ಶನಿವಾರ, ಏಪ್ರಿಲ್ 1, 2023
23 °C
ವಿವಿಧ ಸಂಘಟನೆಗಳಿಂದ ಸಿ.ಎಂಗೆ ಪತ್ರ

ಮದ್ಯ ಮಾರಾಟ ನಿಲ್ಲಿಸಿ: ಸಂಘಟನೆಗಳು, ಪ್ರಮುಖರಿಂದ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ಸ್ಥಗಿತವಾಗಿದ್ದ ಮದ್ಯಮಾರಾಟವನ್ನು ಆರ್ಥಿಕ ಸಂಕಷ್ಟದ ಕಾರಣ ಮತ್ತೆ ಆರಂಭಿಸಿದ್ದು ಸರಿಯಲ್ಲ. ಸಮಾಜ ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸಬೇಕಾದರೆ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು’ ಎಂದು ಹಲವಾರು ಸಂಘಟನೆಗಳ ಪ್ರಮುಖರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ಪರಿಸರ ಪ್ರತಿಷ್ಠಾನದ ಅ.ನಾ.ಯಲ್ಲಪ್ಪ ರೆಡ್ಡಿ, ಗ್ರಾಮ ಸೇವಾ ಸಂಘದ ಪ್ರಸನ್ನ, ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್,  ಪ್ರಾಂತ ರೈತ ಸಂಘದ ಜೆ.ಸಿ.ಬಯ್ಯಾ ರೆಡ್ಡಿ, ದಲಿತ ಸಂಘರ್ಷ ಸಮಿತಿಯ ಲಕ್ಷ್ಮೀನಾರಾಯಣ ನಾಗವಾರ, ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಸಹಿತ ಹಲವರು ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.‌

‌‘ಲಾಕ್‍ಡೌನ್ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧದಿಂದಾಗಿ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವು. ಜನರ ಆರೋಗ್ಯ ಸುಧಾರಿಸಿತ್ತು. ಕುಟುಂಬಗಳಲ್ಲಿ, ಸಮಾಜದಲ್ಲಿ ಹಿಂಸೆ, ದೌರ್ಜನ್ಯಗಳು ಬಹುತೇಕ ನಿಂತೇ ಹೋಗಿದ್ದವು. ಅಪರಾಧಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಈಗ ಅದೆಲ್ಲವೂ ನುಚ್ಚು ನೂರಾಗಿದೆ. ಸರ್ಕಾರದ ಬೊಗ್ಗಸಕ್ಕೆ ಆದಾಯ ಬೇಕು ಎನ್ನುವ ಕಾರಣಕ್ಕೆ ಲಾಕ್‍ಡೌನ್ ಇನ್ನೂ ಮುಗಿಯದೇ ಇರುವಾಗಲೇ ರಾಜ್ಯದಾದ್ಯಂತಮದ್ಯದಂಗಡಿಗಳನ್ನು ತೆರೆಯಲಾಗಿದೆ. ಮತ್ತೆ ಹಿಂಸೆ, ದೌರ್ಜನ್ಯ, ಅಪರಾಧಗಳು ತಾಂಡವವಾಡುತ್ತಿವೆ. ರೋಗ ನಿರೋಧಕತೆ ಬೆಳೆಸಿಕೊಳ್ಳಬೇಕಾದ ಜನ ಮದ್ಯಪಾನದಿಂದ ಮತ್ತಷ್ಟು ದುರ್ಬಲರಾಗಿ ಕೋವಿಡ್‌ಗೆ ಸುಲಭದ ತುತ್ತಾಗುವ ಅಪಾಯ ಇದೆ’ ಎಂದು ಬೊಟ್ಟುಮಾಡಿ ತೋರಿಸಿದ್ದಾರೆ.

ಇತರ ಹಲವು ಸಂಘಟನೆಗಳ ಪ್ರಮುಖರಾದ ಬಡಗಲಪುರ ನಾಗೇಂದ್ರ, ಜೆ.ಎಂ.ವೀರಸಂಗಯ್ಯ, ವಿ.ನಾಗರಾಜ್‌, ಮಾವಳ್ಳಿ ಶಂಕರ್‌, ಎನ್‌.ನಾಗರಾಜ್‌, ವೋಡೆ ಪಿ.ಕೃಷ್ಣ, ಬಸವರಾಜ ಗುರಿಕಾರ, ಎಲ್.ಕಾಳಪ್ಪ, ಆಲಿಬಾಬಾ, ಪ್ರೊ.ಹನುಮಂತು, ಡಾ.ಗೋಪಾಲ ದಾಬಡೆ ಅವರೂ ಪತ್ರಕ್ಕೆ ಸಹಿ ಹಾಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು