ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಲಭ್ಯವಾಗದ ಕಂಪನಿ ಮಾಲೀಕ: ಮನ್ಸೂರ್‌ ಪತ್ತೆಗೆ ರೆಡ್‌ ಕಾರ್ನರ್‌ ನೋಟಿಸ್‌

Last Updated 18 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ತಲೆಮರೆಸಿಕೊಂಡಿರುವ ‘ಐಎಂಎ ಸಮೂಹ ಕಂಪನಿ’ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್ ಪತ್ತೆಗೆ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ರ ಬರೆದಿದೆ.

‘ಮನ್ಸೂರ್‌ ಎಲ್ಲಿದ್ದಾನೆ ಎಂಬ ಬಗ್ಗೆ ಈವರೆಗೂ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವಂತೆ ಮನವಿ ಮಾಡಲಾಗಿದೆ’ ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಆರ್‌. ರವಿಕಾಂತೇಗೌಡ ತಿಳಿಸಿದರು.

ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, ‘ಬೇಕಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಬಂಧಿಸಲು’ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುತ್ತದೆ. ಇಂಟರ್‌ಪೋಲ್‌ ವಾರೆಂಟ್‌ ಜಾರಿಗಳ ಸಂಬಂಧ ಭಾರತದ ಮಟ್ಟಿಗೆ ಸಿಬಿಐ ತನಿಖಾ ಸಂಸ್ಥೆ ನೋಡಲ್‌ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಆರೋಪಿಗಳ ಹಸ್ತಾಂತರ ಇಲ್ಲವೇ ಅಂಥ ಕ್ರಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನೋಟಿಸ್‌ ಜಾರಿ ಮಾಡಲಾಗುತ್ತದೆ.

‘ತನಿಖೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿಲ್ಲ. ಆದರೆ, ಆ ನಿಟ್ಟಿನಲ್ಲಿ ಈಗಾಗಲೇ ಮಹತ್ವದ ಪ್ರಗತಿ ಸಾಧಿಸಿದ್ದೇವೆ. ಆದಷ್ಟು ಬೇಕು ತನಿಖೆ ಪೂರ್ಣಗೊಳಿಸುತ್ತೇವೆ’ ಎಂದಷ್ಟೆ ರವಿಕಾಂತೇಗೌಡ ಹೇಳಿದರು. ‘ಹೈಕೋರ್ಟ್‌ ನೀಡಿದ ಆದೇಶದಂತೆ ತನಿಖೆ ಪ್ರಗತಿಯ ಬಗ್ಗೆ ಇದೇ 28ರಂದು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಸಲ್ಲಿಸಲಿದ್ದೇವೆ’ ಎಂದರು.

‘ಆರೋಪಿ ಮನ್ಸೂರ್‌ ವಿರುದ್ಧ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದುವರೆಗಿನ ತನಿಖೆಯಿಂದ ಸಿಕ್ಕ ದಾಖಲೆಗಳನ್ನು ಆಧರಿಸಿ ಆರೋಪಿ ವಿರುದ್ಧ ಪ್ರತ್ಯೇಕವಾಗಿ ಐಪಿಸಿ 120ಬಿ (ಅಪರಾಧಿಕ ಸಂಚು) ಹಾಗೂ 409 (ನಂಬಿಕೆ ದ್ರೋಹ) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಆರೋಪ ಸಾಬೀತಾದರೆ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ’ ಎಂದರು.

‘ಮನ್ಸೂರ್‌ಗೆ ಸಂಬಂಧಿಸಿದ ಆಸ್ತಿ ಜಪ್ತಿ ವೇಳೆ ಎಚ್ಚರಿಕೆ ವಹಿಸಿದ್ದೇವೆ. ಶೋಧ ಕಾರ್ಯಾಚರಣೆಯ ಪ್ರತಿ ಹಂತವನ್ನೂ ವಿಡಿಯೊ ಮಾಡಿದ್ದೇವೆ. ಚರಾಸ್ತಿಗಳ ಜಪ್ತಿ ವೇಳೆ ಸ್ಥಳದಲ್ಲೇ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲದೆ, ನಮ್ಮ ಕ್ಯಾಮೆರಾಗಳಿಂದಲೂ ಚಿತ್ರೀಕರಿಸಿದ್ದೇವೆ. ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಇಬ್ಬರು ತಹಶೀಲ್ದಾರ್‌ಗಳು ಸ್ಥಳದಲ್ಲಿದ್ದರು’ ಎಂದರು.

‘ನಿರ್ಲಕ್ಷ್ಯ ವಹಿಸಿದ್ದ ಐ.ಟಿ, ಇ.ಡಿ’

ಐಎಂಎ ಸಮೂಹ ಸಂಸ್ಥೆ ಆರಂಭಿಸಿ ಮನ್ಸೂರ್‌ ಖಾನ್‌ ಭಾರಿ ಮೊತ್ತದ ವಂಚನೆ ನಡೆಸಲು ಪರವಾನಗಿ ನೀಡಿದ ಏಜೆನ್ಸಿಗಳ ನಿರ್ಲಕ್ಷ್ಯವೂ ಮುಖ್ಯ ಕಾರಣ ಎನ್ನಲಾಗಿದೆ.

‘ಪರವಾನಗಿ ನೀಡಿದ ಇಲಾಖೆಗೆ ಪ್ರತಿ ವರ್ಷ ಆರ್ಥಿಕ ವ್ಯವಹಾರದ ಲೆಕ್ಕಪತ್ರವನ್ನು ನೋದಾಯಿತ ಸಂಸ್ಥೆ ಸಲ್ಲಿಸಬೇಕು. ಆದರೆ, ಐಎಂಎ ಸ್ಥಾಪನೆಯಾದ ದಿನದಿಂದ ಈವರೆಗೆ ಲೆಕ್ಕಪತ್ರವನ್ನೇ ಸಲ್ಲಿಸಿಲ್ಲ. ಆದರೂ ಅದರ ನೋಂದಣಿ ನವೀಕರಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ನೋಂದಣಿ ಇಲಾಖೆಗಳು ಎಚ್ಚರ ವಹಿಸುತ್ತಿದ್ದರೆ ಈ ರೀತಿಯ ವಂಚನೆಯನ್ನು ತಡೆಯಬಹುದಿತ್ತು. ಆದರೆ, ಲೆಕ್ಕಪತ್ರ ಪರಿಶೀಲಿಸುವ ಕೆಲಸ ಯಾಕೆ ನಡೆದಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ’ ಎಂದೂ ಮೂಲಗಳು ಹೇಳಿವೆ.

‘ಕಂಪನಿಯ ಪರವಾನಗಿ ನವೀಕರಣಕ್ಕೆ ಕೋರಿಕೆ ಸಲ್ಲಿಸುವ ವೇಳೆ ಹೂಡಿಕೆಯಾದ ಹಣ, ಲಾಭಾಂಶ ಹಂಚಿಕೆ, ಅದರ ಮೂಲ ಎಲ್ಲವನ್ನೂ ಬಹಿರಂಗಪಡಿಸಬೇಕು. ಈ ಬಗ್ಗೆ ಸಂಬಂಧಿಸಿದ ಏಜೆನ್ಸಿಗಳೂ ನಿಗಾ ವಹಿಸಬೇಕು. ಅದಕ್ಕೆಂದೇ ಸಂಸ್ಥೆಗಳ ಬಳಿ ಮಾರುಕಟ್ಟೆ ಗುಪ್ತ ಮಾಹಿತಿ ಪಡೆಯುವ ವ್ಯವಸ್ಥೆ ಇದೆ. ಲೋಪಗಳು ಕಂಡುಬಂದರೆ ಸಂಸ್ಥೆಯ ಮಾಲೀಕರ ಗಮನಕ್ಕೆ ತರಬೇಕು. ಸಂದೇಹ ಬಂದರೆ ಪೊಲೀಸರಿಗೆ ದೂರು ನೀಡಬೇಕು. ಆರ್‌ಬಿಐಗೂ ಮಾಹಿತಿ ನೀಡಬೇಕು. ಬಳಿಕ ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಬೇಕು. ಅಂತಹ ಸಂಸ್ಥೆಯ ವ್ಯವಹಾರಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಜನರಿಗೆ ತಿಳಿಹೇಳಬೇಕು. ಆದರೆ, ಐಎಂಎ ವಿಚಾರದಲ್ಲಿ ಇದು ಯಾವುದೂ ಪಾಲನೆ ಆಗಿಲ್ಲ’.

ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಆದಾಯ ತೆರಿಗೆ (ಐ.ಟಿ) ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ) ಏಜೆನ್ಸಿಗಳಿಗೂ ಹೊಣೆಗಾರಿಕೆ ಇದೆ. ಹಣ ಲೇವಾದೇವಿ ಪ್ರಕರಣದಲ್ಲಿ ಇ.ಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಅನುಮಾನಾಸ್ಪದವಾಗಿ ಹಣದ ವ್ಯವಹಾರ ನಡೆದಾಗ ಈ ಏಜೆನ್ಸಿಗಳು ಎಚ್ಚೆತ್ತುಕೊಳ್ಳಬೇಕು. ಈ ಹಂತಗಳಲ್ಲಿ ಪೊಲೀಸರಿಗೆ ಮಧ್ಯಪ್ರವೇಶಿಸಲು ಅವಕಾಶ ಇಲ್ಲ. ವಂಚನೆ ಸಂಬಂಧ ದೂರು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಬಳಿಕವಷ್ಟೆ ಪ್ರಕರಣ ಬಯಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಮರೆಯಲ್ಲಿರುವವರಿಗೂ ಬಲೆ

‘ಈ ವಂಚನೆ ಪ್ರಕರಣ ಪೂರ್ವಯೋಜಿತ ಎನ್ನುವುದಕ್ಕಿಂತಲೂ ವಂಚನೆ ಮಾಡುವುದೇ ಮನ್ಸೂರ್‌ ಉದ್ದೇಶವಾಗಿತ್ತು ಎನ್ನುವುದು ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಆತನ ಜೊತೆ ಮತ್ತಷ್ಟು ಮಂದಿ ವಂಚನೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ವಂಚನೆಯ ಜಾಲದ ಹಿಂದೆ ಯಾರ‍್ಯಾರು ಇದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದೂ ಎಸ್‌ಐಟಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT