ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಮಾನಿಯಲ್ಲಿ ನಿರಾಸೆ, ಮಡಿಕೇರಿಯಲ್ಲಿ ವಿಸ್ಮಯ

‘ಮಂಜಿನ ನಗರಿ’ಯಲ್ಲಿ ಕಾಣಿಸಿದ ‘ಕಂಕಣ ಸೂರ್ಯಗ್ರಹಣ’, ಕುಟ್ಟದಲ್ಲಿ ಮೋಡ– ಮಂಜಿನದ್ದೇ ಆಟ
Last Updated 27 ಡಿಸೆಂಬರ್ 2019, 10:25 IST
ಅಕ್ಷರ ಗಾತ್ರ

ಮಡಿಕೇರಿ/ಗೋಣಿಕೊಪ್ಪಲು: ಖಗೋಳದಲ್ಲಿ ಗುರುವಾರ ನಡೆದ ಚಮತ್ಕಾರಕ್ಕೆ ಕೊಡಗು ಜನರೂ ಸಾಕ್ಷಿಯಾದರು. ಮಲೆನಾಡಿನ ಗಡಿಭಾಗವಾದ ಕಾಯಿಮಾನಿ ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ ಎನ್ನುವ ಕಾರಣಕ್ಕೆ ಈ ಪ್ರದೇಶವು ಇಡೀ ದೇಶದ ಗಮನ ಸೆಳೆದಿತ್ತು. ಆದರೆ, ಅಲ್ಲಿ ಮೋಡ ಹಾಗೂ ಮಂಜಿನದ್ದೇ ಆಟವಾಗಿ ಕೊನೆಯಲ್ಲಿ ಮೂರು ನಿಮಿಷ ಮಾತ್ರ ಗ್ರಹಣ ಗೋಚಿರಿಸಿತು. ಅದೂ ಮೋಡಗಳ ನಡುವೆ ಸ್ಪಷ್ಟವಾಗಿ ಕಾಣಲಿಲ್ಲ.

ಆದರೆ, ಮಡಿಕೇರಿ, ಚಟ್ಟಳ್ಳಿ, ಅಪ್ಪಂಗಳ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೂರ್ಯ ಗ್ರಹಣ ಗೋಚಿಸಿದ್ದು ವಿಶೇಷ. ಮಡಿಕೇರಿಯಲ್ಲಿ ರಿಂಗ್‌ ಆಕೃತಿಯಲ್ಲಿ ಸೂರ್ಯ ಕಾಣಿಸಿಕೊಂಡು ಪ್ರಜ್ವಲಿಸಿದ.

ಮಡಿಕೇರಿಯಲ್ಲಿ ಗುರುವಾರ ಬೆಳಿಗ್ಗೆ ಮೋಡ ಕವಿದ ವಾತಾವರಣವಿತ್ತು. ಆದರೆ, ಸಮಯ ಕಳೆದಂತೆ ಸೂರ್ಯ ಪ್ರಕಾಶಿಸಲು ಆರಂಭಿಸಿದ. ಗ್ರಹಣದ ವೇಳೆಯಾದ ಬೆಳಿಗ್ಗೆ 8.05ರ ಸುಮಾರಿಗೆ ಮತ್ತೆ ಮೋಡ ಕವಿದು ಆತಂಕತಂದಿತ್ತು. 8.30ರ ಮೇಲೆ ಸೂರ್ಯ ಪ್ರಜ್ವಲಿಸಿದ. ನಂತರ ಆಕಾಶದಲ್ಲಿ ಸೂರ್ಯ – ಚಂದ್ರನದ್ದೇ ಆಟವಾಯಿತು. 9 ಗಂಟೆ ನಂತರ ಮಡಿಕೇರಿಯಲ್ಲಿ ಕತ್ತಲು ಕವಿದ ವಾತಾವರಣ. ಬೆಳಕಿನಲ್ಲೂ ಬದಲಾವಣೆ ಕಂಡಿತು.

ಪ್ರವಾಸಿ ತಾಣಗಳು ಬಿಕೋ:

ಗ್ರಹಣ ಕಾಲ ಮುಕ್ತಾಯವಾಗುವ ತನಕವೂ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದವು. ಕ್ರಿಸ್‌ಮಸ್‌ ಹಾಗೂ ವರ್ಷಾಂತ್ಯದಲ್ಲಿ ಕೊಡಗು ಪ್ರವಾಸಕ್ಕೆ ಬಂದಿದ್ದವರು ಗ್ರಹಣಕ್ಕೆ ಹೆದರಿ, ಹೋಮ್‌ ಸ್ಟೇ ಹಾಗೂ ರೆಸಾರ್ಟ್‌ನಿಂದ ಆಚೆ ಬರಲಿಲ್ಲ. 11.30ರ ತನಕವೂ ರಾಜಾಸೀಟ್‌, ನಿಸರ್ಗಧಾಮ ಬಿಕೋ ಅನ್ನುತ್ತಿದ್ದವು. ಅಲ್ಲದೇ, ಚಾರಣ ಸಹ ಇರಲಿಲ್ಲ.

ಅಂಗಡಿ ಮುಂಗಟ್ಟು ಬಂದ್:

ಬೆಳಿಗ್ಗೆ ರಸ್ತೆಗಳಲ್ಲೂ ಜನದಟ್ಟಣೆ ಇರಲಿಲ್ಲ. ಬಹುತೇಕ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು. ಮಧ್ಯಾಹ್ನ 12ರ ಬಳಿಕವೇ ಅಂಗಡಿ ಬಾಗಿಲು ತೆರೆದವು. ವ್ಯಾಪಾರ ವಹಿವಾಟು ಎಂದಿನಂತೆ ಇರಲಿಲ್ಲ.

ದೇವಸ್ಥಾನ ಬಂದ್‌:

ಮಡಿಕೇರಿ ಓಂಕಾರೇಶ್ವರ ದೇಗುಲ, ಆಂಜನೇಯ ದೇವಸ್ಥಾನ, ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲಿ ಬೆಳಿಗ್ಗೆಯೇ ಪ್ರಾರ್ಥನೆ ಸಲ್ಲಿಸಿ ಬಾಗಿಲ್‌ ಬಂದ್ ಮಾಡಲಾಯಿತು. ಗ್ರಹಣ ಮೋಕ್ಷವಾದ ನಂತರವೇ ಬಾಗಿಲು ತೆರೆದು ಪೂಜೆ ಸಲ್ಲಿಸಲಾಯಿತು. ಭಗಂಡೇಶ್ವರ ಹಾಗೂ ತಲಕಾವೇರಿಯಲ್ಲೂ ಪೂಜೆ ಸ್ಥಗಿತ ಮಾಡಲಾಗಿತ್ತು. ಪಿಂಡ ಪ್ರಧಾನವೂ ಇರಲಿಲ್ಲ.

ಖಗೋಳ ಆಸಕ್ತರಿಗೆ ನಿರಾಸೆ:

ಹಲವು ದಿನಗಳಿಂದ ಕಾತರ ಮೂಡಿಸಿದ್ದ ಕಂಕಣ ಸೂರ್ಯಗ್ರಹಣ ದಕ್ಷಿಣ ಕೊಡಗಿನ ಜನರಿಗೆ ನಿರಾಸೆ ಮೂಡಿಸಿತು. ಸೂರ್ಯಗ್ರಹಣ ವೇಳೆಯಲ್ಲಿ ಕವಿದಿದ್ದ ಮೋಡ ಜನರಿಗೆ ನಿರಾಸೆಗೆ ಕಾರಣವಾಯಿತು.

ಉತ್ತರ 12 ಡಿಗ್ರಿ, ಪಶ್ಚಿಮ 25 ಡಿಗ್ರಿ ಸರಳ ರೇಖೆಯಲ್ಲಿ ಹಾದು ಹೋಗುವ ಕುಟ್ಟದಲ್ಲಿ ಸೂರ್ಯಗ್ರಹಣ ಸಂಪೂರ್ಣವಾಗಿ ಗೋಚರಿಸಲಿದೆ ಎಂದು ಪುಣೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಹಲವು ವಿಜ್ಞಾನಿಗಳು ಹಾಗೂ ಖಗೋಳಾಸಕ್ತರು ಒಂದು ಮೊದಲೇ ಆಗಮಿಸಿ, ಕುಟ್ಟದಲ್ಲಿ ವಾಸ್ತವ್ಯ ಹೂಡಿದ್ದರು.

ಗ್ರಹಣ ಸಂಭವಿಸುವ ದಿನ ಬೆಳಿಗ್ಗೆ 6.45ರಿಂದ 7 ಗಂಟೆವರೆಗೆ ಆಕಾಶದಲ್ಲಿ ಶುಭ್ರತೆಯಿದ್ದು ಸೂರ್ಯಗ್ರಹಣ ಸಂಪೂರ್ಣವಾಗಿ ಕಾಣಲಿದೆ ಎಂಬ ಭರವಸೆ ಮೂಡಿತ್ತು. ಆದರೆ, ಗ್ರಹಣ ಸಮೀಪಿಸುತ್ತಿದ್ದಂತೆಯೇ ಆಗಸದಲ್ಲಿ ದಟ್ಟ ಮೋಡ ಕವಿದು ಸೂರ್ಯನನ್ನು ಸಂಪೂರ್ಣ ಮರೆಮಾಚಿತು.

ಗ್ರಹಣ ವೀಕ್ಷಿಸಲು 7.45ರ ವೇಳೆಗೆ ವಿದ್ಯಾರ್ಥಿಗಳು ಅಧ್ಯಾಪಕರು, ಸಾರ್ವಜನಿಕರು, ರಾಜ್ಯ ವಿಜ್ಞಾನ ಪರಿಷತ್‌ ಪದಾಧಿಕಾರಿಗಳು ಸೌರಶಕ್ತಿ ಕನ್ನಡ ಧರಿಸಿ ಶ್ರೀಮಂಗಲದ ಕಾಯಿಮಾನಿ, ಕುಟ್ಟದ ಚೆಕ್ಕೇರ ದೇವಯ್ಯ ಅವರ ಮೇರಿ ಲ್ಯಾಂಡ್ ಸ್ಥಳದಲ್ಲಿ ಸಿದ್ಧರಾಗಿದ್ದರು.
ಆದರೆ, 9 ಗಂಟೆಯಾದರೂ ಮೋಡ ಕದಲಲಿಲ್ಲ. ಬಳಿಕ 9.15 ಸಮಯದಲ್ಲಿ 3 ನಿಮಿಷಗಳ ಕಾಲ ಮಾತ್ರ ತುಸು ಗೋಚರಿಸಿತು. ಈ ವೇಳೆಗೆ ಸೂರ್ಯ ಭಾಗಶಃ ಮರೆಯಾಗಿದ್ದ. ಬಳಿಕ ಗ್ರಹಣ ಬಿಡುವವರೆಗೂ ಮತ್ತೆ ಮೋಡ ಕವಿಯಿತು.

ಗ್ರಹಣ ಬಿಟ್ಟ ಬಳಿಕ ಕಾಯಿಮಾನಿ ಜೆ.ಸಿ. ವಿದ್ಯಾಸಂಸ್ಥೆಯಲ್ಲಿ ವಿಚಾರ ಸಂಕಿರಣ ನಡೆಯಿತು. ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳ ಬಗ್ಗೆ ಬೆಂಗಳೂರಿನ ವಿಜ್ಞಾನಿ ಶ್ರೀನಿವಾಸ ಮೂರ್ತಿ, ಪುಣೆ ಆಸೀಮಿತಿ ವಿಜ್ಞಾನ ಕೇಂದ್ರದ ಸಾರಂಗ್ ಓಕ್ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕಾಯಿಮಾನಿಯ ಕೋಳೆರ ರವಿ ಕಾರ್ಯಪ್ಪ ಅವರ ಮೈದಾನದಲ್ಲಿ ಆಯೋಜಿಸಿದ್ದ ಗ್ರಹಣ ವೀಕ್ಷಣಾ ಸಮಾರಂಭವನ್ನು ಶಾಸಕ ಕೆ.ಜಿ. ಬೋಪಯ್ಯ ಸೌರವ್ಯೂಹ ಭಿತ್ತಿಪತ್ರ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ತಹಶೀಲ್ದಾರ್ ಮಹೇಶ್, ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಗುರುನಂಜಯ್ಯ, ಖಜಾಂಚಿ ನರೇಂದ್ರ, ಸಂಚಾಲಕ ಕಾರ್ಯಕ್ರಮ ಸಂಯೋಜಕ ಟಿ.ಜಿ.ಪ್ರೇಮ್ ಕುಮಾರ್, ಜಿಲ್ಲಾ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಮೋಯಿದ್ದೀನ್, ಎಂ.ಪಿ.ಕೇಶವಕಾಮತ್, ವೆಂಕಟ ನಾಯಕ್, ಸ್ಥಳೀಯರಾದ ಗಿರೀಶ್ ಗಣಪತಿ, ರವಿ ಕಾರ್ಯಪ್ಪ, ಸೋಮಯ್ಯ, ಚೆಕ್ಕೇರ ದೇವಯ್ಯ, ಗಣಪತಿ, ಕುಟ್ಟ ಸಿಪಿಐ ಪರಶಿವಮೂರ್ತಿ ಹಾಜರಿದ್ದರು.

30 ಜಿಲ್ಲೆಗಳಿಂದ ಒಬ್ಬರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ಹಾಗೂ ಇತರ ಭಾಗಗಳಿಂದ ಅಂದಾಜು 2 ಸಾವಿರ ಮಂದಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT