ಚಾತುರ್ಮಾಸ್ಯದಲ್ಲಿ ‘ವೃಕ್ಷ ಮಂತ್ರಾಕ್ಷತೆ’

7
ಹಸಿರು ಸ್ವಾಮೀಜಿಯ ಪರಿಸರ ಕಾಳಜಿ

ಚಾತುರ್ಮಾಸ್ಯದಲ್ಲಿ ‘ವೃಕ್ಷ ಮಂತ್ರಾಕ್ಷತೆ’

Published:
Updated:
Deccan Herald

ಶಿರಸಿ: ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಈ ಸ್ವಾಮೀಜಿ ಪೂಜೆ, ಪುನಸ್ಕಾರಗಳಿಗೆಂದು ಮಠಕ್ಕೆ ಬರುವ ಭಕ್ತರಿಗೆ ‘ವೃಕ್ಷ ಮಂತ್ರಾಕ್ಷತೆ’ ನೀಡುತ್ತಾರೆ. ಚಿಗುರೊಡೆದ ಸಸಿಯನ್ನು ನೀಡಿ, ಮನೆಯ ಹಿತ್ತಲಿನಲ್ಲಿ ನೆಟ್ಟು ಪೋಷಿಸುವಂತೆ ಆಶೀರ್ವದಿಸುತ್ತಾರೆ.

ತಾಲ್ಲೂಕಿನ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಹಸಿರು ಸ್ವಾಮಿಯೆಂದೇ ಪರಿಚಿತರು. ಕಾಡು ನಾಶವಾಗುವ ಬೃಹತ್ ಯೋಜನೆಗಳು ಉತ್ತರ ಕನ್ನಡ ಜಿಲ್ಲೆಗೆ ಕಾಲಿಟ್ಟರೆ, ಗಟ್ಟಿ ಧ್ವನಿಯಿಂದ ಅದನ್ನು ವಿರೋಧಿಸುವ ಸ್ವಾಮೀಜಿ, ಜನಶಕ್ತಿಗೆ ಬೆಂಬಲವಾಗಿ ನಿಂತು, ಎರಡೂವರೆ ದಶಕಗಳ ಹಿಂದೆ ಬಂದಿದ್ದ ಬೇಡ್ತಿ ಜಲವಿದ್ಯುತ್ ಯೋಜನೆಯನ್ನು ವಾಪಸ್ ಕಳುಹಿಸಿದ್ದರು. ಚಾತುರ್ಮಾಸ್ಯದ ವೇಳೆ ಸೀಮಾ ಭಿಕ್ಷಕ್ಕೆ ಬರುವ ಭಕ್ತರೆಲ್ಲರಿಗೂ ಮಂತ್ರಾಕ್ಷತೆಯ ಜೊತೆಗೆ ಸಸಿಯೊಂದನ್ನು ನೀಡುತ್ತಾರೆ. ಮಠದ ಆವರಣದಲ್ಲಿರುವ ‘ಸಸ್ಯಲೋಕ’ದಲ್ಲಿ ಈ ಸಸಿಗಳನ್ನು ಬೆಳೆಸಲಾಗುತ್ತದೆ.

‘2006ರಿಂದ, ಸ್ವಾಮೀಜಿ ‘ವೃಕ್ಷ ಮಂತ್ರಾಕ್ಷತೆ’ ನೀಡುತ್ತ ಬಂದಿದ್ದಾರೆ. ದಿನಕ್ಕೆ ಸರಾಸರಿ 200 ಭಕ್ತರು ಭಾಗವಹಿಸುತ್ತಾರೆ. ದೊಡ್ಡ ಸೀಮೆಯ ಭಿಕ್ಷೆಯಿದ್ದಾಗ ಈ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಪ್ರತಿಯೊಬ್ಬರಿಗೂ ಸ್ವಾಮೀಜಿ ಸಸಿ ವಿತರಿಸುತ್ತಾರೆ. ಈವರೆಗೆ ವಿತರಿಸಿರುವ ಸಸಿಗಳ ಸಂಖ್ಯೆ ಒಂದು ಲಕ್ಷ ದಾಟಿರಬಹುದು. ಧನ್ಯತಾ ಭಾವದಿಂದ ಸಸಿಗಳನ್ನು ಒಯ್ಯುವ ಭಕ್ತರು, ಸ್ವಾಮೀಜಿ ಹಳ್ಳಿ ಕಡೆಗೆ ಭೇಟಿ ನೀಡಿದಾಗ, ವೃಕ್ಷ ಮಂತ್ರಾಕ್ಷತೆಯ ಆ ಸಸಿ ಗಿಡವಾಗಿ ಬೆಳೆದಿದ್ದನ್ನು ತೋರಿಸುತ್ತಾರೆ’ ಎನ್ನುತ್ತಾರೆ ಸಸ್ಯಲೋಕದ ಸಂಚಾಲಕ ಅನಂತ ಹೆಗಡೆ ಅಶೀಸರ.

‘ಸಂಪಿಗೆ, ಬಿಲ್ವ, ನೆಲ್ಲಿ, ಹೊಂಗೆ, ಸಾಂಬಾರು ಗಿಡ, ಹಲಸು, ರಕ್ತಚಂದನ, ಮಾವು, ಸೀತಾ ಅಶೋಕ, ಪುತ್ರ ಸಂಜೀವಿನಿ, ನೇರಳೆ, ಪಾರಿಜಾತ, ಕದಂಬ, ಶಮಿ ಮೊದಲಾದ 22ಕ್ಕೂ ಹೆಚ್ಚು ಬಗೆಯ ಸಸ್ಯಗಳನ್ನು ಬೆಳೆಸುತ್ತೇವೆ. ಅರಣ್ಯ ಇಲಾಖೆ ಕೂಡ ಕೈಜೋಡಿಸುತ್ತದೆ. ಒಂದೊಂದು ವರ್ಷ ಒಂದೊಂದು ಜಾತಿಯ ಸಸಿಗಳಿಗೆ ಪ್ರಾಧಾನ್ಯತೆ. ಒಂದು ವರ್ಷ ಜೈವಿಕ ಇಂಧನ ಸಸಿಗಳನ್ನೇ ಹೆಚ್ಚು ನೀಡಲಾಯಿತು’ ಎಂದು ಅವರು ವಿವರಿಸಿದರು.

‘ಸಸ್ಯಲೋಕದಲ್ಲಿ 120ಕ್ಕೂ ಹೆಚ್ಚು ಪ್ರಭೇದದ ಗಿಡಗಳನ್ನು ನಾಟಿ ಮಾಡಲಾಗಿದೆ. ಪ್ರತಿವರ್ಷ 25 ಸಾವಿರ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸುತ್ತೇವೆ. ಶ್ರೀಗಳ ಪೀಠಾರೋಹಣ ರಜತ ವರ್ಷಾಚರಣೆ ಸಂದರ್ಭದಲ್ಲಿ, ಕಳೆದ ವರ್ಷ ಜಿಲ್ಲೆಯ ವಿವಿಧೆಡೆ ಸುಮಾರು 50 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದೆ. ಸಸಿ ಸಿದ್ಧತೆಗೆ ವಿಜ್ಞಾನಿಗಳು, ಅರಣ್ಯ ಕಾಲೇಜುಗಳು ಬೀಜ ನೀಡಿ ಸಹಕರಿಸುತ್ತವೆ’ ಎನ್ನುತ್ತಾರೆ ಸಹ ಸಂಚಾಲಕ ಮಹಾಬಲೇಶ್ವರ ಗುಮ್ಮಾನಿ.

**

ಚಾತುರ್ಮಾಸ್ಯದ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುವ ಭಕ್ತರಲ್ಲಿ ವೃಕ್ಷ ರಕ್ಷೆಯ ಸಂದೇಶ ವ್ಯಾಪಕವಾಗಬೇಕು ಎಂಬುದು ಹಸಿರು ಮಂತ್ರಾಕ್ಷತೆಯ ಆಶಯವಾಗಿದೆ
– ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸ್ವರ್ಣವಲ್ಲಿ ಮಠಾಧೀಶ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !