ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಳ ದಿನ ಅನ್ಯಾಯ ಸಹಿಸಲು ಸಾಧ್ಯವಿಲ್ಲ: ಸಿದ್ಧರಾಮಯ್ಯ ಎಚ್ಚರಿಕೆ

Last Updated 20 ಮೇ 2020, 8:49 IST
ಅಕ್ಷರ ಗಾತ್ರ

ಬೆಂಗಳೂರು: 'ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಇವತ್ತಿನವರೆಗೂ ನಾವು ಬೆಂಬಲ ಕೊಟ್ಟಿದ್ದೇವೆ. ಬಹಳ ದಿನಗಳ ಕಾಲ ಆನ್ಯಾಯ ಸಹಿಸಲು ಸಾಧ್ಯವಿಲ್ಲ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಆನ್ಯಾಯವಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯಲಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬುಧವಾರ ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಹಾಗೂ ಗ್ರಾಮ ಪಂಚಾಯತಿಗಳಿಗೆ ಆಡಳಿತ ಸಮಿತಿ ರಚಿಸುವ ಸರ್ಕಾರದ ನಿರ್ಧಾರಗಳ ವಿರುದ್ಧ ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 'ಇಡೀ ದೇಶದ ಜನರಿಗೆ ಸುಳ್ಳು ಹೇಳಿ ಟೋಪಿ ಹಾಕುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ. ಅನೇಕ ಬಾರಿ ಸಲಹೆ ಸೂಚನೆಗಳನ್ನು ಕೊಟ್ಟಿದ್ದೇವೆ. ಎಲ್ಲಾ ವಿರೋಧ ಪಕ್ಷಗಳು ನಿಯೋಗ ಹೋಗಿ ಮನವಿ ಕೊಟ್ಟಿದ್ದೇವೆ. ಅದ್ಯಾವುದನ್ನು ಸರ್ಕಾರ ಪರಿಗಣಿಸಿಲ್ಲ' ಎಂದರು.

'ನಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಂದಿಸಿಲ್ಲ. ಕಾರ್ಮಿಕರು ಇಂದು ಬೀದಿ ಪಾಲಾಗಿದ್ದಾರೆ. ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳದ ಕಾರಣಗಳಿಂದ ಅವರೆಲ್ಲಾ ರಾಜ್ಯ ಬಿಡುತ್ತಿದ್ದಾರೆ. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸಲು ವಿಫಲವಾಗಿದೆ. ನಿನ್ನೆ ಒಂದೇ ದಿನ 149 ಜನಕ್ಕೆ ಸೋಂಕು ತಗುಲಿದೆ. ಇಷ್ಟುದಿನ ತಬ್ಲೀಘಿ ಸದಸ್ಯರಿಂದ ಕೊರೊನಾ ಸೋಂಕು ತಗುಲಿದೆ ಎನ್ನುತ್ತಿದ್ದರು. ಈಗ ಸರ್ಕಾರ ಏನು ಮಾಡುತ್ತಿದೆ. ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರೆಂಟೈನ್‌ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಇದು ಎರಡೂ ಸರ್ಕಾರಗಳ ವೈಫಲ್ಯ ಎಂದು ದೂರಿದರು.

'ರೈತರು, ಕಾರ್ಮಿಕರನ್ನು ಕಾಪಾಡುತ್ತೇವೆ ಎಂದಿದ್ದ ಯಡಿಯೂರಪ್ಪ ವಿಫಲರಾಗಿದ್ದಾರೆ. ನೇಕಾರರು, ಕುಂಬಾರರು, ಮಡಿವಾಳರಿಗೆ ಎಲ್ಲರಿಗೂ ಪರಿಹಾರ ಕೊಡಿ ಎಂದು ನಾವು ಹೇಳಿದ್ದೆವು. ಈ ಸರ್ಕಾರ ಏನು ಮಾಡಲಿಲ್ಲ. ಸಂಘಟಿತ ಕಾರ್ಮಿಕರು 22 ಲಕ್ಷ ಜನರಿದ್ದಾರೆ. ಅವರ ಕಷ್ಟ ಕೇಳುವವರು ಯಾರು? ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ಪ್ಯಾಕೇಜ್ ಬೋಗಸ್ ಪ್ಯಾಕೇಜ್.
ಚಿದಂಬರಂ ನಮ್ಮ ನಾಯಕರು ಬಹಳ ಚೆನ್ನಾಗಿ ಹೇಳಿದ್ದಾರೆ. 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ನಲ್ಲಿ ಜೆಡಿಪಿಯ ಶೇ.1 ರಷ್ಟು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಈ ಹಿಂದೆ ಹೇಳಿದ ಸುಳ್ಳುಗಳ ಮುಂದುವರಿದ ಭಾಗ ಇದೆ ಅಷ್ಟೇ. ರೈತರಿಗೆ ಆದಾಯ ದುಪ್ಪಟ್ಟು, ಕಪ್ಪು ಹಣ ತರುವುದು ಎಂಬ ಹಸಿ ಸುಳ್ಳಿನ ಜೊತೆಗೆ ಇದೊಂದು ಹೊಸ ಸುಳ್ಳು'ಎಂದು ಟೀಕಿಸಿದರು.

'ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. ಚಪ್ಪಾಳೆ ತಟ್ಟಿ, ಘಂಟೆ ಬಾರಿಸಿ, ದೀಪ ಹಚ್ಚಿ ಎನ್ನುತ್ತಾರೆ. ಇದರಿಂದ ಆರ್ಥಿಕತೆ ಸದೃಢವಾಗುತ್ತಾ?' ಎಂದು ಪ್ರಶ್ನಿಸಿದರು.

'ಎಪಿಎಂಸಿ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸಿ, ನಿಯಮಗಳನ್ನು ಕೇಂದ್ರ ಸರ್ಕಾರವೇ ಕಳುಹಿಸಿದೆ. ಅದನ್ನು ರಾಜ್ಯ ಸರ್ಕಾರ ಒಪ್ಪಬೇಕು. ಅಲ್ಲಿ ನರೇಂದ್ರ ಮೋದಿ ಹೇಳಿದರೆ, ಇಲ್ಲಿ ಯಡಿಯೂರಪ್ಪ ಸೆಲ್ಯೂಟ್ ಹೊಡಿಯಬೇಕು. ಇದು ಸಂವಿಧಾನಬಾಹಿರ' ಎಂದರು.

'ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅವಶ್ಯಕತೆ ಏನು ಇತ್ತು? ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಗ್ರಾಮ ಪಂಚಾಯತಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಬೇಕಿತ್ತು. ಅದರೆ, ಚುನಾವಣೆ ಮುಂದೂಡಿಕೆಗೆ ಪತ್ರ ಕೊಟ್ಟಿದ್ದಾರೆ. ಚುನಾವಣಾ ಅಯೋಗ ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸಬೇಕು. ಕೊರೊನಾದಿಂದ ಚುನಾವಣೆ ಮಾಡುವುದಿಲ್ಲ ಎನ್ನುವುದಾದ್ರೆ, ಈಗಿರುವ ಗ್ರಾಮ ಪಂಚಾಯತಿ ಸದಸ್ಯರನ್ನೇ ಮುಂದಿನ ಆರು ತಿಂಗಳು ಮುಂದುವರಿಸಬೇಕು' ಎಂದು ಒತ್ತಾಯಿಸಿದರು.

'ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದಾಗಲೂ ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿರುವುದರ ವಿರುದ್ಧ ನಮ್ಮ ಹೋರಾಟ'. 'ಲಾಕ್‌ಡೌನ್ ಆದೇಶದಲ್ಲಿ ಸಡಿಲಿಕೆ ಮಾಡಿ‌ ನಿರ್ಬಂಧಗಳನ್ನು ಸರಿಯಾಗಿ ನಿಭಾಯಿಸುವಲ್ಲಿ ಎಡವಿದ್ದಾರೆ. ಯಡಿಯೂರಪ್ಪರ ಸರ್ಕಾರ ಡೆಡ್ ಗವರ್ನಮೆಂಟ್ ಎಂದು ಮೂದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT