ಕಬ್ಬು ಬೆಳೆಯತ್ತ ಹೆಚ್ಚುತ್ತಿರುವ ರೈತರ ಒಲವು

7

ಕಬ್ಬು ಬೆಳೆಯತ್ತ ಹೆಚ್ಚುತ್ತಿರುವ ರೈತರ ಒಲವು

Published:
Updated:
Deccan Herald

ಬೆಳಗಾವಿ: ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಸೂಕ್ತ ಬೆಲೆ ನೀಡುತ್ತಿಲ್ಲ ಎನ್ನುವ ದೂರುಗಳ ನಡುವೆಯೂ, ಜಿಲ್ಲೆಯ ರೈತರು ವರ್ಷದಿಂದ ವರ್ಷಕ್ಕೆ ಕಬ್ಬು ಬೆಳೆಯತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಜಿಲ್ಲೆಯಲ್ಲಿ 6.79 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಇದ್ದು, ಈ ವರ್ಷ 2.35 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷ 1.98 ಲಕ್ಷ ಹೆಕ್ಟೇರ್‌ನಲ್ಲಿ, 2016ರಲ್ಲಿ 2 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು.

ಕೃಷ್ಣಾ ನದಿ ತಟದಲ್ಲಿರುವ ಚಿಕ್ಕೋಡಿ, ಅಥಣಿ ತಾಲ್ಲೂಕುಗಳಲ್ಲಿ ಹಾಗೂ ಘಟಪ್ರಭಾ ನದಿಯ ದಡದಲ್ಲಿರುವ ಗೋಕಾಕ ತಾಲ್ಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಬ್ಬು ಬೆಳಯಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಸುರಿದಿದೆ. ಇದರಿಂದ ಜಿಲ್ಲೆಯಲ್ಲಿ ಹರಿಯುವ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಅಂತರ್ಜಲ ಕೂಡ ಹೆಚ್ಚಾಗಿದೆ. ಇನ್ನೊಂದೆಡೆ, ಚಿಕ್ಕೋಡಿ, ಗೋಕಾಕ, ರಾಯಬಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಬ್ಯಾರೇಜ್‌ಗಳನ್ನು ನಿರ್ಮಿಸಿ, ನೀರನ್ನು ಹಿಡಿದಿಟ್ಟುಕೊಂಡು ನೀರಾವರಿಗೆ ಬಳಸಲಾಗುತ್ತಿದೆ. ಯಥೇಚ್ಛ ನೀರು ಲಭ್ಯವಾಗುತ್ತಿರುವುದರಿಂದ ರೈತರು ಕಬ್ಬು ಬೆಳೆಯಲು ಹೆಚ್ಚಿನ ಒಲವು ತೋರಿಸಿದ್ದಾರೆ.

ಭತ್ತ, ತರಕಾರಿ ಸೇರಿದಂತೆ ಇತರ ಬೆಳೆ ಬೆಳೆಯಲು, ರೈತರಿಗೆ ಪ್ರಮುಖವಾಗಿ ಕಾಡುವುದು ವಿದ್ಯುತ್‌ ಕೊರತೆ. ಇದರಿಂದಾಗಿ ಹೊಲಗಳಿಗೆ ನಿರಂತರವಾಗಿ ನೀರು ಹಾಯಿಸಲು ಸಾಧ್ಯವಾಗದೇ ಬೆಳೆ ಒಣಗಿ ಹೋಗುತ್ತಿವೆ. ಆದರೆ, ಕಬ್ಬಿಗೆ ಪ್ರತಿದಿನ ನೀರು ಹಾಯಿಸದಿದ್ದರೂ ತೊಂದರೆಯಿಲ್ಲ.

ಒಂದೆರಡು ದಿನಕ್ಕೊಮ್ಮೆ ಹಾಯಿಸಬಹುದು. ಅಲ್ಲಿಯವರೆಗೆ ಭೂಮಿಯಲ್ಲಿನ ತೇವಾಂಶವನ್ನು ಹೀರಿಕೊಂಡು ಬದುಕುಳಿಯುತ್ತದೆ. ಕಬ್ಬು ಬೆಳೆದರೆ ಹೊಲದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳು ಇರುವುದಿಲ್ಲ. ಕೃಷಿ ಕಾರ್ಮಿಕರ ಅವಶ್ಯಕತೆಯೂ ಅಷ್ಟಾಗಿ ಬೀಳುವುದಿಲ್ಲ. ಹೀಗಾಗಿ ರೈತರು ಕಬ್ಬು ಕೃಷಿಗೆ ಮನಸು ಮಾಡುತ್ತಿದ್ದಾರೆ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ಬೆಳಗಾವಿ ಘಟಕದ ಅಧ್ಯಕ್ಷ ಈರಣ್ಣ ಅರಳಿಕಟ್ಟಿ ಹೇಳಿದರು.

ಇನ್ನೊಂದು ಪ್ರಮುಖ ಸಂಗತಿಯೆಂದರೆ, ಸಕ್ಕರೆ ಕಾರ್ಖಾನೆಯವರೇ ಕಬ್ಬು ಕಟಾವು ಮಾಡಿಕೊಂಡು ತೆಗೆದುಕೊಂಡು ಹೋಗುತ್ತಾರೆ. ಇದರಿಂದಾಗಿ, ಬೆಳೆ ಕಟಾವು ಹಾಗೂ ಸಾಗಾಟದ ತಲೆಬಿಸಿ ರೈತರಿಗೆ ಇರುವುದಿಲ್ಲ. ಇತರ ಬೆಳೆಗಳಲ್ಲಾದರೆ ರೈತರೇ ಕಟಾವು ಹಾಗೂ ಸಾಗಾಟದ ವೆಚ್ಚ ಹೊರಬೇಕಾಗುತ್ತದೆ. ಬೆಳೆಯು ಸೂಕ್ತ ಸಮಯದಲ್ಲಿ ಮಾರುಕಟ್ಟೆಗೆ ತಲುಪದಿದ್ದರೆ, ನಷ್ಟ ಉಂಟಾಗಿ ರೈತರು ಕೈಸುಟ್ಟುಕೊಳ್ಳಬೇಕಾಗುತ್ತದೆ. ಕಬ್ಬಿನಲ್ಲಿ ಇಂತಹ ಸಮಸ್ಯೆಗಳಿಲ್ಲ ಎನ್ನುತ್ತಾರೆ ಅವರು.

ಹೊಸ ಸಕ್ಕರೆ ಕಾರ್ಖಾನೆಗಳು ಆರಂಭ: ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳಕರ ಹಾಗೂ ಅಂಜಲಿ ನಿಂಬಾಳ್ಕರ್ ಅವರ ಮಾಲೀಕತ್ವಕ್ಕೆ ಸೇರಿದ ಎರಡು ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನಿಂದ ಕಬ್ಬು ನುರಿಸಲು ಆರಂಭಿಸಲಿವೆ. ಇವೂ ಸೇರಿದಂತೆ ಜಿಲ್ಲೆಯಲ್ಲಿ ಈಗ 26 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಿದಷ್ಟೂ ಕಬ್ಬಿಗೆ ಬೇಡಿಕೆ ಹೆಚ್ಚಾಗಲಿದೆ. ಅಲ್ಲದೇ, ಉತ್ತಮ ದರವೂ ಸಿಗಬಹುದು ಎಂಬುದು ರೈತರ ನಿರೀಕ್ಷೆ.

**

‘ಜಿಲ್ಲೆಯಲ್ಲಿ 2.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಳೆದ ಸಲಕ್ಕಿಂತ ಈ ಸಲ 35 ಸಾವಿರ ಹೆಕ್ಟೇರ್‌ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆದಿದೆ.

-ಜಿಲಾನಿ ಮೊಕಾಶಿ, ಕೃಷಿ ಜಂಟಿ ನಿರ್ದೇಶಕ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !