ಸಿದ್ದರಾಮಯ್ಯ ಆಟ: ಕುಮಾರಗೆ ‘ಮೈತ್ರಿ’ ಸಂಕಟ

7

ಸಿದ್ದರಾಮಯ್ಯ ಆಟ: ಕುಮಾರಗೆ ‘ಮೈತ್ರಿ’ ಸಂಕಟ

Published:
Updated:

ಬೆಂಗಳೂರು: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ‘ಶಾಂತಿವನ’ದಲ್ಲಿ ಹೊಸೆಯುತ್ತಿರುವ ತಂತ್ರಗಾರಿಕೆ, ಉರುಳಿಸುತ್ತಿರುವ ದಾಳ, ಹಾಕುತ್ತಿರುವ ಹೊಸ ಪಟ್ಟುಗಳು ತಿಂಗಳ ಕೂಸಾಗಿರುವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ‘ಫಿಟ್ನೆಸ್‌’ ಸವಾಲನ್ನು ತಂದೊಡ್ಡಿದೆ.

ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲು ರಚಿಸಲಾಗಿರುವ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ, ತಿಂಗಳೊಪ್ಪತ್ತಿನಲ್ಲಿ ಅನೇಕ ಬಾರಿ ವಿರೋಧ ಪಕ್ಷದ ನಾಯಕರಂತೆ ಆಡಿದ್ದಿದೆ. ತಮ್ಮ ‘ಸಖ’ ಸಿದ್ದರಾಮಯ್ಯನವರ ಮುಂದಿನ ನಡೆಯೇನು ಎಂದು ದೋಸ್ತಿ ಸರ್ಕಾರದ ನೇತಾರ ಕುಮಾರಸ್ವಾಮಿ ಕುಂತಲ್ಲಿ, ನಿಂತಲ್ಲಿ ಚಿಂತಿಸಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಹೆಜ್ಜೆ ಹೆಜ್ಜೆಗೂ ಹೀಗೆ ವಾಗ್ಬಾಣ ಎಸೆದು, ಮೈತ್ರಿಯ ಸಮನ್ವಯಕ್ಕೆ ‘ಹುಳಿ’ ಹಿಂಡುವಂತೆ ಸಿದ್ದರಾಮಯ್ಯ ವರ್ತಿಸುತ್ತಿರುವುದರ ಹಿಂದೆ ಅನೇಕ ಕಾರಣಗಳಿವೆ ಎಂದು ಕಾಂಗ್ರೆಸ್‌ ನಾಯಕರೇ ಹೇಳುತ್ತಾರೆ.

ಹಾಗಂತ, ಹೈಕಮಾಂಡ್ ಅಥವಾ ರಾಹುಲ್ ಗಾಂಧಿ ಅವರನ್ನು ಎದುರು ಹಾಕಿಕೊಂಡು ಸರ್ಕಾರ ಉರುಳಿಸಿ, ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಇರಾದೆಯೂ ಸಿದ್ದರಾಮಯ್ಯಗೆ ಇದ್ದಂತ್ತಿಲ್ಲ. ಎಲ್ಲವೂ ತಮ್ಮ ಅಂಕೆಯಂತೆ ನಡೆಯಬೇಕು, ತಮ್ಮ ಒಪ್ಪಿಗೆ ಇಲ್ಲದೇ ಕುಮಾರಸ್ವಾಮಿ ಒಂದಿಂಚೂ ನಡೆಯಬಾರದು, ಕಾಂಗ್ರೆಸ್‌ನ ರಾಜ್ಯದ ಶಕ್ತಿ ಕೇಂದ್ರ ತನ್ನ ಕೈವಶದಲ್ಲಿ ಇರಬೇಕು ಎಂಬ ಹಂಬಲ, ಅಪೇಕ್ಷೆ ಅವರ ಪ್ರತಿ ಹೆಜ್ಜೆ, ಅವರು ಎಸೆಯುವ ಪ್ರತಿಶಬ್ದದ ಹಿಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ಸಿಟ್ಟಿಗೇನು ಕಾರಣ: ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ, ಪಕ್ಷ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿ ಎಂದು ಸ್ವತಃ ರಾಹುಲ್ ಗಾಂಧಿ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಹೇಳಿದ್ದುಂಟು. ಆದರೆ, ಯಾವಾಗ ಹಳೆ ಮೈಸೂರು ಭಾಗದಲ್ಲಿ ತಾವೂ ಸೋತು, ಪಕ್ಷವನ್ನೂ ಗೆಲ್ಲಿಸಿಕೊಳ್ಳಲಾಗದ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದರೋ ಆಗ ಹೈಕಮಾಂಡ್‌ ರಾಜ್ಯಕ್ಕೆ ದಾಂಗುಡಿ ಇಟ್ಟಿತು. ಸಿದ್ದರಾಮಯ್ಯ ಅನುಪಸ್ಥಿತಿಯಲ್ಲೇ ಮೈತ್ರಿ ಸರ್ಕಾರದ ರೂಪರೇಷೆ ಸಿದ್ಧವಾಗಿಬಿಟ್ಟಿತು. 78 ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದರೂ ಐದು ವರ್ಷ ತಮ್ಮನ್ನು ನಂಬಿಕೊಂಡ ಹೈಕಮಾಂಡೇ ಕಡೆಗಣಿಸಿದ್ದು ಸಿದ್ದರಾಮಯ್ಯನವರಲ್ಲಿ ಉರಿ ಎಬ್ಬಿಸಿತು.

ತಮ್ಮ ರಾಜಕೀಯ ವೈರಿ ಎಚ್.ಡಿ. ದೇವೇಗೌಡರು ಅಣತಿಯಂತೆ ಹೈಕಮಾಂಡ್‌ ನಡೆದುಕೊಂಡಿದ್ದು, ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರೇ ಎಲ್ಲವನ್ನೂ ಮುಂದೆ ನಿಂತು ಮಾಡಿದ್ದು ಸಿದ್ದರಾಮಯ್ಯ ಸಿಟ್ಟಿಗೆ ಮತ್ತಷ್ಟು ಕಸುವು ತಂದುಕೊಟ್ಟಿತು.

ಹೀಗಾಗಿಯೇ, ಸಚಿವಸಂಪುಟ ರಚನೆ ಹಾಗೂ ಅದಾದ ಬಳಿಕ ಎದ್ದ ಬಿರುಗಾಳಿ ಹೊತ್ತಿನಲ್ಲಿ ಐದು ದಿನ ದೂರದ ಬಾದಾಮಿಯಲ್ಲಿ ವಾಸ್ತವ್ಯ ಹೂಡಿದ ಸಿದ್ದರಾಮಯ್ಯ, ಇತ್ತ ತಲೆ ಹಾಕಲೇ ಇಲ್ಲ. ಅತೃಪ್ತರನ್ನು ಓಲೈಸುವ ‘ನಾಯಕತ್ವ’ ಗುಣವನ್ನು ತೋರಿಸಲಿಲ್ಲ. ಅದೇ ಹೊತ್ತಿನಲ್ಲಿ ಹೊಸ ಬಜೆಟ್ ಮಂಡನೆ ಏಕೆ ಎಂದು ಪ್ರಶ್ನೆಯನ್ನು ಹರಿಯಬಿಟ್ಟು, ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನವನ್ನೂ ಮಾಡಿದರು. ಇದು ಅಷ್ಟಕ್ಕೆ ನಿಲ್ಲಲಿಲ್ಲ.

ಶಕ್ತಿ ಕೇಂದ್ರ ಉಳಿಸಿಕೊಳ್ಳುವ ತವಕ: ಅವರ ಎಲ್ಲ ನಡೆಯ ಹಿಂದೆ ಶಕ್ತಿ ಕೇಂದ್ರ ಉಳಿಸಿಕೊಳ್ಳುವ ತವಕ ಎದ್ದು ಕಾಣುತ್ತಿದೆ. 2004-06 ರ ಅವಧಿಯಲ್ಲಿ ಧರ್ಮಸಿಂಗ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಪ್ರತಿನಿಧಿಯಾಗಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಗ ಇಂತಹದೇ ಸನ್ನಿವೇಶ ಎದುರಿಸಿದ್ದರು.

ತಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಕೆಲಸ ಮಾಡಿಕೊಡುತ್ತಿಲ್ಲ ಎಂದು ಸಿಟ್ಟಾಗಿದ್ದ ಜೆಡಿಎಸ್‌ ಶಾಸಕರು ಆಗಿನ್ನೂ ಮೊದಲ ಬಾರಿಗೆ ಶಾಸಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಸುತ್ತ ಅಣಿ ನೆರೆದಿದ್ದರು. ಅವರ ಮೂಲಕ ಎಲ್ಲ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದರು. ಒಂದು ದಿನ ಕುಮಾರಸ್ವಾಮಿ ನೇತೃತ್ವದಲ್ಲಿ ಒಟ್ಟಾದ 40ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಿದರು. ಈ ಸಭೆಯ ಮಾಹಿತಿ ಸಿದ್ದರಾಮಯ್ಯಗೆ ಬಂದಿತ್ತಾದರೂ ತಮ್ಮನ್ನು ಬಿಟ್ಟು ಅವರು ಏನು ಮಾಡುತ್ತಾರೆ ಎಂದು ಉದಾಸೀನ ಮಾಡಿದರು. ನೋಡುನೋಡುತ್ತಿದ್ದಂತೆ ಮತ್ತೊಂದು ಶಕ್ತಿ ಕೇಂದ್ರ ಸೃಷ್ಟಿಯಾಗಿಬಿಟ್ಟಿತ್ತು. ಅಚಾನಕ್ ಬೆಳವಣಿಗೆಯಲ್ಲಿ ಜೆಡಿಎಸ್‌ ನಾಯಕನಾಗಿ ಹೊರಹೊಮ್ಮಿದ ಕುಮಾರಸ್ವಾಮಿ, ಕಾಂಗ್ರೆಸ್ ಮೈತ್ರಿ ತೊರೆದು ಬಿಜೆಪಿ ಜತೆ ಸಖ್ಯ ಬೆಳೆಸಿ ಮುಖ್ಯಮಂತ್ರಿಯೂ ಆದರು.

ಈ ತಪ್ಪಿನ ಪಾಠವನ್ನು ಸಿದ್ದರಾಮಯ್ಯ ಈಗ ಕಲಿತಿದ್ದಾರೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್‌ ಪಕ್ಷದಿಂದ ಸಚಿವ ಸ್ಥಾನ ಸಿಕ್ಕಿದವರು, ಸಿಗದವರು ಮುಖ್ಯಮಂತ್ರಿ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ. ಅದರಲ್ಲೂ ತಮ್ಮದೇ ಪ್ರಭಾವ ಇರುವ ಡಿ.ಕೆ.ಶಿವಕುಮಾರ್, ಸತೀಶ ಜಾರಕಿಹೊಳಿ ಅವರು ಕುಮಾರಸ್ವಾಮಿ ಜತೆಗೇ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಮುಂದುವರಿದರೆ ಕುಮಾರಸ್ವಾಮಿಯವರೇ ಕಾಂಗ್ರೆಸ್‌ನವರಿಗೂ ನಾಯಕರಾಗುವ ಸಾಧ್ಯತೆ ಇದೆ. ಇದು ಮುಂದುವರಿದರೆ ತಾವು ಬದಿಗೆ ಸರಿಯಬೇಕಾಗುತ್ತದೆ, ನಾಯಕತ್ವ ಕೈತಪ್ಪಿ ಹೋಗುತ್ತದೆ ಎಂಬ ಅನುಮಾನ ಸಿದ್ದರಾಮಯ್ಯಗೆ ಹುಟ್ಟಿದೆ.

ಇನ್ನು ಕಾಂಗ್ರೆಸ್‌ನಲ್ಲಿ ತಾವೇ ಸುಪ್ರೀಂ ಆಗಬೇಕು ಎಂಬ ಹಂಬಲವೂ ಅವರಲ್ಲಿದೆ. ಆದರೆ, ಪಕ್ಷ ಪ್ರತಿನಿಧಿಸುವ ಜಿ.ಪರಮೇಶ್ವರ ಉಪಮುಖ್ಯಮಂತ್ರಿಯಾಗಿದ್ದಾರೆ. ತಾವು ಧ್ವನಿಯೆತ್ತದೇ ಹೋದರೆ ಶಾಸಕರು ತಮ್ಮತ್ತ ಸುಳಿಯದೇ, ಪರಮೇಶ್ವರ ಬಳಿ ಹೋಗತೊಡಗಿದರೆ ಕಾಂಗ್ರೆಸ್‌ನಲ್ಲಿ ಮತ್ತೊಂದು ಶಕ್ತಿ ಕೇಂದ್ರ ಸೃಷ್ಟಿಯಾಗಲಿದೆ. ಆಗ ಸಮನ್ವಯ ಸಮಿತಿಯ ಅಧ್ಯಕ್ಷನಾದರೂ ಏನೂ ಮಾಡಿಸಲಾಗದ ಸ್ಥಿತಿಗೆ ತಲುಪಿಬಿಡಬೇಕಾಗುತ್ತದೆ ಎಂಬ ಆತಂಕವೂ ಅವರಲ್ಲಿ ಉಂಟಾಗಿದೆ.

ಈ ಎರಡು ಕಾರಣಗಳಿಗಾಗಿ ಬಜೆಟ್ ಹಾಗೂ ಸರ್ಕಾರದ ಭವಿಷ್ಯದ ಕುರಿತು ಸಿದ್ದರಾಮಯ್ಯ ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ.
ಹೊಸ ಬಜೆಟ್ ಮಂಡಿಸಲು ರಾಹುಲ್ ಗಾಂಧಿಯೇ ಅಸ್ತು ನೀಡಿದ್ದಾರೆ. ಅಲ್ಲದೇ ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಹಾಗಿದ್ದರೂ ಸಮನ್ವಯ ಸಮಿತಿ ಸಭೆಯಲ್ಲಿ ಒಪ್ಪಿಗೆ ಪಡೆಯದೇ ಕುಮಾರಸ್ವಾಮಿ ಬಜೆಟ್ ಮಂಡಿಸುವುದಾಗಿ ಹೇಳಿರುವುದು ಸಿದ್ದರಾಮಯ್ಯ ತಕರಾರಿಗೆ ಪ್ರಮುಖ ಕಾರಣ. ತಮ್ಮನ್ನು ಬಿಟ್ಟು ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ; 78 ಶಾಸಕರ ನಾಯಕನಾಗಿರುವ ತಮ್ಮನ್ನು ಲೆಕ್ಕಿಸದೇ ಇದ್ದರೆ ಸುಮ್ಮನೆ ಕೂರುವ ಜಾಯಮಾನ ತಮ್ಮದಲ್ಲ ಎಂಬ ಸಂದೇಶ ರವಾನಿಸುವುದು ಇದರ ಹಿಂದಿನ ಉದ್ದೇಶ ಎಂದು ಕಾಂಗ್ರೆಸ್‌ ನಾಯಕರೇ ಹೇಳುತ್ತಿದ್ದಾರೆ.

ಇದೆಲ್ಲದರ ಜತೆಗೆ, ಆಯಕಟ್ಟಿನ ನಿಗಮ ಮಂಡಳಿಗಳಿಗೆ ನೇಮಕ ಮಾಡುವಾಗ ತಮ್ಮ ಆಪ್ತರಿಗೆ ಉತ್ತಮ ಮಂಡಳಿ ಕೊಡಿಸುವುದು, ಮಂತ್ರಿ ಮಂಡಲ ವಿಸ್ತರಣೆ ಮಾಡುವಾಗ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕಲ್ಪಿಸುವುದು ಈ ಒತ್ತಡದ ಭಾಗವಾಗಿದೆ. ಪ್ರಮುಖ ನೀತಿಗಳನ್ನು ಅನುಷ್ಠಾನ ಮಾಡುವಾಗ ಸಮನ್ವಯ ಸಮಿತಿಯಷ್ಟೇ, ತಮ್ಮನ್ನೂ ಪರಿಗಣಿಸಬೇಕು ಎಂಬ ಎಚ್ಚರಿಕೆ ನೀಡುವುದು ಈ ಮಾತುಗಳ ಹಿಂದಿರುವುದು ಸ್ಪಷ್ಟ.

ಪ್ರಣಾಳಿಕೆ, ಬಜೆಟ್‌ ಮುಂದುವರಿಕೆ: ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ ಹತ್ತಾರು ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನು ಅನುಷ್ಠಾನ ಮಾಡುವ ವಾಗ್ದಾನ ಮಾಡಿಸಬೇಕು ಎಂಬುದು ಸಿದ್ದರಾಮಯ್ಯನವರ ಹಟ.

₹52,000 ಕೋಟಿ ಮೊತ್ತದ ರೈತರ ಸಾಲಮನ್ನಾ ಮಾಡಬೇಕಾದರೆ  ಉಚಿತವಲ್ಲದ, ತತ್‌ ಕ್ಷಣದ ತುರ್ತು ಇಲ್ಲದ ಅನೇಕ ಕಾರ್ಯಕ್ರಮಗಳನ್ನು ಕೈಬಿಡುವ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಇದ್ದಾರೆ. ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿರುವ ಪ್ರಮುಖವಲ್ಲದ ಕಾರ್ಯಕ್ರಮಗಳನ್ನು ಮೊದಲ ವರ್ಷ ಅನುಷ್ಠಾನ ಮಾಡದೇ ಇರಲು ಮುಖ್ಯಮಂತ್ರಿ ತಯಾರಿ ನಡೆಸಿದ್ದಾರೆ.

37 ಶಾಸಕರ ಬಲ ಇರುವ ಜೆಡಿಎಸ್‌ ಬೇಕಾದರೆ ತಮ್ಮ ಪ್ರಣಾಳಿಕೆಯ ಭರವಸೆಗಳನ್ನು ಕೈಬಿಡಲಿ. ಆದರೆ ಶೇ 38ರಷ್ಟು ಮತಗಳನ್ನು ಪಡೆದು, 78 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಪ್ರಣಾಳಿಕೆಯ ಭರವಸೆಗಳನ್ನು ಅನುಷ್ಠಾನ ಮಾಡುವುದು ಅನಿವಾರ್ಯ. ಜತೆಗೆ ತಾವು ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಒತ್ತಡ ಹೇರುವುದು ಈ ನಡಾವಳಿಯ ಹಿಂದಿನ ಜರೂರತ್ತು.

ಈ ಕಾರಣಕ್ಕಾಗಿಯೇ, ಶಾಸಕರನ್ನು ಕರೆಸಿಕೊಂಡು ಚರ್ಚಿಸುವ, ಅಲ್ಲಿನ ಚರ್ಚೆಯನ್ನು ಮಾಧ್ಯಮಗಳಿಗೆ ತಲುಪುವಂತೆ ಮಾಡಲು ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದಾರೆ. ಈ ಚರ್ಚೆಯಿಂದಾಗುವ ಲಾಭವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಲೆಕ್ಕಾಚಾರವೂ ಇದರ ಹಿಂದೆ ಇದೆ.

ಕಾಂಗ್ರೆಸ್‌ ಭಾವನೆಯ ಪ್ರತಿಬಿಂಬ

ಕುಮಾರಸ್ವಾಮಿ ಅವರಿಗೆ ಪೂರ್ಣಾಧಿಕಾರ ನೀಡಿ, ಅವರ ಮೂಗಿನ ನೇರಕ್ಕೆ ಸರ್ಕಾರ ನಡೆಯಗೊಟ್ಟರೆ ಜೆಡಿಎಸ್‌ ಜನಪ್ರಿಯತೆ ಹೆಚ್ಚಲಿದೆ. ಹೀಗಾದಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ನೆಲಕಚ್ಚಲಿದೆ. ಇದನ್ನು ತಪ್ಪಿಸಬೇಕಾದರೆ ಸರ್ಕಾರದ ನಡೆಗೆ ಲಗಾಮು ಹಾಕುವುದು ಅಗತ್ಯ. ದೇವೇಗೌಡರ ಪಟ್ಟು ಗೊತ್ತಿರುವ ಸಿದ್ದರಾಮಯ್ಯ ಮಾತ್ರ ಇದಕ್ಕೆ ಸಮರ್ಥರು ಎಂಬ ಭಾವನೆ ಅನೇಕ ಕಾಂಗ್ರೆಸ್ ನಾಯಕರದ್ದಾಗಿದೆ.

ಸಿದ್ದರಾಮಯ್ಯ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರಾದರೂ ಅಂತರಂಗದಲ್ಲಿ ಬಹುತೇಕರು ಇದೇ ಭಾವನೆ ಹೊಂದಿದ್ದಾರೆ. ಮೂಗುದಾರ ಕಾಂಗ್ರೆಸ್ ಕೈಯಲ್ಲಿ ಇಲ್ಲದಿದ್ದರೆ, ಜೆಡಿಎಸ್‌ ಪ್ರಾಬಲ್ಯ ಇರುವ ಹಳೆ ಮೈಸೂರು ಭಾಗದಲ್ಲಿ ಲೋಕಸಭೆ ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉಳಿಯುವುದು ಕಷ್ಟವಾಗಲಿದೆ. ಪಕ್ಷದ ಅಸ್ತಿತ್ವದ ಪ್ರಶ್ನೆಯನ್ನೂ ಸಿದ್ದರಾಮಯ್ಯ ಎತ್ತುವ ಮೂಲಕ ತಮ್ಮ ವಾದಕ್ಕೆ ಬೆಂಬಲ ಕ್ರೋಡೀಕರಿಸಲು ಮುಂದಾಗುತ್ತಿರುವುದು ಹೊಸ ಬೆಳವಣಿಗೆ.

ಬರಹ ಇಷ್ಟವಾಯಿತೆ?

 • 49

  Happy
 • 5

  Amused
 • 2

  Sad
 • 2

  Frustrated
 • 1

  Angry

Comments:

0 comments

Write the first review for this !