ಬುಧವಾರ, ಏಪ್ರಿಲ್ 8, 2020
19 °C
ಸಂತ್ರಸ್ತರಿಗೆ ಸೂರಿಲ್ಲ: ‘ಪ್ರಜಾವಾಣಿ’ ವರದಿ ಉಲ್ಲೇಖ

ಕೇಂದ್ರದಿಂದ ಅನ್ಯಾಯ: ಜನ ಬಡಿಗೆ ಹಿಡಿಯಲಿದ್ದಾರೆ ಎಂದ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ರಾಮರಾಜ್ಯ ನಿರ್ಮಾಣವಾಗಲಿದೆ ಎಂದು ಬಿಜೆಪಿಯವರು ಘಂಟಾಘೋಷವಾಗಿ ಸಾರಿದ್ದರು. ಕೇಂದ್ರ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ. ಇದು ರಾಮರಾಜ್ಯವೇ’ ಎಂದು ಕಟುವಾಗಿ ಪ್ರಶ್ನಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇದೇ ಪರಿಸ್ಥಿತಿ ಮುಂದುವರಿದರೆ ಜನರು ಬಡಿಗೆ ಹಿಡಿದುಕೊಂಡು ನಿಮಗೆ ಬಡಿಯಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಅನುದಾನ ಕಡಿತಕ್ಕೆ ಆಕ್ಷೇಪ’ ಹಾಗೂ ‘ಸಚಿವರೇ ದಮ್ಮಯ್ಯ ಇತ್ತ ನೋಡಿ’ ವರದಿಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರವಾಸ ಸಂತ್ರಸ್ತರಿಗೆ ಸೂರು ಕಲ್ಪಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದೂ ಹೇಳಿದರು.

‘‍ಪ್ರಕೃತಿ ವಿಕೋಪದಿಂದ ₹1 ಲಕ್ಷ ಕೋಟಿಗೂ ಹೆಚ್ಚು ಹಾನಿ ಸಂಭವಿಸಿದ್ದರೂ, ಕೇಂದ್ರ ಅಲ್ಪ ‍ಪರಿಹಾರ ನೀಡಿದೆ. ಇದು ರಾಜ್ಯ ಸರ್ಕಾರವನ್ನು ಅಣಕ ಮಾಡಲೆಂದೇ ಬಿಡುಗಡೆ ಮಾಡಿರುವ ಮೊತ್ತ. ನಿಮ್ಮ ವರ್ತನೆಯಿಂದ ರಾಜ್ಯಕ್ಕೆ ಘೋರ ಅನ್ಯಾಯವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಕೆಲವು ಸಚಿವರು ಜಿಲ್ಲಾ ಪ್ರವಾಸವನ್ನೇ ಮಾಡಿಲ್ಲ. ಪ್ರವಾಹಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ವಸತಿ ಸಚಿವರು ತಲಾ ನಾಲ್ಕು ಬಾರಿಯಷ್ಟೇ ಭೇಟಿ ನೀಡಿದ್ದಾರೆ. ಜನರು ಛೀಮಾರಿ ಹಾಕುತ್ತಾರೆ ಎಂಬ ಭಯದಿಂದ ಸಚಿವರು ಹೋಗಿಲ್ಲ. ಸಚಿವರಿಗೆ ಜನರ ಸಂಕಷ್ಟ ಆಲಿಸುವುದಕ್ಕಿಂತ ದಸರಾ ಆಚರಣೆಗೆ ಮುಖ್ಯ
ವಾಯಿತು’ ಎಂದು ಕಿಡಿಕಾರಿದರು.

ಕೇಂದ್ರದಿಂದ ಘೋರ ಅನ್ಯಾಯ: ಕೇಂದ್ರದಿಂದ ರಾಜ್ಯಕ್ಕೆ ಘೋರ ಅನ್ಯಾಯ ಹಾಗೂ ಅವಮಾನವಾಗಿದೆ ಎಂದ ಅವರು, ‘ಜಿಎಸ್‌ಟಿ ಸಂಬಂಧ ಹಣದಲ್ಲಿ ಡಿಸೆಂಬರ್‌ ಅಂತ್ಯಕ್ಕೆ ₹6,613 ಕೋಟಿ ಬಾಕಿ ಇದೆ. ಜನವರಿ ಹಾಗೂ ಫೆಬ್ರುವರಿಯ ಮೊತ್ತ ಸೇರಿದರೆ ₹13 ಸಾವಿರ ಕೋಟಿ ಆಗಲಿದೆ’ ಎಂದರು.

15ನೇ ಹಣಕಾಸು ಆಯೋಗದ ವರದಿ ಪ್ರಕಾರ ನಮ್ಮ ರಾಜ್ಯಕ್ಕೆ ಇನ್ನು ಮುಂದೆ ಪ್ರತಿವರ್ಷ ₹10 ಸಾವಿರ ಕೋಟಿಯಷ್ಟು ಅನುದಾನ ಕೊರತೆ ಬೀಳುತ್ತದೆ. ಐದು ವರ್ಷಗಳಲ್ಲಿ ಈ ಮೊತ್ತ ₹50 ಸಾವಿರ ಕೋಟಿ ಆಗಲಿದೆ. ಬಿಜೆಪಿಯ 25 ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಪ್ರಧಾನಿ ಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಲು ಪ್ರಯತ್ನವನ್ನೇ ಮಾಡಿಲ್ಲ. ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ’ ಎಂದು ಕಿಡಿಕಾರಿದರು.

‍ಪ್ರವಾಹ ಹಾಗೂ ಬರದಿಂದ ರಾಜ್ಯತತ್ತರಿಸಿ ಹೋಗಿದೆ. ಈಗ ಅನುದಾನ ಕಡಿತದ ಮೂಲಕ ಕೇಂದ್ರ ಸರ್ಕಾರ ನಾಡಿನ ಚಿತೆಗೆ ತುಪ್ಪ ಸುರಿದು ಬೆಂಕಿಹಚ್ಚುತ್ತಿದೆ. ಇದನ್ನು ನಾವು ಸಂಭ್ರಮಿಸಬೇಕೇ? ಎಂದೂ ಪ್ರಶ್ನಿಸಿದರು.

‘ಗುಜರಾತಿಗೇಕೆ ನಮ್ಮ ದುಡ್ಡು‘
‘ರಾಜ್ಯದ ಜನರು ₹1 ತೆರಿಗೆ ಕಟ್ಟಿದರೆ ಪಡೆಯುವುದು 40 ಪೈಸೆ ಮಾತ್ರ. ಉತ್ತರ ಪ್ರದೇಶದ ಜನರು ₹2.56 , ಬಿಹಾರದ ಜನರು ₹2.98 ಪಡೆಯುತ್ತಿದ್ದಾರೆ. ಗುಜರಾತ್‌ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ ಪ್ರಧಾನಿ ನಾಡಿಗೆ ₹235 ಹಂಚಿಕೆಯಾಗುತ್ತಿದೆ. ಬಿಹಾರ, ಉತ್ತರ ಪ್ರದೇಶ ರಾಜ್ಯಗಳು ಆರ್ಥಿಕವಾಗಿ ಹಿಂದುಳಿದಿವೆ. ಗುಜರಾತಿಗೇನಾಗಿದೆ? ಗುಜರಾತಿನ ಉದ್ಧಾರಕ್ಕೆ ಕರ್ನಾಟಕದ ಜನರೇಕೆ ದುಡ್ಡು ಕೊಡಬೇಕು’ ಎಂದು ಸಿದ್ದರಾಮಯ್ಯ ಕಟುವಾಗಿ ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು