ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ತಡೆಗೆ ಹೈಕೋರ್ಟ್‌ ಹಲವು ಕ್ರಮ

Last Updated 15 ಮಾರ್ಚ್ 2020, 17:06 IST
ಅಕ್ಷರ ಗಾತ್ರ

ಬೆಂಗಳೂರು: ತುರ್ತು ಪ್ರಕರಣಗಳನ್ನು ಮಾತ್ರವೇ ವಿಚಾರಣೆ ನಡೆಸುವುದು, ಕೋರ್ಟ್ ಸಿಬ್ಬಂದಿ, ಕಕ್ಷಿದಾರರು ಮತ್ತು ಸಂದರ್ಶಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಸೇರಿದಂತೆ ಕೊರೋನಾ ವೈರಸ್ ಹರಡುವಿಕೆ ತಡೆಯಲು ಕರ್ನಾಟಕ ಹೈಕೋರ್ಟ್ ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಈ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಅವರ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ ಅವರು, ಭಾನುವಾರ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಅನ್ವಯವಾಗುವಂತೆ ಎರಡು ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದಾರೆ.

ಕ್ರಮಗಳೇನು?

* ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಬೇಕು.

* ಪ್ರಕರಣಗಳನ್ನು ಎಂದಿನಂತೆ ವಿಚಾರಣಾ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ. ಅದರಲ್ಲಿ ನಿಗದಿಪಡಿಸಿರುವ ಪೈಕಿ ತುರ್ತು ಪ್ರಕರಣಗಳೆಂದು ವಕೀಲರು ಹಾಗೂ ಅರ್ಜಿದಾರರು ತಿಳಿಸಿದ ಸಂದರ್ಭದಲ್ಲಿ ಕೋರ್ಟ್‌ಗಳು ವಿವೇಚನೆ ಮೇರೆಗೆ ವಿಚಾರಣೆ ನಡೆಸುವ ನಿರ್ಧಾರ ಕೈಗೊಳ್ಳಲಿವೆ.

* ಇತರೆ ಪ್ರಕರಣಗಳನ್ನು ಎರಡೂ ಕಡೆಯ ಕಕ್ಷಿದಾರರ ಒಪ್ಪಿಗೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು.

* ಉಳಿದ ಪ್ರಕರಣಗಳ ಕುರಿತಂತೆ ನ್ಯಾಯಾಲಯ ತನ್ನ ವಿವೇಚನೆ ಮೇರೆಗೆ ಮುಂದಿನ ವಿಚಾರಣಾ ದಿನಾಂಕ ನಿಗದಿಪಡಿಸಲಿದೆ.

* ಆರೋಗ್ಯ ಇಲಾಖೆ ಅಧಿಕಾರಿಗಳು ಒದಗಿಸಿರುವ ಸುರಕ್ಷಿತ ಹಾಗೂ ಸಲಹೆ-ಸೂಚನಾ ಫಲಕಗಳನ್ನು ನ್ಯಾಯಾಲಯ ಆವರಣದ ಮುಖ್ಯ ಸ್ಥಳಗಳಲ್ಲಿ ಪ್ರದರ್ಶಿಸಬೇಕು.

* ಅವುಗಳಲ್ಲಿ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕೋರ್ಟ್ ಸಿಬ್ಬಂದಿ ಹಾಗೂ ವಕೀಲರು ಪಾಲಿಸಬೇಕು.

* ಯಾರಿಗಾದರೂ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು.

* ತುರ್ತು ಪ್ರಕರಣಗಳಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ ೧೦೪ ಅನ್ನು ಸಂಪರ್ಕಿಸಬೇಕು.

* ಮಂಗಳವಾರ (ಮಾ. ೧೭ರಿಂದ) ಹೈಕೊರ್ಟ್‌ಗೆ ಭೇಟಿ ನೀಡಲು ಸಂದರ್ಶಕರು (ವಕೀಲರನ್ನು ಹೊರತುಪಡಿಸಿ) ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸುವ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಬೇಕು.

* ಕೋರ್ಟ್ ಸಿಬ್ಬಂದಿಗೆ ಹೈಕೋರ್ಟ್ ಕಚೇರಿಗಳಲ್ಲಿ ಥರ್ಮಲ್ ಸ್ಕೀನಿಂಗ್ ಮಾಡಲಾಗುತ್ತದೆ.

* ಜಿಲ್ಲಾ ನ್ಯಾಯಾಲಯಗಳು ಹಾಗೂ ವಿಚಾರಣಾ ನ್ಯಾಯಾಲಯಗಳು ತುರ್ತು ಪ್ರಕರಣಗಳನ್ನು ಮಾತ್ರವವೇ ವಿಚಾರಣೆ ನಡೆಸಬೇಕು.
ಕಡ್ಡಾಯವಿದ್ದರೆ ಮಾತ್ರ ಕಕ್ಷಿದಾರರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಬೇಕು.

* ಇಲ್ಲವಾದರೆ ಕಕ್ಷಿದಾರರ ಹಾಜರಾತಿಗೆ ವಿನಾಯಿತಿ ನೀಡಬೇಕು.

* ಸರ್ಕಾರದ ಸಲಹೆಯಂತೆ ಕೋರ್ಟ್ ಅಥವಾ ಕಾನೂನು ಸೇವೆಗಳ ಪ್ರಾಧಿಕಾರ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ.

* ಜನರು ಜಮೆಯಾಗುವ ಕಾರ್ಯಕ್ರಮಗಳಿಂದ ದೂರ ಇರಬೇಕು.

* ನೂತನ ಮತ್ತು ಕಾರ್ಯ ನಿರ್ವಹಣೆಗೆ ಸಿದ್ಧವಾಗಿರುವ ಕೋರ್ಟ್ ಕಟ್ಟಡಗಳಲ್ಲಿ ಉದ್ಘಾಟನೆಯಂತಹ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು.

* ಅಂತಹ ಕಾರ್ಯಕ್ರಮ ನಡೆಸದೇ ಕೋರ್ಟ್‌ನಲ್ಲಿ ಕೆಲಸ ಕಾರ್ಯ ಆರಂಭಿಸಬೇಕು. ಕಾರ್ಯಕ್ರಮ ನಡೆಸುವುದು ಅಗತ್ಯವಾಗಿದ್ದರೆ ಮುಂದಿನ ನಿರ್ದೇಶನದ ನಂತರವೇ ಆಯೋಜಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT