ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರಿಗೆ ಸಿದ್ದರಾಮಯ್ಯ ಪತ್ರ, ಅಧಿವೇಶನ ಅವಧಿಯಲ್ಲಿ ಖುದ್ದು ಭೇಟಿಗೆ ಸೂಚನೆ

Last Updated 6 ಫೆಬ್ರುವರಿ 2019, 5:50 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಅಧಿವೇಶನದ ದಿನ (ಫೆ. 6) ಅಥವಾ ಅಧಿವೇಶನದ ಅವಧಿಯಲ್ಲಿ ಖುದ್ದು ಭೇಟಿಯಾಗಿ ಶಾಸಕಾಂಗ ಪಕ್ಷದ (ಸಿಎಲ್‌ಪಿ) ವಿಶೇಷ ಸಭೆಗೆ ಗೈರಾದ ಬಗ್ಗೆ ಸಮಜಾಯಿಷಿ ನೀಡುವಂತೆ ನಾಲ್ವರು ಅತೃಪ್ತ ಶಾಸಕರಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಪತ್ರ ಬರೆದಿದ್ದಾರೆ.

’ಜ. 18ರಂದು ನಡೆದ ಸಭೆಗೆ ಗೈರಾದ ಬಗ್ಗೆ ಖುದ್ದಾಗಿ ನನ್ನನ್ನು ಭೇಟಿ ಮಾಡಿ ಸ್ಪಷ್ಠೀಕರಣ ನೀಡುವಂತೆ ಸಿಎಲ್‌ಪಿ ಕಾರ್ಯದರ್ಶಿ ಪಿ. ಆರ್‌. ರಮೇಶ್‌ ಅವರು ಜ. 27ರಂದು ಪತ್ರ ಬರೆದಿದ್ದಾರೆ. 9 ದಿನ ಕಳೆದರೂ ಭೇಟಿಯಾಗಿಲ್ಲ’ ಎಂದೂ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಬಿ. ನಾಗೇಂದ್ರ ಮತ್ತು ಉಮೇಶ ಜಾಧವ್ ಅವರಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಆನಂದ್‌ ಸಿಂಗ್‌– ಜಮೀರ್‌ ಭೇಟಿ: ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರಿಂದ ಹಲ್ಲೆಗೊಳಗಾಗಿ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ಆನಂದ್‌ ಸಿಂಗ್‌ ಅವರನ್ನು ಸಚಿವ ಜಮೀರ್‌ ಅಹ್ಮದ್‌ ಮಂಗಳವಾರ ಭೇಟಿ ಮಾಡಿಚರ್ಚೆ ನಡೆಸಿದರು.

‘ಬಜೆಟ್‌ಗೆ ಅನುಮೋದನೆ ಪಡೆಯುವ ದಿನ ಅಧಿವೇಶನಕ್ಕೆ ಬರುತ್ತೇನೆ. ಉಳಿದ ದಿನಗಳಲ್ಲಿ ಹಾಜರಾಗಲು ಕಷ್ಟ’ ಎಂದು ಆನಂದ್‌ ಸಿಂಗ್‌ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಡಿಕೆಶಿಗೆ ಹೊಣೆ: ರೆಸಾರ್ಟ್ ಬಡಿದಾಟ ಪ್ರಕರಣದಲ್ಲಿ ಪರಸ್ಪರ ಶತ್ರುಗಳಾಗಿರುವ ಆನಂದ್‍ ಸಿಂಗ್ ಮತ್ತು ಗಣೇಶ್ ನಡುವೆ ರಾಜಿ ಮಾಡಿಸುವ ಹೊಣೆಯನ್ನು ಸಚಿವ ಡಿ.ಕೆ. ಶಿವಕುಮಾರ್‍ಗೆ ವಹಿಸಲಾಗಿದೆ.

‘ಏನು ಹೇಳಿದ್ದೀರೊ ಗೊತ್ತಿಲ್ಲ’

ಮಂಗಳವಾರ ರಾತ್ರಿ ಔತಣಕೂಟದ ನೆಪದಲ್ಲಿ ಪಕ್ಷದ ಸಚಿವರ ಜೊತೆ ಕುಶಲೋಪರಿ ಚರ್ಚೆ ವೇಳೆ ಬಜೆಟ್‌ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಬಜೆಟ್‌ನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಅಂಶಗಳಿಗೂ ಆದ್ಯತೆ ನೀಡುವಂತೆ ಹೇಳಿದ್ದೆ. ಇಲಾಖಾವಾರು ಸಭೆಗಳಲ್ಲಿ ನೀವು ಏನು ಹೇಳಿದ್ದೀರೊ ಗೊತ್ತಿಲ್ಲ’ ಎಂದಿದ್ದಾರೆ.

‘ಕನಿಷ್ಠ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭೆ ಮಾಡಿಲ್ಲ. ಪಟ್ಟಿ ಕೂಡಾ ಸಿದ್ಧ ಮಾಡಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಬಜೆಟ್ ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಹೀಗಾಗಿ, ಎರಡೂ ಪಕ್ಷಗಳಿಗೂ ಲಾಭ ತರುವ ರೀತಿಯಲ್ಲಿ ಇದ್ದರೆ ಉತ್ತಮ’ ಎಂದರು.

‘ಸಭೆಗಳಲ್ಲಿ ಮುಖ್ಯಮಂತ್ರಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಎಲ್ಲರನ್ನೂ ಕೇಳಿ ಕಾರ್ಯಕ್ರಮ ರೂಪಿಸಿದ್ದಾರೆ‌’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಸಚಿವ ಡಿ.ಕೆ ಶಿವಕುಮಾರ್‌ ಸಮರ್ಥನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT