ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು: ಸುಳ್ವಾಡಿ ದುರಂತ ಸಂತ್ರಸ್ತರ ಅಳಲು

ಸುಳ್ವಾಡಿ ದುರಂತ: ಇಂದಿಗೆ ವರ್ಷ l ಯಾರೂ ನಮ್ಮನ್ನು ಕೂಲಿಗೂ ಕರೆಯುತ್ತಿಲ್ಲ: ಸಂತ್ರಸ್ತರು
Last Updated 13 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲಾಡಳಿತವು ಉತ್ತಮ ಚಿಕಿತ್ಸೆ ಕೊಡಿಸಿ ನಮ್ಮನ್ನು ಬದುಕಿಸಿತು. ಆದರೆ, ಈಗ ಎದುರಿಸುತ್ತಿರುವ ಕಷ್ಟ ನೋಡಿದರೆ ನಾವು ಆಗಲೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು...’

–ಹನೂರು ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಕಳೆದ ಡಿಸೆಂಬರ್‌ 14ರಂದು ಸಂಭವಿಸಿದ್ದ ವಿಷಪ್ರಸಾದ ದುರಂತದಲ್ಲಿ ಬದುಕುಳಿದ, ಬಿದರಹಳ್ಳಿಯ ಸಂತ್ರಸ್ತರ ಮಾತು ಇದು.

ಈ ದುರ್ಘಟನೆಯಲ್ಲಿ 17 ಜನರು ಮೃತಪಟ್ಟು 110ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಇದಾಗಿ ಒಂದು ವರ್ಷ ಕಳೆದರೂ ಸಂತ್ರಸ್ತರು ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಘಟನೆಯಲ್ಲಿ ಮೃತಪಟ್ಟಿದ್ದ 17 ಜನರ ಕುಟುಂಬದವರು ಚೇತರಿಸಿಕೊಳ್ಳಲು ಇನ್ನೂ ಹೆಣಗುತ್ತಿದ್ದಾರೆ.

ಕಾಡುತ್ತಿದೆ ಅನಾರೋಗ್ಯ: ‘ದೇವರ ಪ್ರಸಾದವೆಂದು ತಿಂದೆವು. ಅದು ನಮ್ಮ ಬದುಕನ್ನೇ ಹಾಳು ಮಾಡಿದೆ. ಚಿಕಿತ್ಸೆ ಪಡೆದು ಬಂದ ನಂತರ ಪದೇ ಪದೇ ಅನಾರೋಗ್ಯ ಕಾಡುತ್ತಿದೆ’ ಎಂದು ಸಂತ್ರಸ್ತರು ದುಃಖಿಸುತ್ತಾರೆ.

‘ವಿಪರೀತ ಸುಸ್ತು. ಕೆಲಸ ಮಾಡಲು ಆಗುತ್ತಿಲ್ಲ. ಆಗಾಗ ವಾಂತಿ– ಭೇದಿ ಆಗುತ್ತದೆ. ತಲೆ ಸುತ್ತು ಬರುತ್ತದೆ. ಹೊಟ್ಟೆ ಉರಿ ಜಾಸ್ತಿ, ಊಟ ಮಾಡಿದ ತಕ್ಷಣಹೊಟ್ಟೆ ಉಬ್ಬರಿಸುತ್ತಿದೆ. ಹಸಿವೇ ಆಗುವುದಿಲ್ಲ’ ಎಂದು ಬಿದರಹಳ್ಳಿಯ ರುಕ್ಕಮ್ಮ ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಬಿಚ್ಚಿಟ್ಟರು.

‘ಆರೋಗ್ಯ ಸರಿ ಇಲ್ಲ ಎಂದು ಯಾರೂ ನಮ್ಮನ್ನು ಕೂಲಿಗೂ ಕರೆಯುತ್ತಿಲ್ಲ. ಮನೆಯಲ್ಲೇ ದಿನ ಕಳೆಯುತ್ತಿದ್ದೇವೆ. ಜೀವನ ನಡೆಸುವುದು ಕಷ್ಟವಾಗುತ್ತಿದೆ' ಎಂದು ವಿಷಣ್ಣರಾದರು.

ರುಕ್ಕಮ್ಮ ಒಬ್ಬರೇ ಅಲ್ಲ; ಬಿದರಹಳ್ಳಿ, ವಡ್ಡರದೊಡ್ಡಿ, ಮಾರ್ಟಳ್ಳಿ ಸುತ್ತಮುತ್ತಲಿನ ಸಂತ್ರಸ್ತರೆಲ್ಲ ಇದೇ ಆರೋಗ್ಯ ಸಮಸ್ಯೆಗಳನ್ನು ಮುಂದಿಡುತ್ತಾರೆ.

‘ಎರಡನೇ ತರಗತಿ ಓದುವ ನನ್ನ ಮಗ ಅನಾರೋಗ್ಯದಿಂದಾಗಿ ಆಗಾಗ ಶಾಲೆಗೆ ರಜೆ ಹಾಕುತ್ತಾನೆ. ಆದರೆ, ವೈದ್ಯರಲ್ಲಿ ತೋರಿಸಿದರೆ ಏನೂ ಸಮಸ್ಯೆ ಇಲ್ಲವೆಂದು ಹೇಳಿ ಕಳುಹಿಸುತ್ತಾರೆ’ ಎಂದು ಸಂತ್ರಸ್ತೆ ರೂಪಾ ಅಳಲು ತೋಡಿಕೊಂಡರು.

ಸಾಲಗಾರರ ಪಾಲಾಯಿತು: ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ, ರಾಜ್ಯ ಸರ್ಕಾರ ತಲಾ ₹5 ಲಕ್ಷ, ಅಸ್ವಸ್ಥಗೊಂಡಿದ್ದವರಿಗೆ ತಲಾ ₹1 ಲಕ್ಷ ಕೊಟ್ಟಿತ್ತು. ಕೇಂದ್ರ ಸರ್ಕಾರದಿಂದ ಕ್ರಮವಾಗಿ ₹2 ಲಕ್ಷ ಮತ್ತು ₹50 ಸಾವಿರ ಪರಿಹಾರ ಬಂದಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತ ಕುಟುಂಬಗಳಿಗೆ ಎಸ್‌ಟಿ, ಎಸ್‌ಸಿ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ತಲಾ ₹8.25 ಲಕ್ಷ ಪರಿಹಾರ ಸಿಕ್ಕಿದೆ.

‘ಮಕ್ಕಳ ಮದುವೆಗಾಗಿ ಸಾಲ ಮಾಡಿದ್ದೆವು. ನಾವೆಲ್ಲ ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದುಕೊಂಡು ಸಾಲಕೊಟ್ಟವರು ಬಂದು ಬಡ್ಡಿ ಮೊತ್ತ ಬಿಟ್ಟು, ಬಲವಂತವಾಗಿ ಅಸಲು ತೆಗೆದುಕೊಂಡು ಹೋದರು. ಹಾಗಾಗಿ ಸಿಕ್ಕಿದ ಪರಿಹಾರದಿಂದಲೂ ನಮಗೆ ಉಪಯೋಗವಾಗಿಲ್ಲ’ ಎಂದು ರುಕ್ಕಮ್ಮ ಹೇಳಿದರು.

‘ನಿವೇಶನ ಮತ್ತು ಎರಡು ಎಕರೆ ಜಮೀನು ನೀಡುವುದಾಗಿ ಹೇಳಿದ್ದ ಸರ್ಕಾರ, ಇದುವರೆಗೂ ಹಂಚಿಕೆ ಮಾಡಿಲ್ಲ’ ಎಂದು ಘಟನೆಯಲ್ಲಿ ಮೃತಪಟ್ಟಿದ್ದ ಶಾಂತರಾಜು ಎಂಬುವವರ ಪತ್ನಿ ಶಿವಗಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಂಭೀರ ಸಮಸ್ಯೆ ಇಲ್ಲ: ಡಿಎಚ್‌ಒ

ಸಂತ್ರಸ್ತರ ಆರೋಗ್ಯ ಸಮಸ್ಯೆಗಳ ಕುರಿತಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ‘ಅವರಿಗಾಗಿ ಪ್ರತಿ ತಿಂಗಳು ಆರೋಗ್ಯ ಶಿಬಿರ ನಡೆಸುತ್ತಿದ್ದೇವೆ. ಗಂಭೀರ ಸಮಸ್ಯೆಗಳೇನಿಲ್ಲ. ಸ್ವಲ್ಪ
ಮನಸ್ಸಿಗೆ ಹಚ್ಚಿಕೊಂಡಿದ್ದಾರೆ. ಅವರು ಭಯದಿಂದ ಇನ್ನೂ ಹೊರಬಂದಿಲ್ಲ. ಅಗತ್ಯ ಬಿದ್ದರೆ ಕೊಳ್ಳೇಗಾಲದಲ್ಲಿ ಚಿಕಿತ್ಸೆ ನೀಡುತ್ತೇವೆ’ ಎಂದು ಅವರು ಹೇಳಿದರು.

‘ಸಂತ್ರಸ್ತರ ಪೈಕಿ ಬಹುತೇಕರು ಮದ್ಯವ್ಯಸನಿಗಳು. ಇದರಿಂದಾಗಿಯೂ ಅವರಿಗೆ ಹೊಟ್ಟೆ ಉರಿ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡಬಹುದು’ ಎಂದು ಅವರು ಹೇಳಿದರು.
***

ಮೊದಲು ಕ್ರಿಕೆಟ್‌ ಆಡುತ್ತಿದ್ದೆ.ಈಗ ಆಗುತ್ತಿಲ್ಲ. ಹೊಟ್ಟೆ ಉರಿ ಬರುತ್ತದೆ. ಕಣ್ಣು ಮಂಜು ಮಂಜಾಗುತ್ತದೆ

- ಸ್ವಾಮಿ ದೊರೆ, ಸಂತ್ರಸ್ತ ಯುವಕ, ವಡ್ಡರದೊಡ್ಡಿ

***

ಸಂತ್ರಸ್ತರಿಗೆ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್‌ ಕೂಡ ಮಾಡಿಸಿದ್ದೇವೆ. ಅವರಿನ್ನೂ ಭಯದಿಂದ ಹೊರಗೆ ಬಂದಿಲ್ಲ

- ಡಾ.ಎಂ.ಸಿ.ರವಿ, ಜಿಲ್ಲಾ ಆರೋಗ್ಯಾಧಿಕಾರಿ

***

ಸಂತ್ರಸ್ತರಿಗೆ ನಿವೇಶನ ನೀಡಲು ಬಿದರಹಳ್ಳಿಯಲ್ಲಿ 2 ಎಕರೆ ಜಮೀನು ಗುರುತಿಸಲಾಗಿದ್ದು, ರಾಜೀವ್‌ ಗಾಂಧಿ ವಸತಿ ನಿಗಮದಿಂದ ಹಂಚಿಕೆ ಮಾಡಲಾಗುವುದು

- ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT