‘ಪ್ರತಾಪ ಸಿಂಹ ಗೆಲ್ಲಿಸಿದ್ದೆ ಕೊಡಗಿನ ದುರಂತ’: ಬಿಜೆಪಿ ಮುಖಂಡ ವಾಗ್ದಾಳಿ

7
ಭೂಪರಿವರ್ತನೆ ಹೇಳಿಕೆ: ಬಿಜೆಪಿ ಮುಖಂಡ ದೇವಯ್ಯ ಕೆಂಡಾಮಂಡಲ

‘ಪ್ರತಾಪ ಸಿಂಹ ಗೆಲ್ಲಿಸಿದ್ದೆ ಕೊಡಗಿನ ದುರಂತ’: ಬಿಜೆಪಿ ಮುಖಂಡ ವಾಗ್ದಾಳಿ

Published:
Updated:
Deccan Herald

ಮಡಿಕೇರಿ: ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಸ್ಥಿತಿಗತಿಯ ಅಧ್ಯಯನ ನಡೆಸುತ್ತಿದ್ದ ಕೇಂದ್ರ ತಂಡದ ಎದುರೇ ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡ ಎಂ.ಬಿ. ದೇವಯ್ಯ ಅವರು ಸಂಸದ ಪ್ರತಾ‍ಪ ಸಿಂಹ ಅವರಿಗೆ ಬಿಸಿ ಮುಟ್ಟಿಸಿದ್ದು, ಇದರಿಂದ ಮುಜುಗರಕ್ಕೆ ಒಳಗಾಗಿರುವ ಸಂಸದ, ಫೇಸ್‌ಬುಕ್‌ ಲೈವ್‌ನಲ್ಲಿ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ. 

ತಾಲ್ಲೂಕಿನ ಹೆಬ್ಬಟ್ಟಗೇರಿಯಲ್ಲಿ ಗುರುವಾರ ಕೇಂದ್ರ ತಂಡವು ಅಧ್ಯಯನ ನಡೆಸುತ್ತಿದ್ದ ವೇಳೆ ಭೂಪರಿವರ್ತನೆಯ ಕುರಿತು ಮಾಹಿತಿ ನೀಡುತ್ತಿದ್ದ ಪ್ರತಾಪ ಸಿಂಹರನ್ನು ತರಾಟೆಗೆ ತೆಗೆದುಕೊಂಡರು.

‘ತಂಡಕ್ಕೆ ತಪ್ಪು ಮಾಹಿತಿ ನೀಡಿ ಜಿಲ್ಲೆಯ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ. ನಿಮ್ಮನ್ನು ಗೆಲ್ಲಿಸಿದ್ದೆ ಕೊಡಗಿನ ದುರಂತ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಾ. ಖುಷಿ ಬಂದಂತೆಲ್ಲಾ ಮಾತನಾಡಬೇಡಿ. ಸ್ಥಳೀಯರಿಂದ ಮೊದಲು ಮಾಹಿತಿ ಪಡೆದುಕೊಳ್ಳಿ. ಭೂಪರಿವರ್ತನೆ ಮಾಡಿರುವ ಸ್ಥಳದಲ್ಲಿ ಬೇಕಿದ್ದರೆ ಹೇಳಿಕೆ ಕೊಡಿ. ಹೆಬ್ಬಟ್ಟಗೇರಿಯಲ್ಲಿ ಏಕೆ ಈ ವಿಚಾರ ಪ್ರಸ್ತಾಪಿಸಬೇಕಿತ್ತು’ ಎಂದು ಆಕ್ರೋಶದಿಂದ ನುಡಿದರು.

‘ನೀವು ನಮ್ಮ ಪಕ್ಷದ ಸಂಸದರು. ನಮ್ಮೊಂದಿಗೆ ಚರ್ಚಿಸಿ ಇಂತಹ ತೀರ್ಮಾನಕ್ಕೆ ಬರಬೇಕು. ನನ್ನ ವಿರುದ್ಧ ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ನಿಮ್ಮಂಥವರಿಂದ ಪಕ್ಷವೂ ಉದ್ಧಾರ ಆಗಿಲ್ಲ’ ಎಂದು ಹೇಳಿದರು. 

ಮುಜುಗರಕ್ಕೆ ಒಳಗಾದ ಸಂಸದರು, ‘ಏನೇನೋ ಮಾತನಾಡಬೇಡಿ’ ಎಂದು ಬಾಯಿಮುಚ್ಚಿಸಲು ಪ್ರಯತ್ನಿಸಿದರು. ‘ನಾನೇನು ಕುಡುಕನಲ್ಲ’ ಎಂದು ದೇವಯ್ಯ ತಿರುಗೇಟು ನೀಡಿದರು. ಸ್ಥಳದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಸಹ ಇದ್ದರು. 

ಪ್ರತಾಪ ಸಿಂಹ ಫೇಸ್‌ಬುಕ್‌ ಲೈನ್‌ನಲ್ಲಿ ಸ್ಪಷ್ಟನೆ ನೀಡಿದ್ದು, ‘ಕೆಲವು ರಾಜಕಾರಣಿಗಳು ರೆಸಾರ್ಟ್‌ ನಿರ್ಮಾಣಕ್ಕೆ ನೂರಾರು ಎಕರೆ ಭೂಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆಯಲ್ಲಿ ಬೆಟ್ಟಕ್ಕೆ ರಸ್ತೆಯೇ ಇಲ್ಲ. ಅಂತಹ ಸ್ಥಳದಲ್ಲಿ ರೆಸಾರ್ಟ್‌ ನಿರ್ಮಿಸಿ ಹೆಲಿಕಾಪ್ಟರ್‌ ಮೂಲಕ ವಿದೇಶಿ ಪ್ರವಾಸಿಗರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಅವಕಾಶ ನೀಡುವುದು ಬೇಡವೆಂದು ಅಧಿಕಾರಿಗಳ ಎದುರು ಪ್ರಸ್ತಾಪಿಸುತ್ತಿದ್ದೆ. ಆದರೆ, ದೇವಯ್ಯನವರು ಸುಮ್ಮನೆ ಕೂಗಾಡಿದರು. ವಯಸ್ಸಿಗೆ ಬೆಲೆ ನೀಡಿ ನಾನು ಹೆಚ್ಚು ಮಾತನಾಡಲಿಲ್ಲ‌’ ಎಂದು ಹೇಳಿಕೊಂಡಿದ್ದಾರೆ.

ಈ ದೃಶ್ಯ ಪ್ರಸಾರ ಮಾಡಿರುವ ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧವೂ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ವಿಚಾರವನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿವೆ. ಈ ಹಿಂದೆ ಪರಿಹಾರ ಕೇಂದ್ರಕ್ಕೆ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿದ್ದಾಗ ಸಂತ್ರಸ್ತರು ಮಾಧ್ಯಮಗಳ ಪ್ರತಿನಿಧಿಗಳ ವಿರುದ್ಧವೂ ಪ್ರತಿಭಟಿಸಿದ್ದರು. ರಾಜಕಾರಣಿಗಳು ಬಂದರೆ ಮಾತ್ರ ಬರುತ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅದನ್ನು ಏಕೆ ನೀವು ಪ್ರಸಾರ ಮಾಡಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !