ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ದರಾಮಯ್ಯ ಆಪರೇಷನ್‌ ಜನಕ’

ಸಚಿವ ಕೆ.ಎಸ್‌. ಈಶ್ವರಪ್ಪ ಟೀಕೆ
Last Updated 22 ಆಗಸ್ಟ್ 2019, 15:41 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಆಪರೇಷನ್ ಜನಕ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ಕುರ್ಚಿ ಕಳೆದುಕೊಂಡಿರುವ ಅವರು, ಅಧಿಕಾರದ ಆಸೆಯಿಂದ ಬಿಜೆಪಿ ಶಾಸಕರನ್ನು ಸಂಪರ್ಕಿಸುವ ಮತ್ತು ಸೆಳೆಯುವ ಯತ್ನ ನಡೆಸಿದ್ದಾರೆ’ ಎಂದು ಕುಟುಕಿದರು.

‘ಶಾಸಕರು ಬಿಜೆಪಿಗೆ ಬಂದರೆ ಆಪರೇಷನ್ ಕಮಲ. ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ಹೋದರೆ ಏನೆಂದು ಕರೆಯಬೇಕು ಎನ್ನುವುದನ್ನು ಸಿದ್ದರಾಮಯ್ಯ ಹೇಳಬೇಕು. ‘ಆಪರೇಷನ್ ರಾಜಕೀಯ’ ಶುರು ಮಾಡಿದ್ದೇ ಅವರು. ಮುಖ್ಯಮಂತ್ರಿ ಆಗಬೇಕೆಂದು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದರು. ಅಧಿಕಾರ ಲಾಲಸೆಯಿಂದ ಏನು ಬೇಕಾದರೂ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ನೀಡಲಿಲ್ಲವೆಂದು ಬೇಸರದಿಂದ ವಿದೇಶಕ್ಕೆ ಹೋಗಿದ್ದರು. ನೇಮಕದ ನಂತರವಷ್ಟೇ ಬಂದಿದ್ದರು’ ಎಂದು ವ್ಯಂಗ್ಯವಾಡಿದರು.

‘ಬಾಗಲಕೋಟೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದೆ. ಸಿದ್ದರಾಮಯ್ಯ ಅಲ್ಲೇ ಇದ್ದರೂ ಬರಲಿಲ್ಲ. ಬಳಿಕ ಅಲ್ಲಿಯೇ ಸಭೆ ನಡೆಸಿದ್ದಾರೆ. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಪ್ರವಾಹದ ವಿಚಾರದಲ್ಲಿ ರಾಜಕೀಯ ಮಾಡಬಾರದು’ ಎಂದರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ವರ್ಗಾವಣೆ ದಂಧೆ ಆರಂಭಿಸಿದೆ ಎಂಬ ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ಅದು ಅವರ ಅನುಭವದ ಮಾತು. ದೇವೇಗೌಡರ ಕುಟುಂಬ ವರ್ಗಾವಣೆಯಲ್ಲಿ ಎಕ್ಸ್‌ಪರ್ಟ್‌. ಅವರು ಮಾಡಿದ ದಂಧೆಯನ್ನು ಈ ಸರ್ಕಾರವೂ ಮುಂದುವರಿಸಿರಬಹುದು ಎನ್ನುವ ಕಲ್ಪನೆಯಲ್ಲಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಗೋಡ್ಸೆ ಸಂತತಿಯವರು ಎಂದು ಕಾಂಗ್ರೆಸ್‌ನ ರಮಾನಾಥ ರೈ ಹೇಳಿದ್ದಾರೆ. ಅವರು ಸೋತ ನಂತರವಾದರೂ ರಾಮನನ್ನು ನೆನೆಯಲಿ. ಕಟೀಲ್ ರಾಮನ ಸಂತತಿಯವರು’ ಎಂದರು.

‘ಸಚಿವ ಸ್ಥಾನ ಸಿಗದಿದ್ದಕ್ಕೆ ಅತೃಪ್ತಿ, ಅಸಮಾಧಾನ ಸಹಜ. ಬಿಜೆಪಿ ಯಾವಾಗಲೂ ಹಿರಿಯ ಮಾತು ಕೇಳಿಕೊಂಡು ಬಂದ ಪಕ್ಷ. ತೀರ್ಮಾನವನ್ನು ಯಾರೂ ಪ್ರಶ್ನಿಸಬಾರದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT