ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಬಜೆಟ್‌ ಅಧಿವೇಶನದಲೊಂದು ‘ಸಾಹಿತ್ಯ ಗೋಷ್ಠಿ’

Last Updated 8 ಫೆಬ್ರುವರಿ 2019, 13:00 IST
ಅಕ್ಷರ ಗಾತ್ರ

ಬೆಂಗಳೂರು: ಲಾಭ, ನಷ್ಟ, ಗಳಿಕೆ, ಉಳಿಕೆಯ ಲೆಕ್ಕಾಚಾರದಿಂದಲೇ ತುಂಬಿರುವ ಬಜೆಟ್‌ ಭಾಷಣವನ್ನು ಕೊಂಚ ಆಸಕ್ತಿದಾಯಕವನ್ನಾಗಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದಷ್ಟು ಸಾಹಿತ್ಯದ ಸ್ಪರ್ಶ ನೀಡಿದ್ದು, ಅಲ್ಲೊಂದು ಪುಟ್ಟ ಸಾಹಿತ್ಯ ಗೋಷ್ಠಿಯೇ ನಡೆದಿದೆ. ‌

ಬಜೆಟ್‌ ಭಾಷಣದಲ್ಲಿ ಇಣುಕಿದ ಕವಿ–ದಾರ್ಶನಿಕರೆಂದರೆ ಡಿ.ವಿ. ಗುಂಡಪ್ಪ, ಡಿ.ಎಸ್‌. ಕರ್ಕಿ, ಸರ್ವಜ್ಞ, ಕುವೆಂಪು, ದ.ರಾ.ಬೇಂದ್ರೆ, ಚನ್ನವೀರ ಕಣವಿ, ರತ್ನಾಕರ ವರ್ಣಿ, ಗೋಪಾಲಕೃಷ್ಣ ಅಡಿಗ... ಇವರ ಜೊತೆಮಾರ್ಟಿನ್‌ ಲೂಥರ್‌ ಕಿಂಗ್, ರಾಮ ಮನೋಹರ್‌ ಲೋಹಿಯಾ, ಗಾಂಧೀಜಿಯ ಮಾತುಗಳೂ ಅಲ್ಲಲ್ಲಿ ಜಾಗ ಮಾಡಿಕೊಂಡಿವೆ.

ಇದು ಮೈತ್ರಿ ಸರ್ಕಾರದ ಬಜೆಟ್‌ ಆಗಿದ್ದರಿಂದಪು.ತಿ.ನರಸಿಂಹಾಚಾರ್‌ ಅವರ‘ತ್ಯಾಗದಿ ತುಸು ನಡೆ, ರಾಗದಿ ತುಸು ನಡೆ’ ಎಂಬ ಸಾಲುಗಳನ್ನು ಮೊದಲಿಗೆ ಉಲ್ಲೇಖಿಸಿದ ಕುಮಾರಸ್ವಾಮಿ,ಮೈತ್ರಿಸರ್ಕಾರವು ಪರಸ್ಪರ ಸಮನ್ವಯ, ಸಹಕಾರದೊಂದಿಗೆ ತಮ್ಮಅಭಿವೃದ್ಧಿಯ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಾಮುನ್ನಡೆದಿದೆ ಎಂದು ಹೇಳಿದರು.

ಈ ಮೈತ್ರಿ ಸರ್ಕಾರಕ್ಕೆ ಗಾಂಧೀಜಿಯ ನುಡಿಗಳೇ ಮಾರ್ಗದರ್ಶನ ಎಂದು ಹೇಳಿದ ಅವರು, ‘ನನ್ನ ದೃಷ್ಟಿಯಲ್ಲಿ ಅತ್ಯಂತ ದುರ್ಬಲರಿಗೂ ಅತ್ಯಂತಪ್ರಬಲರಷ್ಟೇ ಅವಕಾಶ ದೊರಕಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ’ ಎಂಬ ಗಾಂಧಿ ಮಾತುಗಳನ್ನು ನೆನಪಿಸಿಕೊಂಡರು.

ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು

ಹಾಲೊಡೆಯ ಕಡೆದದನು ತಕ್ರವಾಗಿಪುದು

ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು

ಬಾಳಿಗಿದೆ ಚಿರಧರ್ಮ- ಮಂಕುತಿಮ್ಮ

ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದಿಂದ ಆರಿಸಿಕೊಂಡಿದ್ದ ಈ ಸಾಲುಗಳನ್ನು ಹೇಳುವ ಮೂಲಕ ಸರ್ಕಾರದ ಕರ್ತವ್ಯಗಳನ್ನು ವಿವರಿಸಿದರು.

ಸಮಸ್ತ ಕರ್ನಾಟಕವನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಬಜೆಟ್‌ ಮಂಡನೆ ಮಾಡುತ್ತಿದ್ದೇನೆ ಎನ್ನುವುದನ್ನು ಸಾರುವ ಉದ್ದೇಶದಿಂದ ಕವಿ ಡಿ.ಎಸ್‌.ಕರ್ಕಿ ಅವರ ಪ್ರಸಿದ್ಧ ಹಚ್ಚೇವು ಕನ್ನಡದ ದೀಪ ಕವಿತೆಯ ‘ನಡುನಾಡೆಇರಲಿ, ಗಡಿನಾಡೆ ಇರಲಿ, ಕನ್ನಡದ ಕಳೆಯ ಕೆಚ್ಚೇವು’ ಸಾಲುಗಳನ್ನು ಉಲ್ಲೇಖಿಸಿದರು.

ಕೃಷಿಕರ ಬಗ್ಗೆ ಮಾತು ಶುರು ಮಾಡುವ ಮೊದಲು ಸಮಾಜವಾದಿ ರಾಮಮನೋಹರ ಲೋಹಿಯ ಅವರ ’ಭಾರತದಲ್ಲಿಯೂ ಇತರ ದೇಶಗಳಂತೆ ರೈತನ ಪಾತ್ರ ನಿಸ್ಸಂಶಯವಾಗಿಯೂ ಅತಿಮುಖ್ಯವಾದುದು; ಆತನಿಗಿಂತ ಶ್ರೇಷ್ಠರು ಯಾರೂ ಇಲ್ಲ’ ಸಾಲಗಳನ್ನು ಹೇಳಿದರು. ಸಮಾಜದಲ್ಲಿ ಅನ್ನದಾತನ ಪಾತ್ರ ಹಾಗೂ ಸ್ಥಾನಮಾನ ಹೇಗಿರಬೇಕು ಎಂಬುದಕ್ಕೆ ಲೋಹಿಯ ಅವರ ಸಾಲುಗಳು ದಿಕ್ಸೂಚಿಯಾಗಿದೆ ಎಂದರು.

ಬಡವರ, ಅಸಂಘಟಿತ ವಲಯದವರ ಸಮಸ್ಯೆಗಳನ್ನು ಬಗ್ಗೆ ಮಾತು ಆರಂಭಿಸುವ ಮುನ್ನ ಸರ್ವಜ್ಞನ ತ್ರಿಪದಿಯ ‘ತನ್ನಂತೆಯ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಸಾಲುಗಳನ್ನು ನುಡಿದರು.

ದುರ್ಬಲ ವರ್ಗದವರ ಬೆನ್ನಿಗೆ ನಮ್ಮ ಸರ್ಕಾರ ಸದಾ ಇರುತ್ತದೆ ಎನ್ನುವುದನ್ನು ದ.ರಾ.ಬೇಂದ್ರ ಅವರ

‘ಕಣ್ಣಿದ್ದು ಕುರುಡರಾಂಗ ಕಿವಿ ಇದ್ದೂ ಕೆಪ್ಪರಾಂಗ

ದೇವರಿದ್ದೂ ದೆವ್ವನಾಂಗಾ ಇರಬಾರ್ದಣಾ ಇರಬಾರ್‍ದಣಾ’ ಕವನದ ಸಾಲುಗಳಿಂದ ಬಣ್ಣಿಸಿದರು.

ಆರೋಗ್ಯ ಯೋಜನೆಗಳ ಬಗ್ಗೆ ಬಜೆಟ್‌ ಮಂಡಿಸುವ ಮುನ್ನ ಕುಮಾರಸ್ವಾಮಿ ಅವರು ಕುವೆಂಪು ಅವರ ಕವನದ ಸಾಲುಗಳಾದ,

‘ಆರೋಗ್ಯವುಳ್ಳವನು ಸದಾ ಸುಖಿ

ಅವನಿಗೆ ಬಾಳಿನಲಿ ಬೇಸರವಿಲ್ಲ..’ ಎನ್ನುವುದನ್ನು ಹೇಳಿದರು.

ತಾನು ಮಂಡಿಸುತ್ತಿರುವ ಈ ಆಯವ್ಯಯ ಕೇವಲ ಅಂಕಿ–ಅಂಶಗಳ ಪತ್ರವಲ್ಲ; ಇದರಲ್ಲಿ ನಾಡಿನ ಜನರ ಬದುಕನ್ನು ಉತ್ತಮಗೊಳಿಸುವ ಆಶಯ ಭಾವ ಅಡಗಿದೆ ಎಂದು ಭಾವನಾತ್ಮಕವಾಗಿ ನುಡಿದ ಮುಖ್ಯಮಂತ್ರಿ, ಚನ್ನವೀರ ಕಣವಿ ಅವರ

‘ನನ್ನ ನಂಬಿಕೆಯೊಂದು ಆಕಾಶ: ನಿಜ, ಅದಕೆ ತಳಬುಡವಿಲ್ಲ;
... ಆಕಾಶದಲ್ಲಿ ಹೊಳೆವ ನಕ್ಷತ್ರಕ್ಕೆ ಲೆಕ್ಕವಿಲ್ಲ’ಕವನದ ಸಾಲಗಳನ್ನು ಹೇಳಿದರು.

ಕೃಷಿ ವಲಯದ ಬಜೆಟ್‌ ಮಂಡಿಸುವ ಮುನ್ನ ರತ್ನಾಕರವರ್ಣಿ ಅವರು ಬರೆದ ‘ಹನಿಗೂಡಿ ಹಳ್ಳ, ನಾರೊಳಗೂಡಿ ಹಗ್ಗ’ ಎಂಬ ಸಾಲುಗಳನ್ನು ಉಲ್ಲೇಖಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಆಯವ್ಯಯವನ್ನು ವಿವರಿಸುವಾಗ ಗೋಪಾಲಕೃಷ್ಣ ಅಡಿಗರ

‘ಜಾತಿ ಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ

ಕೃತಕ ತಿಮಿರದಾಳದಿಂದ ವಿಸ್ತಾರದ ಬೆಳಕಿಗೆ’ ಕವಿತೆಯನ್ನು ಹೇಳಿದರು.

ಬಜೆಟ್‌ ಭಾಷಣದ ಕೊನೆಯಲ್ಲಿ ಬೆಳೆ ಸಾಲದ ಬಗ್ಗೆ ಪ್ರತ್ಯೇಕವಾಗಿ ವಿವರಿಸಿದ ಕುಮಾರಸ್ವಾಮಿ,

’ಬರಿಯ ಉಳುವ ಕುಳದ ಗೆರೆಯೆ?

ನಾಡ ಹಣೆಯ ಬರಹ ಬರೆವೆ!

ಹೊಲದ ಗಾಂಧಿ, ನೆಲದ ನಾಂದಿ

ನೀನೆ ರಾಷ್ಟ್ರಶಕ್ತಿ’ ಎಂಬ ಕವಿವಾಣಿಯೊಂದನ್ನು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT