ ಎಂದು ಕರೆದರು ಮತ್ತು ತಮ್ಮ ಪ್ರತಿಭೆಯನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಯಂಗ್‌ ಇಂಡಿಯಾದಲ್ಲಿ ಬರೆದಿದ್ದಾರೆ’ ಎಂದು ಮತ್ತೊಂದು ಟ್ವಿಟ್‌ನಲ್ಲಿ ಹೇಳಿರುವ ಸಿ.ಟಿ.ರವಿ, ‘ವೀರ ಸಾವರ್ಕರ್‌ ಅವರ ಕುರಿತು ಸಾರ್ವಜಕಿಕವಾಗಿ ಚರ್ಚೆಗೆ ನಾನು ನಿಮಗೆ ಸವಾಲು ಹಾಕುತ್ತೇನೆ. ‘ಹಿಟ್‌ ಅಂಡ್‌ ರನ್‌’ ರಾಜಕೀಯದಲ್ಲಿ ಪಾಲ್ಗೊಳ್ಳುವ ಬದಲು ನನ್ನೊಂದಿಗೆ ಚರ್ಚಿಸಲು ಧೈರ್ಯ ತೋರಿಸಿ’ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)