ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಕೊಟ್ಟ ರೈತರಿಗೆ ಸಾಂತ್ವನ ನಿವೇಶನ

Last Updated 27 ಫೆಬ್ರುವರಿ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಡದಿ ಹೋಬಳಿಯ ಕಾಕರಾಮನಹಳ್ಳಿ, ಬೋರೇಹಳ್ಳಿ ಹಾಗೂ ಮುದ್ದಾಪುರ ಕರೇನಹಳ್ಳಿಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ವಸತಿ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಶೇ 25ರಷ್ಟು ಬೆಲೆಯಲ್ಲಿ ‘ಸಾಂತ್ವನ ನಿವೇಶನ’ ನೀಡಲಾಯಿತು.

ಗೃಹ ಮಂಡಳಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ವಸತಿ ಸಚಿವ ಎಂ.ಕೃಷ್ಣಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘2009ರಲ್ಲಿ ಬಡಾವಣೆಗಾಗಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡಾಗ ಎಕರೆಗೆ ₹26 ಲಕ್ಷ ಪರಿಹಾರ ವಿತರಿಸಲಾಗಿತ್ತು. ಆದರೆ, ರೈತರು ನಿವೇಶನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಭೂಮಿ ನೀಡಿದವರಿಗೆ ಪರಿಹಾರದ ಜತೆಗೆ 9X12 ಮೀಟರ್‌ ಅಳತೆಯ ನಿವೇಶನವನ್ನು ಸಾರ್ವಜನಿಕ ದರದ ಶೇ 25ರ ಬೆಲೆಯಲ್ಲಿ ನೀಡಲು ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿತ್ತು. ಅದರಂತೆ ನಮ್ಮ ಸರ್ಕಾರ ರೈತರ ಬೇಡಿಕೆ ಈಡೇರಿಸಿ, ನುಡಿದಂತೆ ನಡೆದಿದೆ’ ಎಂದರು.

‘ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 30X40 ಚದರ ಅಡಿಯ 605 ನಿವೇಶನ, ಅಧಿಕ ಆದಾಯ ವರ್ಗದವರಿಗೆ (ಎಚ್‌ಐಜಿ–1, ಎಚ್‌ಐಜಿ–2) 40X60 ಚದರಡಿಯ 360 ಹಾಗೂ 50X80 ಅಳತೆಯ 147 ನಿವೇಶನಗಳನ್ನು ಬುಧವಾರ ವಿತರಿಸುತ್ತೇವೆ. ಮಧ್ಯಮ ಆದಾಯ ವರ್ಗದವರಿಗೆ 30X50 ಅಳತೆಯ 873 ನಿವೇಶನ ಹಾಗೂ 30X40 ಅಳತೆಯ ಅಲ್ಪ ಆದಾಯ ವರ್ಗದ 9 ಮನೆಗಳನ್ನು ಮಾರ್ಚ್‌ 1ರಂದು ನೀಡುತ್ತೇವೆ’ ಎಂದು ಸಚಿವರು ತಿಳಿಸಿದರು.

ಅರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಿಟ್ಟಿದ್ದ 384 ನಿವೇಶನಗಳಿಗೆ 5,104 ಅರ್ಜಿಗಳು ಸ್ವೀಕೃತಗೊಂಡಿದ್ದವು. ವಿಜಯನಗರ ಹೊಸಳ್ಳಿ ಮೆಟ್ರೊ ನಿಲ್ದಾಣ ಸಮೀಪದ ಸುಜ್ಞಾನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗೃಹ ಮಂಡಳಿ ಅಧಿಕಾರಿಗಳು ಲಾಟರಿ ಎತ್ತಿ ಅರ್ಜಿದಾರರನ್ನು ಆಯ್ಕೆ ಮಾಡಿ, ಶೇ 50ರ ರಿಯಾಯಿತಿ ದರದಲ್ಲಿ ನಿವೇಶನ ಹಂಚಿದರು.

ಅಂಕಿ ಅಂಶ

₹31 ಕೋಟಿ -ನೇತಾಜಿ ಬಡಾವಣೆ ಅಭಿವೃದ್ಧಿಗೆ ಸರ್ಕಾರ ನೀಡಿದ ಅನುದಾನ

499.21ಎಕರೆ -ಬಡಾವಣೆಗಾಗಿ ಗೃಹ ಮಂಡಳಿ ಸ್ವಾಧೀನಪಡಿಸಿಕೊಂಡ ಭೂಮಿ

2,369 -ವಿವಿಧ ಅಳತೆಯ ನಿವೇಶನ

ಬಡಾವಣೆಯಲ್ಲಿ ಏನೇನಿದೆ

*  ಬೆಂಗಳೂರು–ಮೈಸೂರು ರಸ್ತೆಯ ಬಿಡದಿಯಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್ ಬಡಾವಣೆಗೆ 7.5 ಮೀಟರ್‌ ಅಗಲದ ಸಂಪರ್ಕ ರಸ್ತೆ

* ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ, ಮಳೆ ನೀರು ಚರಂಡಿ ಸೌಲಭ್ಯ

* 9 ಮೀಟರ್‌, 12 ಮೀಟರ್‌ ಹಾಗೂ 18 ಮೀಟರ್‌ ಅಗಲದ ಒಳರಸ್ತೆ

* ಬಡಾವಣೆಯ ತ್ಯಾಜ್ಯ ನೀರು ಸಂಸ್ಕರಿಸಲು 10 ಎಂಎಲ್‌ಡಿ ಪ್ರತ್ಯೇಕ ಘಟಕ

* ಬಡಾವಣೆಗೆ ಹೊಂದಿಕೊಂಡಿರುವ ಕಾಕರಾಮನಹಳ್ಳಿ, ಬೋರೇಹಳ್ಳಿ ಗ್ರಾಮಗಳಿಗೆ ಕಾಂಕ್ರೀಟ್‌ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್‌ ವ್ಯವಸ್ಥೆ

* ಬಡಾವಣೆ ಮತ್ತು ಸುತ್ತಮುತ್ತಲ ಗ್ರಾಮಗಳಿಗೂ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT