ಮಂಗಳವಾರ, ನವೆಂಬರ್ 19, 2019
28 °C
8 ರಾಜ್ಯಗಳ ಕ್ರೀಡಾಪಟುಗಳು ಭಾಗಿ

ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ 13ರಿಂದ

Published:
Updated:

ಉಡುಪಿ: ಕರಾವಳಿಯಲ್ಲಿ ಮೊದಲ ಬಾರಿಗೆ ಅಖಿಲ ಭಾರತ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್‌ ಚಾಂಪಿಯನ್‌ ಶಿಪ್‌ ಸೆ.13ರಿಂದ 15ರವರೆಗೆ ನಡೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕರೂ ಆದ ಕೆ.ರಘುಪತಿ ಭಟ್‌ ತಿಳಿಸಿದರು.

ಸೋಮವಾರ ನಗರದ ಡಯಾನ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಲಕ್ಷ್ಮದ್ವೀಪ, ಅಂಡಮಾನ್‌ ನಿಕೋಬಾರ್, ಪುದುಚೇರಿಯಿಂದ 1,250 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸೆ.13ರಂದು ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 5.30ಕ್ಕೆ ನಗರದಲ್ಲಿ ಕ್ರೀಡಾಪಟುಗಳು ಜೋಡುಕಟ್ಟೆಯಿಂದ ಮೆರವಣಿಗೆಯ ಮೂಲಕ ಕ್ರೀಡಾಂಗಣವನ್ನು ತಲುಪಲಿದ್ದಾರೆ. 14ರಂದು ಬೆಳಿಗ್ಗೆ 6ರಿಂದ ಸ್ಪರ್ಧೆಗಳು ಆರಂಭವಾಗಲಿವೆ ಎಂದರು.

8 ವಿಭಾಗಗಳಲ್ಲಿ 130 ಸ್ಪರ್ಧೆಗಳು ನಡೆಯಲಿದ್ದು, ವಿಜೇತರು ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿದ್ದಾರೆ. ಪಾರದರ್ಶಕವಾಗಿ ತೀರ್ಪು ನೀಡಲು ಫೋಟೊ ಫಿನಿಷ್ ತಂತ್ರಜ್ಞಾನ ಬಳಸಲಾಗುತ್ತಿದೆ. ಸ್ಪರ್ಧಿಗಳಿಗೆ ಅಗತ್ಯ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನಿಡಿದರು.

ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಕ್ರೀಡಾಕೂಟ ಆಯೋಜಿಸಿದ್ದು, ಮಾಹೆ ಪ್ರಾಯೋಜಕತ್ವ ನೀಡಿದೆ. ರಾಜ್ಯ ಸರ್ಕಾರ ₹ 25 ಅನುದಾನದ ಭರವಸೆ ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ರಘುರಾಮ ನಾಯಕ್, ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಉಪಾಧ್ಯಕ್ಷ ಹರೀಶ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಮಹೇಶ್ ಠಾಕೂರ್, ಕಾರ್ಯದರ್ಶಿ ದಿನೇಶ್ ಕುಮಾರ್ ಖಜಾಂಚಿ ದೀಪಕ್ ರಾಮ್ ಬಾಯರಿ ಇದ್ದರು.

ಪ್ರತಿಕ್ರಿಯಿಸಿ (+)