ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಕೈತಪ್ಪಿದ್ದೇ ಟ್ರಸ್ಟಿಗಳ ಮೇಲಿನ ದ್ವೇಷಕ್ಕೆ ಕಾರಣ

ಸುಳ್ವಾಡಿ ದುರಂತ: ಟ್ರಸ್ಟ್‌ ನೋಂದಣಿ ನಂತರ ಸ್ವಾಮೀಜಿಯ ಹಿಡಿತಕ್ಕೆ ಸಿಗದ ಹಣಕಾಸಿನ ವ್ಯವಹಾರ
Last Updated 22 ಡಿಸೆಂಬರ್ 2018, 1:41 IST
ಅಕ್ಷರ ಗಾತ್ರ

ಚಾಮರಾಜನಗರ:ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದ ಆದಾಯವು ಟ್ರಸ್ಟ್‌ ಅಧ್ಯಕ್ಷ ಇಮ್ಮಡಿ ಮಹಾದೇವಸ್ವಾಮಿ ಖಾತೆಗೆ ನೇರವಾಗಿ ಹರಿದು ಬರುತ್ತಿದ್ದುದು, 19 ತಿಂಗಳುಗಳಿಂದ ಸ್ಥಗಿತವಾಗಿತ್ತು.

ಅಂದಿನಿಂದ ಟ್ರಸ್ಟಿಗಳ ಮೇಲಿದ್ದ ಅಸಮಾಧಾನ ಇನ್ನಷ್ಟು ಹೆಚ್ಚಾಯಿತು. ದಿನಕಳೆದಂತೆ ಇದು ದ್ವೇಷವಾಗಿ ಮಾರ್ಪಟ್ಟಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

2017ರ ಏಪ್ರಿಲ್‌ 24ರಂದು ದೇವಾಲಯ ಆಡಳಿ‌ತ ನಿರ್ವಹಣೆಗಾಗಿ ಟ್ರಸ್ಟ್‌ ನೋಂದಣಿ ಮಾಡಲಾಗಿತ್ತು. ಅದುವರೆಗೂ ದೇವಾಲಯದ ಉಸ್ತುವಾರಿಯನ್ನು ಸ್ವಾಮೀಜಿ ನೋಡಿಕೊಳ್ಳುತ್ತಿದ್ದರು. ಹಣಕಾಸು ವ್ಯವಹಾರಗಳೂ ಅವರ ನಿಯ‌ಂತ್ರಣದಲ್ಲಿತ್ತು. ಹಾಗಾಗಿ ದೇವಾಲಯದ ಎಲ್ಲ ಆದಾಯವೂ ಅವರ ಖಾತೆಗೆ ಸೇರುತ್ತಿತ್ತು. ಚಿನ್ನಾಭರಣವೂ ಅವರ ಸುಪರ್ದಿನಲ್ಲೇ ಇತ್ತು.

‘ಟ್ರಸ್ಟ್‌ ರಚನೆ ನಂತರ ಆದಾಯವು ಟ್ರಸ್ಟ್‌ ಜಂಟಿ ಖಾತೆಯಲ್ಲಿ ಬ್ಯಾಂಕ್‌ಗೆ ಜಮೆ ಆಗಲು ಆರಂಭವಾಯಿತು. ಆ ಖಾತೆಯಿಂದ ಮನಸ್ಸಿಗೆ ಬಂದಂತೆ ಹಣ ತೆಗೆಯಲು ಆಗುತ್ತಿರಲಿಲ್ಲ. ಅದಕ್ಕೆ ಟ್ರಸ್ಟ್‌ ಕಾರ್ಯದರ್ಶಿಯ ಸಮ್ಮತಿಯೂ ಬೇಕಾಗಿತ್ತು. ಇದರಿಂದ ಮಹಾದೇವಸ್ವಾಮಿ ಕೈಕಟ್ಟಿಹಾಕಿದಂತೆ ಆಯಿತು’ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಟ್ರಸ್ಟ್‌ ರಚನೆ ನಂತರ ಯಾವುದೇ ತೀರ್ಮಾನ ಕೈಗೊಳ್ಳುವಾಗ ಸದಸ್ಯರ ಅನುಮತಿಯೂ ಬೇಕಾಗಿತ್ತು. ಸ್ವಾಮೀಜಿ ಹೇಳಿದಂತೆ ಎಲ್ಲವೂ ನಡೆಯುತ್ತಿರಲಿಲ್ಲ. ದಿನ ಕಳೆದಂತೆ ದೇವಾಲಯದ ಆಡಳಿತದ ಮೇಲಿನ ತಮ್ಮ ಹಿಡಿತ ಸಡಿಲವಾಗುತ್ತಿದೆ ಎಂಬ ಭಾವನೆ ಮೂಡಲು ಆರಂಭಿಸಿತು.

ಲೆಕ್ಕಕ್ಕೆ ಸಿಗದ ಹಣ: ಟ್ರಸ್ಟ್‌ ನೋಂದಣಿಯಾಗುವ ಸಮಯದಲ್ಲಿ ಸ್ವಾಮೀಜಿ ಖಾತೆಯಲ್ಲಿ ₹24 ಲಕ್ಷ ಇತ್ತು. ಅದನ್ನು ಟ್ರಸ್ಟ್‌ ಖಾತೆಗೆ ವರ್ಗಾಯಿಸಲಾಗಿತ್ತು. ಈಗ ಟ್ರಸ್ಟ್‌ ಖಾತೆಯಲ್ಲಿ ₹40 ಲಕ್ಷ ಹಣ ಇದೆ. ಒಂದೂವರೆ ವರ್ಷದಲ್ಲಿ ₹16 ಲಕ್ಷ ಸಂಗ್ರಹವಾಗಿದೆ. ಅಂದರೆ, ವರ್ಷಕ್ಕೆ ₹10ರಿಂದ 12 ಲಕ್ಷದಷ್ಟು ಆದಾಯ ಬರುತ್ತಿತ್ತು ಎನ್ನಲಾಗಿದೆ.

ಸ್ವಾಮೀಜಿ ದಶಕಕ್ಕೂ ಹೆಚ್ಚು ಸಮಯದಿಂದ ಆಡಳಿತ ಮಂಡಳಿ ನೇತೃತ್ವ ವಹಿಸಿಕೊಂಡಿದ್ದರು. ಸಂಗ್ರಹವಾಗಿರುವ ಹಣ, ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಇಟ್ಟಿಲ್ಲ. ದೇವಾಲಯಕ್ಕೆ ಸೇರಿದ ಚಿನ್ನಾಭರಣಗಳ ಬಗ್ಗೆಯೂ ಮಾಹಿತಿ ಇಲ್ಲವಾಗಿದೆ ಎಂದು ಮೂಲಗಳು ತಿಳಿಸಿವೆ.

ದ್ವೇಷವಾಗಿ ಮಾರ್ಪಟ್ಟ ಕೋಪ: ದೇವಾಲಯಕ್ಕೆ ಗೋಪುರ ನಿರ್ಮಿಸಲು ₹1.50 ಕೋಟಿಯಷ್ಟು ದೊಡ್ಡ ಮೊತ್ತದ ಯೋಜನೆ ರೂಪಿಸುವುದು ಅವರ ಯೋಚನೆಯಾಗಿತ್ತು. ಆದರೆ, ಉಳಿದ ಸದಸ್ಯರು ಅದನ್ನು ವಿರೋಧಿಸಿದರು. ಟ್ರಸ್ಟ್‌ನಲ್ಲಿ ಹೆಚ್ಚು ದುಡ್ಡಿಲ್ಲದ ಕಾರಣ, ₹75 ಲಕ್ಷದಲ್ಲಿ ಗೋಪುರ ನಿರ್ಮಿಸಲು ಚಿನ್ನಪ್ಪಿ ಸೇರಿದಂತೆ ಉಳಿದ ಸದಸ್ಯರು ನಿರ್ಧರಿಸಿದ್ದರು. ಇದನ್ನು ಸ್ವಾಮೀಜಿ ಒಪ್ಪಿರಲಿಲ್ಲ. ತಮ್ಮ ವಿರೋಧದ ನಡುವೆಯೇ ಗೋಪುರ ನಿರ್ಮಾಣ ಕಾರ್ಯ ಮುಂದುವರಿಸಿದ್ದು ಇನ್ನಷ್ಟು ಕೆರಳಿಸಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಹೀಗೆ ಬಿಟ್ಟರೆ ದೇವಸ್ಥಾನ ತಮ್ಮ ಕೈತಪ್ಪುತ್ತದೆ. ಹೇಗಾದರೂ ಮಾಡಿ ಟ್ರಸ್ಟ್‌ನಲ್ಲಿರುವ ವಿರೋಧಿಗಳಿಗೆ ಬುದ್ಧಿಕಲಿಸಬೇಕು ಎಂದು ಇಮ್ಮಡಿ ಮಹಾದೇವಸ್ವಾಮಿ ತೀರ್ಮಾನಿಸಿದರು ಎನ್ನಲಾಗಿದೆ.

ಏಕಾಏಕಿ ಮಠದಿಂದ ಹೊರಟಿದ್ದರು: ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಡಿ. 17ರಂದು ಬೆಳಿಗ್ಗೆ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಸ್ವಾಮೀಜಿಯನ್ನು ವಿಚಾರಣೆ ಮಾಡಿದ್ದರು. ಆದರೆ, ಸಂಜೆ ಹೊತ್ತಿಗೆ ಪೊಲೀಸರಿಗೆ ತಿಳಿಸಿದೆ ಏಕಾಏಕಿ ಮಠದಿಂದ ಹೊರಟರು. ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿರಬಹುದು ಎಂಬುದು ಪೊಲೀಸರ ಶಂಕೆಯಾಗಿತ್ತು. ಅವರ ಚಲನವಲನಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಎಚ್ಚರಿಕೆ ನೀಡಿದ ನಂತರ ವಾಪಸ್‌ ಬಂದಿದ್ದರು.

**

ಮೂರು– ನಾಲ್ಕು ಜನ ಸತ್ತರೂ ತೊಂದರೆ ಇಲ್ಲ...

ಇಮ್ಮಡಿ ಮಹಾದೇವಸ್ವಾಮಿ ಅವರು ಟ್ರಸ್ಟಿಗಳಾದ ಚಿನ್ನಪ್ಪಿ ಹಾಗೂ ಇತರರನ್ನು ಎಷ್ಟು ದ್ವೇಷಿಸುತ್ತಿದ್ದರು ಎಂದರೆ,ವಿಷ ಪ್ರಸಾದ ಸೇವಿಸಿ ಮೂರು, ನಾಲ್ಕು ಹೆಣ ಬಿದ್ದರೂ ಚಿಂತೆಯಿಲ್ಲ. ಆದರೆ, ಅವರನ್ನು ಮಾತ್ರ ಸುಮ್ಮನೆ ಬಿಡಬಾರದು. ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸಲೇಬೇಕು ಎಂಬ ಭಾವನೆ ಅವರಲ್ಲಿತ್ತು ಎಂಬುದು ಗೊತ್ತಾಗಿದೆ.

ಆದರೆ, ಈ‍ಪ್ರಮಾಣದ ಸಾವು –ನೋವು ಸಂಭವಿಸುತ್ತದೆ ಎಂಬ ಊಹೆ ಅವರಿಗೆ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

**

‘ನನ್ನ ತಪ್ಪಿಲ್ಲ, ಪೊಲೀಸರೇ ಸಿಲುಕಿಸಿದ್ದಾರೆ’

ಹನೂರು: ಈ ಮಧ್ಯೆ, ಪ್ರಕರಣದ ಎರಡನೇ ಆರೋಪಿ ಅಂಬಿಕಾ ಅವರನ್ನು ಪೊಲೀಸರು ಶುಕ್ರವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಮೊದಲು‌ಮಾರ್ಟಳ್ಳಿಯಲ್ಲಿ ಅವರು ವಾಸಿಸುತ್ತಿದ್ದ ಮನೆ ಹಾಗೂ ನಂತರ ದೇವಾಲಯಕ್ಕೆ ಕರೆದುಕೊಂಡು ಹೋಗಿ ಸ್ಥಳವನ್ನು ಪರಿಶೀಲಿಸಿದರು.

ಮನೆಯ ಬಳಿ ನಿಂತಿದ್ದ ಮಾಧ್ಯಮದವರನ್ನು ಕಾಣುತ್ತಲೇ, ಕಿರುಚಲು ಆರಂಭಿಸಿದ ಅಂಬಿಕಾ, ‘ನನ್ನನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಕೂಗಾಡಿದರು.

**

ಸ್ವಾಮೀಜಿಯ ತೀವ್ರ ವಿಚಾರಣೆ

ಪ್ರಕರಣದ ಮೊದಲ ಆರೋಪಿಯಾಗಿರುವ ಸ್ವಾಮೀಜಿ ಅವರ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಸ್ವತಃ ಎಸ್‌ಪಿ ಧರ್ಮೇಂದರ್‌ ಕುಮಾರ್‌ ಮೀನಾ ಅವರೇ ವಿಚಾರಣೆ ನಡೆಸಿದ್ದಾರೆ.

‘ವಿಚಾರಣೆ ನಡೆಯುತ್ತಿದೆ. ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ತನಿಖೆಗೆ ಸಹಕರಿಸುತ್ತಿದ್ದಾರೆ’ ಎಂದು ಮೀನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಅವರಿಗೆ ರಕ್ತದೊತ್ತಡ ಸಮಸ್ಯೆ ಇದೆ. ವೈದ್ಯರು ಜೊತೆಗೆ ಇದ್ದಾರೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

**

ಮೃತರ ಸಂಖ್ಯೆ 16ಕ್ಕೆ ಏರಿಕೆ

ಮೈಸೂರು: ಸುಳ್ವಾಡಿ ದುರಂತದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ವಾಡಿ ಗ್ರಾಮದ ನಿವಾಸಿ ನಾಗೇಶ್ (45) ಶುಕ್ರವಾರ ಮೃತಪಟ್ಟರು.

ಸದ್ಯ, ಇನ್ನೂ ಮೂವರ ಸ್ಥಿತಿ ತೀರಾ ಗಂಭೀರವಾಗಿಯೇ ಇದೆ. 21 ಮಂದಿ ವೆಂಟಿಲೇಟರ್‌ನಲ್ಲಿ, 22 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 10 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT