ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಮುಡಿ ಮದ್ರಸಾದಲ್ಲಿ ವಿಶೇಷ ಬಕ್ರೀದ್‌!

Last Updated 22 ಆಗಸ್ಟ್ 2018, 17:28 IST
ಅಕ್ಷರ ಗಾತ್ರ

ಕೊಟ್ಟಮುಡಿ (ಕೊಡಗು ಜಿಲ್ಲೆ): ಇಲ್ಲಿನ ದಾರುಲ್‌ ಉಲುಂ ಸುನ್ನಿ ಮದ್ರಸಾ ಪರಿವಾರದವರು ಬುಧವಾರ ಬಕ್ರೀದ್‌ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ನೊಂದು ಬಾಡಿದ ಮುಖಗಳಲ್ಲಿ ಒಂದು ಸಣ್ಣ ನಗೆಯನ್ನೂ ಅರಳಿಸಿದರು.

ಮದೆನಾಡು ಗುಡ್ಡ ಕುಸಿತದಿಂದ ನೆಲೆ ಕಳೆದುಕೊಂಡಿರುವ 8–10 ಕುಟುಂಬಗಳು ಈ ಮದ್ರಸಾದಲ್ಲಿ ಆಶ್ರಯ ಪಡೆದಿವೆ. ಅದರಲ್ಲಿ ಎಂ.ಬಿ. ಶಾಹಿನಾ ಹಸಿ ಬಾಣಂತಿ. ಇಬ್ಬರು ತುಂಬು ಗರ್ಭಿಣಿಯರೂ ಈ ಶಿಬಿರದಲ್ಲಿದ್ದಾರೆ. ಅವರೂ ಸೇರಿದಂತೆ ಸುಮಾರು 50 ಜನರ ಗುಂಪಿಗೆ ಈಗ ಮದ್ರಸಾವೇ ಮನೆ.

‘ನಾವಿದ್ದ ಗುಡ್ಡ ಕುಸಿಯುವ ಮುನ್ನ ಭಾರಿ ಸದ್ದು ಕೇಳಿಸಿತು. ಮನೆಯ ಮಂದಿಯೆಲ್ಲ ಪಕ್ಕದ ಗುಡ್ಡದತ್ತ ದಿಕ್ಕಾಪಾಲಾಗಿ ಓಡಿದೆವು. ಉಮ್ಮ ಹಾಗೂ ಉಳಿದವರು ಒಂದೆಡೆಯಾದರೆ, ಉಪ್ಪ, ನಾನು ಮತ್ತು ಇನ್ನಿಬ್ಬರು ಮತ್ತೊಂದೆಡೆ ಓಡಿದೆವು. ಆ ಕ್ಷಣ ನೆನೆದರೆ ಕಾಲುಗಳು ಇನ್ನೂ ನಡುಗುತ್ತವೆ’ ಎಂದಳು ಕಾಲೇಜು ವಿದ್ಯಾರ್ಥಿನಿಯಾಗಿರುವ ಎಂ.ಎ. ರಮೀಜಾ.

‘ಗುಡ್ಡದ ಮೇಲೆ ಓಡುವಾಗ ಮೇಲೆ ಹೆಲಿಕಾಪ್ಟರ್‌ ಸದ್ದು ಕೇಳಿ ಜೀವ ಬಂದಂತಾಗಿತ್ತು. ಆದರೆ, ನಾವಿರುವುದು ಹೆಲಿಕಾಪ್ಟರ್‌ನಲ್ಲಿ ಇದ್ದವರಿಗೆ ಕಾಣಿಸಲೇ ಇಲ್ಲ. ರಾತ್ರಿ ಬೆಟ್ಟದಲ್ಲೇ ಉಳಿದು ಮರುದಿನ ಹೇಗೋ ರಸ್ತೆಯ ಬಳಿ ಬಂದೆವು. ಹಗ್ಗದ ಸಹಾಯದಿಂದ ನಮ್ಮನ್ನು ಕೆಳಗೆ ಇಳಿಸಲಾಯಿತು’ ಎಂದು ಆ ಭಯಾನಕ ಕ್ಷಣಗಳನ್ನು ಮೆಲುಕು ಹಾಕಿದಳು.

‘ಉಮ್ಮ ಹಾಗೂ ಉಳಿದವರ ವಿಷಯ ತಿಳಿಯದೆ ಅವರನ್ನೆಲ್ಲ ನಾವು ಕಳೆದುಕೊಂಡೆವು ಎಂದೇ ಭಾವಿಸಿದ್ದೆವು. ಯಾರು ಕರೆದರೂ ಹೋಗದೆ ರಸ್ತೆಯಲ್ಲೇ ಅವರಿಗಾಗಿ ಕಾಯುತ್ತಾ ನಿಂತೆವು. ದೇವರ ಕೃಪೆಯಿಂದ ಅವರೂ ಸಿಕ್ಕರು’ ಎಂದು ಹೇಳಿದಳು.

ಮದೆನಾಡಿನಲ್ಲಿ ಒಟ್ಟು ಹತ್ತು ಮನೆಗಳಿದ್ದವು. ಅಲ್ಲಿ ಮನೆಗಳಿದ್ದ ಕುರುಹುಗಳು ಸಹ ಈಗ ಉಳಿದಿಲ್ಲ. ಸೆಕೆಂಡ್‌ ಮಣ್ಣಿಂಗೇರಿ ಗ್ರಾಮದಲ್ಲೂ ಮನೆ ಕಳೆದುಕೊಂಡವರು ಇಲ್ಲಿದ್ದಾರೆ.

ಬಾಣಂತಿಯಾಗಿರುವ ಮಗಳನ್ನು ಬೆಟ್ಟದಲ್ಲಿ ರಾತ್ರಿಯಿಡೀ ಸುರಿಯುತ್ತಿದ್ದ ಮಳೆಯಲ್ಲಿ ಜತನದಿಂದ ಕಾಪಾಡಿಕೊಂಡು ಬಂದ ಎಂ.ಕೆ. ಬಷೀರ್‌ ಅವರಿಗೆ ತಾತ್ಕಾಲಿಕ ನೆಲೆ ಸಿಕ್ಕ ಖುಷಿಗಿಂತ ಮುಂದೇನು ಎಂಬ ಚಿಂತೆಯೇ ಕಾಡುತ್ತಿದೆ.

‘ನಾವು ಉಳಿದಿರುವ ಜಾಗ ಮದ್ರಸಾದ್ದು. ಇದು ಮಕ್ಕಳು ಓದುವ ಜಾಗ. ಇಂದಲ್ಲ, ನಾಳೆ ನಾವು ಇಲ್ಲಿಂದ ಹೋಗಲೇಬೇಕು. ಮುಂದೆ ನಮ್ಮ ಗತಿಯೇನು’ ಎಂದು ಅವರು ಪ್ರಶ್ನಿಸಿದರು.

‘ಮೊನ್ನೆ ಸಂಬಂಧಿಯೊಬ್ಬರು ಅಸುನೀಗಿದ್ದರು. ಮಣ್ಣಿಗೆ ಹೋಗಲು ಕಿಸೆಯಲ್ಲಿ ಒಂದು ಪೈಸೆ ಇರಲಿಲ್ಲ. ಮದ್ರಸಾದ ವ್ಯವಸ್ಥಾಪಕರೇ 1200 ರೂಪಾಯಿ ಬಾಡಿಗೆಯನ್ನು ಕೊಟ್ಟು ಟೆಂಪೊ ವ್ಯವಸ್ಥೆ ಮಾಡಿಕೊಟ್ಟರು’ ಎಂದು ಅವರು ಕಣ್ಣೀರು ಒರೆಸಿಕೊಂಡರು.

ಬಿ.ಕಾಂ. ವಿದ್ಯಾರ್ಥಿಯಾಗಿರುವ ಎಂ.ಬಿ.ಫಯಾಜ್‌ಗೆ ಕಾಲೇಜಿನ ಚಿಂತೆ. ‘ನಾನೊಬ್ಬ ಕಾಲೇಜು ವಿದ್ಯಾರ್ಥಿ ಎನ್ನುವುದಕ್ಕೆ ನನ್ನ ಬಳಿಯೀಗ ಯಾವ ದಾಖಲೆಗಳೂ ಇಲ್ಲ. ಮುಂದಿನ ಓದು ಹೇಗೋ, ಏನೋ’ ಎಂದು ಆತ ಹೇಳುವಾಗ, ಉತ್ತರಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.

‘ದುಃಖದಲ್ಲೇ ಹಬ್ಬ ಆಗಿದೆ. ನಮಗೀಗ ಮನೆಯ ವ್ಯವಸ್ಥೆ ಆಗಬೇಕು. ಕೈಗೆ ಒಂದಿಷ್ಟು ದುಡ್ಡು ಬೇಕು. ಸರ್ಕಾರದ ನೆರವಿಗೆ ಕಾಯುವುದನ್ನು ಬಿಟ್ಟು ಬೇರೆ ದಾರಿ ಏನಿದೆ ಹೇಳಿ’ ಎಂದು ಎಂ.ಆರ್‌. ಸಲೀಂ ಪ್ರಶ್ನೆ ಹಾಕಿದರು.

ಶಿಬಿರದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಮದ್ರಸಾದ ವ್ಯವಸ್ಥಾಪಕ ನೌಷಾದ್‌, ‘ನಾವೇನೋ ಇವರಿಗೆಲ್ಲ ತಂಗುವ ವ್ಯವಸ್ಥೆ ಮಾಡಿದ್ದೇವೆ. ಇದುವರೆಗೆ ಒಬ್ಬ ಅಧಿಕಾರಿಯೂ ಬಂದು ಇವರ ನೋವು ಕೇಳಿಲ್ಲ. ವಿವರವನ್ನೂ ಪಡೆದುಕೊಂಡಿಲ್ಲ. ಶಿಬಿರಕ್ಕೆ ಯಾವುದೇ ಪದಾರ್ಥವನ್ನೂ ಸರಬರಾಜು ಮಾಡುತ್ತಿಲ್ಲ’ ಎಂದು ದೂರಿದರು.

ಈ ಸಂತ್ರಸ್ತರಿಗೂ ಬೇಕು ಪರಿಹಾರ

ಪಾಲೆಮಾಡು ಗ್ರಾಮದಲ್ಲಿ ಸುಮಾರು 238 ಕುಟುಂಬಗಳು ವಾಸವಾಗಿದ್ದು, ದಲಿತ, ಮುಸ್ಲಿಂ ಕುಟುಂಬಗಳೇ ಅವುಗಳಲ್ಲಿ ಹೆಚ್ಚಾಗಿವೆ.

ಈ ಊರಿಗೆ ಮಳೆಯೇನೂ ಅಷ್ಟಾಗಿ ಕಾಡಿಲ್ಲ. ಆದರೆ, ಅವರೆಲ್ಲ ಕೂಲಿಗೆ ಹೋಗುತ್ತಿದ್ದ ಎಸ್ಟೇಟ್‌ಗಳಲ್ಲಿ ಈಗ ಕೆಲಸವಿಲ್ಲ. ಮೂರು ವಾರಗಳಿಂದ ದುಡಿಮೆಯಿಲ್ಲದೆ ಊಟದ ಚಿಂತೆ, ಇಲ್ಲಿನ ಪ್ರತಿ ಕುಟುಂಬವನ್ನೂ ಕಾಡುತ್ತಿದೆ.

‘ಮಳೆಯಿಂದ ನೇರ ತೊಂದರೆಗೆ ನಾವು ಒಳಗಾಗದಿದ್ದರೂ ನಾವು ಸಹ ಕೂಲಿಯಿಲ್ಲದೆ ಸಂತ್ರಸ್ತರೇ ಆಗಿದ್ದೇವೆ. ನಮ್ಮೂರಿಗೆ ಮಂಡ್ಯದವರು ಆಹಾರ ಸಾಮಗ್ರಿ ತಂದುಕೊಟ್ಟರೆ ಕಿಡಿಗೇಡಿಗಳು ತಡೆದಿದ್ದಲ್ಲದೆ, ನಾವು ಬಲವಂತದಿಂದ ಸಾಮಗ್ರಿ ಪಡೆಯುತ್ತಿದ್ದೇವೆ ಎಂಬ ಅಪಪ್ರಚಾರ ನಡೆಸಿದ್ದಾರೆ’ ಎಂದು ದೂರಿದರು ಗ್ರಾಮದ ನಿವಾಸಿ ಕುಸುಮಾ.

‘ನಾವು ಸ್ವಾಭಿಮಾನಿಗಳು. ಬೇರೆಯವರ ಆಹಾರ ಕಸಿಯುವಷ್ಟು ಸಣ್ಣವರಲ್ಲ. ಯಾರಾದರೂ ನಮ್ಮ ಸಂಕಷ್ಟ ನೋಡಿ ಸಾಮಗ್ರಿ ತಂದುಕೊಟ್ಟರೆ ಬೇಡ ಎನ್ನುವುದಿಲ್ಲ’ ಎಂದು ಪೂವನಿ ಹೇಳಿದರು. ‘ಮಳೆ ಶುರುವಾದ ಮೇಲೆ ಅನ್ನಭಾಗ್ಯದ ಅಕ್ಕಿಯೂ ಬಂದಿಲ್ಲ’ ಎಂದು ಸಿದ್ಧಿ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT