ಹಲ್ಲೆ, ಗೂಂಡಾಗಿರಿ, ಧಿಕ್ಕಾರ, ಜಟಾಪಟಿ: ರಣರಂಗವಾದ ಶಕ್ತಿಸೌಧ

ಶುಕ್ರವಾರ, ಜೂಲೈ 19, 2019
24 °C
ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು

ಹಲ್ಲೆ, ಗೂಂಡಾಗಿರಿ, ಧಿಕ್ಕಾರ, ಜಟಾಪಟಿ: ರಣರಂಗವಾದ ಶಕ್ತಿಸೌಧ

Published:
Updated:

ಬೆಂಗಳೂರು: ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್‌ ಬುಧವಾರ ಸಂಜೆ ವಿಧಾನಸಭಾ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ವಿಧಾನಸೌಧದಲ್ಲಿ ಹಲ್ಲೆ, ಗೂಂಡಾಗಿರಿ, ಧಿಕ್ಕಾರ ಘೋಷಣೆಯಂತಹ ಘಟನೆಗಳು ನಡೆದಿದ್ದು, ಸುಮಾರು ಎರಡು ಗಂಟೆ ಉಸಿರು ಬಿಗಿಹಿಡಿದು ನಿಲ್ಲುವ ಸ್ಥಿತಿ ನಿರ್ಮಾಣವಾಯಿತು.

ಸುಧಾಕರ್‌ ಜತೆಗೆ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಟಿ.ಬಿ.ನಾಗರಾಜ್ ಸಹ ಸಂಜೆ 4 ಗಂಟೆ ಸುಮಾರಿಗೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ರಾಜೀನಾಮೆ ಪತ್ರ ನೀಡಿದ್ದರು.

ಇಬ್ಬರೂ ಹೊರಗಡೆ ಬರುತ್ತಿದ್ದಂತೆ ನಡೆದುದೇ ದೊಡ್ಡ ನಾಟಕ. ನಾಗರಾಜ್‌ ಹೇಗೋ ಹೊರಗೆ ಹೋಗಿಬಿಟ್ಟಿದ್ದರು. ಆದರೆ ಸಿಕ್ಕಿಹಾಕಿಕೊಂಡವರು ಸುಧಾಕರ್‌. ಸಚಿವ ಪ್ರಿಯಾಂಕ್‌ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌ ಮತ್ತು ಇತರ ಹಲವರು ಸುಧಾಕರ್‌ ಅವರನ್ನು ಕೊರಳಿಗೆ ಕೈ ಹಾಕಿ, ಅಕ್ಷರಶಃ ತಳ್ಳಿಕೊಂಡೇ ವಿಧಾನಸೌಧದ ಮೂರನೇ ಮಹಡಿಯತ್ತ ಕರೆದೊಯ್ದರು.

ಸುಧಾಕರ್‌ ಮನವೊಲಿಕೆಗೆ ಎಂದು ಹೇಳಿ ಸಚಿವ ಕೆ.ಜೆ.ಜಾರ್ಜ್‌ ಅವರ ಕೊಠಡಿಯೊಳಗೆ (317) ಸುಧಾಕರ್‌ ಅವರನ್ನು ಕರೆದೊಯ್ಯಲಾಯಿತು. ರಾಜೀನಾಮೆ ವಿಷಯ ತಿಳಿದು ಧಾವಿಸಿ ಬಂದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಜಾರ್ಜ್‌ ಅವರ ಕೊಠಡಿಗೆ ತೆರಳಿ ಸುಧಾಕರ್‌ ಮನವೊಲಿಕೆಗೆ ಮುಂದಾದರು.

ಸುಧಾಕರ್‌ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಬಿಜೆಪಿಯ ಕೆಲವು ಶಾಸಕರು, ಮುಖಂಡರು, ಕಾರ್ಯಕರ್ತರು ಮೂರನೇ ಮಹಡಿಯತ್ತ ಮುನ್ನುಗ್ಗಿದರು. ಜಾರ್ಜ್‌ ಅವರ ಕೊಠಡಿಯ ಮುಂಭಾಗ ಜೋರು ಪ್ರತಿಭಟನೆ ನಡೆಸತೊಡಗಿದರು. ಸ್ಪೀಕರ್‌ ಕಚೇರಿಗೆ ಶಾಸಕರಾದ ಗಣೇಶ್‌ ಹುಕ್ಕೇರಿ ಬರಲಿದ್ದಾರೆ, ಸೌಮ್ಯಾ ರೆಡ್ಡಿ, ಅಂಜಲಿ ನಿಂಬಾಳ್ಕರ್‌ ಸಹ ರಾಜೀನಾಮೆ ನೀಡಲು ಬರುತ್ತಿದ್ದಾರೆ ಎಂಬ ವದಂತಿಯೂ ಹರಿದಾಡಿತು. ಹೀಗಾಗಿ ಒಂದಷ್ಟು ಮಂದಿ ವಿಧಾನಸಭಾ ಅಧ್ಯಕ್ಷರ ಕೊಠಡಿ ಬಳಿ ಕಾದು ಕುಳಿತಿದ್ದರು.

ಈ ಹಂತದಲ್ಲಿ ಮೂರನೇ ಮಹಡಿಯಲ್ಲಿ ಘೋಷಣೆಗಳು ಜಾಸ್ತಿಯಾದವು. ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್‌ನ ಹಲವು ಶಾಸಕರು, ಕಾರ್ಯಕರ್ತರೂ ಅಲ್ಲಿ ಜಮಾಯಿಸಿದರು. ಘೋಷಣೆ, ಪ್ರತಿ ಘೋಷಣೆ ನಡೆಯಿತು. ಒಂದು ರೀತಿಯಲ್ಲಿ ರಣಾಂಗಣವೇ ನಿರ್ಮಾಣವಾದಂತಹ ಸ್ಥಿತಿ ನೆಲೆಸಿತ್ತು. ಪೊಲೀಸರು ಇವರನ್ನು ನಿಯಂತ್ರಿಸಲು ಹರಸಾಹಸ ಮಾಡಬೇಕಾಯಿತು.

ಸುಮಾರು ಅರ್ಧ ಗಂಟೆ ಇದೇ ಪರಿಸ್ಥಿತಿ ನೆಲೆಸಿತ್ತು. ಆಗ ನಗರ ಪೊಲೀಸ್‌ ಕಮಿಷನರ್ ಅಲೋಕ್‌ ಕಮಾರ್‌ ಸ್ಥಳಕ್ಕೆ ಧಾವಿಸಿ ಬಂದರು. ಇವರ ಹಿಂದೆಯೇ ಪೊಲೀಸ್ ದೊಡ್ಡ ಪಡೆಯೂ ಆಗಮಿಸಿತು. ‘ಇನ್ನು ಹತ್ತು ನಿಮಿಷದಲ್ಲಿ ಸುಧಾಕರ್‌ ಅವರನ್ನು ರಾಜಭವನಕ್ಕೆ ಕರೆತರಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ನೀಡಿದ ಸೂಚನೆ ಪಾಲನೆಗೆ ಮುಂದಾದರು.


ವಿಧಾನಸೌಧದ ಮೂರನೇ ಮಹಡಿಯ ಸಚಿವ ಕೆ.ಜೆ.ಜಾರ್ಜ್‌ ಅವರ ಕಚೇರಿಯಲ್ಲಿ ಸುಮಾರು ಎರಡು ಗಂಟೆ ಕೂಡಿ ಹಾಕಲಾಗಿದ್ದ ಶಾಸಕ ಡಾ.ಸುಧಾಕರ್‌ ಅವರನ್ನು ಪೊಲೀಸ್‌ ಭದ್ರತೆಯಲ್ಲಿ ರಾಜಭವನದತ್ತ ಕರೆದೊಯ್ಯಲಾಯಿತು. ಪ್ರಜಾವಾಣಿ ಚಿತ್ರ

ಜತೆಗೆ ಸುಧಾಕರ್‌ ಅವರ ಪತ್ನಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಫೋನ್‌ ಕರೆ ಮಾಡಿತಮ್ಮ ಪತಿಗೆ ರಕ್ಷಣೆ ನೀಡುವಂತೆ ಕೋರಿಕೊಂಡಿದ್ದರು ಎನ್ನಲಾಗಿದೆ. ಈ ಹಂತದಲ್ಲಿ ವಿಧಾನಸೌಧ ನಿಜಕ್ಕೂ ಪೊಲೀಸರ ಸರ್ಪಗಾವಲಿಗೆ ಒಳಗಾಯಿತು. ವಿಧಾನಸೌಧದ ಪಶ್ಚಿಮ ಭಾಗದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು. ಎಲ್ಲ ದ್ವಾರಗಳನ್ನೂ ಬಂದ್‌ ಮಾಡಲಾಯಿತು. ಪತ್ರಕರ್ತರನ್ನು ಸಹ ಒಳಗೆ ಬಿಡದಂತೆ ಪೊಲೀಸರಿಗೆ ಸೂಚನೆ ನೀಡಲಾಯಿತು. ಇಡೀ ವಿಧಾನಸೌಧವನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.

ವಿಧಾನಸೌಧದ ಪಶ್ಚಿಮ ಭಾಗದಲ್ಲಿ ನೂರಾರು ಪೊಲೀಸರು ಜಮಾಯಿಸಿದ್ದರು. ಸುಧಾಕರ್‌ ಅವರನ್ನು ಕರೆದೊಯ್ಯಲು ಪೊಲೀಸರು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರಿಂದ ಘೋಷಣೆಗಳು ಮೊಳಗಿದವು. 

ಕೊನೆಗೆ ಪೊಲೀಸರು ಒಬ್ಬೊಬ್ಬರನ್ನೇ ಹೊರಗೆ ಕಳುಹಿಸುವ ಕೆಲಸ ಮಾಡಿದರು. ಒಂದು ಹಂತದಲ್ಲಿ ಲಘು ಲಾಠಿ ಬೀಸಿ ಜಮಾಯಿಸಿದ್ದವರನ್ನು ಚದುರಿಸಬೇಕಾಯಿತು. ಕೊನೆಗೆ ಪೊಲೀಸರು ಸುಧಾಕರ್‌ ಅವರನ್ನು ಸಂಜೆ 6.20ರ ಸುಮಾರಿಗೆ ವಿಧಾನಸೌಧದ ಉತ್ತರ ಭಾಗದಿಂದ ಹೊರಗೆ ಕರೆದು ತಂದು, ಪೂರ್ವ ದ್ವಾರದ ಮೂಲಕ ರಾಜಭವನಕ್ಕೆ ಕರೆದೊಯ್ದರು.

ರಾಜ್ಯಪಾಲರ ಮಧ್ಯಪ್ರವೇಶ

ಒಬ್ಬೊಬ್ಬ ಶಾಸಕನನ್ನೂ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸಿದ್ದು ಸುಧಾಕರ್‌ ಪ್ರಸಂಗದಿಂದ ಸ್ಪಷ್ಟವಾಯಿತು. ಎಂ.ಟಿ.ಬಿ.ನಾಗರಾಜ್‌ ಅವರು ಹೇಗೋ ತಪ್ಪಿಸಿಕೊಂಡು ರಾಜಭವನಕ್ಕೆ ಹೋಗಲು ಕಾರಿನ ಬಳಿ ಬಂದುಬಿಟ್ಟಿದ್ದರು. ಸುಧಾಕರ್‌ ಅವರನ್ನು ಪಕ್ಷದ ನಾಯಕರು ಎಳೆದೊಯ್ಯುತ್ತಿರುವುದನ್ನು ಅವರು ನೋಡಿದ್ದರು.

ರಾಜಭವನಕ್ಕೆ ತೆರಳಿದ ನಾಗರಾಜ್, ರಾಜ್ಯಪಾಲರಿಗೆ ವಿಷಯ ಮುಟ್ಟಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ರಾಜ್ಯಪಾಲರು, ಸುಧಾಕರ್ ಅವರನ್ನು ಸುರಕ್ಷಿತವಾಗಿ ಕರೆತರುವಂತೆ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !