ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹಂತಕರ ಹಿಟ್‌ ಲಿಸ್ಟ್‌ನಲ್ಲಿ ’ದಿ ವೈರ್’ ಸಂಪಾದಕ ಸಿದ್ಧಾರ್ಥ ವರದರಾಜನ್‌

ಆರೋಪಿಗಳಿಗೆ ಸನಾತನ ಸಂಸ್ಥೆಯ ನಂಟು: ಚಾರ್ಜ್‌ ಶೀಟ್ ಸಲ್ಲಿಸಿದ ಎಸ್‌ಐಟಿ
Last Updated 23 ನವೆಂಬರ್ 2018, 17:00 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯ ಕೆಲವು ಆರೋಪಿಗಳಿಗೆ ಸನಾತನ ಸಂಸ್ಥೆಯ ನಂಟಿದೆ ಎಂದು ಎಸ್‌ಐಟಿ ಸಲ್ಲಿಸಿರುವ ಆರೋಪ ಪಟ್ಟಿ ಹೇಳಿದೆ. ಸಂಚುಕೋರರ ಮತ್ತೊಂದು ಹಿಟ್‌ ಲಿಸ್ಟ್‌ನಲ್ಲಿ ‘ದಿ ವೈರ್’ ಸಂಪಾದಕ ಸಿದ್ಧಾರ್ಥ ವರದರಾಜನ್, ಪತ್ರಕರ್ತೆ ಅಂತರಾ ದೇವ್‌ಸೇನ್, ಜೆಎನ್‌ಯುನ ಪ್ರೊ.ಚಮನ್‌ಲಾಲ್, ಪಂಜಾಬ್ ನಾಟಕಕಾರ ಆತ್ಮಜೀತ್ ಸಿಂಗ್... ಹೀಗೆ ವಿವಿಧ ರಾಜ್ಯಗಳ 26 ಮಂದಿಯ ಹೆಸರುಗಳಿದ್ದವು’ ಎಂಬ ಅಂಶವೂ ಬಯಲಾಗಿದೆ.

ಎಸ್‌ಐಟಿ ಪೊಲೀಸರು ಶುಕ್ರವಾರ ಸಂಜೆ, 9235 ಪುಟಗಳ ಆರೋಪ ಪಟ್ಟಿಯನ್ನು ವಿಶೇಷ ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಿದರು. ‘ಈ ಕೃತ್ಯದಲ್ಲಿ ಸನಾತನ ಸಂಸ್ಥೆ ನೇರವಾಗಿ ಭಾಗಿಯಾಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಬಂಧಿಸಲಾಗಿರುವ ಆರೋಪಿಗಳ ಪೈಕಿ ಕೆಲವರು ಆ ಸಂಸ್ಥೆಯ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ’ ಎಂದು ಅದರಲ್ಲಿ ಹೇಳಲಾಗಿದೆ.

‘ನಾವೆಲ್ಲ ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದೆವು. 2023ರ ವೇಳೆಗೆ ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಆಶಯವಿತ್ತು. ಅದಕ್ಕೆ ಅಡ್ಡಿಯಾಗಿದ್ದ ಎಲ್ಲರನ್ನೂ ಮುಗಿಸುವ ಪಣ ತೊಟ್ಟಿದ್ದೆವು’ ಎಂಬ ಆರೋಪಿಗಳ ಹೇಳಿಕೆ ಚಾರ್ಜ್‌ಶೀಟ್‌ನಲ್ಲಿದೆ.

ಮೂರು ವರ್ಗ ಮಾಡಿದ್ದರು: ‘ಈ ಜಾಲವು ಹಿಂದೂ ಧರ್ಮದ ವಿರೋಧಿಗಳು ಯಾರು ಎಂಬುದನ್ನು ಮೂರು ರೀತಿಯಲ್ಲಿ ವರ್ಗೀಕರಿಸಿಕೊಂಡಿತ್ತು. 1) ಹಿಂದೂಗಳಾಗಿದ್ದುಕೊಂಡು ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡುವವರು. 2) ಹಿಂದೂ ಧರ್ಮವನ್ನು ವಿರೋಧಿಸುವ ಅನ್ಯ ಧರ್ಮೀಯರು. 3) ನಾಸ್ತಿಕರು. ಈ ಅಂಶ ಅಮೋಲ್ ಕಾಳೆ ಬಳಿ ಸಿಕ್ಕ ಪುಸ್ತಕದಲ್ಲಿದ್ದು, ಎಲ್ಲ ಆರೋಪಿಗಳಿಗೂ ಆ ತತ್ವ ಬಾಯಿಪಾಠವಾಗಿತ್ತು’ ಎಂಬ ಮಾಹಿತಿ ಆರೋಪಪಟ್ಟಿಯಲ್ಲಿ ಇರುವುದಾಗಿ ಮೂಲಗಳು ತಿಳಿಸಿವೆ.

‘ಗೌರಿ ಲಂಕೇಶ್, ಪ್ರೊ.ಕೆ.ಎಸ್.ಭಗವಾನ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಪಾಟೀಲ, ನಿಡುಮಾಮಿಡಿ ಸ್ವಾಮೀಜಿ, ಬಂಜಗೆರೆ ಜಯಪ್ರಕಾಶ್, ಬಿ.ಟಿ.ಲಲಿತಾ ನಾಯಕ್, ಸಿ.ಎಸ್.ದ್ವಾರಕನಾಥ್ ಅವರ ಹೆಸರುಗಳನ್ನು ಆ ಮೊದಲ ವರ್ಗದಲ್ಲಿ ಸೇರಿಸಿಕೊಂಡಿದ್ದ ಜಾಲ, ಕಡಿಮೆ ಅವಧಿಯಲ್ಲಿ ಈ ಎಲ್ಲರನ್ನೂ ಗುಂಡಿಟ್ಟೇ ಕೊಲ್ಲಬೇಕು ಎಂದೂ ನಿರ್ಧರಿಸಿತ್ತು.’

‘ಹಿಂದೂ ಧರ್ಮಕ್ಕೆ ಅಪ್ಪ–ಅಮ್ಮ ಇಲ್ಲ. ಅದು ಧರ್ಮವೇ ಅಲ್ಲ....’ ಎಂದು ಭಾಷಣ ಮಾಡುವ ಮೂಲಕ ಗೌರಿ ಲಂಕೇಶ್ ಈ ಜಾಲದ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ, ಅವರನ್ನೇ ಮೊದಲು ಮುಗಿಸಬೇಕೆಂಬ ನಿರ್ಧಾರಕ್ಕೆ ಹಂತಕರು ಬಂದಿದ್ದರು. ಒಂದು ವರ್ಷ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು, 2017ರ ಸೆ.5ರಂದು ರಾಜರಾಜೇಶ್ವರಿನಗರದ ಗೌರಿ ಮನೆಯ ಕಾಂಪೌಂಡ್‌ನಲ್ಲೇ ಅವರನ್ನು ಗುಂಡಿಕ್ಕಿ ಕೊಂದಿದ್ದರು.

ಕೊಲೆ (ಐಪಿಸಿ 302), ಅಪರಾಧ ಸಂಚು (120ಬಿ), ಶಸ್ತ್ರಾಸ್ತ್ರ ಕಾಯ್ದೆ ಅಡಿ ತನಿಖೆ ಪ್ರಾರಂಭಿಸಿದ ಎಸ್‌ಐಟಿ, ಜಾಲದ ವಿರುದ್ಧ ಇತ್ತೀಚೆಗೆ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಸ್ತ್ರವನ್ನೂ ಪ್ರಯೋಗಿಸಿತು.

ಜಾಲ ಹಬ್ಬಿದ್ದು: ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಶಿಕಾರಿಪುರ, ಮಡಿಕೇರಿ, ದಕ್ಷಿಣ ಕನ್ನಡ, ಮಂಡ್ಯ, ತುಮಕೂರು.

ಹೆಸರಿಲ್ಲದ ಗುಂಪು:ಮೊದಲು ಸನಾತನ ಸಂಸ್ಥೆಯಲ್ಲಿದ್ದ ಕೆಲವರು, 2002ರ ನಂತರ ಹಿಂದೂ ಜನ ಜಾಗೃತಿ ಸಮಿತಿ ಸೇರಿದ್ದರು. ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ಕೊಲ್ಲುವುದಕ್ಕಾಗಿಯೇ 2011ರಲ್ಲಿ ಆ ಸಮಿತಿಯಿಂದಲೂ ಆಚೆ ಬಂದು, ಈ ಜಾಲವನ್ನು ಕಟ್ಟಲಾಗಿತ್ತು. ಇದೊಂದು ಹೆಸರಿಲ್ಲದ ಗುಂಪು. ಕಾಳೆ ಹಾಗೂ ದೆಗ್ವೇಕರ್ ಒಪ್ಪಿಕೊಂಡಿದ್ದಾರೆ.

***
2017, ಸೆ.5: ಗೌರಿ ಹತ್ಯೆ ನಡೆದಿದ್ದು

2017, ಸೆ.6:ಎಸ್‌ಐಟಿಗೆ ವರ್ಗವಾಗಿದ್ದು

ಬಂಧಿತರ ಸಂಖ್ಯೆ:17 ಆರೋಪಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT