ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ: ರಾಜ್ಯದಲ್ಲೂ ಕಣ್ಣೀರು, 7ಕ್ಕೆ ಏರಿದ ಕನ್ನಡಿಗರ ಸಾವಿನ ಸಂಖ್ಯೆ

ಲಂಕಾದಿಂದ ಬೆಂಗಳೂರಿಗೆ ವಾಪಸಾದ ಕೆಲ ಪ್ರವಾಸಿಗರು
Last Updated 22 ಏಪ್ರಿಲ್ 2019, 20:29 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಲಂಕಾದಲ್ಲಿ ಭಾನುವಾರ ದುಷ್ಕರ್ಮಿಗಳು ನಡೆಸಿದ ಬಾಂಬ್ ಸ್ಫೋಟದಲ್ಲಿ ಕರ್ನಾಟಕದ ಏಳು ಮಂದಿ ದುರ್ಮರಣಕ್ಕೆ ಈಡಾಗಿದ್ದು, ರಾಜ್ಯದಲ್ಲೂ ಕಣ್ಣೀರ ಕೋಡಿ ಹರಿದಿದೆ.

ಹತ್ತಿರ ಹಾಗೂ ಕೈಗೆಟುಕುವ ದರದಲ್ಲಿ ಸೌಲಭ್ಯಗಳು ಸಿಗುತ್ತವೆ ಎಂಬ ಕಾರಣಕ್ಕೆ ಈಚಿನ ವರ್ಷಗಳಲ್ಲಿ ಶ್ರೀಲಂಕಾಕ್ಕೆ ಪ್ರವಾಸ ತೆರಳುವ ಕನ್ನಡಿಗರ ಸಂಖ್ಯೆ ಹೆಚ್ಚಳವಾಗಿದೆ. ಎಲ್‌ಟಿಟಿಇ ಚಟುವಟಿಕೆ ಕಡಿಮೆಯಾದ ಬಳಿಕ ಪ್ರಮುಖ ಆಕರ್ಷಣೆಯೂ ನೆರೆಯ ದೇಶವಾಗಿತ್ತು. ಬಾಂಬ್ ದಾಳಿ ಪ್ರವಾಸಿ ಮನಸ್ಥಿತಿಯ ಕನ್ನಡಿಗರನ್ನು ಆತಂಕಕ್ಕೆ ದೂಡಿದೆ.

ಸುರತ್ಕಲ್‌ ಸಮೀಪದ ಬೈಕಂಪಾ ಡಿಯ ಫಾತಿಮಾ ರಜೀನಾ ಅವರು ಮೃತಪಟ್ಟಿರುವುದು ಭಾನುವಾರವೇ ದೃಢಪಟ್ಟಿತ್ತು. ಮತ್ತೆ ಆರು ಕನ್ನಡಿಗರು ಮೃತಪಟ್ಟಿರುವುದು ಸೋಮವಾರ ಖಚಿತವಾಗಿದೆ. ಇನ್ನೂ ಇಬ್ಬರು ಕಣ್ಮರೆಯಾಗಿದ್ದು, ಅವರ ಸುಳಿವಿಲ್ಲ.

ಲೋಕಸಭಾ ಚುನಾವಣೆ ಮುಗಿಸಿ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ದಾಸರಹಳ್ಳಿ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮುಖಂಡರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಏಪ್ರಿಲ್ 20ರಂದು ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಈ ತಂಡ, ನಸುಕಿನಲ್ಲಿ ಕೊಲಂಬೊ ತಲುಪಿ, ಅಲ್ಲಿನ ಶಾಂಗ್ರಿಲಾ ಹೋಟೆಲ್‌ನ ಕೊಠಡಿ ಸಂಖ್ಯೆ 618 ಹಾಗೂ 619ರಲ್ಲಿ ಉಳಿದುಕೊಂಡಿದ್ದರು. ತಿಂಡಿ ತಿನ್ನಲೆಂದು ಬೆಳಿಗ್ಗೆ 8.15ರ ಸುಮಾರಿಗೆ ಡೈನಿಂಗ್‌ ಹಾಲ್‌ಗೆ ಹೋಗಿದ್ದರು. ಅಲ್ಲಿ 200ಕ್ಕೂ ಹೆಚ್ಚು ಮಂದಿ ಇದ್ದರು.

ಏಳು ಮಂದಿ ಒಂದೇ ಟೇಬಲ್‌ನಲ್ಲಿ ಕುಳಿತು ತಿಂಡಿ ಆರ್ಡರ್ ಮಾಡಿದ್ದರು. ಕೆಲ ಮುಖಂಡರು, ಮನೆಗೂ ಕರೆ ಮಾಡಿ ತಿಂಡಿ ತಿನ್ನುತ್ತಿರುವುದಾಗಿ ಹೇಳಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಸ್ಫೋಟ ಸಂಭವಿಸಿತು.

ಸುದ್ದಿ ತಿಳಿದೊಡನೆ ಸಂಬಂಧಿಕರು, ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ, ಅವರ ಮೊಬೈಲ್‌ಗಳು ಸ್ವಿಚ್ ಆಫ್‌ ಆಗಿದ್ದವು. ಗಾಬರಿಯಾದ ಸಂಬಂಧಿಕರು, ಶ್ರೀಲಂಕಾದಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಿ ಮಾಹಿತಿ ತಿಳಿದುಕೊಳ್ಳಲು ಆರಂಭಿಸಿದರು.

ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಕೆಲ ಭಾರತೀಯರು ಮೃತಪಟ್ಟಿರುವ ಸಂಗತಿ ತಿಳಿಯಿತು. ಶ್ರೀಲಂಕಾದ ಸ್ನೇಹಿತರು, ಶವಾಗಾರಗಳಿಗೆ ಹೋಗಿ ಬೆಂಗಳೂರಿನ ಐವರು ಸಾವಿಗೀಡಾಗಿದ್ದನ್ನು ಖಾತ್ರಿಪಡಿಸಿ ಫೋಟೊಗಳನ್ನು ಬೆಂಗಳೂರಿನಲ್ಲಿದ್ದ ಸಂಬಂಧಿಕರಿಗೆ ಕಳುಹಿಸಿಕೊಟ್ಟರು.

ಉದ್ಯಮಿ ಸಾವು: ಶಾಸಕ ರಾಮಲಿಂಗಾರೆಡ್ಡಿ ಅವರ ಆಪ್ತ, ಉದ್ಯಮಿ ಎಸ್‌.ಆರ್. ನಾಗರಾಜ್ ರೆಡ್ಡಿ ಎಂಬುವರೂ ಸ್ಫೋಟದಲ್ಲಿ ಮೃತ ಪಟ್ಟಿದ್ದಾರೆ. ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಐವರು ಸ್ನೇಹಿತರ ಜೊತೆ ನಾಗರಾಜ್, ಶ್ರೀಲಂಕಾಕ್ಕೆ ಹೋಗಿದ್ದರು.

ಶಾಸಕರ ಸಂಬಂಧಿಗೆ ಗಾಯ: ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್ ಅವರ ಸಂಬಂಧಿ ಪುರುಷೋತ್ತಮ್ ಹಾಗೂ ಸ್ನೇಹಿತರು ಸಹ ಶ್ರೀಲಂಕಾಕ್ಕೆ ಹೋಗಿದ್ದರು. ಶಾಂಗ್ರಿಲಾ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದ ಅವರಿಗೂ ಸ್ಫೋಟದಿಂದ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಕುಮಾರ್, ರಮೇಶ್ ಗೌಡ ಮತ್ತು ಲಕ್ಷ್ಮಿನಾರಾಯಣ
ಶಿವಕುಮಾರ್, ರಮೇಶ್ ಗೌಡ ಮತ್ತು ಲಕ್ಷ್ಮಿನಾರಾಯಣ

ಶವ ತರಲು ಕೊಲಂಬೊಕ್ಕೆ ಹೋದ ತಂಡ: ಸಾವಿನ ಸುದ್ದಿ ಹರಡುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

‘ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಹನುಮಂತರಾಯಪ್ಪ ಅವರಿಗೆ ಕರೆ ಮಾಡಿದ್ದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಗಾಬರಿಯಾಯಿತು. ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬೆಳಿಗ್ಗೆಯೇ ಮೃತಪಟ್ಟ ಸುದ್ದಿ ತಿಳಿದು ಆಘಾತವಾಯಿತು’ ಎಂದು ಸಂಬಂಧಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ದಾಸರಹಳ್ಳಿ ಶಾಸಕ ಆರ್‌. ಮಂಜುನಾಥ್, ‘ದುರ್ಘಟನೆಯಲ್ಲಿ ಮೃತಪಟ್ಟವರ ಶವಗಳನ್ನು ತರಲು ಸಂಬಂಧಿಕರನ್ನು ಒಳಗೊಂಡ ಎಂಟು ಮಂದಿಯ ತಂಡವು ಸೋಮವಾರ ಸಂಜೆಯೇ ಕೊಲಂಬೊಕ್ಕೆ ಹೋಗಿದೆ. ಮಂಗಳವಾರ ರಾತ್ರಿ ಶವಗಳನ್ನು ನಗರಕ್ಕೆ ತರುವ ಸಾಧ್ಯತೆ ಇದೆ’ ಎಂದು ಹೇಳಿದರು.

ವಾಪಸ್: ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರ ಪೈಕಿ ಕೆಲವರು ಸೋಮವಾರ ಸಂಜೆ ಬೆಂಗಳೂರು ಹಾಗೂ ಮಂಗಳೂರಿಗೆ ಬಂದಿಳಿದರು. ಅವರ ಒಟ್ಟು ಸಂಖ್ಯೆ ಸದ್ಯಕ್ಕೆ ತಿಳಿದುಬಂದಿಲ್ಲ.

ಅಂಜುಂ ಪರ್ವೇಜ್‌ ನೋಡಲ್‌ ಅಧಿಕಾರಿ
‘ಮೃತ ದೇಹಗಳನ್ನು ಶೀಘ್ರ ಸ್ವದೇಶಕ್ಕೆ ತರಲು ಶ್ರೀಲಂಕಾದ ಭಾರತೀಯ ಹೈಕಮಿಷನರ್‌ ಜೊತೆ ಮಾತನಾಡಿದ್ದೇನೆ. ನಾಪತ್ತೆಯಾದ ಇಬ್ಬರ ಬಗ್ಗೆ ಮಾಹಿತಿ ಪಡೆಯಲು ನಮ್ಮ ಪೊಲೀಸ್‌ ಅಧಿಕಾರಿಗಳು ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ’ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದರು. ‘ಭಾರತೀಯ ರಾಯಭಾರ ಕಚೇರಿಯಲ್ಲಿ ನೋಡಲ್‌ ಅಧಿಕಾರಿಯಾಗಿ ರಮೇಶ್‌ ಬಾಬು ಅವರನ್ನು ಶ್ರೀಲಂಕಾದ ಅಧಿಕಾರಿಗಳು ನೇಮಿಸಿದ್ದಾರೆ. ಕರ್ನಾಟಕದ ಪ್ರವಾಸಿಗರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್‌) ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಅವರನ್ನು ನೇಮಿಸಲಾಗಿದೆ’ ಎಂದರು.

ತುರ್ತು ಪರಿಸ್ಥಿತಿ ಘೋಷಣೆ
ಕೊಲಂಬೊ (ಪಿಟಿಐ): ಈಸ್ಟರ್‌ ದಿನ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿದೆ. ಈ ಮಧ್ಯೆ, ಸೋಮವಾರ ಮಧ್ಯರಾತ್ರಿಯಿಂದ ಶ್ರೀಲಂಕಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನೇತೃತ್ವದ ರಾಷ್ಟ್ರೀಯ ಭದ್ರತಾ ಮಂಡಳಿ (ಎನ್‌ಎಸ್‌ಸಿ) ಜತೆಗಿನ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಿದೆ.

ಸ್ಫೋಟದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ, ಮಂಗಳವಾರ ರಾಷ್ಟ್ರೀಯ ಶೋಕ ದಿನ ಎಂದೂ ಸರ್ಕಾರ ಘೋಷಿಸಿದೆ.

*
ಕನ್ನಡಿಗರ ಸಾವಿನ ವಿಷಯ ಕೇಳಿ ಆಘಾತವಾಗಿದೆ. ಶವಗಳನ್ನು ರಾಜ್ಯಕ್ಕೆ ತರಲು ಹಾಗೂ ನಾಪತ್ತೆಯಾದವರನ್ನು ಹುಡುಕಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

*
ಕನ್ನಡಿಗರು ಮೃತಪಟ್ಟ ಸುದ್ದಿ ತಿಳಿದು ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನ. ನಾಪತ್ತೆಯಾದವರನ್ನು ಪತ್ತೆ ಮಾಡಲು ಶ್ರೀಲಂಕಾದ ರಾಯಭಾರಿ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT