ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಲ್ಸ್‌ಮನ್‌ ಮಗಳಿಗೆ 624 ಅಂಕ

Last Updated 30 ಏಪ್ರಿಲ್ 2019, 21:04 IST
ಅಕ್ಷರ ಗಾತ್ರ

ಬೆಂಗಳೂರು: ಮಡಿವಾಳದ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಹಣ್ಣು–ತರಕಾರಿಗಳನ್ನು ಮಾರಾಟ ಮಾಡುವ(ಸೇಲ್ಸ್‌ಮನ್) ಶಿವಶಂಕರ್‌ ಅವರಿಗೆ ಮಂಗಳವಾರ ಆದ ಸಂತಸಕ್ಕೆ ಪಾರವೇ ಇರಲಿಲ್ಲ.

ಅವರ ಮಗಳು ಯು.ಎಸ್‌.ಭಾವನಾ ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದೇ ಅವರ ಸಂಭ್ರಮಕ್ಕೆ ಕಾರಣ. ಸೇಂಟ್‌ ಜಾನ್ಸ್‌ ಇಂಗ್ಲಿಷ್‌ ಹೈಸ್ಕೂಲ್‌ನ ವಿದ್ಯಾರ್ಥಿನಿ ಭಾವನಾ, ವಿಜ್ಞಾನ(99) ಬಿಟ್ಟು ಉಳಿದ ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾಳೆ.

‘ಆಯಾ ದಿನ ಮಾಡಿದ ಪಾಠಗಳನ್ನು ಅಂದಂದೇ ಓದುತ್ತಿದ್ದೆ. ಆಮೇಲೆ ಓದಿದರೆ ಆಯಿತೆಂದು ಆಲಸ್ಯ ತೋರುತ್ತಿರಲಿಲ್ಲ. ಅ‌ಮ್ಮ–ಅಪ್ಪನೂ ಇಂತಿಷ್ಟು ಸಮಯ ಓದುವಂತೆ ಒತ್ತಡ ಹಾಕುತ್ತಿರಲಿಲ್ಲ. ಪೋಷಕರು, ಶಿಕ್ಷಕರ ಪ್ರೋತ್ಸಾಹವೇ ಸಾಧನೆಗೆ ಸಹಕಾರಿಯಾಯಿತು’ ಎಂದು ವೈದ್ಯೆಯಾಗಲು ಕನಸು ಕಟ್ಟಿಕೊಂಡಿರುವ ಭಾವನಾ ‘ಪ್ರಜಾವಾಣಿ’ಯೊಂದಿಗೆ ತಮ್ಮ ಸಂತಸ ಹಂಚಿಕೊಂಡಳು. ಹಣಕಾಸಿನ ಮುಗ್ಗಟ್ಟಿನ ನಡುವೆಯೂ ಮಗಳ ಕನಸನ್ನು ನನಸು ಮಾಡಬೇಕೆಂಬ ಹಂಬಲವನ್ನು ಶಿವಶಂಕರ್‌ ಹೊಂದಿದ್ದಾರೆ.

ಎಸ್ಸೆಸ್ಸೆಲ್ಸಿ: 2ನೇ ಸ್ಥಾನಕ್ಕೆ ಜಿಗಿದ ರಾಮನಗರ
​ರಾಮನಗರ:
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆ ಶೇ 88.49 ಫಲಿತಾಂಶ ಪಡೆದು ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷ ಜಿಲ್ಲೆಯು 17ನೇ ಸ್ಥಾನದಲ್ಲಿ ಇತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಘಟಿತ ಪ್ರಯತ್ನದಿಂದಾಗಿ ಈ ಫಲಿತಾಂಶ ಸುಧಾರಣೆ ಸಾಧ್ಯವಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಪ್ರಶ್ನೋತ್ತರ ಮಾಲಿಕೆಯ ‘ಯಶಸ್ಸು’ ಕೈಪಿಡಿ ವಿತರಿಸಲಾಗಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದ್ದರು.

‘ಈ ವರ್ಷ ಆಯ್ದ 40 ಸರ್ಕಾರಿ ಶಾಲೆಗಳಲ್ಲಿ ಗಂಡು ಮಕ್ಕಳಿಗೆ ರಾತ್ರಿ ತರಗತಿ ನಡೆಸಲಾಗಿತ್ತು. ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಮುಂಜಾನೆ 5ಕ್ಕೆ ಮೊಬೈಲ್‌ ಕರೆ ಮಾಡಿ ಎಬ್ಬಿಸಿ ಓದಿಸುತ್ತಿದ್ದರು. ಇಂತಹ ಅನೇಕ ಪ್ರಯತ್ನಗಳಿಂದ ಫಲಿತಾಂಶ ಸುಧಾರಣೆ ಕಂಡಿದೆ’ ಎಂದು ಡಿಡಿಪಿಐ ಗಂಗಮಾರೇಗೌಡ ಹರ್ಷ ವ್ಯಕ್ತಪಡಿಸಿದರು.

***

‘ಶಾಲೆಯಲ್ಲಿ ಆಯಾಯ ದಿನ ಮಾಡಿದ ಪಾಠಗಳನ್ನು ನಿಯಮಿತವಾಗಿ ಅದೇ ದಿನ ಓದುವ ರೂಢಿ ಇಟ್ಟುಕೊಂಡಿರುವುದು ಗರಿಷ್ಠ ಅಂಕ ಗಳಿಸಲು ಸಹಕಾರಿ ಆಗಿದೆ. ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗಿಲ್ಲ. ಈ ಸಾಧನೆಗೆ ನನ್ನ ಶಾಲೆ ಶಿಕ್ಷಕರು ಮತ್ತು ತಂದೆ-ತಾಯಿ ಪ್ರತಿ ದಿನ ನನಗೆ ನೀಡುತ್ತಿದ್ದ ಪ್ರೋತ್ಸಾಹ ಕಾರಣ. ಐಐಟಿಯಲ್ಲಿ ಎಂಜಿನಿಯರಿಂಗ್‌ ಮುಗಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಕೆಲಸ ಮಾಡುವ ಆಸೆ ಇದೆ’.
-ಅನುಪಮಾ ಕಾಮತ್‌,ಎಸ್‌ವಿಎಸ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ, ಬಂಟ್ವಾಳ

*
‘ತರಗತಿ ಆರಂಭದ ದಿನಗಳಿಂದಲೇ ಓದಿನ ಕಡೆಗೆ ಗಮನ ಹರಿಸುತ್ತಿದ್ದೆ. ತರಗತಿಯಲ್ಲಿ ಹೇಳಿಕೊಡುತ್ತಿದ್ದ ಪಠ್ಯವನ್ನು ಅವತ್ತೆ ಓದುತ್ತಿದ್ದೆ. ಬೆಳಿಗ್ಗೆ ಮತ್ತು ರಾತ್ರಿ ಎರಡು ಹೊತ್ತು ಓದುತ್ತಿದ್ದೆ. ನಸುಕಿನಲ್ಲಿ ಬೇಗನೆ ಎದ್ದು ಓದುವುದರಿಂದ ಹಿತವಾಗುತ್ತಿತ್ತು. ಮನೆಯಲ್ಲಿ ತಂದೆ, ತಾಯಿ ಓದಿಗೆ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿದ್ದರು. ಚಾರ್ಟರ್ಡ್‌ ಅಕೌಂಟೆಂಟ್‌ ಆಗುವ ಗುರಿ ಹೊಂದಿದ್ದೇನೆ’.
-ಕೆ.ಆರ್‌.ಕೃಪಾ,ಕುಮಾರಸ್ವಾಮಿ ಇಂಗ್ಲಿಷ್‌ ಮಾಧ್ಯಮ ಪ್ರೌಢ ಶಾಲೆ, ಸುಬ್ರಹ್ಮಣ್ಯ

*
625 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದೆ. ಆದರೆ, ಕನ್ನಡದಲ್ಲಿ ಒಂದು ಅಂಕ ಕಡಿಮೆ ಆಯಿತು. ಶಿಕ್ಷಕರು, ಪೋಷಕರು ಬೆಂಬಲ ನೀಡಿದರು. ಪ್ರತಿ ದಿನ ವೇಳಾಪಟ್ಟಿ ಹಾಕಿಕೊಂಡು, ಬೆಳಿಗ್ಗೆ 5ಕ್ಕೆ ಎದ್ದು ಓದುತ್ತಿದ್ದೆ. ಶಾಲೆ ಮುಗಿಸಿಕೊಂಡು ಬಂದು ರಾತ್ರಿ 11ರ ವರೆಗೆ ಓದುತ್ತಿದ್ದೆ. ಏರೋನಾಟಿಕಲ್‌ ಎಂಜಿನಿಯರ್‌ ಆಗಬೇಕೆಂಬ ಆಸೆ ಇದೆ.
-ಪ್ರಗತಿ ಗೌಡ,ಹಾಸನ

*
ಫಲಿತಾಂಶ ಬಂದಾಗ ತುಂಬಾ ಖುಷಿಯಾಯಿತು. ಶಿಕ್ಷಕರು ಮತ್ತು ಪೋಷಕರು ನೀಡಿದ ಸಹಕಾರ ಮರೆಯುವಂತಿಲ್ಲ. ದಿನಕ್ಕೆ 3 ತಾಸು ಓದುತ್ತಿದ್ದೆ. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಆಸಕ್ತಿ ಇದೆ. ಒತ್ತಡ ನಿವಾರಣೆಗೆ ಸಂಗೀತ ಆಲಿಸುತ್ತೇನೆ.
-ಅಭಿನ್‌ ಬಿ,ದ್ವಿತೀಯ ರ‍್ಯಾಂಕ್‌

*
‘ನಾನು ಪ್ರತಿದಿನ ಮಾಡುತ್ತಿದ್ದ ಪಾಠವನ್ನು ಅದೇ ದಿನ ಗಮನ ಇಟ್ಟು ಓದುತ್ತಿದ್ದೆ. ಎಲ್ಲಾ ವಿಷಯಕ್ಕೂ ಒಂದೇ ರೀತಿ ಗಮನ ಕೊಡುತ್ತಿದ್ದು, ಜೇಸಿಸ್ ಶಾಲೆಯ ಶಿಕ್ಷಕರ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನದಿಂದಾಗಿ ಇಂದು ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಗಣಿತ ವಿಷಯ ನನ್ನ ಇಷ್ಟದ ವಿಷಯವಾಗಿದ್ದು, ಅದರಲ್ಲಿ ಒಂದು ಅಂಕ ಕಡಿಮೆ ಬಂದಿದ್ದು, ಬೇಸರ ಉಂಟು ಮಾಡಿದೆ. ಮುಂದೆ ಉನ್ನತ ಶಿಕ್ಷಣ ಮುಗಿಸಿ, ಪಿಎಚ್‌.ಡಿ ಸಂಶೋಧನೆ ಮಾಡುವ ಗುರಿ ಇರಿಸಿಕೊಂಡಿದ್ದೇನೆ’.
-ಚಿನ್ಮಯಿ

*
ಪ್ರತಿದಿನ ಬೆಳಿಗ್ಗೆ ಎರಡು ತಾಸು, ಸಂಜೆ ನಾಲ್ಕು ತಾಸು ಓದುತ್ತಿದ್ದೆ. ಗೈಡ್‌ಗಳಿಗಿಂತ ಪಠ್ಯಪುಸ್ತಕದಲ್ಲಿನ ವಿಷಯವನ್ನೇ ಚೆನ್ನಾಗಿ ಮನನ ಮಾಡಿಕೊಂಡಿದ್ದೆ. ಓದಿನ ವಿಷಯದಲ್ಲಿ ಯಾವುದೇ ಗೊಂದಲಗಳಿದ್ದರೂ, ಸಂಕೋಚವಿಲ್ಲದೆ ಗುರುಗಳ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಪ್ರತಿ ವಾರಾಂತ್ಯದಲ್ಲಿ ಕ್ರಿಕೆಟ್‌ ಆಡಲು ಹೋಗುತ್ತಿದ್ದೆ. ನನ್ನ ಅಮ್ಮನೇ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ. ಅವರೇ ಕ್ಲಾಸ್‌ ಟೀಚರ್‌ ಆಗಿದ್ದರು. ಸೈನ್ಸ್ ಆಯ್ದುಕೊಂಡು ಏರೋನಾಟಿಕಲ್‌ ಎಂಜಿನಿಯರ್ ಆಗಬೇಕೆಂಬ ಗುರಿಯಿದೆ.
-ಎಸ್‌.ಸಾಯಿರಾಮ್‌, ಲಿಟಲ್‌ ಲಿಲ್ಲಿಸ್‌ ಇಂಗ್ಲಿಷ್‌ ಹೈಸ್ಕೂಲ್‌, ವಿದ್ಯಾರಣ್ಯಪುರ

*
ಶಾಲಾ ಸಮಯ ಹೊರತು ಪ್ರತಿದಿನ ನಾಲ್ಕೈದು ಗಂಟೆ ಓದುತ್ತಿದ್ದೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ದಿನದ ಏಳೆಂಟು ತಾಸು ಓದಲು ಆರಂಭಿಸಿದ್ದೆ. ಶಾಲೆಯಲ್ಲಿಯೂ ವಿಜ್ಞಾನ ಮತ್ತು ಗಣಿತದ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ ಅಭ್ಯಾಸ ಮಾಡಿದ್ದೆ. ಪಿ.ಯು.ಸಿ.ಯಲ್ಲಿ ವಾಣಿಜ್ಯ ವಿಷಯ ಆಯ್ದುಕೊಂಡು, ಮುಂದೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ. ಚರ್ಚಾ ಸ್ಪರ್ಧೆಗಳು, ಸಂಗೀತವೆಂದರೆ ನನಗೆ ಬಹಳ ಇಷ್ಟ.
-ಆರ್‌.ಭಾವನಾ, ಸೌಂದರ್ಯ ಪ್ರೌಢಶಾಲೆ, ನಾಗಸಂದ್ರ, ಬೆಂಗಳೂರು.

*
ವಾರ್ಷಿಕ ಪರೀಕ್ಷೆ ಎರಡು ತಿಂಗಳು ಇರುವಾಗಲೇ ಕ್ರಮಬದ್ಧ ಓದಿನ ಯೋಜನೆ ರೂಪಿಸಿಕೊಂಡೆ. ಪ್ರತಿದಿನ ಬೆಳಿಗ್ಗೆ ಎದ್ದು ಓದಲು ಆದ್ಯತೆ ನೀಡುತ್ತಿದ್ದೆ. ಆಯಾ ದಿನದ ಪಾಠಗಳನ್ನು ಅಂದೇ ಮನನ ಮಾಡಿಕೊಳ್ಳುತ್ತಿದ್ದೆ. ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಗ್ರಹಿಸಲು ವಾರಾಂತ್ಯದಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದೆ. ಈಗ ವಿಜ್ಞಾನದಲ್ಲಿ ಪಿಸಿಎಂಬಿ ಆಯ್ದಕೊಳ್ಳಬೇಕು, ಉನ್ನತ ವ್ಯಾಸಂಗದಲ್ಲಿ ಜೈವಿಕ ತಂತ್ರಜ್ಞಾನದ(ಬಯೋ ಟೆಕ್ನಾಲಜಿ) ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಂಡಿದ್ದೇನೆ.
-ಎಚ್‌.ವಿ.ಶಾಂಭವಿ, ಸಮಾಜ ಸೇವಾ ಮಂಡಳಿ ಪ್ರೌಢಶಾಲೆ, ತ್ಯಾಗರಾಜನಗರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT