ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ತಂದ ಆ‍ಪತ್ತು; ಕೃಷಿಕರಲ್ಲಿ ಆತಂಕ

ಬಿಸಿಲ ಧಗೆಗೆ ಬತ್ತಿದ ನೀರಿನ ಮೂಲಗಳು, ಕರಟಿ ಹೋಗುತ್ತಿರುವ ಅಡಿಕೆ ಮರಗಳು
Last Updated 24 ಮಾರ್ಚ್ 2019, 19:57 IST
ಅಕ್ಷರ ಗಾತ್ರ

ಪುತ್ತೂರು: ಕಳೆದ ಕೆಲ ದಿನಗಳಿಂದ ವಿಪರೀತವಾಗಿ ಕಂಡು ಬರುತ್ತಿರುವ ಸುಡುಬಿಸಿಲಿನ ತಾಪ ತಡೆಯಲಾಗದೆ ಅಡಿಕೆ ಮರಗಳು ಕರಟಿ ಹೋಗಲಾರಂಭಿಸಿವೆ. ಮಳೆಗಾಲದಲ್ಲಿ ಎಡಬಿಡದೆ ಸುರಿದ ವಿಪರೀತ ಮಳೆಯಿಂದಾಗಿ ಅಡಿಕೆ ಫಸಲಿಗೆ ಕೊಳೆರೋಗ ಬಾಧಿಸಿ ಕಂಗೆಟ್ಟಿದ್ದ ಕೃಷಿಕರ ಪಾಲಿಗೆ ಈ ಬಿಸಿಲ ಧಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇದೇ ಸ್ಥಿತಿ ಮೇ ಕೊನೆತನಕ ಮುಂದುವರಿದಲ್ಲಿ ಅಡಿಕೆ ಮರಗಳ ಜತೆ ಜಿಲ್ಲೆಯ ಕೃಷಿಕರ ಬದುಕು ಕರಟಿ ಹೋಗಬಹುದೆಂಬ ಆತಂಕ ಎದುರಾಗಿದೆ.

ಕರಾವಳಿ ಭಾಗದಲ್ಲಿ ಬಿಸಿಲ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಎಲ್ಲೆಡೆ ಜಲಮಟ್ಟ ಕುಸಿದಿದ್ದು, ಕೃಷಿಗೆ ನೀರುಣಿಸುವ ಕರೆ ಬಾವಿಗಳು ಬತ್ತಿ ಹೋಗಿವೆ. ನೀರಿನ ಪ್ರಮಾಣ ಕಡಿಮೆಯಾದ ಪ್ರದೇಶಗಳಲ್ಲಿನ ಅಡಿಕೆ ತೋಟಗಳು ಬಿಸಿಲಿನ ಧಗೆ ಸಹಿಸಿಕೊಳ್ಳಲಾಗದೆ ಕರಟಿ ಹೋಗಲಾರಂಭಿಸಿವೆ. ಈಗಾಗಲೇ ಕೆಲವೊಂದು ಕಡೆಗಳಲ್ಲಿನ ತೋಟಗಳಲ್ಲಿ ಅಡಿಕೆ ಮರಗಳು ಸಾಯತೊಡಗಿವೆ. ಇನ್ನು ಹಲವಾರು ತೋಟಗಳಲ್ಲಿ ಅಡಿಕೆ ಮರದ ಸೋಗೆಗಳು ಸುಟ್ಟು ಜೋತು ಬೀಳಲಾರಂಭಿಸಿದ್ದು, ಫಸಲು ನೀಡಬೇಕಾಗಿದ್ದ ಹಿಂಗಾರಗಳು ಕರಟಿ ಹೋಗಿವೆ. ಮುಂದೆ ಮರಗಳು ಜೀವಂತ ಉಳಿದರೂ ಫಸಲು ನೀಡದ ಸ್ಥಿತಿ ನಿರ್ಮಾಣವಾಗಿದೆ.

ಅಡಿಕೆ ಜಿಲ್ಲೆಯ ಜೀವನಾಡಿ ಬೆಳೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಕೃಷಿಯನ್ನೇ ನಂಬಿಕೊಂಡು ಇಲ್ಲಿನ ರೈತಾಪಿ ವರ್ಗದವರು ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಮಳೆಗಾಲದಲ್ಲಿ ಎಡಬಿಡದೆ ಸುರಿದ ವಿಪರೀತ ಮಳೆಯಿಂದಾಗಿ ಅಡಿಕೆ ಫಸಲಿಗೆ ವ್ಯಾಪಕವಾಗಿ ಕೊಳೆರೋಗ ಬಾಧಿಸಿತ್ತು. ನಿರಂತರ ಮಳೆಯ ಪರಿಣಾಮವಾಗಿ ಅಡಿಕೆ ಫಸಲಿಗೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡಲು ಕೃಷಿಕರಿಗೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಬಹುತೇಕ ಅಡಿಕೆ ಫಸಲು ಕೊಳೆರೋಗಕ್ಕೆ ತುತ್ತಾಗಿತ್ತು. ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿತ್ತು.

ಕಳೆದ ಮಳೆಗಾಲದಲ್ಲಿ ಸಮೀಕ್ಷೆಯ ಪ್ರಕಾರ ಶೇ 60ಕ್ಕೂ ಅಧಿಕ ಅಡಿಕೆ ಫಸಲು ಕೊಳೆರೋಗದಿಂದ ನಷ್ಟವಾಗಿತ್ತು. ಇದೀಗ ಮತ್ತೆ ಕಾಡಲಾರಂಭಿಸಿರುವ ಬಿಸಿಲ ಧಗೆಯಿಂದ ಅಡಿಕೆ ಮರಗಳೇ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅಡಿಕೆಯ ಜತೆಗೆ ಉಪ ಬೆಳಗಳಾದ ಬಾಳೆ, ಕರಿಮೆಣಸು, ಕೊಕ್ಕೋ ಕೃಷಿಯೂ ನಾಶವಾಗುತ್ತಿದೆ. ಬಿಸಿಲ ಝಳದಿಂದ ಸೃಷ್ಟಿಯಾದ ಈ ಸನ್ನಿವೇಶಗಳು ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆಯುವ ಆತಂಕವನ್ನು ತಂದೊಡ್ಡಿವೆ. ಮಾತ್ರವಲ್ಲದೆ ಕೃಷಿಕರು ಮುಂದೆಯೂ ಚೇತರಿಸಿಕೊಳ್ಳಲಾಗದಂತಹ ಮಾರಕ ಹೊಡೆತದ ಸೂಚನೆ ನೀಡಿದೆ.

ಈಗಾಗಲೇ ಪುತ್ತೂರು ತಾಲ್ಲೂಕಿನ ಹಲವಾರು ಕಡೆಗಳಲ್ಲಿ ಅಡಿಕೆ ತೋಟಗಳು ಒಣಗಿ ಹೋಗಿವೆ. ಗ್ರಾಮಾಂತರ ಪ್ರದೇಶದ ಕೃಷಿಕರು ಅಡಿಕೆ ಕೃಷಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಆದರೆ, ಅಡಿಕೆ ಮರಗಳು ಕರಟಿ ಹೋಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ಕಡೆಗಳಲ್ಲಿನ ಕೊಳವೆಬಾವಿಗಳಲ್ಲಿಯೂ ನೀರು ಬರಿದಾಗಿದೆ. ಸರ್ಕಾರ ಕೊಳವೆ ಬಾವಿ ಕೊರೆಯಲು ಅವಕಾಶ ನೀಡುತ್ತಿಲ್ಲ. ಹಾಗಾಗಿ ನೀರಿಲ್ಲದ ಪ್ರದೇಶಗಳಲ್ಲಿನ ರೈತರು ಹೊಸ ಕೊಳವೆಬಾವಿ ಕೊರೆದು ಕೃಷಿ ಉಳಿಸಿಕೊಳ್ಳುವಂತೆಯೂ ಇಲ್ಲ. ಕೆಲವೊಂದು ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇದ್ದರೂ, ವಿದ್ಯುತ್ ಸಮಸ್ಯೆ ಕೃಷಿ ಉಳಿಸಿಕೊಳ್ಳುವ ರೈತರ ಪ್ರಯತ್ನಕ್ಕೆ ಅಡ್ಡಿಯಾಗಿ ಕಾಡುತ್ತಿದೆ.

‘ದಿನವೊಂದಕ್ಕೆ ಕೇವಲ 3-4 ಗಂಟೆ ಮಾತ್ರ ತ್ರೀಫೇಸ್ ವಿದ್ಯುತ್ ನೀಡಿದರೆ ಕೃಷಿಯನ್ನು ಉಳಿಸಿಕೊಳ್ಳುವುದಾದರೂ ಹೇಗೆ. ಬಿಸಿಲ ಧಗೆಯಿಂದ ಕಾಯ್ದ ಭೂಮಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿದರೂ ಏನೂ ಪ್ರಯೋಜನ ಆಗುತ್ತಿಲ್ಲ. ಸುಡು ಬಿಸಿಲಿನಿಂದಾಗಿ ಅಡಿಕೆ ಹಿಂಗಾರ ಸಂಪೂರ್ಣ ಕರಟಿ ಹೋಗುತ್ತಿದೆ. ಸ್ವಲ್ಪ ಪ್ರಮಾಣದ ನೀರು ಹಾಯಿಸಿ ಸಾಯುವ ಮರವನ್ನು ಉಳಿಸಿಕೊಳ್ಳಬಹುದೇ ಹೊರತು ಫಸಲು ಪಡೆಯಲು ಸಾಧ್ಯವಿಲ್ಲ. ಸಕಾಲದಲ್ಲಿ ಮಳೆ ಬರದೆ ಬಿಸಿಲಿನ ತಾಪ ಹೀಗೆಯೇ ಮುಂದುವರಿದಲ್ಲಿ ಅಡಿಕೆ ಕೃಷಿಕರು ಅತಂತ್ರ ಸ್ಥಿತಿಗೆ ಒಳಗಾಗುವುದು ಖಂಡಿತ’ ಎಂದು ಕಂಗೆಟ್ಟ ಕೃಷಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

***

ಕಳೆದ ಮಳೆಗಾಲದ ಕೊಳೆರೋಗ, ಇದೀಗ ಕಾಡುತ್ತಿರುವ ಬಿಸಿಲು ಅಡಿಕೆ ಕೃಷಿಕರನ್ನು ಕಂಗೆಡಿಸಿದೆ. ಆರ್ಥಿಕ ಸ್ಥಿತಿಯನ್ನು ಸಮದೂಗಿಸಿಕೊಂಡು ಜೀವನ ಮಾಡುವುದಾದರೂ ಹೇಗೆ’

-ರಾಮಣ್ಣ ಗೌಡ, ಪೋಳ್ಯದ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT