ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸರಣಿ ಬಾಂಬ್‌ ಸ್ಫೋಟ: ಮೃತಪಟ್ಟವರಿಗೆ ಕಣ್ಣೀರ ವಿದಾಯ

ಸಂಬಂಧಿಕರ ಮುಗಿಲು ಮುಟ್ಟಿದ ಆಕ್ರಂದನ
Last Updated 24 ಏಪ್ರಿಲ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ಮೃತಪಟ್ಟಿರುವ ರಾಜ್ಯದ ಎಂಟು ಮಂದಿಗೆ ಬುಧವಾರ ಕಣ್ಣೀರ ವಿದಾಯ ಹೇಳಲಾಯಿತು.

ದಾಸರಹಳ್ಳಿಯಲ್ಲಿ ನೆಲೆಸಿದ್ದ ನೆಲಮಂಗಲದ ಕಾಚನಹಳ್ಳಿ ಗ್ರಾಮದ ಕೆ.ಜಿ.ಹನುಮಂತರಾಯಪ್ಪ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ, ಸುಭಾಷ್‌ ನಗರದ ನಿವಾಸಿ, ಜೆಡಿಎಸ್‌ ಮುಖಂಡ ಗೋವೇನಹಳ್ಳಿ ಶಿವಕುಮಾರ್‌, ಬೆಂಗಳೂರು ನಿವಾಸಿ,ಉದ್ಯಮಿ ಎಸ್‌.ಆರ್‌.ನಾಗರಾಜ್‌ ರೆಡ್ಡಿ ಅವರ ಮೃತದೇಹಗಳನ್ನು ಶ್ರೀಲಂಕಾದಿಂದ ವಿಶೇಷ ವಿಮಾನದಮಂಗಳವಾರ ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪಾರ್ಥಿವ ಶರೀರಗಳನ್ನು ತವರಿಗೆ ಒಯ್ಯಲು ಆಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಖುದ್ದು ಹಾಜರಿದ್ದ ಗೃಹ ಸಚಿವ ಎಂ.ಬಿ.ಪಾಟೀಲ, ಉಸ್ತುವಾರಿ ನೋಡಿಕೊಂಡರು.

ದಾಸರಹಳ್ಳಿಯ ರಂಗಪ್ಪ, ಹಾರೋಕ್ಯಾತನಹಳ್ಳಿಯ ಎಚ್‌.ಪುಟ್ಟರಾಜು, ಅಡಕಮಾರನಹಳ್ಳಿಯ ಎ.ಮಾರೇಗೌಡ ಮತ್ತು ತುಮಕೂರು ನಿವಾಸಿ ರಮೇಶ್‌ ಅವರ ಮೃತದೇಹಗಳು ಬುಧವಾರ ಸಂಜೆ ವೇಳೆಗೆ ತಾಯ್ನಾಡಿಗೆ‌‌‌ ತಲುಪಿದವು.

ಮೃತದೇಹಗಳ ಹಸ್ತಾಂತರದಲ್ಲಿ ವಿಳಂಬವಾಗಿದ್ದರಿಂದ ಕುಟುಂಬಸ್ಥರು ಕಂಗಾಲಾಗಿದ್ದರು. ಬುಧವಾರ ಮೃತದೇಹಗಳು ಮನೆಗಳಿಗೆ ಬರುತ್ತಿದ್ದಂತೆಯೇ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ವೀರಪ್ಪ ಮೊಯಿಲಿ ಮೃತರ ಅಂತಿಮ ದರ್ಶನ ಪಡೆದರು. ಜನ ಸಾಗರವೇ ಹರಿದು ಬಂದಿತ್ತು. ಸಂತೋಷದಿಂದ ಪ್ರವಾಸಕ್ಕೆ ಹೊರಟವರು ಶವವಾಗಿ ಮನೆಗೆ ಹಿಂತಿರುಗಿದ್ದಾರೆ ಎಂದು ಕಣ್ಣೀರು ಹರಿಸಿದ ಕುಟುಂಬ ಸದಸ್ಯರು ವಿಧಿಯಾಟಕ್ಕೆ ಮಮ್ಮಲ ಮರುಗಿದರು.

ಲಕ್ಷ್ಮಿನಾರಾಯಣ ಅವರ ಪುತ್ರ ಅಭಿಲಾಷ್‌ ದೇವೇಗೌಡರ ಕಾಲಿಗೆ ನಮಸ್ಕರಿಸಿ ಗಳಗಳನೆ ಅತ್ತರು. ನೆಲಮಂಗಲದ ಗೋವೇನಹಳ್ಳಿ ಜೆಡಿಎಸ್‌ ಮುಖಂಡ ಶಿವಕುಮಾರ ಅವರ ಅಂತ್ಯಕ್ರಿಯೆಯನ್ನು ಮನೆಯ ಮುಂಭಾಗದ ತೋಟದಲ್ಲಿ ಅವರ ತಂದೆ ಹನುಮಯ್ಯ ಸಮಾಧಿ ಪಕ್ಕದಲ್ಲೇ ನೆರವೇರಿಸಲಾಯಿತು.

ನೆಲಮಂಗಲದ ಬಿ.ಎಚ್‌.ರಸ್ತೆ ಮೂಲಕ ಮೃತ ಶಿವಕುಮಾರ್ ಹಾಗೂ ಲಕ್ಷ್ಮಿ‌ನಾರಾಯಣ ಅವರ ಪಾರ್ಥಿವ ಶರೀರವನ್ನು ಸ್ವಗೃಹದಿಂದ ಅಂಬೇಡ್ಕರ್‌ ಕ್ರೀಡಾಂಗಣದವರೆಗೆ ಮೆರವಣಿಗೆ ಮೂಲಕ ತಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಂಜೆ 5.30ರಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಕೆ.ಜಿ.ಹನುಮಂತರಾಯಪ್ಪ ಅವರ ಮೃತದೇಹವನ್ನು ಬೂದಿಹಾಳದ ಕಾಚನಹಳ್ಳಿಯಲ್ಲಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ದಾಸರಹಳ್ಳಿ ನಿವಾಸಿ ರಂಗಪ್ಪ ಅವರ ಸ್ವಗೃಹದಲ್ಲಿ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಅಂತ್ಯಸಂಸ್ಕಾರ ಮಾಡಲಾಯಿತು.

ಪಲ್ಲಕ್ಕಿಯಲ್ಲಿ ಮೆರವಣಿಗೆ: ಬೆಂಗಳೂರಿನ ನಿವಾಸಿ, ಉದ್ಯಮಿ ಎಸ್‌.ಆರ್‌.ನಾಗರಾಜ್‌ ರೆಡ್ಡಿ ಅವರ ಮೃತ ದೇಹವನ್ನು ಬಿಟಿಎಂ ಲೇಔಟ್‌ನ 2ನೇ ಹಂತದಿಂದ ಮೈಕೊ ಲೇಔಟ್‌ನ ಮೃತರ ಸ್ವಗೃಹದವರೆಗೂ ಹೂವಿನ ಪಲ್ಲಕ್ಕಿಯ ಮೂಲಕ ತರಲಾಯಿತು. ಸುಮಾರು ಅರ್ಧ ಕಿಲೋಮೀಟರ್‌ ಮೆರವಣಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಜನ ಸೇರಿದ್ದರು. ಗುಂಡುತೋಪಿನ ನಾಗರಾಜ್‌ ರೆಡ್ಡಿ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು. ಶಾಸಕರಾದ ರಾಮಲಿಂಗಾರೆಡ್ಡಿ, ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಮೃತ ದೇಹಗಳನ್ನು ರಾಜ್ಯಕ್ಕೆ ತರಲು ನೆಲಮಂಗಲ ಶಾಸಕ ಕೆ.ಶ್ರೀನಿವಾಸಮೂರ್ತಿ, ಜೆಡಿಎಸ್ ಮುಖಂಡ ಇ.ಕೃಷ್ಣಪ್ಪ, ಜಿ. ಪಂ. ಸದಸ್ಯ ತಿಮ್ಮರಾಯಪ್ಪ ಹಾಗೂ ಮೃತರ ಸಂಬಂಧಿಕರು ಸೋಮವಾರ ರಾತ್ರಿ ಕೊಲಂಬೊಕ್ಕೆ ಹೋಗಿದ್ದರು.

‘ಪತಿ ಸಾವಿನ ವಿಷಯ ಪತ್ನಿಗೆ ಗೊತ್ತಿರಲಿಲ್ಲ’

ಬಾಂಬ್‌ ದಾಳಿಯಲ್ಲಿ ಪುಟ್ಟರಾಜು ಮೃತ‍ಪಟ್ಟಿರುವ ವಿಷಯ ಅವರ ಪತ್ನಿ ಕಾವ್ಯ ಅವರಿಗೆ ಗೊತ್ತೇ ಇರಲಿಲ್ಲ.

ಪುಟ್ಟರಾಜು ಮೃತಪಅಟ್ಟಿರುವ ವಿಷಯ ಅವರ ತಂದೆಗೆ ಮೊದಲೇ ಗೊತ್ತಿತ್ತು. ಆದರೂ ಕುಟುಂಬದ ಯಾರೊಬ್ಬರಿಗೂ ವಿಷಯ ಹೇಳದೆ ತಮ್ಮೊಳಗೆ ದುಃಖವನ್ನು ಅದುಮಿಟ್ಟುಕೊಂಡಿದ್ದರು. ಮಗನ ಪಾರ್ಥೀವ ಶರೀರ ನೋಡುತ್ತಿದ್ದಂತೆ ದುಃಖ ಉಮ್ಮಳಿಸಿ ಕಣ್ಣೀರ ಕೋಡಿ ಹರಿಸಿದರು.

ಪ್ರವಾಸಕ್ಕೆ ಹೋಗಿದ್ದ ಪತಿ ಶವವಾಗಿ ಬಂದಿದ್ದನ್ನು ಕಂಡ ಕಾವ್ಯ ಅವರ ದುಃಖದ ಕೋಡಿ ಒಡೆದು, ಕಣ್ಣೀರು ಹರಿಯಿತು.

‘ಹುಷಾರಾಗಿ ಬರುವೆ ಎಂದೇಳಿ ಹೋದವರು ನಮ್ಮಿಂದ ದೂರವಾದರೆ’ ಎಂದು ರೋದಿಸಿದ ಅವರು, ‘ಶ್ರೀಲಂಕಾದಲ್ಲಿವಿಮಾನ ಇಳಿದ ಬಳಿಕ ಮೆಸೇಜ್‌ ಮಾಡಿದ್ದರು. ಮನೆಯ ದೀಪವಾಗಿದ್ದ ನನ್ನ ಪತಿ, ಅವರಿಲ್ಲದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬಿಕ್ಕಿಬಿಕ್ಕಿ ಅತ್ತರು ಪುಟ್ಟರಾಜು ಪತ್ನಿ ಕಾವ್ಯ.

**

ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ‌
- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

***

ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಲು ಎಲ್ಲರೂ ಕೈ ಜೋಡಿಸಬೇಕು
– ಎಚ್‌.ಡಿ.ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ

***

ಘಟನೆಯಿಂದ ಬಹಳ ನೋವಾಗಿದೆ. ಇದೊಂದು ಹೇಯಕೃತ್ಯ
– ಎಂ.ಬಿ.ಪಾಟೀಲ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT