ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೇರಿ ಪಟ್ಟು: ಸಿದ್ದರಾಮಯ್ಯ ಸಿಟ್ಟು

ಜೆಡಿಎಸ್ ಧರಣಿ ಮಧ್ಯೆಯೇ ಕಾಗದ ಪತ್ರ ಮಂಡಿಸಲು ಅವಕಾಶ ಕೊಟ್ಟ ಸಭಾಧ್ಯಕ್ಷರು
Last Updated 10 ಅಕ್ಟೋಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ನೆರೆ ಪೀಡಿತ ಜನರ ಸಂಕಷ್ಟ, ಪರಿಹಾರ ಕಾರ್ಯ ವಿಳಂಬ ಕುರಿತು ನಿಲುವಳಿ ‍ಸೂಚನೆ ಪ್ರಸ್ತಾವ ಮಂಡಿಸಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ನ ಬೇಡಿಕೆಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಒಪ್ಪದೇ ಇದ್ದುದರಿಂದ ಅಧಿವೇಶನದ ಮೊದಲ ದಿನವೇ ಸದನದಲ್ಲಿ ರೋಷಾವೇಶ ಪ್ರದರ್ಶನಕ್ಕೆ ಸದನ ವೇದಿಕೆಯಾಯಿತು.

ಎರಡು ತಿಂಗಳಿನಿಂದೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಸಾರ್ವಜನಿಕ ಮಹತ್ವದ ಅತಿ ಜರೂರು ವಿಷಯದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ್ದೇನೆ. ವಿಷಯ ಪ್ರಸ್ತಾಪಿಸಲು ಅವಕಾಶ ಕೊಡಿ’ ಎಂದು ಬೇಡಿಕೆ ಮಂಡಿಸಿದರು.

‘ಕೆಲವು ಕಾಗದ ಪತ್ರಗಳ ಮಂಡನೆ ಮಾಡುವುದಿದೆ. ಅದು ಮುಗಿದ ಬಳಿಕ ಚರ್ಚೆಗೆ ಅವಕಾಶ ಕೊಡುತ್ತೇನೆ’ ಎಂದು ಸಭಾಧ್ಯಕ್ಷರು ಹೇಳಿದರು.

‘ಅರ್ಧರಾಜ್ಯ ಮಳೆಯಲ್ಲಿ ಕೊಚ್ಚಿಹೋಗಿದ್ದು, 7 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. ಅದರ ಬಗ್ಗೆ ಚರ್ಚಿಸುವುದಕ್ಕಿಂತ ಕಾಗದ ಪತ್ರ ಮಂಡಿಸುವುದು ನಿಮಗೆ ಮುಖ್ಯವೇ?. ನಿಯಮಾವಳಿಯಂತೆ ನಿಲುವಳಿ ಸೂಚನೆ ಮಂಡಿಸಿದಾಗ ಅದನ್ನು ಪ್ರಸ್ತಾಪಿಸಲು ಅವಕಾಶ ಕೊಡಲೇಬೇಕು. ನಿಯಮ ಮುರಿದರೆ ಹೇಗೆ’ ಎಂದು ಸಿದ್ದರಾಮಯ್ಯ ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಕೆ.ಆರ್. ರಮೇಶ್‌ಕುಮಾರ್‌ ಅವರು, ನಿಯಮಾವಳಿಗಳನ್ನು ಓದಿ ನಿಲುವಳಿ ಸೂಚನೆಗೆ ಅವಕಾಶ ಕೊಡಲೇಬೇಕು ಎಂದು ಪಟ್ಟು ಹಿಡಿದರು.

ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ನೀವು ಸದನದಕ್ಕೆ ಹೊಸಬರಲ್ಲ. ಕಾರ್ಯಸೂಚಿಯಂತೆ ಕಲಾಪವನ್ನು ನಡೆಸೋಣ. ನೆರೆ ಬಗ್ಗೆ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಅವಕಾಶ ಕೊಡಿ’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು.

‘ಕಾಗದ ಪತ್ರ ಮಂಡಿಸಿದ ಮೇಲೆಯೇ ಅವಕಾಶ ಕೊಡುವೆ’ ಎಂದು ಕಾಗೇರಿ ಪಟ್ಟು ಹಿಡಿದರು.

ಈ ಹೊತ್ತಿನಲ್ಲಿ ಸಿಟ್ಟಿಗೆದ್ದ ಸಿದ್ದ ರಾಮಯ್ಯ, ‘ವಿರೋಧ ಪಕ್ಷದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೀರಿ. ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದ್ದೀರಿ. ಸಭಾಧ್ಯಕ್ಷರಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾದ ನೀವು ಆಡಳಿತ ಪಕ್ಷದ ಪರ ನಿಲುವು ತೋರಿಸುತ್ತಿದ್ದೀರಿ’ ಎಂದು ಸಭಾಧ್ಯಕ್ಷರ ವಿರುದ್ಧ ಕಿಡಿಕಾರಿದರು.

ಇದಕ್ಕೆ ಧ್ವನಿಗೂಡಿಸಿದ ಕೃಷ್ಣ ಬೈರೇಗೌಡ, ‘ಸಭಾಧ್ಯಕ್ಷರು ಬಿಜೆಪಿಯ ರಬ್ಬರ್ ಸ್ಟಾಂಪ್‌ ರೀತಿ ವರ್ತಿಸುತ್ತಿದ್ದಾರೆ. ವಾಕ್ ಸ್ವಾತಂತ್ರ್ಯ ಕಸಿದಿರುವ ಬಿಜೆಪಿಯವರು ಲೂಟಿ ಹೊಡೆಯಲು ಮುಂದಾಗಿದ್ದಾರೆ’ ಎಂದು ಜರಿದರು.

ಇದಕ್ಕೆ ಕಾಂಗ್ರೆಸ್‌ ಸದಸ್ಯರು ಬೆಂಬಲ ನೀಡಿ ಅಬ್ಬರಿಸತೊಡಗಿದರು. ಇದರಿಂದ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

ಜೆಡಿಎಸ್‌ ಶಾಸಕ ಎಚ್.ಡಿ. ರೇವಣ್ಣ ಕೂಡ, ‘ನಾವೂ ನಿಲುವಳಿ ಸೂಚನೆ ಮಂಡಿಸಿದ್ದೇವೆ. ಚರ್ಚೆಗೆ ಅವಕಾಶ ಕೊಡಬೇಕು’ ಎಂದು ಬೇಡಿಕೆ ಮಂಡಿಸಿದರಲ್ಲದೇ, ಸಭಾಧ್ಯಕ್ಷರ ಮುಂದೆ ತಮ್ಮ ಪಕ್ಷದ ಶಾಸಕರ ಜತೆ ಧರಣಿಗೆ ಮುಂದಾದರು.

ಈ ಗದ್ದಲದ ಮಧ್ಯೆಯೇ, ಸಭಾಧ್ಯಕ್ಷರು ಕಾಗದ ಪತ್ರಗಳನ್ನು ಮಂಡಿಸಲು ಅವಕಾಶ ಕೊಟ್ಟರು. ಕಾಂಗ್ರೆಸ್‌ನವರ ಪ್ರತಿರೋಧದ ಮಧ್ಯೆಯೇ ಕಾಗದ ಪತ್ರ ಮಂಡನೆ ಶಾಸ್ತ್ರ ಮುಗಿಸಿದ ಕಾಗೇರಿ ಅವರು, ಕಲಾಪವನ್ನು ಭೋಜನ ವಿರಾಮ ಮುಗಿಯುವ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT