ಶನಿವಾರ, ಸೆಪ್ಟೆಂಬರ್ 18, 2021
30 °C
ಎಸ್ಸೆಸ್ಸೆಲ್ಸಿಯಲ್ಲಿ ಸತತ 10ನೇ ವರ್ಷ ಶೇ 100 ಫಲಿತಾಂಶ

ವಡೇರಹಳ್ಳಿ ಮೊರಾರ್ಜಿ ಶಾಲೆ ‘ಶತಕ ಸಾಧನೆ’

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತಾಲ್ಲೂಕಿನ ವಡೇರಹಳ್ಳಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯು (ಪರಿಶಿಷ್ಟ ವರ್ಗ) ಎಸ್‌ಎಸ್‌ಎಲ್‌ ಸಿ ಫಲಿತಾಂಶದಲ್ಲಿ ಸತತವಾಗಿ 10 ವರ್ಷಗಳ ಕಾಲ ‘ಶತಕ ಸಾಧನೆ’ ಮಾಡುವ ಮೂಲಕ ಗಮನ ಸೆಳೆದಿದೆ.

2009–10ನೇ ಸಾಲಿನಲ್ಲಿ ಈ ವಸತಿ ಶಾಲೆಯ ಮೊದಲನೇ ಬ್ಯಾಚ್‌ನ ವಿದ್ಯಾರ್ಥಿಗಳು ಆರಂಭಿಸಿದ ‘ಶತಕ ಸಾಧನೆ’ಯನ್ನು ಮುಂದುವರಿಸಿಕೊಂಡು ಬಂದಿದ್ದು, ಇದೀಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ‘ಶತಕ ಸಾಧನೆ’ಯ ದಶಮಾನೋತ್ಸವದ ಸಂಭ್ರಮದಲ್ಲಿದ್ದಾರೆ.

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತಿದ್ದ 35 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರ ಪೈಕಿ 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿರುವುದು ವಿಶೇಷವಾಗಿದೆ. 625ಕ್ಕೆ 619 (ಶೇ 99.04) ಅಂಕ ಗಳಿಸಿರುವ ಇದೇ ಶಾಲೆಯ ವಿದ್ಯಾರ್ಥಿನಿ ವಿ.ಆರ್‌. ವೈಷ್ಣವಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಕೀರ್ತಿಗೂ ಪಾತ್ರಳಾಗಿದ್ದಾಳೆ.

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ 2005ರಲ್ಲಿ ಆವರಗೆರೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿದ್ದ ಈ ವಸತಿ ಶಾಲೆಯು ವಡೇರಹಳ್ಳಿಯಲ್ಲಿ ನಿರ್ಮಾಣಗೊಂಡ ಸ್ವಂತ ಕಟ್ಟಡಕ್ಕೆ 2015–16ನೇ ಸಾಲಿಗೆ ಸ್ಥಳಾಂತರಗೊಂಡಿತ್ತು.

ಓದಿಗೆ ಶಿಕ್ಷಕರ ನಿಯೋಜನೆ: ‘ವಸತಿ ಶಾಲೆಯಾಗಿದ್ದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೂ ತರಗತಿ ನಡೆಸಲಾಗುತ್ತಿತ್ತು. ರಾತ್ರಿ 7.30ರವರೆಗೂ ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಇರಿಸಿಕೊಂಡು ಅಂದಿನ ಪಾಠವನ್ನು ಓದಿ ಮನನ ಮಾಡಿಕೊಳ್ಳುವಂತೆ ನಿಯಮ ರೂಪಿಸಲಾಗಿತ್ತು. ವಿದ್ಯಾರ್ಥಿಗಳು ಓದುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಇಬ್ಬರು ಶಿಕ್ಷಕರನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡಲಾಗುತ್ತಿತ್ತು. ಹೀಗಾಗಿ ವಿದ್ಯಾರ್ಥಿಗಳು ಸಹ ಆ ದಿನದ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದರು. ವಸತಿ ಶಾಲೆಯಾಗಿದ್ದರಿಂದ ಬೆಳಿಗ್ಗೆ 5 ಗಂಟೆಗೆ ಮಕ್ಕಳನ್ನು ಎಬ್ಬಿಸಿ ಓದಲು ಪ್ರೇರೇಪಿಸಲಾಗುತ್ತಿತ್ತು. ರಾತ್ರಿ 8.30ರಿಂದ 10.30ರವರೆಗೆ ಓದುವುದನ್ನು ಕಡ್ಡಾಯಗೊಳಿಸಲಾಗಿತ್ತು’ ಎಂದು ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲೆ ಎಚ್‌.ಸಿ. ಮಂಜುಳಾ ‘ಪ್ರಜಾವಾಣಿ’ ಜೊತೆ ಸಾಧನೆಯ ಗುಟ್ಟು ಹಂಚಿಕೊಂಡರು.

‘ಡಿಸೆಂಬರ್‌ ಅಂತ್ಯದೊಳಗೆ ಪಠ್ಯಕ್ರಮಗಳನ್ನು ಮುಗಿಸಲಾಗಿತ್ತು. ಜನವರಿಯಿಂದ ಮೂರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿದ್ದೆವು. ವಿಷಯವಾರು ಪ್ರತಿ ಪಾಠಕ್ಕೂ ಪ್ರತ್ಯೇಕ ಕಿರು ಪರೀಕ್ಷೆ ನಡೆಸುವ ಮೂಲಕ ಪಠ್ಯದ ವಿಷಯಗಳನ್ನು ಪುನರಾವರ್ತನೆ ಮಾಡಿಸಲಾಗಿತ್ತು. ಜನವರಿ ತಿಂಗಳಿಂದ ಬೆಳಿಗ್ಗೆ 7.30ರಿಂದ ಸಂಜೆ 5.30ರವರೆಗೆ ತರಗತಿ ನಡೆಸಿ ಪಠ್ಯದ ಪುನರಾವರ್ತನೆ ಮಾಡಿಸಲಾಗಿತ್ತು. ಇದಕ್ಕಾಗಿ ಪ್ರತಿ ವಿಷಯಕ್ಕೂ ಎರಡು ತರಗತಿಯ (1.30 ಗಂಟೆ) ಅವಧಿಯನ್ನು ಹಂಚಿಕೆ ಮಾಡಲಾಗಿತ್ತು. ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಶ್ರದ್ಧೆಯಿಂದ ಓದುತ್ತಿರುವುದರಿಂದಲೇ ಸತತವಾಗಿ ಶೇ 100ರಷ್ಟು ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿದೆ’ ಎಂದು ಮಂಜುಳಾ ನಗೆ ಬೀರಿದರು.

*
ಶಿಕ್ಷಕರ ಪರಿಶ್ರಮ ಹಾಗೂ ಮಕ್ಕಳು ಶ್ರದ್ಧೆಯಿಂದ ಓದುತ್ತಿರುವ ಪರಿಣಾಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಗೆ ಸತತವಾಗಿ ಶೇ 100 ಫಲಿತಾಂಶ ಬರುತ್ತಿದೆ.
-ಮಂಜುಳಾ ಎಚ್‌.ಸಿ., ಪ್ರಾಂಶುಪಾಲೆ, ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ

*
ವಿದ್ಯಾರ್ಥಿಗಳ ಓದಿನ ಬಗ್ಗೆ ನಿಗಾ ವಹಿಸಲು ಪ್ರತ್ಯೇಕವಾಗಿ ಶಿಕ್ಷಕರನ್ನು ನಿಯೋಜನೆ ಮಾಡುತ್ತಿದ್ದರು. ರಜಾ ದಿನದಂದು ಪ್ರಾಂಶುಪಾಲರೇ ಈ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ.
-ವಿ.ಆರ್‌. ವೈಷ್ಣವಿ, ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು