ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ‘ಫಿಟ್ನೆಸ್‌ ಚಾಲೆಂಜ್‌ಗೆ’ ಅತೃಪ್ತಿ

ಕೊಹ್ಲಿ ಸವಾಲಿಗೆ ಉತ್ತರ
Last Updated 13 ಜೂನ್ 2018, 19:33 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಫಿಟ್ನೆಸ್‌ ಸವಾಲು ನೀಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಕುಮಾರಸ್ವಾಮಿಗೆ ಸವಾಲು ಒಡ್ಡಿರುವುದಕ್ಕೆ ಜೆಡಿಎಸ್‌ ರಾಷ್ಟ್ರೀಯ ವಕ್ತಾರ ಡ್ಯಾನಿಷ್‌ ಆಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯ ಅನಾರೋಗ್ಯವನ್ನು ಅಣಕಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

‘ದೈಹಿಕ ಫಿಟ್ನೆಸ್‌ ಮಾತ್ರ ಮುಖ್ಯವಾಗಿದ್ದರೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಾಗಿ ಪೈಲ್ವಾನರು ಅಥವಾ ಬೌನ್ಸರ್‌ಗಳನ್ನು ನಾವು ಹೊಂದಿರಬೇಕಾಗುತ್ತದೆ. ಆಡಳಿತ ನಡೆಸುವುದಕ್ಕಾಗಿ ಜನರು ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ನೇಮಿಸುತ್ತಾರೆ. ರಾಜ್ಯ ಮತ್ತು ದೇಶದ ಅಭಿವೃದ್ಧಿಯೇ ಮುಖ್ಯವಾಗಬೇಕು’ ಎಂದು ‘ಪ್ರಜಾವಾಣಿ’ಗೆ ಆಲಿ ಹೇಳಿದ್ದಾರೆ.

ಗಡಿಯಾಚಿನಿಂದ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್‌ನ ನಾಲ್ವರು ಯೋಧರು ಮೃತಪಟ್ಟ ದಿನವೇ ಪ್ರಧಾನಿ ಮೋದಿ ಅವರು ‘ಪಿಟ್ನೆಸ್‌ ವಿಡಿಯೊ’ ಬಿಡುಗಡೆ ಮಾಡಿದ್ದಾರೆ. ಇದು ಯೋಧರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌ ಮುಖಂಡ ಪ್ರಮೋದ್‌ ತಿವಾರಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಗಡಿ ರಕ್ಷಿಸುವಲ್ಲಿ ವಿಫಲವಾಗಿದೆ. ಇದು ದುರ್ಬಲ ಮತ್ತು ಹೇಡಿ ಸರ್ಕಾರ ಎಂದು ಅವರು ಆಪಾದಿಸಿದ್ದಾರೆ.

ಮೋದಿ ಅವರ ಫಿಟ್ನೆಸ್‌ ಸವಾಲು ಹಿಂದೆಯೂ ಟೀಕೆಗೆ ಒಳಗಾಗಿತ್ತು. ತೈಲ ಬೆಲೆ ಇಳಿಸುವ ಮತ್ತು ಬೆಲೆ ಏರಿಕೆ ತಡೆಯುವ ಸವಾಲನ್ನು ಮೋದಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಒಡ್ಡಿದ್ದರು.

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ರಾಥೋಡ್‌ ಆರಂಭಿಸಿದ ‘ಫಿಟ್ನೆಸ್‌ ಚಾಲೆಂಜ್‌’ ಅಭಿಯಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ವ್ಯಾಯಾಮದ ವಿಡಿಯೊವನ್ನು ಟ್ವೀಟ್‌ ಜತೆಗೆ ಪೋಸ್ಟ್‌ ಮಾಡಿ ಪ್ರಧಾನಿಗೆ ಸವಾಲು ಒಡ್ಡಿದ್ದರು. ಅದನ್ನು ಸ್ವೀಕರಿಸಿದ್ದ ಮೋದಿ ಅವರು ತಮ್ಮ ವ್ಯಾಯಾಮದ ವಿಡಿಯೊವನ್ನು ಬುಧವಾರ ಪೋಸ್ಟ್‌ ಮಾಡಿದ್ದಾರೆ.

ಸವಾಲು ಸ್ವೀಕರಿಸಿದ ಮಣಿಕಾ

ಪ್ರಧಾನಿ ನೀಡಿರುವ ಫಿಟ್ನೆಸ್‌ ಚಾಲೆಂಜ್‌ ಅನ್ನು ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾ ಒಪ್ಪಿಕೊಂಡಿದ್ದಾರೆ. ತಮ್ಮ ಫಿಟ್ನೆಸ್‌ ವಿಡಿಯೊವನ್ನು ಶೀಘ್ರವೇ ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಏಕಾಂಗಿಯಾಗಿಯೇ ಗೆಲುವಿನತ್ತ ಮುನ್ನಡೆಸಿ ಚಿನ್ನದ ಪದಕ ಗೆಲ್ಲುವ ಮೂಲಕ ಮಣಿಕಾ ಪ್ರಸಿದ್ಧಿ ಪಡೆದುಕೊಂಡಿದ್ದರು. ಆ ಕ್ರೀಡಾಕೂಟದಲ್ಲಿ ವೈಯಕ್ತಿಕವಾಗಿಯೂ ಅವರು ಚಿನ್ನದ ಪದಕ ಗೆದ್ದಿದ್ದರು. ಈ ಎರಡೂ ವಿಭಾಗಗಳಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕ.

* ದೈಹಿಕ ಫಿಟ್ನೆಸ್‌ ಮಾತ್ರ ಮುಖ್ಯವಾಗಿದ್ದರೆ ಪ್ರಧಾನಿ, ಮುಖ್ಯಮಂತ್ರಿಗಳಾಗಿ ಪೈಲ್ವಾನರು ಅಥವಾ ಬೌನ್ಸರ್‌ಗಳನ್ನು ನಾವು ಹೊಂದಿರಬೇಕಾಗುತ್ತದೆ

– ಡ್ಯಾನಿಷ್‌ ಆಲಿ, ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ

* ದೀರ್ಘಕಾಲ ಸೌಖ್ಯದಿಂದ ಇರುವುದು ಕ್ರೀಡಾಪಡುಗಳಿಗೆ ಮಾತ್ರವಲ್ಲ ಎಲ್ಲರಿಗೂ ಬಹಳ ಮುಖ್ಯವೇ ಆಗಿದೆ

–ಮಣಿಕಾ ಬಾತ್ರಾ, ಟೇಬಲ್‌ ಟೆನಿಸ್‌ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT