ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ರೈತರೂ ಗೆಲ್ಲಬೇಕು..

ಸುಕೋ ಬ್ಯಾಂಕ್ ಬೆಳ್ಳಿ ಹಬ್ಬ: ರೈತರ ಸಂವಾದ
Last Updated 5 ಜನವರಿ 2019, 16:58 IST
ಅಕ್ಷರ ಗಾತ್ರ

ಬಳ್ಳಾರಿ: ‘ಒಬ್ಬಿಬ್ಬರು ರೈತರಷ್ಟೇ ಪ್ರಯೋಗಶೀಲರಾಗಿ ಗೆಲ್ಲುವುದಕ್ಕಿಂತಲೂ ಎಲ್ಲ ರೈತರೂ ಗೆಲ್ಲಬೇಕು....’

- ಸುಕೋ ಬ್ಯಾಂಕ್ ಬೆಳ್ಳಿ ಹಬ್ಬದ ಅಂಗವಾಗಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯದ ವಿವಿಧ ರೈತರ ಸಂವಾದದಲ್ಲಿ ಮೂಡಿದ ಒಮ್ಮತದ ಅಭಿಪ್ರಾಯವಿದು.

ಈ ಸಂವಾದದಲ್ಲಿ ವಿವಿಧ ಜಿಲ್ಲೆಗಳ ಮೂವತ್ತೈದು ರೈತರು ಕೃಷಿ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ಕುರಿತು ತಮ್ಮ ಒಳನೋಟಗಳನ್ನು ಮಂಡಿಸಿದರು.

‘ಎಲ್ಲ ರೈತರೂ ಗೆಲ್ಲಬೇಕು’ ಎಂದ ಜಮಖಂಡಿಯ ರುದ್ರಪ್ಪ ಜರಫಿ ಅವರ ಮಾತನ್ನು ಅನುಮೋದಿಸಿದ ಕೋಲಾರದ ನೆನಮನಹಳ್ಳಿಯ ಸಾವಯವ ಕೃಷಿಕ ಎನ್.ಆರ್.ಚಂದ್ರಶೇಖರ್, ಅಲ್ಪಾವಧಿ ಬೆಳೆಯನ್ನು ಮೊದಲು ಬೆಳೆದು ನಂತರ ದೀರ್ಘಾವಧಿ ಬೆಳೆಯನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು. 30 ಕುಂಟೆ ಜಮೀನಿನಲ್ಲಿ ತಾವು ಬಹುಬಳೆಯನ್ನು ಬೆಳೆದ ಬಗೆಯನ್ನು ವಿವರಿಸಿದರು.

‘ರೈತರ ಹೊಲಕ್ಕೆ ನೀರು ಹರಿಸುವುದಕ್ಕಿಂತಲೂ ಕೆರೆಗೆ ನೀರು ಹರಿಸುವುದು ಅತ್ಯಗತ್ಯ’ ಎಂದು ಸಿಂಧನೂರಿನ ಚಿದಾನಂದ ಪ್ರತಿಪಾದಿಸಿದರು.

‘ಸೌಲಭ್ಯಗಳಿಗಾಗಿ ರೈತರು ವಿವಿಧ ಇಲಾಖೆಗಳಿಗೆ ಅಲೆದಾಡಬೇಕಾದ ಅನಿವಾರ್ಯತೆಯನ್ನು ಸರ್ಕಾರ ಕೊನೆಗಾಣಿಸಬೇಕು’ ಎಂದು ಮಂಚಾಲೆ ಪ್ರಕಾಶ ಹೇಳಿದರು.

‘ರೈತರು ಸ್ವಾವಲಂಬಿಗಳಾಗಬೇಕು. ತಮಗೆ ಬೇಕಾಗಿರುವುದನ್ನು ಮೊದಲು ಬೆಳೆಯಬೇಕು’ ಎಂದು ರೈತ ಜಯಂತ ಹೇಳಿದರು.

‘ಶಾಲಾ ಮಕ್ಕಳಿಗೆ ಕೃಷಿ ಪ್ರವಾಸ ಏರ್ಪಡಿಸಬೇಕು’ ಎಂದು ಮಹೇಶ ಅಮ್ಮನಕಟ್ಟಿ ಸಲಹೆ ನೀಡಿದರು. ನಿವೃತ್ತ ಕುಲಪತಿ ಪ್ರೊ.ಬಿ.ವಿ.ಪಾಟೀಲ್‌, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಶಿವಾನಂದ ಕಳವೆ ಉಪಸ್ಥಿತರಿದ್ದರು.

ಸಂವಾದದಲ್ಲಿ ಪಾಲ್ಗೊಳ್ಳಬೇಕಾಗಿದ್ದ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಸಿಂಧನೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣ ಬಳ್ಳಾರಿಗೆ ಸಂಜೆ ಬಂದರು.

ಸಂಜೆ ನಡೆದ ಸುಕೃತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ ಬ್ಯಾಂಕ್‌ ಬೆಳೆದ ಬಗೆಯನ್ನು ಮೆಲುಕು ಹಾಕಿದರು. ಅಧ್ಯಕ್ಷ ಮೋಹಿತ್‌ಮಸ್ಕಿ, ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಅಗ್ನಿಹೋತ್ರಿ, ಶಾಸಕ ಜಿ.ಸೋಮಶೇಖರರೆಡ್ಡಿ ವೇದಿಕೆಯಲ್ಲಿದ್ದರು.

ಸುಕೃತ ಕೃಷಿ ರಾಜ್ಯ ಪ್ರಶಸ್ತಿ ಪ್ರದಾನ

ಸಂಜೆ ಬಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿ’ಯನ್ನು ನವಲಗುಂದದ ಧರ್ಮರೆಡ್ಡಿ ಕೃಷ್ಣರೆಡ್ಡಿ ಲಕ್ಕಣ್ಣನವರ್ ಅವರಿಗೆ ಹಾಗೂ ‘ಸುಕೃತ ಕೃಷಿ ಪ್ರಶಸ್ತಿ’ಯನ್ನು ಅಜ್ಜಪ್ಪ ಹನುಮಂತಪ್ಪ ಕಲಗೋಡ್ ಅವರಿಗೆ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ ₹1 ಲಕ್ಷ ಹಾಗೂ ಫಲಕವನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಲೇಖಕರಾದ ಮಲ್ಲಿಕಾರ್ಜುನ ಹೊಸಪಾಳ್ಯ, ಅಂಶಿ ಪ್ರಸನ್ನಕುಮಾರ್‌, ರೇಖಾ ಸಂಪತ್‌, ಶೈಲಜಾ ಬೆಳ್ಳಂಕಿಮಠ, ಚಂದ್ರಶೇಖರ ಕಾಡಾದಿ, ವಿನೋದ್‌ ಪಾಟೀಲ್‌, ಈರಯ್ಯ ಕಿಲ್ಲೇದಾರ, ಜಿ.ಇಂದ್ರಕುಮಾರ್‌ ಮತ್ತು ಚಂದ್ರಹಾಸ ಚಾರ್ಮಾಡಿ ಸುಕೃತ ಕೃಷಿ ಲೇಖನ ಪುರಸ್ಕಾರ ಪಡೆದರು.

ಸಿರಿಧಾನ್ಯದ ಆಹಾರ ಮೇಳ

ಆಹಾರ ಉದ್ಯಮ ಸ್ಥಾಪನೆಗೆ ಬ್ಯಾಂಕ್‌ ನೆರವು ನೀಡುವ ಸಲುವಾಗಿಯೇ ಭವನದ ಆವರಣದಲ್ಲಿ ಏರ್ಪಡಿಸಿದ್ದ ಉತ್ತರ ಕರ್ನಾಟಕದ ಆಹಾರ ಮೇಳದ ಇಪ್ಪತ್ತು ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ಮಾಡಿದ ತಿನಿಸುಗಳನ್ನು ನೂರಾರು ಮಂದಿ ಸವಿದರು. ಹಿರಿಯ–ಕಿರಿಯ ಪಾಕಪ್ರವೀಣರು ಪದಾರ್ಥಗಳನ್ನು ತಯಾರಿಸಿದ್ದರು. ನಟ ಸಿಹಿಕಹಿ ಚಂದ್ರು ಹಾಗೂ ಮರ್ಚೇಡು ಮಲ್ಲಿಕಾರ್ಜುನ ತೀರ್ಪುಗಾರರಾಗಿದ್ದರು. ಬ್ಯಾಂಕ್‌ ಶಾಖೆಯುಳ್ಳ ಜಿಲ್ಲೆಗಳಲ್ಲಿ ಈ ಮೇಳ ಮತ್ತು ಸ್ಪರ್ಧೆ ನಡೆಯಲಿದ್ದು, ವರ್ಷಾಂತ್ಯಕ್ಕೆ ಅಂತಿಮ ಸ್ಪರ್ಧೆ ನಡೆಯಲಿದೆ.

‘ಸಾಲ ಮನ್ನಾ ಸಮಸ್ಯೆಯಾಗದು’

ಬಳ್ಳಾರಿ: ‘ರಾಜ್ಯದಲ್ಲಿ ರೈತರ ಬೆಳೆ ಸಾಲ ಮನ್ನಾ ಸಮಸ್ಯೆಯಾಗದು’ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ‘ಬೆಳೆ ಸಾಲ ಪಡೆದಿರುವ ರೈತರು ಸ್ವಯಂ ದೃಢೀಕರಣವನ್ನು ಶೀಘ್ರ ಸಲ್ಲಿಸಲಿ ಎಂದು ಗಡುವನ್ನು ಜ.15 ರಿಂದ 10ಕ್ಕೆ ಮಿತಿಗೊಳಿಸಲಾಗಿದೆ. ‘ರೈತರಿಗೆ ದೊರಕಬೇಕಾಗಿದ್ದ ಸಾಲವನ್ನು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಸೇರಿದಂತೆ ಅನ್ಯರು ಪಡೆದಿದ್ದಾರೆ. ಇವೆಲ್ಲವೂ ಬೆಳಕಿಗೆ ಬರಬೇಕು’ ಎಂದರು.

‘ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ನಲ್ಲೇ ಇರುತ್ತಾರೆ. ಅವರು ಬಿಜೆಪಿಗೆ ಸೇರುತ್ತಾರೆ ಎಂಬುದೆಲ್ಲ ಆಗದ ಮಾತು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT