ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ರಾಜಕಾರಣ | ವ್ಯಂಗ್ಯಚಿತ್ರಗಳಲ್ಲಿ ಕಂಡ ಕಲಾಪ ಪ್ರಸಂಗ

ಅಕ್ಷರ ಗಾತ್ರ

ಬೆಂಗಳೂರು: ‘ಯಪ್ಪಾ ಅದ್ಯಾವಾಗಇವ್ರು ವಿಶ್ವಾಸಮತ ಯಾಚಿಸ್ತಾರೊ?’ –ಈಗ ಎಲ್ಲರ ಬಾಯಲ್ಲೂ ಕೇಳ್ತಿರೊದು ಇದೊಂದೇ ಮಾತು. ರಾಜಕಾರಿಣಿಗಳಲ್ಲಿ ಮಾತ್ರವೇ ಅಲ್ಲ ಜನರಲ್ಲಿಯೂ ಕುತೂಹಲವನ್ನು ಹುಟ್ಟಿಸಿದೆ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಪ್ರಸಂಗ.

‘ಇವತ್ತು ಮಾಡೇಬಿಡ್ತೀವಿ... ಇಲ್ಲ ಇಲ್ಲ ನಾಳೆಗೆ ಮಾಡ್ತೀವಿ ಸಭಾಧ್ಯಕ್ಷರು ದಯವಿಟ್ಟು ಅವಕಾಶ ಕೊಡ್ಬೇಕು.. ಅಯ್ಯೋ ಇನ್ನೂ ಅನೇಕ ಶಾಸಕರು ಮಾತಾಡ್ಬೇಕು, ಅದೆಲ್ಲ ಆದ್ಮೇಲೆ ವಿಶ್ವಾಸಮತ...’ ಹೀಗೆ ದಿನಕ್ಕೊಂದು ಸಬೂಬು ಹೇಳಿಕೊಂಡು ಮೈತ್ರಿ ಸರ್ಕಾರದ ಸದಸ್ಯರು ತಮ್ಮ ಧಾರಾವಾಹಿಯ ಕಂತುಗಳನ್ನು ಮುಂದುವರಿಸಿದ್ದಾರೆ.

ಹಾಸ್ಯಪ್ರಜ್ಞೆ ಇರುವವರಿಗೆ ಈ ವಿಶ್ವಾಸಮತ ನಾಟಕ ದೊಡ್ಡ ವಸ್ತುವಾಗಿ ಒದಗಿಬಂದಿದೆ.ಜನರು ‘ಇದೇನುಪುಟ್ಟಗೌರಿ ಮದುವೆಯೋ ಅಥವಾ ಅಗ್ನಿಸಾಕ್ಷಿಯೋ... ಮುಗಿಯುವಂತೆಯೇ ಇಲ್ಲ’ ಎಂದು ಜನರು ರಾಜಕಾರಿಣಿಗಳಕಾಲೆಳೆದಿದ್ದಾರೆ.

ಸ್ಯಾಂಪಲ್‌ಗೆ ಇದು ನೋಡಿ...

ಗುಂಡನ ಹೆಂಡತಿ: ಏನ್ರಿ ಇದು ಈಗ ನ್ಯೂಸ್‌ ಚಾನೆಲ್‌ಗಳಲ್ಲಿಯೂ ಧಾರಾವಾಹಿ ಪ್ರಸಾರ ಶುರುಮಾಡಿದ್ದಾರೆ.

ಗುಂಡ: ಅದ್ಯಾವ್ದೆ?

ಹೆಂಡತಿ: ‘ಕಲಾಪ’ ಅಂತ ಹಾಕ್ತಿದ್ರು.. ಆದ್ರ ಬಹಳ ಚೆನ್ನಾಗಿದೆಯಪ್ಪ..ಒಂದೊಂದು ಎಪಿಸೋಡೂ ಸಕತ್‌ ಮಜಾ ಕೊಡುತ್ತಿದೆ.ಅಭಿನಯದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ.

ಇದೇ ಧಾಟಿಯ ಸಾಕಷ್ಟು ವ್ಯಂಗ್ಯ ಬರಹಗಳು ಈಗ ಹುಟ್ಟಿಕೊಂಡಿವೆ.

ಈ ರಾಜಕೀಯ ನಾಟಕದಿಂದಲೇ ಸಾಕಷ್ಟು ಜನವಿಧಾನಸೌಧ ಕಲಾಪ ವೀಕ್ಷಿಸುತ್ತಿದ್ದಾರೆ.ಯಾವ ಹಾಸ್ಯ ಕಾರ್ಯಕ್ರಮಕ್ಕೂ ಇದು ಕಡಿಮೆಯಿಲ್ಲ ಎಂಬುದೇ ಅನೇಕರ ಅಭಿಪ್ರಾಯ.ರಾಜ್ಯ ರಾಜಕಾರಣದ ಈ ಪ್ರಸಂಗ ‘ಪ್ರಜಾವಾಣಿ’ಯ ವ್ಯಂಗ್ಯಚಿತ್ರದಲ್ಲಿ ಬಹಳ ಸ್ವಾರಸ್ಯಕರವಾಗಿ ಚಿತ್ರಿತವಾಗಿದೆ.

ಜುಲೈ 1ರಂದು ಆನಂದ್‌ ಸಿಂಗ್ ರಾಜೀನಾಮೆಯಿಂದ ಪ್ರಾರಂಭವಾದ ಪ್ರಸಂಗ, ವಿಶ್ವಾಸಮತ ಯಾಚನೆವರೆಗೂ ಬಂದು ನಿಂತಿದೆ. ಅಲ್ಲಿಂದ ಮುಂದೆ ಮಾತ್ರ ಹೋಗುತ್ತಿಲ್ಲ. ದ್ರೌಪದಿಗೆ ವಸ್ತ್ರಾಪಹರಣದಲ್ಲಿ ಒಂದಾದ ನಂತರ ಒಂದು ಸೀರೆ ಬಂದಂತೆ, ಕಲಾಪದ ದಿನಗಳು ಮುಂದುವರಿಯುತ್ತಲೇ ಇವೆ.

‘ಆಳುವ ಪಕ್ಷಕ್ಕೆ ಅಗ್ನಿ ಪರೀಕ್ಷೆ ಅಂದುಕೊಂಡಿದ್ದೆ... ವಿರೋಧ ಪಕ್ಷಕ್ಕೆ ತಾಳ್ಮೆ ಪರೀಕ್ಷೆ ಅಂದ್ಕೊಂಡಿರಲಿಲ್ಲ’ ಎನ್ನುವ ವ್ಯಂಗ್ಯಚಿತ್ರ ಮೈತ್ರಿ ಸರ್ಕಾರದ ನಡೆಯನ್ನು ಕೆಣಕಿದಂತೆ ನಿಜಕ್ಕೂ ಯಡಿಯೂರಪ್ಪರ ತಾಳ್ಮೆಯನ್ನು ಕುಮಾರಸ್ವಾಮಿ ಪರೀಕ್ಷಿಸುತ್ತಿದ್ದಾರೆ ಎನ್ನುವುದು ಕಲಾಪ ಸಾಭೀತು ಮಾಡುತ್ತಿದೆ.

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಫೈನಲ್‌ಗೆ ಹೋಗದಿರುವುದು ಜನರಿಗೆ ಇಷ್ಟು ಬೇಸರವಾಗಿಲ್ಲ. ಒಮ್ಮೆ ಈ ರಾಜಕೀಯದ ಕಿರಿಕ್‌ ಆಟ ಮುಗಿದರೆ ಸಾಕು ಎಂದೇ ಜನ ಎಣಿಸುತ್ತಿದ್ದಾರೆ.

ಕಲೆ: ಪ್ರಕಾಶ್‌ ಶೆಟ್ಟಿ
ಕಲೆ: ಪ್ರಕಾಶ್‌ ಶೆಟ್ಟಿ

ಶಾಸಕರು ರಾಜೀನಾಮೆ ನೀಡಲು ಬಂದಾಗ ವಿಧಾನಸೌಧದಲ್ಲಿ ನಡೆದ ಪ್ರಕರಣದಿಂದ ಶಾಲೆಗಳಲ್ಲಿ ಮಕ್ಕಳು ಈಗ ಶಾಸಕನಾಗಲು ಏನೇನು ಅರ್ಹತೆ ಇರಬೇಕು ಎಂದು ಕೇಳಿದರೆ, ಕುಸ್ತಿ ಪಟುವಾಗಿರಬೇಕು ಎಂದು ಹೇಳುತ್ತಿವೆಯಂತೆ...

ಮೈತ್ರಿ ಎಂದರೇ ಅದಕ್ಕೆ ಸಮಾನಾರ್ಥಕ ಪದ ಅಸ್ಥಿರ ಎಂದೇ ಹೇಳಲಾಗುತ್ತಿದೆ. ‘ಯಾರೊಬ್ಬ ತನ್ನ ಹೊಸ ಅಪಾರ್ಟ್‌ಮೆಂಟ್‌ಗೆಮೈತ್ರಿ ಅಂತ ಹೆಸರಿಟ್ಟಿದ್ದ, ಅಯ್ಯೋ ಹಿಂಗ್ಯಾಕೆ ಹೆಸರಿಟಿದ್ದೀರಿ ಅಸ್ಥಿರ ಕಟ್ಟಡ ಅಂತ ಜನ ಅನ್ಕೊಂಡ್ರೆ ಕಷ್ಟ’ಅಂದನಂತೆ... ಮೈತ್ರಿ ಸರ್ಕಾರದ ಪರಿಸ್ಥಿತಿಯನ್ನು ನಮ್ಮ ವ್ಯಂಗ್ಯಚಿತ್ರಕಾರರು ಚಿತ್ರಿಸಿದ್ದು ಹೀಗೆ.

ಅತೃಪ್ತ ಶಾಸಕರನ್ನು ಸೆಳೆಯಲು ಸಮನ್ವಯ ಸಮಿತಿ ಅಧ್ಯಕ್ಷರು ಬೇಕಾಗಿಲ್ಲ. ಸಮ್ಮೋಹನ ಸಮತಿ ಬೇಕಾಗಿದೆ. ಅತೃಪ್ತರೆಲ್ಲ ಸಿಟ್ಟಾಗಿರುವುದೇ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರ ಮೇಲೆ ಎಂಬುದೇ ಇಲ್ಲಿ ವಿಪರ್ಯಾಸ. ಮುಂಬೈನಲ್ಲಿ ಅವಿತುಕೊಂಡಿರುವ ಶಾಸಕರೆಲ್ಲ ಸಿದ್ದರಾಮಯ್ಯ ಹಿಂಗೆ ಮಾಡ್ಬಾರದಿತ್ತು ಎಂದೇ ಹೇಳುತ್ತಿದ್ದಾರೆ.

ಒಂದು ಕಡೆ ಸರ್ಕಾರ ಉಳಿಸಿಕೊಳ್ಳೋಕೆ ರೆವಣ್ಣ ದೇವಸ್ಥಾನಗಳಿಗೆ ಸುತ್ತುತ್ತಿದ್ದರೆ, ಮತ್ತೊಂದು ಕಡೆ ಯಡಿಯೂರಪ್ಪ ಸರ್ಕಾರ ಬೀಳಲಿ ಎಂದು ಪೂಜಿಸುತ್ತಿದ್ದಾರೆ. ಆದರೆ ದೇವರು ಮಾತ್ರ ಸ್ಪೀಕರ್‌ ರೀತಿ ಇಬ್ಬರ ಮೊರೆಯಲ್ಲಿ ಕೇಳುತ್ತಿದ್ದಾನೆ. ಯಾವ ನಿರ್ಧಾರವನ್ನೂ ಕೈಗೊಳ್ಳುತ್ತಿಲ್ಲ ಎನ್ನುವುದು ಕಲಾಪ ಮುಂದೂಡಿಕೆಯಾಗುತ್ತಿರುವುದರಿಂದ ತಿಳಿಯುತ್ತಿದೆ.

ಬಿಜೆಪಿ ಈಗಾಗಲೇ 5 ಬಾರಿ ‘ಆಪರೇಷನ್‌ ಕಮಲ’ ಮಾಡಿದೆ ಎಂದು ಮೈತ್ರಿ ಪಕ್ಷದ ಶಾಸಕರು ದೂರುತ್ತಿದ್ದಾರೆ. ಈಗ ಮಾಡಿರುವ 6ನೇ ಯಾನವಾದರೂ ಯಶಸ್ವಿಯಾಗುತ್ತದೆಯೇ ಎನ್ನುವುದೇ ಕುತೂಹಲದ ಕೇಂದ್ರವಾಗಿದೆ.

ವಿಕ್ರಮ ಮತ್ತು ಬೇತಾಳ ಕಥೆಯಲ್ಲಿ ರಾಜ್ಯ ರಾಜಕಾರಣದ ಪ್ರಶ್ನೆಯನ್ನೇನಾದರೂ ಕೇಳಿದರೆ ರಾಜ ವಿಕ್ರಮ ಅದೆಂಗೆ ಬಜಾವ್‌ ಆಗುತ್ತಾನೋ?ಕರ್ನಾಟಕ ರಾಜಕೀಯ ಹೈ ಡ್ರಾಮಾ ಕಥೆಯನ್ನು ನಿನಗೆ ಹೇಳಿದ್ದೇನೆ. ವಿಶ್ವಾಸಮತ ಗಳಿಸಿ ಸರ್ಕಾರ ಸುಭದ್ರವಾಗುತ್ತಾ ಅಥವಾ ಪತನವಾಗುತ್ತಾ ಎಂದು ಈಗ ನೀನು ಹೇಳದಿದ್ದರೆ, ನಿನ್ನ ತಲೆ ಸಹಸ್ರ ಹೋಳಾಗುತ್ತದೆ.

ರಾಜಕೀಯದಲ್ಲಿ
ಎಲ್ಲವೂ ಸಂಭಾವ್ಯ,
ಗ್ರಾಮ ವಾಸ್ತವ್ಯ
ರೆಸಾರ್ಟ್ ವಾಸ್ತವ್ಯ
ಈಗ ಸೇರಿಕೊಂಡಿದೆ
ಸದನದಲ್ಲೇ ವಾಸ್ತವ್ಯ!

–ಮಹಾಂತೇಶ ಮಾಗನೂರಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT