ಸರ್ಕಾರ ಪತನಕ್ಕೆ ವಿಶ್ವನಾಥ ನೇತೃತ್ವ?

ಮಂಗಳವಾರ, ಜೂಲೈ 23, 2019
20 °C

ಸರ್ಕಾರ ಪತನಕ್ಕೆ ವಿಶ್ವನಾಥ ನೇತೃತ್ವ?

Published:
Updated:

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಬಿಜೆಪಿ ಜತೆಗೆ ಸಖ್ಯ ಬೆಳೆಸಿಕೊಂಡಿದ್ದ ಹುಣಸೂರು ಕ್ಷೇತ್ರದ ಜೆಡಿಎಸ್‌ ಶಾಸಕ ಎಚ್. ವಿಶ್ವನಾಥ್ ಅವರೇ ಈ ‘ಕ್ರಾಂತಿ’ಯ ನೇತೃತ್ವ ವಹಿಸಿಕೊಂಡಿದ್ದಾರೆಯೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.

ಸಮನ್ವಯ ಸಮಿತಿಯಲ್ಲಿ ಸ್ಥಾನ ಸಿಗದೇ ಇರಲು ಹಾಗೂ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯನವರೇ ಕಾರಣ ಎಂಬುದು ವಿಶ್ವನಾಥ್ ಆಕ್ರೋಶಕ್ಕೆ ಕಾರಣ.  ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮನಸ್ಸು ಮಾಡಿ ರಾಹುಲ್ ಗಾಂಧಿ ಅವರಿಗೆ ಒಂದು ಮಾತು ಹೇಳಿದ್ದರೆ ಸಮನ್ವಯ ಸಮಿತಿಯಲ್ಲಿ ಸ್ಥಾನ ಕೊಡಿಸಬಹುದಿತ್ತು. ಗೌಡರು ಅದನ್ನು ಮಾಡಲಿಲ್ಲ ಎಂಬ ಅಸಮಾಧಾನವೂ ವಿಶ್ವನಾಥ್ ಅವರಲ್ಲಿತ್ತು. 

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಜಯಭೇರಿ ಬಾರಿಸಿದ ಬಳಿಕ ಪಕ್ಷ ತೊರೆಯುವ ನಿರ್ಧಾರಕ್ಕೆ ವಿಶ್ವನಾಥ್ ಬಂದಿದ್ದರು. ಮೊದಲ ಹಂತದಲ್ಲಿ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರನ್ನು ಪದೇ ಪದೇ ಭೇಟಿಯಾಗಿ, ಬಿಜೆಪಿ ಜತೆಗೆ ಬಾಂಧವ್ಯ ಹೊಂದಿರುವ ಬಗ್ಗೆ ಸುಳಿವನ್ನೂ ನೀಡಿದರು. ಇದರ ಜತೆಗೆ ಬಿಜೆಪಿ ವರಿಷ್ಠರ ಜತೆಗೆ ಮಾತುಕತೆಯನ್ನೂ ನಡೆಸಿದ್ದರು. ಹಿಂದೆಲ್ಲ ಆಪರೇಷನ್ ಕಮಲ ವಿಫಲವಾಗಿದ್ದ ಬಿಜೆಪಿ, 10–15 ಶಾಸಕರನ್ನು ಒಟ್ಟಿಗೆ ಕರೆತರುವ ಯತ್ನ ನಡೆಸುವ ಜವಾಬ್ದಾರಿಯನ್ನು ವಿಶ್ವನಾಥ್‌ಗೆ ವಹಿಸಿತ್ತು. ಅದೇ ಕಾರಣಕ್ಕೆ ಇತ್ತೀಚೆಗೆ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದೇ ಕಾರಣಕ್ಕೆ, ರಾಜೀನಾಮೆ ಕೊಡುವ ಶಾಸಕರ ನೇತೃತ್ವವನ್ನು ಅವರೇ ವಹಿಸಿಕೊಂಡರು ಎಂದು ಮೂಲಗಳು ಹೇಳಿವೆ.

ಮೂರನೇ ಬಾರಿ ರಾಜ್ಯದಲ್ಲಿ ‘ಕ್ಷಿಪ್ರ ದಂಗೆ’: ಧರ್ಮಸಿಂಗ್‌ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಗುಂಪು ಇದೇ ರೀತಿ ದಂಗೆ ಎದ್ದು ಅಂದಿನ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿತ್ತು. ಬಳಿಕ ಜೆಡಿಎಸ್‌–ಬಿಜೆಪಿ ಸರ್ಕಾರ ಕುಮಾರಸ್ವಾಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರು ಬಿಜೆಪಿಯ 11 ಹಾಗೂ 5 ಪಕ್ಷೇತರ ಶಾಸಕರನ್ನು (ಈ ಪೈಕಿ ಕೆಲವರು ಸಚಿವರೂ ಆಗಿದ್ದರು) ರಾಜಭವನಕ್ಕೆ ಕರೆದೊಯ್ದಿದ್ದರು.ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸವನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿ, ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದರು. ಆಗ ಇಂತಹದೇ ಬಿಕ್ಕಟ್ಟು ರಾಜ್ಯದಲ್ಲಿ ಸೃಷ್ಟಿಯಾಗಿತ್ತು. ಬೇರೆ ಬೇರೆ ಅಸ್ತ್ರ ಬಳಸಿದ್ದ ಯಡಿಯೂರಪ್ಪ, ಹೆಣಗಾಡಿ ಸರ್ಕಾರ ಉಳಿಸಿಕೊಂಡಿದ್ದರು.

ಯಾವ ತ್ಯಾಗಕ್ಕೂ ಸಿದ್ಧ: ಡಿಕೆಶಿ
‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಲು ಸಚಿವರು ಸೇರಿದಂತೆ ಎಲ್ಲರೂ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

‘ಸಮಸ್ಯೆ ಇರಬಹುದು. ಆದರೆ, ಎಲ್ಲಾ ಸರಿಯಾಗಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುವವರನ್ನು ಹಿಡಿದುಕೊಳ್ಳಲು ಆಗುವುದಿಲ್ಲ. ರಾಜೀನಾಮೆ ಅಂಗೀಕಾರಕ್ಕೆ ಸಾಕಷ್ಟು ಪ್ರಕ್ರಿಯೆಗಳು ಇವೆ. ಏನಾಗುತ್ತದೆಯೋ ನೋಡೋಣ’ ಎಂದು ಪ್ರತಿಕ್ರಿಯಿಸಿದರು.

‘ರಾಜೀನಾಮೆ ನೀಡಲು ಮುಂದಾದ ಶಾಸಕರ ಜತೆ ಮಾತನಾಡಿದ್ದೇನೆ. ಅವರ ಮನವೊಲಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಬಿಜೆಪಿಯವರು ಏನೂ ಗೊತ್ತಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಅವರು ಯಾವ ಯಾವ ಬಿಲ್ಡರ್‌ಗೆ ಕರೆ ಮಾಡಿ ಎಷ್ಟೆಷ್ಟು ಹಣ ವಸೂಲಿ‌ ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಿದೆ’ ಎಂದು ಹೇಳಿದರು.

‘ಮುನಿರತ್ನ ನನ್ನ 30–40 ವರ್ಷದ ಸ್ನೇಹಿತ. ಅವರ ರಾಜೀನಾಮೆ ಪತ್ರವನ್ನು ನಾನು ಹರಿದು ಹಾಕಿದ್ದು ನಿಜ. ಅವರು ಬೇಕಿದ್ದರೆ ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಲಿ. ಜೈಲಿಗೆ ಹೋಗಲು ಸಿದ್ಧನಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !